ಹೊಸಪೇಟೆ ಅಪಘಾತ ಪ್ರಕರಣ : ಕಾರಿನಲ್ಲಿದ್ದ ಮಗನನ್ನು ರಕ್ಷಿಸುತ್ತಿರುವ ಸಚಿವ ಆರ್‌ ಅಶೋಕ್‌

ಮೊದಲಿಗೆ ಆರ್‌ ಅಶೋಕ್‌ ಪುತ್ರ ಕಾರಿನಲ್ಲಿದ್ದರೂ ಸಹ ಅತನ ಹೆಸರನ್ನು ಎಫ್‌ಐಆರ್‌ನಲ್ಲಿ ಕೈಬಿಟ್ಟಿದ್ದು ಏಕೆ? ಅಪಘಾತವಾದಾಗ ಬೆಂಜ್‌ ಕಾರು ಬದಲಿಗೆ ಆಡಿ ಕಾರು ಎಂದು ಉಲ್ಲೇಖಿಸಿದ್ದು ಏಕೆ?? ಅಲ್ಲದೇ ಕುಡಿದು ಚಾಲನೆ ಮಾಡಿದರು ಎಂಬ ಅಂಶವನ್ನು ಮರೆಮಾಚಿದ್ದು ಏಕೆ???

ಹೊಸಪೇಟೆಯ ಬಳಿಯ ಮರಿಯಮ್ಮನಹಳ್ಳಿಯಲ್ಲಿ ಫೆ.10 ರಂದು ಸಂಭವಿಸಿದ ಅಪಘಾತ ಪ್ರಕರಣದಲ್ಲಿ ಸಚಿವ ಆರ್‌ ಅಶೋಕ್‌ ಪುತ್ರನ ಪಾತ್ರವಿದೆಯೆಂಬ ಸುದ್ದಿ ಹರಿದಾಡಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ.

ಈ ಮೊದಲು ಬೆಂಗಳೂರಿನಿಂದ ಹಂಪಿಗೆ ಪ್ರವಾಸಕ್ಕೆಂದು ತೆರಳಿದ್ದ ಸಚಿನ್‌, ರಾಹುಲ್‌ ಸೇರಿದಂತೆ ಐವರು ಗೆಳೆಯರು ಕುಡಿದ ಮತ್ತಿನಲ್ಲಿ ಅತೀವೇಗದಲ್ಲಿ ಕಾರು ಚಲಾಯಿಸಿದ ಕಾರಣಕ್ಕೆ ರಸ್ತೆ ಬದಿ ನಿಂತಿದ್ದ ರವಿನಾಯ್ಕ್‌ ಎಂಬುವವರಿಗೆ ಗುದ್ದಿ, ಕಾರು ಮಗುಚಿಕೊಂಡಿತ್ತು. ಸ್ಥಳದಲ್ಲಿಯೇ ರವಿನಾಯ್ಕ್‌ ಸೇರಿದಂತೆ ಕಾರಿನಲ್ಲಿದ್ದ ಸಚಿನ್‌ ಎಂಬುವವರು ಮೃತಪಟ್ಟಿದ್ದರು.

ಆದರೆ ಘಟನೆ ನಡೆದು ಮೂರು ದಿನಗಳು ಕಳೆದರೂ ಇದರಲ್ಲಿ ಸಚಿವ ಆರ್‌ ಅಶೋಕ್‌ ಮತ್ತು ಆತನ ಪುತ್ರನ ಹೆಸರು ಬಹಿರಂಗಗೊಳ್ಳದಂತೆ ಪೊಲೀಸರು ಕೆಲಸ ಮಾಡಿದ್ದಾರೆ. ಬೆಂಜ್‌ ಕಾರು ಅಪಘಾತದಲ್ಲಿದ್ದರೆ ಪೊಲೀಸರು ಆಡಿ ಕಾರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿ ಕೇಸನ್ನು ತಿರುಚಲು ಮುಂದಾಗಿದ್ದಾರೆ.

ಈಗ ಬಂದ ಸುದ್ದಿಯ ಪ್ರಕಾರ ಆರ್‌ ಅಶೋಕ್‌ರವರ ಮಗ ಶರತ್‌ ಕಾರು ಓಡಿಸುತ್ತಿದ್ದು ಆತನೇ ಅಪಘಾತಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಅಪಘಾತವಾದ ಕೂಡಲೇ ಆತನನ್ನು ಬೇರೊಂದು ಕಾರಿನಲ್ಲಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದು ಎಲ್ಲಿಯೂ ಆತನ ಹೆಸರು ಬಹಿರಂಗವಾಗದಂತೆ ಮೋಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇಂದು ಬೆಳಿಗ್ಗೆಯಿಂದಲೇ ದಿನಪತ್ರಿಕೆಗಳಲ್ಲಿ ಈ ವಿಷಯ ಬಹಿರಂಗಗೊಂಡಂತೆ ಆರ್‌.ಅಶೋಕ್‌ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಅಪಘಾತದಲ್ಲಿ ಒಳಗೊಂಡ ಕಾರು ಆ‌ರ್‌ ಅಶೋಕ್‌ ಒಡೆತನದ ನ್ಯಾಷನಲ್ ಪಬ್ಲಿಕ್ ಶಾಲೆಗೆ ಸೇರಿದ್ದು ಎಂಬುದು ಸ್ಪಷ್ಟವಾಗಿದೆ.

ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಕಂದಾಯ ಸಚಿವ ಆರ್‌. ಅಶೋಕ್‌ “ಅಂದು ಅಪಘಾತವಾದ ಕಾರಿನಲ್ಲಿ ನನ್ನ ಮಗ ಶರತ್‌ ಇದ್ದಿದ್ದು ನಿಜ. ಆದರೆ ಆತ ಕಾರು ಚಾಲನೆ ಮಾಡುತ್ತಿರಲ್ಲಿಲ್ಲ ಬದಲಿಗೆ ರಾಹುಲ್‌ ಎಂಬಾತ ಕಾರು ಚಾಲನೆ ಮಾಡುತ್ತಿದ್ದ” ಎಂದು ಅವರು ಹೇಳಿದ್ದಾರೆ.

ಪೊಲೀಸರ ಪಕ್ಷಪಾತ

ಈ ಘಟನೆಯಲ್ಲಿ ಪೊಲೀಸರ ಪಕ್ಷಪಾತ ಮತ್ತು ಕರ್ತವ್ಯ ಲೋಪ ಎದ್ದುಕಾಣುತ್ತಿದೆ. ಮೊದಲಿಗೆ ಆರ್‌ ಅಶೋಕ್‌ ಪುತ್ರ ಕಾರಿನಲ್ಲಿದ್ದರೂ ಸಹ ಅತನ ಹೆಸರನ್ನು ಕೈಬಿಟ್ಟಿದ್ದು ಹೇಗೆ? ಅಪಘಾತವಾದಾಗ ಬೆಂಜ್‌ ಕಾರು ಬದಲಿಗೆ ಆಡಿ ಕಾರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದು ದೊಡ್ಡ ಪ್ರಮಾದವಾಗಿದೆ. ಅಲ್ಲದೇ ಕುಡಿದು ಚಾಲನೆ ಮಾಡಿದರು ಎಂಬ ಅಂಶವನ್ನು ಸಹ ಎಫ್‌ಐಆರ್‌ನಲ್ಲಿ ಸೇರಿಸಿಲ್ಲ.

ಒಟ್ಟಿನಲ್ಲಿ ಪ್ರಭಾವಿ ಸಚಿವನ ಮಗನನ್ನು ಕಾಪಾಡಲು ಪೊಲೀಸರು ತಪ್ಪುಗಳ ಮೇಲೆ ತಪ್ಪುಗಳನ್ನು ಎಸಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.

ಇನ್ನು ಸಚಿವ ಆರ್‌ ಅಶೋಕ್‌ ಸಹ ಇದುವರೆಗೂ ಸಾವಿಗೀಡಾದ ರವಿನಾಯ್ಕ್‌ರವರ ನೊಂದ ಕುಟುಂಬವನ್ನು ಮಾತಾಡಿಸಿಲ್ಲ. ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕೇಸನ್ನು ಮುಚ್ಚಿಹಾಕಲು ಮತ್ತು ತಮ್ಮ ಮಗನನ್ನು ರಕ್ಷಿಸಲು ಮುಂದಾಗಿರುವುದು ಖಂಡನೀಯವಾಗಿದೆ.

ಕಾಂಗ್ರೆಸ್‌ ಶಾಸಕ ಹ್ಯಾರಿಸ್‌ ಮಗ ನಲಪಾಡ್‌‌ನ ಹಿಟ್‌ ಅಂಡ್‌ ರನ್‌ ಕೇಸ್‌ನಲ್ಲಿ ವಿಚಾರದಲ್ಲಿ ದಕ್ಷತೆಯಿಂದ ನಡೆದುಕೊಂಡ ಪೊಲೀಸರು ಆರ್‌ ಅಶೋಕ್‌ ಮಗನ ವಿಚಾರದಲ್ಲಿ ಅನ್ಯಾಯ ಮಾಡಿದ್ದು ಏಕೆ? ಇದು ಕೂಡ ಹಿಟ್‌ ಅಂಡ್‌ ರನ್‌ ಕೇಸ್‌ ಅಲ್ಲವೇ? ಪೊಲೀಸರ ಮೇಲೆ ಒತ್ತಡ ಹಾಕಿದವರು ಯಾರು? ಈ ರೀತಿ ನ್ಯಾಯದ ವಿಷಯದಲ್ಲಿ ಪೊಲೀಸರೇ ತಾರತಮ್ಯ ಮಾಡಿದರೆ ಹೇಗೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights