ಅವಧಿಯೊಳಗೆ ಚಾರ್ಜ್ ಶೀಟ್ ಸಲ್ಲಿಸದಿದ್ದರೆ ಜಾಮೀನು ಪಡೆಯಲು ಅವಕಾಶ: ಆದರೂ ಉಳಿದಿವೆ ಕೆಲವು ಪ್ರಶ್ನೆಗಳು!

ಅವಧಿಯೊಳಗೆ ಚಾರ್ಜ್ ಶೀಟ್ ಸಲ್ಲಿಸದಿದ್ದರೆ ಜಾಮೀನು ಪಡೆದುಕೊಳ್ಳುವುದು ಆರೋಪಿಯ ಮೂಲಭೂತ ಹಕ್ಕು ಎಂಬ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟಿಗೆ ನೀಡಿದೆ.

ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠವು Default Bail ಪಡೆಯುವುದು ಆರೋಪಿಯ ಕಾನೂನು ಬದ್ಧ ಹಕ್ಕು ಮಾತ್ರವಲ್ಲ . ಮೂಲಭೂತ ಹಕ್ಕು ಕೂಡ ಆಗುತ್ತದೆ ಎಂದು ಮಹತ್ವದ ತೀರ್ಪು ನೀಡಿದೆ.

Cr.P.C ಯ 167 ನೇ ಸೆಕ್ಷನ್ನಿನ ಪ್ರಕಾರ ಒಬ್ಬ ಆರೋಪಿಯು 10 ವರ್ಷಕ್ಕಿಂತ ಕಡಿಮೆ ಸಜಾ ಪಡೆಯುವ ಅಪರಾಧದ ಮೇಲೆ ಬಂಧಿತರಾಗಿದ್ದರೆ ಪೊಲೀಸರು FIR ದಾಖಲಿಸಿದ 60 ದಿನಗಳೊಳಗೆ ಚಾರ್ಜ್ ಶೀಟ್ ಸಲ್ಲಿಸಬೇಕು. 10 ವರ್ಷದ ಅವಧಿಗಿಂತ ಮೇಲ್ಪಟ್ಟು ಅವಧಿಯ ಸಜಾ ವಿಧಿಸುವಂಥ ಅಪರಾಧಗಳಮೇಲೆ ಬಂಧಿತರಾಗಿದ್ದರೆ 90 ದಿನಗಳೊಳಗೆ ಚಾರ್ಜ್ ಶೀಟ್ ದಾಖಲಿಸಬೇಕು.

ಒಂದು ವೇಳೆ ಈ ಅವಧಿಗಳನ್ನು ಮೀರಿಯೂ ಪೊಲೀಸರು ಚಾರ್ಜ್ ಶೀಟ್ ದಾಖಲಿಸದಿದ್ದಲ್ಲಿ ಆರೋಪಿಗೆ Default Bail ಪಡೆದುಕೊಳ್ಳುವ ಹಕ್ಕಿರುತ್ತದೆ .

ಅದೇ ರೀತಿ UAPA ಯಂಥ ಅತ್ಯಂತ ಕರಾಳ ಕಾನೂನಿನಡಿ ಬಂಧಿತರಾಗಿರುವ ಆರೋಪಿಗಳ ವಿರುದ್ಧ UAPA ಯ ಸೆಕ್ಷನ್ 43 (D) ಅಡಿಯಲ್ಲಿ ಪೊಲೀಸರು 90 ದಿನಗಳೊಳಗೆ ಚಾರ್ಜ್ ಶೀಟ್ ಸಲ್ಲಿಸಬೇಕು. ಒಂದು ವೇಳೆ ಪೊಲೀಸರು ಇನ್ನು ಹೆಚ್ಚಿನ ಸಮಯ ಬೇಕೆಂದು ಕೋರ್ಟಿಗೆ ಮನವರಿಕೆ ಮಾಡಿಕೊಟ್ಟಲ್ಲಿ ಕೋರ್ಟು ಇನ್ನು 90 ದಿನಗಳ ಅಂದರೆ ಒಟ್ಟಾರೆಯಾಗಿ 180 ದಿನಗಳ ಅವಕಾಶವನ್ನು ಕೊಡಬಹುದು. ಆದರೆ ಆ ಅವಧಿಯನ್ನು ಮೀರಿಯೂ ಚಾರ್ಜ್ ಶೀಟ್ ಸಲ್ಲಿಸದಿದ್ದಲ್ಲಿ UAPA ಅಡಿ ಬಂಧಿತರಾದವರಿಗೂ Default bail ನ ಹಕ್ಕಿರುತ್ತದೆ ಎಂದು ನಿನ್ನೆ ನ್ಯಾಯ ಮೂರ್ತಿಗಳಾದ ನಾರಿಮನ್, ನವೀನ್ ಸಿನ್ಹಾ ಹಾಗು ಕೆ. ಎಂ. ಜೋಸೆಫ್ ಅವರಗಳನ್ನೊಳಗೊಂಡ ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠ ಆದೇಶ ನೀಡಿದೆ.

( ಆಸಕ್ತರು ತೀರ್ಪಿನ ಪೂರ್ಣಪಾಠವನ್ನು ಇಲ್ಲಿ ಓದಬಹುದು)

ಅಷ್ಟು ಮಾತ್ರವಲ್ಲದೆ, ಈ Default Bail ಎಂಬುದು Cr. P.C ಯ ಸೆಕ್ಷನ್ 167 ರಿಂದ ಪಡೆದುಕೊಳ್ಳುವ ಶಾಸನಾತ್ಮಕ ಹಕ್ಕು ಮಾತ್ರವಲ್ಲ. ಅದು ಆರೋಪಿಯ ಸಾಂವಿಧಾನಾತ್ಮಕವಾದ ಮೂಲಭೂತ ಹಕ್ಕು ಕೂಡ ಆಗಿದೆ ಎಂದು ಸ್ಪಷ್ಟಿಕರಿಸಿದೆ.

ಏಕೆಂದರೆ Cr. P. C.. ಯ ಪ್ರಕ್ರಿಯೆಗಳು ಹಾಗು ನಿಯಮಗಳು ವ್ಯಕ್ತಿಗಳ ವೈಯಕ್ತಿಕ ಸ್ವಾತಂತ್ರ್ಯವನ್ನು ಖಾತರಿ ಮಾಡುವ ಸಂವಿಧಾನದ ಆರ್ಟಿಕಲ್ 21 ರಿಂದ ಪ್ರೇರಣೆ ಪಡೆಯುವುದರಿಂದ Default Bail ಅನ್ನುವುದು ಆರೋಪಿಯ ಮೂಲಭೂತ ಹಕ್ಕು ಕೂಡ ಆಗುತ್ತದೆ ಎಂದು ಅತ್ಯಂತ ಸಮಂಜಸವಾಗಿ ವ್ಯಾಖ್ಯಾನಿಸಿದೆ.

ಬಹಳ ದಿನಗಳ ನಂತರ ಸುಪ್ರೀಂಕೋರ್ಟ ತನ್ನ ಸಾಂವಿಧಾನಾತ್ಮಕ ಜವಾಬ್ದಾರಿಗನುಗುಣವಾಗಿ ನಡೆದುಕೊಂಡಿದೆ!

ಆದರೆ, ಈ ತೀರ್ಪಿನಿಂದಾಗಿ ಸುಪ್ರೀಂ ಕೋರ್ಟು ತನ್ನ ಸಾಂವಿಧಾನಿಕ ಕರ್ತವ್ಯಗಳ ಬಗ್ಗೆ ಎಚ್ಚರಗೊಂಡಿದೆ ಎಂದು ಭಾವಿಸಬಹುದೇ …….??

ಅದು ಸ್ವಲ್ಪ ದುರಾಸೆಯೇ ಆಗಬಹುದು .

ಏಕೆಂದರೆ ಇದೆ ಸುಪ್ರೀಂ ಕೋರ್ಟು 2019 ರಲ್ಲಿ ಜಾಹೂರ್ ಅಹ್ಮದ್ ವತಾಲಿ ಪ್ರಕರಣದಲ್ಲಿ UAPA ಅಡಿ ಬಂಧಿತರಾದ ಆರೋಪಿಗಳಿಗೆ ಜಾಮೀನು ನೀಡುವ ಹಂತದಲ್ಲಿ UAPA ಯ ಸೆಕ್ಷನ್ 43 (D) 5 ರಡಿಯಲ್ಲಿ ಪೊಲೀಸರು ನೀಡುವ ದಾಖಲೆಗಳ ಸಾಕ್ಷ್ಯಗಳ ನಿಜಾಯತಿಯನ್ನು ನ್ಯಾಯಾಲಯವು ಪರಿಶೀಲಿಸುವ ಅಗತ್ಯವಿಲ್ಲವೆಂದೂ, ಆದರೆ ಪೊಲೀಸರು ಹಾಗೆ ಒದಗಿಸುವ ಕೇಸ್ ಡೈರಿಯ ಆಧಾರದಲ್ಲೇ ಆರೋಪಿಯ ಮೇಲೆ ಮೇಲ್ನೋಟಕ್ಕೆ ಕೇಸು ಇದೆಯೋ ಇಲ್ಲವೋ ಎಂದು ತೀರ್ಮಾನಿಸಿ ಜಾಮೀನು ನಿರಾಕರಿಸಬಹುದೆಂದು ಆದೇಶಿಸಿದೆ.

ಹೀಗಾಗಿ ಇನ್ನುಮುಂದೆ UAPA ಅಡಿಯಲ್ಲಿ ಬಂಧಿತರಾದವರು ವಿಚಾರಣೆ ಮುಗಿಯುವ ತನಕ ಜಾಮೀನಿನಿಂದ ಹೊರಬರುವುದು ಕನಸಿನ ಮಾತಾಗಲಿದೆ.

ಈ ತೀರ್ಪಿನ ಪರಿಣಾಮವನ್ನು ಈಗಾಗಲೇ ಭೀಮಾ ಕೊರೆಗಾಂವ್ ಪ್ರಕರಣದಲ್ಲಿ, ಹಾಗೂ ದೆಹಲಿ ಹಿಂಸಾಚಾರದ ಪ್ರಕರಣದಲ್ಲಿ ನೋಡುತ್ತಿದ್ದೇವೆ…

ಇದನ್ನೂ ಓದಿ: ಬಾಬರಿ ಮಸೀದಿ ದ್ವಂಸಗೊಳಿಸಲು ಯಾರೂ ಸಂಚು ಮಾಡಿಲ್ಲ ಎನ್ನಲು ಕೋರ್ಟ್‌ ಕೊಟ್ಟ 10 ಕಾರಣಗಳು!

ನಿನ್ನೆ ನೀಡಿರುವ ಆದೇಶವು ಆರೋಪಿಗಳ ಸಾಂವಿಧಾನಿಕ ಹಕ್ಕನ್ನೇನೋ ಎತ್ತಿಹಿಡಿಯುತ್ತದೆ.

ಆದರೆ, ಚಾರ್ಜ್ ಶೀಟ್ ಅನ್ನು ಅವಧಿಯೊಳಗೆ ಸಲ್ಲಿಸುವ ಅಥವಾ ಬೇಕೆಂತಲೇ ಸಲ್ಲಿಸದ ಅವಕಾಶ ಪೋಲೀಸರ ಬಳಿಯೇ ಇರುವುದರಿಂದ ಆರೋಪಿಗೆ ಜಾಮೀನಿನ ಆಮಿಷ ತೋರಿಸಿ ಹಲವು ಬಗೆಯಲ್ಲಿ ಕೇಸನ್ನು ತಮಗಿಷ್ಟ ಬಂದಂತೆ ತಿರುಚಲು ಪೊಲೀಸರಿಗೆ ಅವಕಾಶವನ್ನೂ ಒದಗಿಸುತ್ತದೆ.

ಆದ್ದರಿಂದ ಸುಪ್ರೀಂಕೋರ್ಟ್ ನ ನಿನ್ನೆ ಯ ಆದೇಶವನ್ನು ಸ್ವಾಗತಿಸುತ್ತಲೇ ಕೆಲವು ಪ್ರಶ್ನೆಗಳನ್ನು ಕೇಳಲೇ ಬೇಕಾಗುತ್ತದೆ:

1. 2019ರ ವತಾಲಿ ಕೇಸಿನಲ್ಲಿ ಸುಪ್ರೀಂ ಕೋರ್ಟಿನ ವ್ಯಾಖ್ಯಾನವು ಸಂವಿಧಾನದ ಆರ್ಟಿಕಲ್ 21 ಈ ದೇಶದ ಜನರಿಗೆ ಹಾಗೂ ಆರೋಪಿಗಳಿಗೂ ನೀಡುವ ಜೀವಿಸುವ ಹಕ್ಕುಗಳನ್ನು ಪೊಲೀಸರು ಬೇಕಾಬಿಟ್ಟಿ ಉಲ್ಲಂಘನೆ ಮಾಡಲು ಕೊಟ್ಟ ಮುಕ್ತ ಪರವಾನಗಿಯಾಗಲಿಲ್ಲವೇ?

2. ಹಾಗಿದ್ದಲ್ಲಿ ನಿನ್ನೆಯ ಆದೇಶದಲ್ಲಿ ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ಈ ಅಂಶದ ಬಗ್ಗೆ ಏಕೆ ಗಮನ ಹರಿಸಲಿಲ್ಲ?

3. 2019ರ ಸುಪ್ರೀಂ ಕೋರ್ಟಿನ ವತಾಲಿ ಆದೇಶ ಅನೂರ್ಜಿತಗೊಳ್ಳದೆ ನಿನ್ನೆ ಯ ಸುಪ್ರೀಂಕೋರ್ಟಿನ ಆದೇಶ ಅಮಾಯಕ ಆರೋಪಿಗಳಿಗೆ ಕಿಂಚಿತ್ತಾದರೂ ಪರಿಹಾರ ಕೊಡಬಲ್ಲದೇ?

4. UAPA ಎಂಬ ಕಾನೂನೇ ಶಾಸನಾತ್ಮಕ ಅಧಿಕಾರದ ದುರ್ಬಳಕೆ ಯಲ್ಲವೇ?

– ಶಿವಸುಂದರ್


ಇದನ್ನೂ ಓದಿ: ಹಸಿವನ್ನು ಹೆಚ್ಚಿಸುತ್ತಿವೆ ಮೋದಿಯ ಹೊಸ ಕೃಷಿ ಕಾಯಿದೆಗಳು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights