ಅನಿಲ್ ಕುಂಬ್ಳೆಗೆ ನಾಚಿಕೆಯಾಗಬೇಕು ಎಂದ ಕನ್ನಡಿಗರು; ಕುಂಬ್ಳೆ ವಿರುದ್ಧ ಕನ್ನಡಿಗರು ಸಿಡಿದಿದ್ದೇಕೆ?

ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡು ಸರ್ಕಾರದ ಪರವಾಗಿ ಟ್ವೀಟ್‌ ಮಾಡಿದ್ದ ಭಾರತ ಕ್ರಿಕೆಟ್‌ ತಂಡದ ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದು, ರೈತರನ್ನು ಅವಮಾನಿಸುವ ನಿಮಗೆ ನಾಚಿಕೆಯಾಗಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಅಂತಾರಾಷ್ಟ್ರೀಯ ಪಾಪ್ ಸಿಂಗರ್‌ ರಿಹಾನ್ನಾ ಟ್ವೀಟ್‌ ಮಾಡಿದ್ದರಿಂದಾಗಿ ರೈತರ ಹೋರಾಟಕ್ಕೆ ಜಾಗತಿಕ ಬೆಂಬಲ ವ್ಯಕ್ತವಾಗಿತ್ತು. ಈ ಬೆಂಬಲಿದಿಂದಾಗಿ ತಬ್ಬಿಬ್ಬಾದ ವಿದೇಶಾಂಗ ಸಚಿವಾಲಯ, ರೈತ ಹೋರಾಟವು ದೇಶದ ಆಂತರಿಕ ಸಮಸ್ಯೆಯಾಗಿದೆ. ಈ ವಿಚಾರದಲ್ಲಿ ವಿದೇಶಿಗರು ಮಾತನಾಡುವ ಅಗತ್ಯವಿಲ್ಲ ಎಂದು ಹೇಳಿತ್ತು. ಅದಲ್ಲದೆ, #FarmersProtest ಹ್ಯಾಶ್‌ಟ್ಯಾಗ್‌ಗೆ ವಿರುದ್ದವಾಗಿ ’ಇಂಡಿಯಾ ಟುಗೇದರ್‌’ ಮತ್ತು ’ಇಂಡಿಯಾ ಅಗೇನ್ಸ್ಟ್‌‌ ಪ್ರೊಪಗಾಂಡ’ ಎಂಬ ಹ್ಯಾಶ್ ಟ್ಯಾಗನ್ನು ನೀಡಿತ್ತು. ಜೊತೆಗೆ, ಬಿಜೆಪಿ ಐಟಿ ಸೆಲ್‌ ಭಾರತದ ಸೆಲೆಬ್ರೆಟಿಗಳಿಗೆ ಏನನ್ನು ಟ್ವೀಟ್‌ ಮಾಡಬೇಕು ಎಂಬುದನ್ನೂ ಕೂಡ ಕಳಿಸಿತ್ತು ಎನ್ನಲಾಗಿದ್ದು, ಬಿಜೆಪಿ ಕೊಟ್ಟ ಕಂಟೆಂಟ್‌ಅನ್ನು ಹಲವರು ಟ್ವೀಟ್‌ ಮಾಡಿದ್ದರು.

ಈ ಪೈಕಿ, ಕೇಂದ್ರ ಸರ್ಕಾರ ನೀಡಿರುವ ಹ್ಯಾಶ್‌ಟ್ರಾಗ್ ಬಳಸಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅನಿಲ್ ಕುಂಬ್ಳೆ, “ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತ ದೇಶವು ತನ್ನ ಆಂತರಿಕ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವ ಸಾಮರ್ಥ್ಯ ಹೊಂದಿದೆ” ಎಂದು ಕೇಂದ್ರ ಸರ್ಕಾರದ ಪರವಾಗಿ ಬೌಲಿಂಗ್ ಮಾಡಿದ್ದರು.

ಇದರ ವಿರುದ್ದ ಕನ್ನಡಿಗರು ತಿರುಗಿಬಿದ್ದಿದ್ದು, ನೂರಕ್ಕೂ ಹೆಚ್ಚು ರೈತರು ದಿಲ್ಲಿಯ ಕೊರೆಯುವ ಚಳಿಯಲ್ಲಿ ಸತ್ತು ಹೋದಾಗ ದೇಶದ ಘನತೆ, ಮರ್ಯಾದೆಯ ಪ್ರಶ್ನೆ ಎದೆಯಲ್ಲಿ ಮೂಡಲಿಲ್ಲವೇ? ಆಳುವ ಪಕ್ಷದ ಗುಲಾಮಗಿರಿ ಮಾಡುವುದಕ್ಕಿಂತ ಜನರ ಪರವಾಗಿ ನಿಂತುಕೊಳ್ಳಿ. ಇತಿಹಾಸ ನೆನಪಿಸಿಕೊಳ್ಳುತ್ತದೆ. ನಾಚಿಕೆಯಾಗಬೇಕು ನಿಮಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಯುಕ್ತ ಹೋರಾಟ ಕರ್ನಾಟಕ, “ಪ್ರತಿಭಟನೆ ಶುರುವಾದಾಗಿಂದ ನೂರಕ್ಕು ಹೆಚ್ಚು ರೈತರು ಸತ್ತಿದ್ದಾರೆ‌. ಸೆಪ್ಟೆಂಬರ್‌ನಿಂದ ಕರ್ನಾಟಕದ‌ ಹಾಗೂ ಕೇಂದ್ರದ ಕೃಷಿ ಕಾಯಿದೆ ತಿದ್ದುಪಡಿಗಳನ್ನು ಕರ್ನಾಟಕದಲ್ಲಿ‌ ವಿರೋಧಿಸುತಿದ್ದೇವೆ. ಒಮ್ಮೆಯಾದರು ಬಂದು ನಮ್ಮ ರೈತರು ಏಕೆ‌ ಹೊರಾಡುತಿದ್ದಾರೆ ಕೇಳಿದಿರೆ ಕುಂಬ್ಳೆ ಅವರೆ ? ಈಗ ಏನು ಟ್ವೀಟ್‌ ಮಾಡೋದು. ನಿಮ್ಮ ನಿಲುವು ಬಹಳ‌ ನೋವು ತಂದಿದೆ” ಎಂದು ಹೇಳಿದೆ.

ಸಂಯುಕ್ತ ಹೋರಾಟ ಕರ್ನಾಟಕವು ರೈತ, ಕಾರ್ಮಿಕ, ಮಹಿಳಾ ಹಾಗೂ ವಿದ್ಯಾರ್ಥಿಗಳ ಸಂಯುಕ್ತ ಹೋರಾಟದ ಒಕ್ಕೂಟವಾಗಿದೆ.

ಲೇಖಕ ಶ್ರೀನಿವಾಸ ಕಾರ್ಕಾಳ ಅವರು, “ಮಾನವ ಹಕ್ಕುಗಳ ಉಲ್ಲಂಘನೆಯು ಯಾವುದೆ ದೇಶದ ಆಂತಕರಿಕ ವಿಷಯವಲ್ಲ” ಎಂದು ಹೇಳಿದ್ದಾರೆ.

ಚೇತನ್ ಕೃಷ್ಣಾ ಅವರು, “ಕನ್ನಡಿಗರಾಗಿ ನೀವು ಇಂತಹ ಮನೆ ಹಾಳು ಸರಕಾರಕ್ಕೆ ಬಕೆಟ್ ಹಿಡಿಯುವುದು ನ್ಯಾಯವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://twitter.com/ckchetanck/status/1356982417924317185?s=20

ಸಾಮಾಜಿಕ ಕಾರ್ಯಕರ್ತೆ ರೇಖಾ ಶ್ರೀನಿವಾಸ್ ಅವರು, “ಅಮೇರಿಕದ ಮಾಜಿ ಅಧ್ಯಕ್ಷ ಟ್ರಂಪ್ ಭಾರತವನ್ನು ಕೊಳಕು ದೇಶ ಅಂದಾಗ ಯಾರು ಮಾತಾಡಲಿಲ್ಲ. ಆದರೆ ಇಲ್ಲಿನ ರೈತರ ಬಗ್ಗೆ ಅನುಕಂಪ ತೋರಿಸಿದ ವಿದೇಶಿಯರು ಮಾಡಿದ ಒಂದೇ ಒಂದು ಬರಹಕ್ಕೆ ಎಷ್ಟು ಮಾತಾಡುತಿರೋ. ಇಷ್ಟು ದಿನ ರೈತ ಬೆಳೆದ ಅನ್ನ ತಿಂದಿದ್ದಕ್ಕಾದ್ರು ಸ್ವಲ್ಪ ನಿಯತ್ತು ಇರಲಿ” ಎಂದು ಕಿಡಿ ಕಾರಿದ್ದಾರೆ.

ಕನ್ನಡ ಪರ ಹೋರಾಟಗಾರ ದಿನೇಶ್ ಕುಮಾರ್‌ ಅವರು, “ನೂರಕ್ಕೂ ಹೆಚ್ಚು ರೈತರು ದಿಲ್ಲಿಯ ಕೊರೆಯುವ ಚಳಿಯಲ್ಲಿ ಸತ್ತುಹೋದಾಗ ದೇಶದ ಘನತೆ, ಮರ್ಯಾದೆಯ ಪ್ರಶ್ನೆ ಎದೆಯಲ್ಲಿ ಮೂಡಲಿಲ್ಲವೇ? ರೈತರ ಮೇಲೆ ದಾಳಿಯಾದಾಗ, ಸುಳ್ಳು ಕೇಸು ಹಾಕಿದಾಗ ನಿಮ್ಮ ಆತ್ಮಸಾಕ್ಷಿ ಎಲ್ಲಿತ್ತು ಸರ್? ಆಳುವ ಪಕ್ಷದ ಗುಲಾಮಗಿರಿ ಮಾಡುವುದಕ್ಕಿಂತ ಜನರ ಪರವಾಗಿ ನಿಂತುಕೊಳ್ಳಿ. ಇತಿಹಾಸ ನೆನಪಿಸಿಕೊಳ್ಳುತ್ತದೆ. ನಾಚಿಕೆಯಾಗ ಬೇಕು ನಿಮಗೆ” ಎಂದು ಹೇಳಿದ್ದಾರೆ.

Read Also: ಬಾಲ್ಯದಲ್ಲಿ ಕೈಗೊಂಬೆ ಆಟ ನೋಡಿರಲಿಲ್ಲ; ಈಗ ನೋಡುತ್ತಿದ್ದೇನೆ: ಕ್ರಿಕೆಟಿಗ ಮನೋಜ್ ತಿವಾರಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights