‘ಅಮ್ಮ ಪ್ರಶಸ್ತಿ’ಗೆ 20 ವರ್ಷದ ಸಂಭ್ರಮ! ಏಳು ಜನ ಬರಹಗಾರರಿಗೆ ಪ್ರಶಸ್ತಿ ಪ್ರಧಾನ!

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ `ಅಮ್ಮ ಪ್ರಶಸ್ತಿ’ಗೆ ಭಾರತಿ ಹೆಗಡೆ, ಸುರೇಶ ನಾಗಲಮಡಿಕೆ, ಕೆ.ಎ.ದಯಾನಂದ, ಕಿರಣ್ ಭಟ್, ಶ್ರೀನಿವಾಸ ಸಿರನೂರಕರ್, ನದೀಂ ಸನದಿ ಮತ್ತು ಸತ್ಯಮಂಗಲ ಮಹಾದೇವ ಅವರ ಕೃತಿಗಳು ಆಯ್ಕೆಯಾಗಿವೆ ಎಂದು `ಅಮ್ಮ ಪ್ರಶಸ್ತಿ’ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಾರತಿ ಹೆಗಡೆ ಅವರ `ಸೀತಾಳೆದಂಡೆಯ ಕಥೆಗಳು’ (ಕಥಾ ಸಂಕಲನ), ಸುರೇಶ ನಾಗಲಮಡಿಕೆ ಅವರ `ಹಾಡು ಕಲಿಸಿದ ಹರ’ (ಸಂಸ್ಕೃತಿ ಸಂಕಥನ), ಕೆ.ಎ.ದಯಾನಂದ ಅವರ ಹಾದಿಗಲ್ಲು (ಆತ್ಮಕಥನ), ಕಿರಣ್ ಭಟ್ ಅವರ ರಂಗ ಕೈರಳಿ (ಪ್ರವಾಸ ಕಥನ), ಕಲಬುರಗಿಯ ಶ್ರೀನಿವಾಸ ಸಿರನೂರಕರ್ ಅವರ ಪುರಂದರದಾಸರ ಬಂಡಾಯ ಪ್ರಜ್ಞೆ (ವೈಚಾರಿಕ ಸಂಕಲನ), ನದೀಂ ಸನದಿ ಅವರ `ಹುಲಿಯ ನೆತ್ತಿಯ ನೆರಳು’ ಮತ್ತು ಡಾ. ಸತ್ಯಮಂಗಲ ಮಹಾದೇವ ಅವರ `ಪಂಚವರ್ಣದ ಹಂಸ’ (ಕವನ ಸಂಕಲನ) ಕೃತಿಗಳನ್ನು ೨೦ ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ತಲಾ ೫೦೦೦ ರೂ. ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ ಮತ್ತು ಸತ್ಕಾರ ಒಳಗೊಂಡಿರುತ್ತದೆ. ಕಾವ್ಯ ವಿಭಾಗದಲ್ಲಿ ಇಬ್ಬರು ಕವಿಗಳು ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಇದೇ ನವೆಂಬರ್ ೨೬ ರಂದು ಸಂಜೆ ೫.೩೦ಕ್ಕೆ ಸೇಡಮ್‌ನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ `ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಮ್ಮ ಪ್ರಶಸ್ತಿಗೆ ೨೦ ರ ವರ್ಷದ ಸಂಭ್ರಮ :
ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿದ `ಅಮ್ಮ ಪ್ರಶಸ್ತಿ’ಗೆ ಈಗ ೨೦ ನೇ ವರ್ಷದ ಸಂಭ್ರಮ. ಕನ್ನಡದ ಪ್ರತಿಭಾವಂತ ಬರಹಗಾರರು `ಅಮ್ಮ ಪ್ರಶಸ್ತಿ’ಗಾಗಿ ತಮ್ಮ ಕೃತಿಗಳನ್ನು ಕಳುಹಿಸುವ ಮೂಲಕ ಪ್ರಶಸ್ತಿಯನ್ನು ಗುರುತಿಸಿದ್ದಾರೆ ಹಾಗೂ ಗೌರವಿಸಿದ್ದಾರೆ. ಈ ಬಾರಿ ೩೯೧ ಕೃತಿಗಳು ಬಂದಿದ್ದವು.

ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ `ಅಮ್ಮ ಪ್ರಶಸ್ತಿ’ ರಾಜ್ಯದ ಗಣನೀಯ ಪ್ರಶಸ್ತಿಗಳಲ್ಲಿ ಒಂದಾಗಬೇಕು ಎಂಬ ಪ್ರತಿಷ್ಠಾನದ ಆಶಯಕ್ಕೆ ಅನುಗುಣವಾಗಿ ನಾಡಿನ ಖ್ಯಾತ ಲೇಖಕರು, ಕವಿಗಳು, ಪ್ರಕಾಶಕರು ಮತ್ತು ಲೇಖಕರ ಅಭಿಮಾನಿ ಓದುಗರು ಸ್ಪಂದಿಸಿದ್ದೇ ಇದೊಂದು ಗೌರವಾನ್ವಿತ ಪ್ರಶಸ್ತಿಯಾಗಿ ರೂಪುಗೊಂಡಿದೆ ಎಂಬುದಕ್ಕೆ ಸಾಕ್ಷಿ ಎಂದು ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.


ಇದನ್ನೂ ಓದಿ: ಹಳ್ಳಿಹಕ್ಕಿ‌, ಎಂಟಿಬಿ, ಶಂಕರ್‌ಗೆ ಸಚಿವ ಸ್ಥಾನ; ಆಯ್ಕೆ ಕಡತಗಳನ್ನು ಸಲ್ಲಿಸುವಂತೆ ಹೈಕೋರ್ಟ್‌ ಸೂಚನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights