ಯುಪಿಯಲ್ಲಿ ಅಧಿಕಾರಕ್ಕೆ ಬಂದರೆ ಹುತಾತ್ಮ ರೈತರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ: ಅಖಿಲೇಶ್‌ ಯಾದವ್

ಉತ್ತರಪ್ರದೇಶದಲ್ಲಿ ನಡೆಯಲಿರುವ 2022ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯಲ್ಲಿ ಹುತಾತ್ಮರಾದ ರೈತರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ನೀಡುವುದಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಬುಧವಾರ ಘೋಷಿಸಿದ್ದಾರೆ.

‘ಇತರರ ಜೀವನಕ್ಕಾಗಿ ‘ಆಹಾರ’ವನ್ನು ಬೆಳೆಯುವ ರೈತರ ಜೀವನಕ್ಕೆ ಬೆಲೆಯಿಲ್ಲ. 2022ರಲ್ಲಿ ಸಮಾಜವಾದಿ ಪಕ್ಷವು ಅಧಿಕಾರಕ್ಕೆ ಬಂದ ಕೂಡಲೇ ರೈತ ಚಳವಳಿಯ ಹುತಾತ್ಮರಿಗೆ ತಲಾ 25 ಲಕ್ಷ ‘ಕಿಸಾನ್ ಶಹಾದತ್ ಸಮ್ಮಾನ್ ರಾಶಿ’ (ರೈತ ಹುತಾತ್ಮರಿಗೆ ಗೌರವಧನ) ನೀಡಲಾಗುವುದು ಎಂದು ಭರವಸೆ ನೀಡುತ್ತೇವೆ’ ಎಂದು ಅಖಿಲೇಶ್ ಹಿಂದಿಯಲ್ಲಿ ಟ್ವಿಟ್ ಮಾಡಿದ್ದಾರೆ.

ಕಳೆದ ವರ್ಷ ನವೆಂಬರ್‌ನಿಂದ ರೈತರು ದೆಹಲಿ ಗಡಿಗಳಲ್ಲಿ ವಿವಾದಾತ್ಮಕ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಸಮಾಜವಾದಿ ಪಕ್ಷದಿಂದ ಈ ಘೋಷಣೆ ಬಂದಿದೆ.

ರೈತ ಆಂದೋಲನದ ವೇಳೆ ಸಾವನ್ನಪ್ಪಿದ ರೈತರ ಕುಟುಂಬಕ್ಕೆ ತಮ್ಮ ಸರ್ಕಾರ ತಲಾ 3 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಿದೆ. ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರವನ್ನು ಕೇಂದ್ರ ಸರ್ಕಾರ ಘೋಷಿಸಬೇಕು” ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಒತ್ತಾಯಿಸಿದ್ದಾರೆ.

ಉತ್ತರ ಪ್ರದೇಶದ 403 ವಿಧಾನಸಭಾ ಸ್ಥಾನಗಳಲ್ಲಿ, ಪಶ್ಚಿಮ ಯುಪಿಯು ಸುಮಾರು 100 ಸ್ಥಾನಗಳನ್ನು ಹೊಂದಿದೆ. 2017ರ ಚುನಾವಣೆಯಲ್ಲಿ ಬಿಜೆಪಿಯು ಆ 100 ಸ್ಥಾನಗಳಲ್ಲಿ 76 ಸ್ಥಾನಗಳನ್ನು ಗೆದ್ದಿತ್ತು. ಆದರೆ, ಈ ಬಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ರೈತರ ಆಕ್ರೋಶದಿಂದ ಈ ಪ್ರದೇಶದಲ್ಲಿ ಬಿಜೆಪಿಗೆ ಸ್ಥಾನಗಳು ಕೈತಪ್ಪಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

2020 ನವೆಂಬರ್ ತಿಂಗಳಿನಲ್ಲಿ ಆರಂಭವಾದ ರೈತ ಹೋರಾಟ ಹಲವು ಏಳು ಬೀಳುಗಳ ನಡುವೆಯೂ ಯಶಸ್ವಿ ಕಂಡಿದೆ. ನವೆಂಬರ್ 19ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಸಂಸತ್ತಿನಲ್ಲಿ ಕಾಯ್ದೆಗಳು ಅಧಿಕೃತವಾಗಿ ರದ್ಧಾಗುವವರೆಗೂ ಕಾಯುವುದಾಗಿ ತಿಳಿಸಿತ್ತು. ಅದರೊಂದಿಗೆ ಇನ್ನು ಮುಖ್ಯ ಬೇಡಿಕೆಗಳಾಗಿರುವ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸುವುದು, ವಿದ್ಯುತ್ ಕಾಯ್ದೆಯನ್ನು ಹಿಂಪಡೆಯುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಪೂರೈಸುವವರೆಗೂ ಹೋರಾಟವನ್ನು ನಡೆಸುವುದಾಗಿ ನಿರ್ಧರಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights