ಶಿವಸೇನಾ ಸಂಸದನಿಂದ ಆಸಿಡ್‌ ದಾಳಿ ಬೆದರಿಕೆ: ಸಂಸದೆ ನವನೀತ್ ಕೌರ್ ಆರೋಪ!

ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸದನದಲ್ಲಿ ಮಾತನಾಡಿದ್ದಕ್ಕಾಗಿ ಲೋಕಸಭೆಯ ಮೊಗಸಾಲೆಯಲ್ಲಿ ಶಿವಸೇನೆಯ ಸಂಸದ ಅರವಿಂದ ಸಾವಂತ್ ಅವರು ತಮಗೆ ಜೈಲಿಗಟ್ಟುವ ಹಾಗೂ ಆಸಿಡ್‌ ದಾಳಿ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಅಮರಾವತಿಯ ಸ್ವತಂತ್ರ ಸಂಸದೆ ನವನೀತ್ ಕೌರ್ ರಾಣಾ ಆರೋಪಿಸಿದ್ದಾರೆ.

ಪೋನ್ ಕರೆಗಳ ಮೂಲಕ ಮತ್ತು ಶಿವಸೇನೆಯ ಲೆಟರ್‌ಹೆಡ್‌ಗಳಲ್ಲಿ ಆಸಿಡ್-ಅಟ್ಯಾಕ್ ಬೆದರಿಕೆಗಳು ಬರುತ್ತಿವೆ ಎಂದು ಆರೋಪಿಸಿ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಪ್ರಧಾನಿ ಮತ್ತು ಗೃಹಸಚಿವರಿಗೆ ಪತ್ರ ಬರೆದಿದ್ದಾರೆ.

ಆದರೆ, ಆರೋಪಗಳನ್ನು ನಿರಾಕರಿಸಿರುವ ಸಂಸದ, ಯಾರಾದರೂ ಮಹಿಳಾ ಸಂಸದರಿಗೆ ಬೆದರಿಕೆ ಹಾಕಿದ್ದರೇ, ದೈಹಿಕ ಹಾನಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದರೇ ನಾನು ಮಹಿಳಾ ಸದಸ್ಯರೊಂದಿಗೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.

ಮಾರ್ಚ್ 22 ರಂದು ಸ್ಪೀಕರ್‌ಗೆ ಬರೆದಿರುವ ಪತ್ರವೊಂದರಲ್ಲಿ ನವನೀತ್ ಕೌರ್‌ ರಾಣಾ ಅವರು, “ಇಂದು ಶಿವಸೇನೆ ಸಂಸದ ಅರವಿಂದ ಸಾವಂತ್ ನನಗೆ ಬೆದರಿಕೆ ಹಾಕಿದ ರೀತಿ ನನಗೆ ಮಾತ್ರವಲ್ಲ, ದೇಶದ ಎಲ್ಲ ಮಹಿಳೆಯರಿಗೂ ಮಾಡಿದ ಅವಮಾನವಾಗಿದೆ. ಆದ್ದರಿಂದ ಅರವಿಂದ ಸಾವಂತ್ ವಿರುದ್ಧ ನಾನು ಕಠಿಣ ಕ್ರಮಗಳನ್ನು ಬಯಸುತ್ತೇನೆ” ಎಂದಿದ್ದಾರೆ.

ಇದನ್ನೂ ಓದಿ: ಶ್ರೀಕೃಷ್ಣ ಜನ್ಮಭೂಮಿ: ಮಥುರಾದಲ್ಲಿ ಮಸೀದಿ ತೆರೆವಿಗಾಗಿನ ಅರ್ಜಿ ವಜಾಗೊಳಿಸಲು ಮನವಿ!

ಮಹಾರಾಷ್ಟ್ರ ಸರ್ಕಾರದಲ್ಲಿನ ಅವ್ಯವಹಾರಗಳ ವಿಷಯವನ್ನು ಪ್ರಸ್ತಾಪಿಸಿದಕ್ಕೆ, ಸಚಿನ್ ವಾಜೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದಕ್ಕೆ ಅರವಿಂದ್ ಸಾವಂತ್ ಕೋಪಗೊಂಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. “ನೀವು ಮಹಾರಾಷ್ಟ್ರದಲ್ಲಿ ಹೇಗೆ ತಿರುಗಾಡುತ್ತೀರಿ ಎಂದು ನಾನು ನೋಡುತ್ತೇನೆ” ಮತ್ತು “ನಾವು ನಿಮ್ಮನ್ನು ಜೈಲಿಗಟ್ಟುತ್ತೇವೆ” ಎಂದು ಹೇಳಿದ್ದಾರೆ ಎಂದಿದ್ದಾರೆ. ಈ ಘಟನೆಗೆ ರಾಜಮುಂದ್ರ ಸಂಸದ ಭಾರತ್ ಮಾರ್ಗನಿ ಸಾಕ್ಷಿಯಾಗಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಎಎನ್‌ಐ ಉಲ್ಲೇಖಿಸಿದೆ.

ನವನೀತ್ ಕೌರ್‌ ರಾಣಾ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅರವಿಂದ್ ಸಾವಂತ್, ಅವರ ಆರೋಪಗಳು “ಸಂಪೂರ್ಣ ಸುಳ್ಳು” ಎಂದಿದ್ದಾರೆ. ಸಂಸತ್ತಿನಲ್ಲಿ ನವನೀತ್ ಕೌರ್‌ ರಾಣಾ ಅಗೌರವ ಮತ್ತು ಅಸಭ್ಯತೆಯಿಂದ ಮಾತನಾಡುತ್ತಾರೆ. ಎಲ್ಲರಿಗೂ ಬೆದರಿಕೆ ಹಾಕುವವರು ಅವರೇ ಎಂದು ಆರೋಪಿಸಿದ್ದಾರೆ.

“ನಾನು ನನ್ನ ಜೀವನದಲ್ಲಿ ಯಾರಿಗೂ ಬೆದರಿಕೆ ಹಾಕಿಲ್ಲ. ಅಂತಹದರಲ್ಲಿ ಮಹಿಳೆಗೆ ಬೆದರಿಕೆ ಹಾಕುವ ಪ್ರಶ್ನೆಯಿಲ್ಲ” ಎಂದು ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. “ಸದನವು ಹೊರಗಿನಿಂದ ಯಾರನ್ನಾದರೂ ಹೆಸರಿಸುವುದನ್ನು ನಿಷೇಧಿಸುತ್ತದೆ. ಆದರೆ ಅವರು ಅದನ್ನು ಮಾಡುತ್ತಿದ್ದಾರೆ. ಅದೆಲ್ಲಾ ದಾಖಲೆಯಲ್ಲಿ ಇರುತ್ತದೆ. ಕೆಲವರು ವಿಷಯಗಳನ್ನು ತಿರುಚಲು ಮತ್ತು ಪ್ರಚಾರವನ್ನು ಪಡೆಯಲು ಪರಿಣತರಾಗಿದ್ದಾರೆ” ಎಂದಿದ್ದಾರೆ.

ಆಸಿಡ್-ಅಟ್ಯಾಕ್ ಬೆದರಿಕೆಗಳನ್ನು ಉಲ್ಲೇಖಿಸಿದ ಅರವಿಂದ್ ಸಾವಂತ್ “ಅಂತಹ ಕೃತ್ಯಗಳನ್ನು ಯಾರು ಮಾಡಿದರೂ ನಾನು ಖಂಡಿಸುತ್ತೇನೆ. ಯಾರಾದರೂ ಅಂತಹ ಕೃತ್ಯಕ್ಕೆ ಪ್ರಯತ್ನಿಸಿದರೆ, ನಾನು ನವನೀತ್ ಕೌರ್‌ ರಾಣಾ ಅವರೊಂದಿಗೆ ನಿಲ್ಲುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗೋವಾ ಚುನಾವಣೆ: ರಾಜಧಾನಿ ಹಾಗೂ 06 ಪುರಸಭೆಗಳ ಅಧಿಕಾರ BJP ವಶಕ್ಕೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights