CAA ವಿರೋಧಿ ಹೋರಾಟ; ಶಾಸಕ, ಹೋರಾಟಗಾರ ಅಖಿಲ್ ಗೊಗೊಯ್‌‌ ವಿರುದ್ದದ ಪ್ರಕರಣ ಖುಲಾಸೆ!

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಹೋರಾಟದಲ್ಲಿ ಭಾಗಿಯಾಗಿದ್ದ ಹೋರಾಟಗಾರ, ಅಸ್ಸಾಂ ಶಾಸಕ ಅಖಿಲ್ ಗೊಗೊಯ್‌‌ ವಿರುದ್ದ ದಾಖಲಾಗಿದ್ದ ಎರಡು ಪ್ರಕರಣಗಳಲ್ಲಿ ಒಂದು ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ನ್ಯಾಯಾಲಯವು ಮಂಗಳವಾರ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.

2019ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ಕಾಯ್ದೆಗಳ ವಿರುದ್ದ ಇಡೀ ದೇಶವೇ ಪ್ರತಿಭಟನೆಗೆ ಇಳಿದಿತ್ತು. ಈ ವೇಳೆ ಅಸ್ಸಾಂನಲ್ಲಿ ನಡೆದ ಪ್ರತಿಭಟನೆಯಲ್ಲಿ ಅಖಿಲ್‌ ಗೊಗೊಯ್‌ ಭಾಗಿಯಾಗಿದ್ದರು. ಆ ಕಾರಣಕ್ಕಾಗಿ ಅವರ ವಿರುದ್ದ ಪ್ರಕರಣಗಳನ್ನು ದಾಖಲಿಸಿ, ಅವರನ್ನು ಬಂಧಿಸಲಾಗಿತ್ತು. ಏಪ್ರಿಲ್‌ನಲ್ಲಿ ನಡೆದ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಜೈಲಿನಲ್ಲಿದ್ದುಕೊಂಡೇ ಸ್ಪರ್ಧಿಸಿದ್ದ ಗೊಗೊಯ್‌ ಗೆಲುವು ಸಾಧಿಸಿ, ಶಾಸಕಾರಾಗಿ ಆಯ್ಕೆಯಾಗಿದ್ದಾರೆ.

ಅವರ ವಿರುದ್ದ ಎನ್‌ಐಎ ಎರಡು ಪ್ರಕರಣಗಳನ್ನು ದಾಖಲಿಸಿತ್ತು. ಒಂದು ಐಪಿಸಿ ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ತಿದ್ದುಪಡಿ ಕಾಯ್ದೆ (ಯುಎಪಿಎ) ಯ ಹಲವಾರು ವಿಭಾಗಗಳ ಅಡಿಯಲ್ಲಿ ದಿಬ್ರುಗಡದ ಚಾಬುವಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಇನ್ನುಂದು ಗುವಾಹಟಿಯ ಚಾಂದಮರಿಯಲ್ಲಿ ಪ್ರಕರಣದಲ್ಲಿ ದಾಖಲಾಗಿತ್ತು. ಪ್ರಸ್ತುತ ಚಾಬುವಾ ಪ್ರಕರಣವನ್ನು ಖುಲಾಸೆಗೊಳಿಸಲಾಗಿದ್ದು, ಮತ್ತೊಂದು ಪ್ರಕರಣ ಮುಂದುವರಿಯಲಿದೆ.

ಇದನ್ನೂ ಓದಿ: ಮಹಾರಾಷ್ಟ್ರ: ಸೇನಾ ಮತ್ತು ಕಾಂಗ್ರೆಸ್ ನಡುವಿನ ಬಿರುಕು ಏನನ್ನು ಸೂಚಿಸುತ್ತಿದೆ?

ಅಪರಾಧ ಪಿತೂರಿ, ದೇಶದ್ರೋಹ, ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ರಾಷ್ಟ್ರೀಯ ಸಮಗ್ರತೆಗೆ ವಿರುದ್ಧವಾದ ಪ್ರತಿಪಾದನೆಗಳು ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ಇತ್ಯಾದಿ ಪ್ರಕರಣಗಳು ಅವರ ಮೇಲೆ ದಾಖಲಾಗಿದ್ದವು.

“ಚಾಬುವಾ ಪ್ರಕರಣದ ವಿಚಾರಣೆ ಮುಗಿದಿದೆ. ಅಖಿಲ್ ಗೊಗೊಯ್ ಮತ್ತು ಇತರ ಇಬ್ಬರು ತಪ್ಪು ಮಾಡಿದ್ದಾರೆ ಎಂದು ಸಾಬೀತುಪಡಿಸಲು ಎನ್‌ಐಎ ವಿಫಲವಾದ ಕಾರಣ ಅವರನ್ನು ಪ್ರಕರಣದಿಂದ ಖುಲಾಸೆ ಮಾಡಲಾಗಿದೆ” ಎಂದು ಗೊಗೊಯಿ ಪರ ವಕೀಲ ಕೃಷ್ಣ ಅಖಿಲ್ ಗೊಗೊಯ್‌‌ ಪತ್ರಕರ್ತರಿಗೆ ತಿಳಿಸಿದ್ದಾರೆ.

ಅಸ್ಸಾಮಿನ ಹೆಸರಾಂತ ರೈತ ಸಂಘಟನೆಯಾದ ಕೃಷಿಕ್ ಮುಕ್ತಿ ಸಂಗ್ರಾಮ್ ಸಮಿತಿ (KMSS)ಯ ನಾಯಕರಾದ ಅಖಿಲ್ ಗೊಗೋಯ್ ಅವರನ್ನು ಜೊರ್‌ಹಾಟ್‌ನಲ್ಲಿ 2019ರ ಡಿಸೆಂಬರ್ 12ರ ಸಂಜೆ ಬಂಧಿಸಲಾಗಿತ್ತು. ಆಗಿನಿಂದ ಅವರು ಸೆರೆವಾಸ ಅನುಭವಿಸುತ್ತಲೆ ಇದ್ದಾರೆ.

ಇದನ್ನೂ ಓದಿ: 2022ರ ಯುಪಿ ಚುನಾವಣೆ: ‘ಹಿಂದೂತ್ವ ಐಕಾನ್’ ಯಾರು – ಮೋದಿ ಅಥವಾ ಯೋಗಿ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights