ಆನಂದ್ ಸಿಂಗ್ ಖಾತೆ ಕ್ಯಾತೆ ಮುಗೀತಾ? ಮುಂದುವರಿಯುತ್ತಾ..? : ಸಿಎಂ ಕೊಟ್ಟ ಸಂದೇಶವೇನು..?
ರಾಜ್ಯದಲ್ಲಿ ಸಚಿವ ಸಂಪುಟ ರಚನೆಯಾಗಿ ಖಾತೆ ಕೂಡ ಹಂಚಿಕೆ ಮಾಡಲಾಗಿದ್ದು ಉನ್ನತ ಖಾತೆಗಾಗಿ ಸಚಿವ ಆನಂದ್ ಸಿಂಗ್ ಪಟ್ಟು ಹಿಡಿದಿದ್ದಾರೆ. ನಿನ್ನೆವರೆಗೂ ಖಾತೆ ಬದಲಾವಣೆಯಾಗಲೇಬೇಕು ಎಂದು ಅಬ್ಬರಿಸುತ್ತಲೇ ಬಂದಿದ್ದ ಆನಂದ್ ಸಿಂಗ್ ಸೈಲೆಂಟ್ ಆಗಿದ್ದಾರೆ.
ಹೌದು… ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬೇಸರವನ್ನು ತೋಡಿಕೊಂಡ ಆನಂದ್ ಸಿಂಗ್ ಇಂದು ಸೈಲೆಂಟ್ ಆಗಿದ್ದಾರೆ. ಹೀಗಾಗಿ ಸದ್ಯಕ್ಕೆ ಯಡಿಯೂರಪ್ಪ ಹಾಗೂ ಸಿಎಂ ಬೊಮ್ಮಾಯಿ ಅವರ ಸಂಧಾನ ಸಕ್ಸಸ್ ಆಗಿದೆ ಎನ್ನಲಾಗುತ್ತಿದೆ.
ಖಾತೆ ಬದಲಾವಣೆ ಬಗ್ಗೆ ಪಟ್ಟು ಹಿಡಿದುಕುಳಿತಿರುವ ಆನಂದ್ ಸಿಂಗ್ ಗೆ ಸಿಎಂ ಬಸವರಾಜ್ ಬೊಮ್ಮಾಯಿ ಹೈಕಮಾಂಡ್ ಸೂಚನೆ ಇಲ್ಲದೇ ಏನನ್ನು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸದ್ಯ ಖಾತೆ ಕ್ಯಾತೆ ಚಂಡನ್ನು ಹೈಕಮಾಂಡ್ ಅಂಗಳಕ್ಕೆ ಹಾಕುವ ಮೂಲಕ ಬೀಸೋ ದೊಣ್ಣೆಯಿಂದ ಬೊಮ್ಮಾಯಿ ತಪ್ಪಿಸಿಕೊಂಡಿದ್ದಾರೆ. ಪದೇ ಪದೇ ಖಾತೆಗೆ ಪಟ್ಟು ಹಿಡಿಯುವವರಿಗೆ ಸಿಎಂ ಬೊಮ್ಮಾಯಿ ಹೈಕಮಾಂಡ್ ಕಡೆಗೆ ಬೆಟ್ಟು ತೋರಿಸಿದ್ದಾರೆ. ಹೈಕಮಾಂಡ್ ಏನು ಹೇಳುತ್ತೋ ಅದೇ ಫೈನಲ್ ಎಂದು ಮೆಸೆಜ್ ಪಾಸ್ ಮಾಡಿದ್ದಾರೆ.
ಹೈಕಮಾಂಡ್ ಆದೇಶಕ್ಕೆ ಸಿಎಂ ಆಗಿ ನಾನು ಸಚಿವರಾಗಿ ನೀವು ಬದ್ದರಾಗಿರಬೇಕು ಎಂದು ಹೇಳಿದ್ದಾರೆ. ಹೀಗಾಗಿ ಸಿಎಂ ಸಲಹೆ ಮೇರಿಗೆ ಆಗಸ್ಟ್ 15 ಧ್ವಜಾರೋಹನ ನಂತರ ಆನಂದ್ ಸಿಂಗ್ ದೆಹಲಿಗೆ ಹೋಗುವ ಸಾಧ್ಯತೆ ಇದೆ.
ಸಚಿವ ಆನಂದ್ ದೆಹಲಿಯಿಂದ ಹಿಂದಿರುಗಿದ ನಂತರ ಸಿಎಂ ಬೊಮ್ಮಾಯಿ ಹೈಕಮಾಂಡ್ ಭೇಟಿ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆನಂದ್ ಸಿಂಗ್ ವಿಚಾರ ಮಾತ್ರವಲ್ಲದೇ ಖಾತೆ ಕ್ಯಾತೆ ತೆಗೆದವರ ಹಾಗೂ ಒತ್ತಡ ಹಾಕುತ್ತಿರುವವರ ಪಟ್ಟಿಯೊಂದಿಗೆ ಸಿಎಂ ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಚರ್ಚೆ ಮಾಡಲಿದ್ದಾರೆ.
ಹೀಗಾಗಿ ರಾತ್ರಿ ಸಿಡಿದು ಬೆಳಿಗ್ಗೆ ತಂಡಾದ ಸಚಿವ ಆನಂದ್ ಸಿಂಗ್ ಇಂದು ಸುದ್ದಿಗಾರರೊಂದಿಗೆ ಮಾತನಾಡಿ, “ನಾನು ರಾಜೀನಾಮೆ ಕೊಡುತ್ತೇನೆ ಎಂದು ಎಲ್ಲಿ ಹೇಳಿದ್ದೇನೆಂದು” ಯೂಟರ್ನ್ ಹೊಡೆದಿದ್ದಾರೆ.
ಒಟ್ಟಿನಲ್ಲಿ ಖಾತೆ ವಿಚಾರದಲ್ಲಿ ತಣ್ಣಗಾಗದ ಆನಂದ್ ಸಿಂಗ್ ವರಿಷ್ಠರೊಂದಿಗೆ ಚರ್ಚಿಸಿ ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಅನ್ನೊದನ್ನ ಕಾದು ನೋಡಬೇಕಿದೆ. ಆನಂದ್ ಸಿಂಗ್ ಮುಂದಿನ ನಡೆಗಳು ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿವೆ.