ರಾಹುಲ್‌-ಪ್ರಿಯಾಂಕಾ ಗಾಂಧಿ ಮೇಲೆ ಹಲ್ಲೆ-ಬಂಧನ: ಕಾಂಗ್ರೆಸ್‌ ಪ್ರತಿಭಟನೆ, ಜೆಡಿಎಸ್‌ ಖಂಡನೆ

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಅತ್ಯಾಚಾರ ಮತ್ತು ಕ್ರೂರ ಹಿಂಸೆಗೆ ಒಳಗಾಗಿ ಮೃತಪಟ್ ಯುವತಿಯ ಪೋಷಕರ ಭೇಟಿಮಾಡಲು ಹೊರಟಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಮತ್ತು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರನ್ನು ಪೊಲೀಸರು ವಶಪಡೆದಿದ್ದರು. ಕಾಂಗ್ರೆಸ್‌ ಮುಖಂಡರ ಮೇಲೆ ಹಲ್ಲೆ ನಡೆಸಿರುವ ಪೊಲೀಸರ ವರ್ತನೆ ಹಾಗೂ ಯೋಗಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಆಕ್ರೋಶ ವ್ಯಕ್ತಪಡಿಸಿವೆ.

ಬೆಂಗಳೂರಿನ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಕಾಂಗ್ರೆಸ್‌ ಭವನದಿಂದ ಆನಂದರಾವ್‌ ವೃತ್ತದ ವರೆಗೆ ನಿನ್ನೆ (ಗುರುವಾರ) ರಾತ್ರಿ ಪಂಜಿನ ಮೆರವಣಿಗೆ ನಡೆಸಿರುವ ರಾಜ್ಯ ಕಾಂಗ್ರೆಸ್‌ ಉತ್ತರ ಪ್ರದೇಶ ಸರ್ಕಾರದ ದೌರ್ಜನ್ಯವನ್ನು ಖಂಡಿಸಿದೆ.

ಅತ್ಯಾಚಾರಕ್ಕೆ ಬಲಿಯಾದ ದಲಿತ ಸಂತ್ರಸ್ತೆಯ ಕುಟುಂಬವನ್ನು ಗೃಹಬಂಧನದಲ್ಲಿರಿಸಿ, ಆಕೆಯ ಮೃತದೇಹವನ್ನು ರಾತ್ರೋರಾತ್ರಿ ಪೊಲೀಸರೇ ಸುಟ್ಟುಹಾಕಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯ ನಾಯಕರ ಮೇಲೆಯೇ ಹಲ್ಲೆಗಳು ನಡೆಯುತ್ತಿವೆ. ಹೀಗಿರುವಾಗ ಇನ್ನು ದಲಿತರು, ರೈತರು ಮತ್ತು ಮಹಿಳೆಯರ ಗತಿ ಏನು? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಸಂತ್ರಸ್ತೆಯ ಕುಟುಂಬದ ಭೇಟಿಗೆ ಮುಂದಾಗಿದ್ದ ಕಾಂಗ್ರೆಸ್‌ ರಾಷ್ಟ್ರೀಯ ನಾಯಕರನ್ನು ಯೋಗಿ ಆಧಿತ್ಯನಾಥ್‌ ಸರ್ಕಾರ ಬಂಧಿಸಿದೆ. ರಾಹುಲ್‌ಗಾಂಧಿ ಮತ್ತು ಪ್ರಿಯಾಂಕಗಾಂಧಿಯವರು ಬಂಧನವನ್ನು ಖಂಡಿಸಿ ರಾಜ್ಯ ಕಾಂಗ್ರೆಸ್‌ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ರಾಜ್ಯ ನಾಯಕರನ್ನೂ ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ಹತ್ರಾಸ್ ಸಂತ್ರಸ್ತೆಯ ಕುಟುಂಬಸ್ಥರ ಭೇಟಿ ವೇಳೆ ‘ಪೊಲೀಸರು ನನ್ನನ್ನು ಹೊಡೆದರು’ ರಾಹುಲ್ ಗಾಂಧಿ!

ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕಿ ಸೌಮ್ಯಾರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

ಕಾಂಗ್ರೆಸ್‌ ನಾಯಕರ ಮೇಲಿನ ಹಲ್ಲೆ ಖಂಡಿಸಿದ ಜೆಡಿಎಸ್‌

ಪ್ರತಿಭಟನೆ ನಡೆಸುವುದು ಪ್ರಜಾಪ್ರಭುತ್ವದ ಹಕ್ಕು, ಕಾಂಗ್ರೆಸ್‌ ರಾಷ್ಟ್ರೀಯ ನಾಯಕರಾದ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಉತ್ತಮ ಕಾರಣಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಅವರನ್ನು ಉತ್ತರ ಪ್ರದೇಶ ಸರ್ಕಾರ ನಡೆಸಿಕೊಂಡಿರುವ ರೀತಿ ಖಂಡನೀಯ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.

ಅತ್ಯಾಚಾರ ಹಾಗೂ ಹತ್ಯೆಗೀಡಾದ ದಲಿತ ಬಾಲಕಿಯ ಪೋಷಕರಿಗೆ ಸಾಂತ್ವನ ಹೇಳಲು ಕಾಲ್ನಡಿಗೆಯಲ್ಲಿ ಹೊರಟಿದ್ದ ಎಐಸಿಸಿ ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಮೇಲೆ ಉತ್ತರ ಪ್ರದೇಶ ಪೊಲೀಸರು ನಡೆಸಿದ ದೌರ್ಜನ್ಯ ತೀವ್ರ ಖಂಡನೀಯ ಎಂದು ಹೆಚ್‌ಡಿ ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ. 

ಅಹಿಂಸಾ ಪ್ರತಿಪಾದಕ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಜನ್ಮದಿನದ ಮುನ್ನ ಇಂದು ಉತ್ತರ ಪ್ರದೇಶ ಪೊಲೀಸರು ರಾಷ್ಟ್ರೀಯ ಪಕ್ಷದ ನಾಯಕರ ಮೇಲೆ ಅಮಾನವೀಯ ವರ್ತನೆ ತೋರಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಪ್ರತಿಭಟನಾ ಅಸ್ತ್ರವನ್ನು ಹಾಡುಹಗಲೇ ದಹಿಸುವ ಯತ್ನ ಎಂದು ಅವರು ಆರೋಪಿಸಿದ್ದಾರೆ.

ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ತರದ ರಾಜಕೀಯ ವಿರೋಧಿಗಳನ್ನು ಹಣಿಯಲು ಉತ್ತರ ಪ್ರದೇಶ ಪೊಲೀಸರು ಮುಂದಾಗಿದ್ದಾರೆ ಎಂದರೆ, ದಲಿತ ಬಾಲಕಿಯ ಪೋಷಕರನ್ನು ಹೊರಗಿಟ್ಟು ಆಕೆಯ ಶವವನ್ನು ಕತ್ತಲಲ್ಲಿ ಸುಟ್ಟಿದ್ದಾರೆ ಎಂಬುದರಲ್ಲಿ ನನಗೆ ಉತ್ಪ್ರೇಕ್ಷೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ ಸಂತ್ರಸ್ಥೆಯ ತಂದೆಗೆ ಹೇಳಿಕೆ ಬದಲಿಸುವಂತೆ ಧಮಕಿ ಹಾಕಿದ ಜಿಲ್ಲಾಧಿಕಾರಿ: ವಿಡಿಯೋ ವೈರಲ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights