2,709 ಗ್ರಾಮ ಪಂ.ಗಳಿಗೆ 2ನೇ ಹಂತದ ಚುನಾವಣೆ; 1.05 ಲಕ್ಷ ಅಭ್ಯರ್ಥಿಗಳು ಅಖಾಡದಲ್ಲಿ!

ರಾಜ್ಯದ 2,709 ಗ್ರಾಮ ಪಂಚಾಯತ್ ಗಳ ಎರಡನೇ ಹಂತದ ಮತದಾನ ಪ್ರಗತಿಯಲ್ಲಿದೆ. ಇಂದು 109 ತಾಲ್ಲೂಕುಗಳ ಗ್ರಾಮ ಪಂಚಾಯತ್ ಗಳಲ್ಲಿ ಮತದಾನ ನಡೆಯುತ್ತಿದ್ದು 1.05 ಲಕ್ಷಕ್ಕೂ ಹೆಚ್ಚು ಮಂದಿ ಸ್ಪರ್ಧಿಗಳು ಕಣದಲ್ಲಿದ್ದಾರೆ. 39,378 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

ಎರಡನೇ ಹಂತದ ಮತದಾನದಲ್ಲಿ 43,291 ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿತ್ತು. ಒಟ್ಟು 1,47,337 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. 216 ಸೀಟುಗಳಿಗೆ ಯಾರೂ ನಾಮಪತ್ರ ಸಲ್ಲಿಸಿಲ್ಲ. 1,39,546 ಅಭ್ಯರ್ಥಿಗಳ ನಾಮಪತ್ರಗಳು ಸ್ವೀಕೃತವಾಗಿದ್ದರೆ, 34,115 ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. 3,697 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಮೂಲಕ 39,378 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 2,709 ಗ್ರಾಮ ಪಂಚಾಯತ್ ಗಳಲ್ಲಿ 1,05,431 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 1,40,65,775 ಮತದಾರರು ಇಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಚುನಾವಣಾ ಆಯೋಗ 20,728 ಮತಗಟ್ಟೆಗಳನ್ನು ಗುರುತಿಸಿದ್ದು, 1,24,368 ಸಿಬ್ಬಂದಿ ಇಂದು ಕರ್ತವ್ಯದಲ್ಲಿ ಹಾಜರಿರಲಿದ್ದಾರೆ.

ಮತದಾನ ಬೆಳಗ್ಗೆಯಿಂದ ಸಂಜೆಯವರೆಗೆ ಶಾಂತಿಯುತವಾಗಿ ನಡೆಯಲು ಪೊಲೀಸ್ ಇಲಾಖೆ ಸಕಲ ಸಿದ್ದತೆ ಮಾಡಿದೆ. ಹಲವು ದರ್ಜೆಯ 80 ಸಾವಿರ ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಅಲ್ಲದೆ 9,083 ಗೃಹ ರಕ್ಷಕ ದಳ ಸಿಬ್ಬಂದಿ, ತರಬೇತಿಯಲ್ಲಿರುವ 5,246 ಪೊಲೀಸ್ ಕಾನ್ಸ್ಟೇಬಲ್ ಗಳು ನಿಯೋಜನೆಗೊಂಡಿದ್ದಾರೆ.

ಅಲ್ಲದೆ, 1,540 ಮೊಬೈಲ್ ತಂಡಗಳನ್ನು ವಲಯಗಗಳ ಗಸ್ತು ತಿರುಗುವಿಕೆಗೆ ನಿಯೋಜಿಸಲಾಗಿದ್ದು, ಇದಕ್ಕಾಗಿ 918 ಹೆಚ್ಚುವರಿ ವಾಹನಗಳನ್ನು ಒದಗಿಸಲಾಗಿದೆ. ಇದಲ್ಲದೆ, 97 ಕೆಎಸ್‌ಆರ್‌ಪಿ ತುಕಡಿಗಳು ಮತ್ತು ಡಿಎಆರ್ ಪೊಲೀಸರೂ ಜಾಗರೂಕತೆಯನ್ನು ಕಾಯ್ದುಕೊಳ್ಳಲಿದ್ದಾರೆ.

ಡಿಸೆಂಬರ್ 22 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ 117 ತಾಲ್ಲೂಕುಗಳಿಂದ 3,019 ಪಂಚಾಯಿತಿಗಳಲ್ಲಿ 43,238 ಸ್ಥಾನಗಳಿಗೆ ಮತದಾನ ನಡೆದಿತ್ತು. ಕೋವಿಡ್ ಭಯದ ಹೊರತಾಗಿಯೂ, ಮೊದಲ ಹಂತದಲ್ಲಿ ಶೇಕಡಾ 82 ಕ್ಕಿಂತ ಹೆಚ್ಚಿನ ಮತದಾನವಾಗಿದೆ.


ಇದನ್ನೂ ಓದಿ: ಕರ್ನಾಟಕದಲ್ಲಿ ಬ್ರಿಟನ್‌ ಕೊರೊನಾ ಭೀತಿ: ಆದರೂ ಜ. 1ರಿಂದ ಕಾಲೇಜುಗಳು ಕಡ್ಡಾಯವಾಗಿ ಓಪನ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights