ICC T-20 ವಿಶ್ವಕಪ್: ನ್ಯೂಜಿಲೆಂಡ್ ಮಣಿಸಿದ ಆಸ್ಟ್ರೇಲಿಯಾಗೆ ಚಾಂಪಿಯನ್ ಪಟ್ಟ!

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಐದು ಬಾರಿಯ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾ ತಂಡ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟ ಪಡೆದುಕೊಂಡಿದೆ.

ಇದರೊಂದಿಗೆ ನ್ಯೂಜಿಲೆಂಡ್ ವಿಶ್ವಕಪ್ ಕನಸು ಮಗದೊಮ್ಮೆ ಭಗ್ನಗೊಂಡಿದೆ.

ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್, ನಾಯಕ ಕೇನ್ ವಿಲಿಯಮ್ಸನ್ ಅವರ ಅಮೋಘ ಅರ್ಧಶತಕದ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 172 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, ಮಿಚೆಲ್ ಮಾರ್ಷ್ (77*) ಹಾಗೂ ಡೇವಿಡ್ ವಾರ್ನರ್ (53) ಅಮೋಘ ಆಟದ ನೆರವಿನಿಂದ ಇನ್ನು 7 ಎಸೆತಗಳು ಬಾಕಿ ಉಳಿದಿರುವಂತೆಯೇ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಟಿ20 ವಿಶ್ವಕಪ್ ಇತಿಹಾಸದಲ್ಲಿಯೇ ನ್ಯೂಜಿಲೆಂಡ್ ಮೊದಲ ಸಲ ಮತ್ತು ಆಸ್ಟ್ರೇಲಿಯಾ ಎರಡನೇ ಸಲ ಫೈನಲ್ ಹಂತಕ್ಕೆ ತಲುಪಿತ್ತು. ಈ ಹಿಂದೆ 2010ರಲ್ಲಿ ಇಂಗ್ಲೆಂಡ್ ವಿರುದ್ಧ ಫೈನಲ್‌ನಲ್ಲಿ ಆಸೀಸ್ ಸೋಲಿಗೆ ಶರಣಾಗಿತ್ತು. ಆದರೆ ಈ ಬಾರಿ ಕಿವೀಸ್ ವಿರುದ್ಧ ಗೆದ್ದು ವಿಶ್ವಕಪ್ ಮುಡಿಗೇರಿಸಿಕೊಂಡಿದೆ. 2015ರಲ್ಲಿ ಕಿವೀಸ್ ವಿರುದ್ಧವೇ ಗೆಲುವು ದಾಖಲಿಸಿರುವ ಆಸೀಸ್ ಏಕದಿನ ವಿಶ್ವಕಪ್ ಜಯಿಸಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights