ಒಂದೇ ಓವರ್ಗೆ ನಾಲ್ಕು ಸಿಕ್ಸ್ ಸಿಡಿಸಿದ ಆಸಿಫ್ ಅಲಿ; ಆಫ್ಘಾನ್ ವಿರುದ್ದ ಪಾಕ್ ಗೆಲುವು!
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಮತ್ತು ಆಫ್ಘಾನಿಸ್ಥಾನದ ನಡುವೆ ನಡೆದ ಪಂದ್ಯದಲ್ಲಿ ಪಾಕ್ ತಂಡ ಗೆಲುವು ಸಾಧಿಸಿದೆ. ಪಾಕ್ ತಂಡದ ಬ್ಯಾಟ್ಸ್ಮನ್ ಆಸಿಫ್ ಅಲಿ ಅವರು 19ನೇ ಓವರ್ನಲ್ಲಿ ನಾಲ್ಕು ಸಿಕ್ಸರ್ಗಳನ್ನು ಸಿಡಿಸಿ ಪಾಕ್ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.
ಪಾಕ್ ತಂಡ ಗೆಲ್ಲಲು ಕೊನೆಯ ಎರಡು ಓವರ್ನ 12 ಎಸೆತಗಳಲ್ಲಿ 24 ರನ್ ಬೇಕಿತ್ತು. ಈಗಾಗಲೇ ಪ್ರಮುಖ 5 ವಿಕೆಟ್ಗಳನ್ನು ಕಳೆದುಕೊಂಡಿದ್ದರಿಂದ ಪಾಕ್ ಅಭಿಮಾನಿಗಳಲ್ಲಿ ಆತಂಕ, ಎದೆಬಡಿತ ಶುರುವಾಗಿತ್ತು. ಆಗ ಕ್ರೀಸ್ನಲ್ಲಿದ್ದ ಸ್ಫೋಟಕ ಬ್ಯಾಟ್ಸ್ಮನ್ ಆಸಿಫ್ ಅಲಿ ಅವರು, ಆಫ್ಘಾನಿಸ್ಥಾನದ ವೇಗದ ಬೌಲರ್ ಕರೀಂ ಜನತ್ ಮಾಡಿದ ಬೌಲಿಂಗ್ಗೆ ನಾಲ್ಕು ಸಿಕ್ಸರ್ಗಳನ್ನು ಸಿಡಿಸಿ ಪಾಕ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಾಕ್ ಅಭಿಮಾನಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು.
19ನೇ ಓವರ್ನ ಮೊದಲ ಬಾಲ್ ಅನ್ನು ಲಾಂಗ್ ಆಫ್ ಮೇಲೆ ಮೂರನೇ ಎಸೆತವನ್ನು ಮಿಡ್ ವಿಕೆಟ್ ಮೇಲೆ ಸಿಕ್ಸರ್ ಎತ್ತಿದ್ದರು. ಐದನೇ ಎಸೆತವನ್ನು ನೇರ ಬೌಲರ್ ತಲೆ ಮೇಲೆ ಹೊಡೆದರೆ ಆರನೇ ಎಸೆತವನ್ನು ಕವರ್ನಲ್ಲಿ ಸಿಕ್ಸ್ಗೆ ಕಳಿಸಿದರು. ಕೇವಲ 7 ಎಸೆತಗಳಲ್ಲಿ 25 ರನ್ ಸಿಡಿಸಿ ಪಂದ್ಯ ಗೆಲುವಿಗೆ ಅಮೋಘ ಕಾಣಿಕೆ ನೀಡಿದರು.
ಇದನ್ನೂ ಓದಿ: ಟೀಂ ಇಂಡಿಯಾ ವಿರುದ್ದ ಗೆದ್ದರೂ ಸಂಭ್ರಮಿಸಲಿಲ್ಲ ಪಾಕ್ ತಂಡ; ಯಾಕೆ ಗೊತ್ತೇ?
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಫ್ಘಾನಿಸ್ಥಾನ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 147 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಅದಕ್ಕೆ ಉತ್ತರವಾಗಿ ಪಾಕ್ 19 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು.
ಅಕ್ಟೋಬರ್ 26 ರಂದು ಪಾಕ್ ಮತ್ತು ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿಯೂ ಸಹ ಆಸಿಫ್ ಅಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಪಾಕ್ 5 ವಿಕೆಟ್ ಕಳೆದುಕೊಂಡು ಆತಂಕದ ಸ್ಥಿತಿಯಲ್ಲಿದ್ದಾಗ ಕ್ರೀಸ್ಗೆ ಬಂದ ಅವರು ಮೂರು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿ ತಂಡದ ಗೆಲುವಿಗೆ ಸಹಾಯಕವಾಗಿದ್ದರು. ಆ ಪಂದ್ಯದಲ್ಲಿ ಅವರು 12 ಎಸೆತಗಳಲ್ಲಿ 27 ರನ್ ಗಳಿಸಿದ್ದರು.
ಭಾರತ, ನ್ಯೂಜಿಲೆಂಡ್ ಮತ್ತು ಆಫ್ಘಾನಿಸ್ಥಾನದ ಎದುರು ಸತತ ಮೂರು ಪಂದ್ಯ ಗೆಲ್ಲುವುದರೊಂದಿಗೆ ಪಾಕಿಸ್ತಾನದ ಸೆಮಿಫೈನಲ್ ಹಾದಿ ಸುಗಮವಾಗಿದೆ. ಸ್ಕಾಟ್ಲ್ಯಾಂಡ್ ಮತ್ತು ನಮೀಬಿಯಾ ಎದುರು ಎರಡು ಪಂದ್ಯಗಳು ಮಾತ್ರ ಬಾಕಿ ಇದ್ದು ಒಂದು ಗೆದ್ದರೂ ಆರಾಮಾವಾಗಿ ಸೆಮಿಫೈನಲ್ ತಲುಪುತ್ತದೆ.
ಪಾಕ್ ಎದುರು ಮೊದಲ ಪಂದ್ಯ ಸೋತಿರುವ ಭಾರತ ಅಕ್ಟೋಬರ್ 31 ರಂದು ನ್ಯೂಜಿಲೆಂಡ್ ವಿರುದ್ಧ ತನ್ನ ಎರಡನೇ ಪಂದ್ಯ ಸೆಣಸಲಿದೆ.
ಇದನ್ನೂ ಓದಿ: T-20 world cup: ಲಯಕ್ಕೆ ಮರಳಿದ ಹಾರ್ದಿಕ್ ಪಾಂಡ್ಯ; ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ಬೌಲಿಂಗ್!