ಮಹಾರಾಷ್ಟ್ರದಲ್ಲಿ ಬೀಫ್‌ ಬ್ಯಾನ್‌ ಆಗಿದೆ, ಗೋವಾದಲ್ಲಿ ಯಾಕಿಲ್ಲ? ಇದಾ ನಿಮ್ಮ ಹಿಂದೂತ್ವ: ಉದ್ದವ್ ಠಾಕ್ರೆ

ಹಿಂದೂತ್ವ ಮತ್ತು ಜಾತ್ಯಾತೀತತೆಯ ಬಗ್ಗೆ ಮಹಾರಾಷ್ಟ್ರ ಸಿಎಂ ಉದ್ದವ್‌ ಠಾಕ್ರೆ ಮತ್ತು ರಾಜ್ಯಪಾಲ ಕೋಶ್ಯಾರಿ ಮಧ್ಯೆ ವಾಕ್ಸಮರ ನಡೆಯುತ್ತಲೇ ಇದೆ. ಹಿಂದೂತ್ವದ ಬಗ್ಗೆ ಮತ್ತೆ ಮಾತನಾಡಿರುವ ಸಿಎಂ ಉದ್ದವ್‌ ಠಾಕ್ರೆ, ಮಹಾರಾಷ್ಟ್ರದಲ್ಲಿ ಬೀಫ್ ಬ್ಯಾನ್ ಮಾಡಲಾಗಿದೆ. ಆದರೆ ಗೋವಾದಲ್ಲಿ ಬೀಫ್ ಬ್ಯಾನ್ ಯಾಕೆ ಮಾಡಿಲ್ಲ. ಇದು ನಿಮ್ಮ ಹಿಂದುತ್ವವಾ? ಎಂದು ಪ್ರಶ್ನಿಸಿದ್ದು, ರಾಜ್ಯಪಾಲರು ಮತ್ತು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಆಯುಧ ಪೂಜಾ ಕಾರ್ಯಕ್ರಮದ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಮಾಡಿದ ಭಾಷಣವನ್ನು ಉಲ್ಲೇಖಿಸಿರುವ ಉದ್ಧವ್, “ಭಾಗವತ್ ಪ್ರಕಾರ ಹಿಂದುತ್ವವೆಂದರೆ ಕೇವಲ ಪೂಜೆಯಲ್ಲ. ಅವರ ಮಾತುಗಳನ್ನು ನೀವು ಅನುಸರಿಸಿ. ನಮಗೆ ಜಾತ್ಯಾತೀತತೆ ಮತ್ತು ಹಿಂದುತ್ವದ ಪಾಠ ಮಾಡಲು ಬರಬೇಡಿ. ನಮಗೆ ಸವಾಲು ಹಾಕಲು ಮುಂದಾದರೆ ಅದರ ಪರಿಣಾಮಗಳನ್ನು ಎದುರಿಸಲು ಸಿದ್ದರಾಗಿ” ಎಂದಿದ್ದಾರೆ.

ಈ ತಿಂಗಳ ಆರಂಭದಲ್ಲಿ ಕೊರೊನಾ ಸಾಂಕ್ರಾಮಿಕದ ಕಾರಣದಿಂದ ದೇವಾಲಯಗಳ ಬಾಗಿಲು ತೆರೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದ್ದರು. ಇದರಿಂದ ಕುಪಿತಗೊಂಡಿದ್ದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ, “ಕಾಂಗ್ರೆಸ್‌, ಎನ್‌ಸಿಪಿ ಜೊತೆ ಸೇರಿ ಉದ್ಧವ್‌ ಠಾಕ್ರೆ ಹಿಂದುತ್ವವನ್ನು ಮರೆತು ಜಾತ್ಯತೀತರಾಗಿಬಿಟ್ಟಿದ್ದಾರೆ” ಎಂದು ಟೀಕಿಸಿದ್ದರು.

ಇದನ್ನೂ ಓದಿ: ಕೋಶಿಯಾರಿ ಅವರು ಬಿಜೆಪಿ ಸಂಘ ಪ್ರಚಾರಕರಾಗಬೇಕಿತ್ತು, ರಾಜ್ಯಪಾಲರಾಗಿದ್ದಾರೆ: ಶಿವಸೇನಾ

ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಅಂದಿನಿಂದ ಉದ್ಧವ್ ರಾಜ್ಯಪಾಲರ ವಿರುದ್ಧ ಟೀಕಾಪ್ರಹಾರ ಮುಂದುವರೆಸಿದ್ದಾರೆ. “ನಾವು ದೇವಾಲಯಗಳ ಬಾಗಿಲು ತೆರೆಯದಿದ್ದುದರಿಂದ ನಮ್ಮ ಹಿಂದುತ್ವವನ್ನು ಪ್ರಶ್ನಿಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಬೀಫ್ ಬ್ಯಾನ್ ಮಾಡಿ ಅದೇ ಬಿಜೆಪಿ ಸರ್ಕಾರ ಗೋವಾದಲ್ಲಿ ಬೀಫ್ ಮಾರಾಟ ಮಾಡುತ್ತಿದೆ. ಇದ ನಿಮ್ಮ ಹಿಂದುತ್ವ? ನಿಮ್ಮಿಂದ ನನಗೆ ಹಿಂದುತ್ವದ ಸರ್ಟಿಫಿಕೇಟ್ ಬೇಕಿಲ್ಲ” ಎಂದು ಗುಡುಗಿದ್ದಾರೆ.

ಈ ವಿವಾದಗಳ ಹಿನ್ನೆಲೆಯಲ್ಲಿ ರಾಜ್ಯಪಾಲ ಕೋಶ್ಯಾರಿ ಬಿಜೆಪಿಯ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ ಎಂದು ಮಹಾರಾಷ್ಟ್ರದ ಸರ್ಕಾರ ಆರೋಪಿಸಿದೆ.


ಇದನ್ನೂ ಓದಿ: ರಾಮ-ಹಿಂದೂತ್ವದಿಂದ ಏನೂ ನೆಟ್ಟಗಾಗಲ್ಲ; ನಾವು ಅಕ್ಕ-ತಂಗಿಯರನ್ನು ಕಳೆದುಕೊಳ್ಳುತ್ತಿದ್ದೇವೆ: ವೈಎಸ್‌ವಿ ದತ್ತ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights