ಕಾರಣ ಯಾರು ಎಂದು ಹೇಳಲು ಭಯವಾಗುತ್ತಿದೆ; ಲೈಂಗಿಕ ದೌರ್ಜನ್ಯಕ್ಕೆ ತುತ್ತಾದ ಬಾಲಕಿ ಆತ್ಮಹತ್ಯೆ

ಖಾಸಗಿ ಶಾಲೆಯಲ್ಲಿ ಓದುತ್ತಿದ್ದ 12ನೇ ತರಗತಿಯ ಬಾಲಕಿಯೊಬ್ಬಳು ಲೈಂಗಿಕ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಕರೂರಿನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಆಕೆ ಆತ್ಮಹತ್ಯೆಗೆ ಶರಣಾಗುವ ಮುನ್ನ ಡೆತ್‌ನೋಟ್‌ ಬರೆದಿಟ್ಟಿದ್ದು, “ಲೈಂಗಿಕ ಕಿರುಕುಳದಿಂದ ಸಾಯುವ ಕೊನೆಯ ಹುಡುಗಿ ನಾನೇ ಆಗಬೇಕು” ಎಂದು ಬರೆದಿದ್ದಾರೆ.

ಆಕೆಯ ಮೃತದೇಹವನ್ನು ಕರೂರು ಜಿಎಂಸಿಎಚ್‌ಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಕರೂರ್ ಜಿಲ್ಲೆಯಲ್ಲಿ ಲೈಂಗಿಕ ಕಿರುಕುಳದಿಂದ ಸಾಯುವ ಕೊನೆಯ ಹುಡುಗಿ ನಾನೇ ಆಗಿರಬೇಕು. ನನ್ನ ಈ ನಿರ್ಧಾರಕ್ಕೆ ಕಾರಣ ಯಾರು ಎಂದು ಹೇಳಲು ನನಗೆ ಭಯವಾಗಿದೆ. ನಾನು ಈ ಭೂಮಿಯಲ್ಲಿ ದೀರ್ಘಕಾಲ ಬದುಕಬೇಕು ಮತ್ತು ಇತರರಿಗೆ ಸಹಾಯ ಮಾಡಬೇಕೆಂದು ಬಯಸಿದ್ದೆ, ಆದರೆ ಈಗ ನಾನು ಇಷ್ಟು ಬೇಗ ಇಹಲೋಕ ತ್ಯಜಿಸುವಂತಾಗಿದೆ” ಎಂದು ಬಾಲಕಿ ಬರೆದಿದ್ದಾಳೆ.

“ಆಕೆ ತನ್ನ ಆತ್ಮಹತ್ಯೆ ಪತ್ರದಲ್ಲಿ ಯಾವುದೇ ದುಷ್ಕರ್ಮಿಯ ಹೆಸರನ್ನು ನಮೂದಿಸಿಲ್ಲ. ಹಾಗಾಗಿ, ನಾವು ಆಕೆಯ ಶಾಲೆ ಮತ್ತು ನೆರೆಹೊರೆಯಲ್ಲಿ ತನಿಖೆ ನಡೆಸುತ್ತಿದ್ದೇವೆ. ಆಕೆಯ ಶಿಕ್ಷಕರು ಅಥವಾ ಆಕೆಯ ಕುಟುಂಬದವರು ಅಥವಾ ಆಕೆಯ ನೆರೆಹೊರೆಯವರಿಂದ ಆಕೆ ಕಿರುಕುಳಕ್ಕೊಳಗಾಗಿರಬಹುದು ಎಂದು ಶಂಕಿಸಲಾಗಿದೆ. ಎಲ್ಲರನ್ನೂ ತನಿಖೆಗೆ ಒಳಪಡಿಸಲಾಗುತ್ತದೆ” ಎಂದು ಪೊಲೀಸರು ತಿಳಿಸಿದ್ದಾರೆ.

ಹುಡುಗಿಯ ಸಂಬಂಧಿಯೊಬ್ಬರು “ಪೊಲೀಸ್ ತನಿಖೆಯಲ್ಲಿ ನಮಗೆ ನಂಬಿಕೆಯಿಲ್ಲ. ಏಕೆಂದರೆ ಅವರು ಏನನ್ನಾದರೂ ಮರೆಮಾಡಲು ಮತ್ತು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ನಮ್ಮ ಹುಡುಗಿ ಮಾನಸಿಕವಾಗಿ ಅಸ್ವಸ್ಥಳಾಗಿದ್ದಳು ಮತ್ತು ದೈಹಿಕ ಕಾಯಿಲೆಯಿಂದ ಬಳಲುತ್ತಿದ್ದಳು ಎಂದು ಆರೋಪಿಸುತ್ತಿದ್ದಾರೆ. ಅದು ನಿಜವಲ್ಲ. ಆಕೆ ತುಂಬಾ ಧೈರ್ಯಶಾಲಿ ಹುಡುಗಿ ಎಂದು ಆಕೆಯ ಶಾಲೆ ಮತ್ತು ಸುತ್ತಮುತ್ತಲಿನ ಎಲ್ಲರಿಗೂ ತಿಳಿದಿದೆ. ಅವಳು ವಿದ್ಯಾಭ್ಯಾಸದಲ್ಲಿ ತುಂಬಾ ಮುಂದಿದ್ದಳು. ಆಕೆ ಹಲವಾರು ವರ್ಷಗಳಿಂದ ತನ್ನ ಶಾಲೆಯಲ್ಲಿ ಟಾಪರ್ ಆಗಿದ್ದಳು. ಈ ವಿಷಯದಲ್ಲಿ ಪೊಲೀಸರು ನ್ಯಾಯಯುತ ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದ್ದಾರೆ.

ಕರೂರಿನ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ವೆಂಗಮೇಡುವಿನ 17 ವರ್ಷದ ಸಂತ್ರಸ್ತೆ ಸುಮಾರು ಎರಡು ವರ್ಷಗಳ ಹಿಂದೆ ತನ್ನ ತಂದೆಯನ್ನು ಕಳೆದುಕೊಂಡಿದ್ದರು. ಆಕೆ ಮತ್ತು ಆಕೆಯ ತಾಯಿಯನ್ನು ಅವರ ಸೋದರಸಂಬಂಧಿಗಳು ನೋಡಿಕೊಳ್ಳುತ್ತಿದ್ದರು.

ತಮಿಳುನಾಡಿನಲ್ಲಿ ಇತ್ತೀಚೆಗೆ ಲೈಂಗಿಕ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾದವರಲ್ಲಿ ಇದು ಎರಡನೇ ಪ್ರಕರಣವಾಗಿದೆ. ಕಳೆದ ವಾರ, ಕೊಯಮತ್ತೂರಿನಲ್ಲಿ 17 ವರ್ಷದ ವಿದ್ಯಾರ್ಥಿನಿಯೊಬ್ಬರು, ಆಕೆಯ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ, ಶಿಕ್ಷಕ ಮತ್ತು ಆ ಶಾಲೆಯ ಪ್ರಾಂಶುಪಾಲರನ್ನು ಬಂಧಿಸಲಾಗಿದೆ.

ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.

ಇದನ್ನೂ ಓದಿ: ಪಿಯುಸಿಯಲ್ಲಿ 80% ಅಂಕ ಗಳಿಸಿದ ವಿದ್ಯಾರ್ಥಿನಿ; ಕಾಲೇಜು ಶುಲ್ಕ ಭರಿಸಲಾಗದೇ ಕೂಲಿ ಕೆಲಸ ಮಾಡುತ್ತಿದ್ದಾಳೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights