ರೈತ ಹೋರಾಟದ ‘ಕಿಸಾನ್ ಆಂಥೆಮ್’ ಹಾಡು 2 ಕೋಟಿ ವೀಕ್ಷಣೆ; ಗೀತೆ ರಚನಾಕಾರನ ಬಂಧನ!

ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ 50 ದಿನಗಳನ್ನು ಪೂರೈಸಿದೆ. ಅದೇ ರೀತಿಯಾಗಿ ಈ ಹೋರಾಟ ಬೆಂಬಲಿಸಿ ತಯಾರಾದ ಕಿಸಾನ್ ಆಂಥೆಮ್ (ರೈತ ಗೀತೆ) ಅನ್ನು ಬರೋಬ್ಬರಿ 2 ಕೋಟಿ ಜನ ವೀಕ್ಷಿಸುವ ಮೂಲಕ ಬೆಂಬಲ ಸೂಚಿಸಿದ್ದಾರೆ.

ದೆಹಲಿ ಹೋರಾಟದ ಅಧಿಕೃತ ಗೀತೆಯಾಗಿ ಹೊರಹೊಮ್ಮಿರುವ ಈ ಕಿಸಾನ್ ಆಂಥೆಮ್ ರಚಿಸಿದ ಪವನ್ ದೀಪ್‌ ಆಲಿಯಾಸ್ ಶ್ರೀ ಬ್ರಾರ್‌ರನ್ನು ಪಟಿಯಾಲ ಪೊಲೀಸರು ಬಂಧಿಸಿದ್ದು ಒಂದು ವಾರಗಳ ನಂತರ ನಿನ್ನೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಶ್ರೀ ಬ್ರಾರ್ ರಚಿಸಿರುವ “ಸ್ವರಾಜ ಪಿಚೆ ಬರಿಗೇಟ್ ಪಾಯೆ ಹೋಯಿ ನೆ” ಹಾಡು ಲಕ್ಷಾಂತರ ಜನರಿಗೆ ಈ ಆಂದೋಲನಕ್ಕೆ ಸೇರಲು ಪ್ರೇರಣೆ ನೀಡಿತು. ಆದರೆ ಇದು ಕೇಂದ್ರ ಮತ್ತು ಗೃಹ ಸಚಿವಾಲಯದ ಕಣ್ಣು ಕೆಂಪಾಗಿಸಿತು. ಇದಕ್ಕಾಗಿಯೇ ಶ್ರೀ ಬ್ರಾರ್ ಅವರು ಒಂದು ತಿಂಗಳ ಹಿಂದೆ ಬರೆದ ಮತ್ತೊಂದು ಹಾಡಿಗೆ ಸಂಬಂಧಿಸಿದಂತೆ ಹಿಂಸೆಗೆ ಪ್ರಚೋದನೆ ನೀಡಿದ್ದಾರೆ ಎಂದು ಅವರನ್ನು ಪಟಿಯಾಲ ಪೊಲೀಸರು ಬಂಧಿಸಿದ್ದಾರೆ ಎಂದು ಯುವ ಅಕಾಲಿ ದಳದ ಅಧ್ಯಕ್ಷ ಪರಂಬನ್ಸ್ ಸಿಂಗ್ ರೊಮಾನಾ ಆರೋಪಿಸಿದ್ದಾರೆ.

ಅವರ ಬಂಧನದ ಹಿಂದೆ ಗೃಹ ಸಚಿವ ಅಮಿತ್ ಶಾರವರ ಹುನ್ನಾರವಿದೆ. ಪಟಿಯಾಲ ಪೊಲೀಸರು ಶ್ರೀ ಬ್ರಾರ್‌ರನ್ನು ಅಕ್ರಮವಾಗಿ ಬಂಧಿಸಿ, ಚಿತ್ರಹಿಂಸೆ ನೀಡುತ್ತಿದೆ ಎಂದು ದೂರಿದ್ದಾರೆ.

ರಾಜಸ್ಥಾನದ ಹನುಮನ್‌ಗರ್‍ ಜಿಲ್ಲೆಯ ಸಿಲ್ವಾಲಾ ಖುರ್ದ್ ಗ್ರಾಮದವರಾದ ಶ್ರೀ ಬ್ರಾರ್ ರವರು ಒಂದು ತಿಂಗಳ ಹಿಂದೆ ಜಾನ್ ಎಂಬ ಗೀತೆಯನ್ನು ಬಿಡುಗಡೆ ಮಾಡಿದ್ದರು. ಆನಂತರ ಕಿಸಾನ್ ಆಂಥೆಮ್ ರಚಿಸಿದ್ದರು. ಇದು ಸಾಕಷ್ಟು ವೈರಲ್ ಆಯಿತು. ದೆಹಲಿಯ ಗಡಿಗಳಲ್ಲಿ ಹೋರಾಡುತ್ತಿರುವ ಪ್ರತಿಯೊಂದು ಟ್ರಾಕ್ಟರ್‌ಗಳಲ್ಲಿಯೂ ಪ್ರತಿದಿನ ಈ ಹಾಡು ಜೋರಾಗಿ ಕೇಳಿಬರುತ್ತದೆ. ಒಂದು ತಿಂಗಳ ಹಿಂದೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಆದ ಈ ಹಾಡನ್ನು ಇದುವರೆಗೂ 2.1 ಕೋಟಿ ಜನ ವೀಕ್ಷಿಸಿದ್ದಾರೆ. ಅಲ್ಲದೆ 8 ಲಕ್ಷಕ್ಕೂ ಅಧಿಕ ಲೈಕ್ಸ್‌ಗಳು ದಾಖಲಾಗಿವೆ.

ವೈರಲ್ ಆದ ಕಿಸಾನ್ ಆಂಥೆಮ್ ನೋಡಿ

ಈ ಹಾಡು ವೈರಲ್ ಆದ ನಂತರ ಅವರನ್ನು ಹಣಿಯುವುದಕ್ಕಾಗಿ ಜನವರಿ 03 ರಂದು ಅವರ ಮೇಲೆ ಹಿಂಸೆಗೆ ಪ್ರಚೋದನೆ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಪ್ರಚೋದನೆ ಮತ್ತು ಅಸಮಾಧಾನ ಕಾಯ್ದೆ 1922 ರ ಅಡಿಯಲ್ಲಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ಪಟಿಯಾಲದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬುಧವಾರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇದು ಸ್ವೀಕರಾರ್ಹವಲ್ಲ ಎಂಬ ಟೀಕೆಗಳು ವ್ಯಕ್ತವಾಗಿದೆ.


ಇದನ್ನೂ ಓದಿ: ಕೇಂದ್ರ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ರೈತರು: ಪತ್ರದಲ್ಲಿ ಸುಪ್ರೀಂಗೆ 21 ಪ್ರಶ್ನೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights