ಸಿನೆಮಾ ಪರಿಚಯ; ಅಖುನಿ: ಭಾರತೀಯತೆ, ಜನಾಂಗೀಯ ನಿಂದನೆ, ಆಹಾರ ಸಂಸ್ಕೃತಿ ವಿಚಾರಗಳ ಶೋಧನೆ

ವೈವಿಧ್ಯತೆ- ಬಹುತ್ವ ಮೊದಲಾದ ಆದರ್ಶ ಕಲ್ಪನೆಗಳು ಬರಿಯ ಶಬ್ದಗಳಾಗಿ, ಒಣ ಪ್ರತಿಷ್ಟೆಯ, ಬಹುಸಂಖ್ಯಾತರ ಸಂಸ್ಕೃತಿಯ  ಆಚರಣೆಗಳಷ್ಟೇ ಕೈಮೇಲಾದ,  ಕಲ್ಪಿತ ಸಾಮುದಾಯಿಕ ರಾಷ್ಟ್ರೀಯತೆ (ಭಾರತೀಯತೆ) ತಾಂಡವವಾಡುತ್ತಿದೆ. ಭಾರತ ಒಕ್ಕೂಟದ ವೈವಿಧ್ಯತೆಯ ಕಥೆಗಳನ್ನು, ವಿಭಿನ್ನ ಸಂಸ್ಕೃತಿಗಳನ್ನ – ಬಹುತ್ವದ ಮಾದರಿಗಳನ್ನ ಪರಿಚಯಿಸುವ, ಬಹುಸಂಖ್ಯಾತರು ಅವುಗಳನ್ನು ಅರ್ಥ ಮಾಡಿಕೊಳ್ಳಲು ಎಡವುವ ಮತ್ತು ಹುಸಿ ರಾಷ್ಟ್ರೀಯತೆಯ ಪ್ರೊಪೊಗಾಂಡಕ್ಕೆ ಬಲಿಯಾಗುವ ಅಪಾಯಗಳನ್ನು ಚರ್ಚಿಸುವ, ಸೌಹಾರ್ದದವನ್ನು ಉಸಿರಾಡುವಂತೆ ಪ್ರೇರೇಪಿಸುವ ಸಂಗತಿಗಳು ಸೃಜನಶೀಲತೆಯ ಕೆಲಸ‌ಗಳಲ್ಲಿ ಪೋಣಿಸುವುದು ಇವತ್ತಿನ ತುರ್ತು ಅಗತ್ಯಗಳಲ್ಲಿ ಒಂದು.

ಭಾರತೀಯರು ನಾವೆಲ್ಲಾ ಒಂದು ಎಂಬ ಘೋಷಣೆಯನ್ನು ರಾಜಕೀಯವಾಗಿ ಗುಟುರು ಹಾಕುವ ನಾವು, ವಿಭಿನ್ನ ಸಂಸ್ಕೃತಿಗಳ ಆಚರಣೆ, ನಮ್ಮವಲ್ಲದ ಆಹಾರ ಅಭ್ಯಾಸಗಳ ಜೊತೆಗೆ ಮುಖಾಮುಖಿಯಾದಾಗ ದ್ವೀಪಗಳಾಗಿ ಹೋಗುತ್ತೇವೆ. ದ್ವೀಪಗಳಾಗುವುದಷ್ಟೇ ಅಲ್ಲ, ನಮ್ಮ ಆಚರಣೆಗೆ ವಿಭಿನ್ನವಾದದ್ದನ್ನು ಅನ್ಯಗೊಳಿಸಿ, ಅದನ್ನು ಸದಾ ಅನುಮಾನಿಸುವ, ಅವಕಾಶ ಸಿಕ್ಕಂತೆಲ್ಲ ಅಪಮಾನಿಸುವ ಕೆಲಸಕ್ಕೆ ಮುಂದಾಗುತ್ತೇವೆ. ಆರ್ಥಿಕತೆಯ ತಾರತಮ್ಯದಲ್ಲಿ ಬೃಹತ್ತಾಗಿ ಬೆಳೆಯುತ್ತಿರುವ ಆಧುನಿಕ ನಗರಗಳಿಗೆ ದೇಶದ ಹಲವು ಮೂಲೆಗಳಿಂದ ಉದ್ಯೋಗ ಅರಸಿ ಬರುವ ವಲಸಿಗರು ಎಷ್ಟೋ ಜನ. ನಗರಗಳು ಅಂತಹ ವಲಸಿಗರಿಗೆ ಅನೋನಿಮಿಟಿಯನ್ನು ನಿಜವಾಗಿಯೂ ಕಲ್ಪಿಸಿಕೊಟ್ಟು, ಅವರನನ್ನು ತಮ್ಮ ಭಾಗವನ್ನಾಗಿಸಿಕೊಳ್ಳುತ್ತವೆಯೇ? ಅಥವಾ ಆವರನ್ನು ಪರಕೀಯರನ್ನಾಗಿಯೇ ಕಾಣುತ್ತಿವೆಯೇ? ಅದರಲ್ಲಿಯೂ ಈಶಾನ್ಯದ ಕೆಲವು ರಾಜ್ಯಗಳಿಂದ ಬಂದಂತಹ ವಲಸಿಗರನ್ನು ಮಾಮೂಲಿಗಿಂತಲೂ ಹೆಚ್ಚಾಗಿ ಸ್ಟೀರಿಯೋಟೈಪ್ ಮಾಡುವುದು – ಅವರ ವಿರುದ್ಧ ಜಾನಾಂಗೀಯ ನಿಂದನೆಗಳನ್ನು ಎಗ್ಗಿಲ್ಲದೆ ಹರಿಸುವುದು ಸಾಮಾನ್ಯ ವಿದ್ಯಮಾನವಾಗಿದೆ. ಇಂತಹ ಸಮಸ್ಯೆಗಳನ್ನು ಹಾಸ್ಯಭರಿತ ಶೈಲಿಯಲ್ಲಿ ಶೋಧಿಸಲು ಮುಂದಾಗಿದೆ ಅಖುನಿ (Axone) ಸಿನೆಮಾ (ಹಿಂದಿ- ಇಂಗ್ಲಿಶ್ ಮಿಶ್ರಿತ).

ದೆಹಲಿಗೆ, ಈಶಾನ್ಯ ರಾಜ್ಯಗಳಿಂದ ವಲಸೆ ಬಂದಿರುವ ಹಲವು ಗೆಳೆಯರು(ಚನ್ಬಿ, ಉಪಾಸನ, ಜೋರೆಮ್, ಬೆಂಡಾಂಗ್ ಮೊದಲಾದವರು) , ಮೀನಂ ಎಂಬ ಗೆಳತಿಯ ಮದುವೆಯ ಔತಣಕೂಟಕ್ಕೆ ನಾಗಾಲ್ಯಾಂಡಿನ ವಿಶಿಷ್ಟ ಖಾದ್ಯವಾದ ಅಖುನಿಯನ್ನು ತಯಾರಿಸಲು ಪಡುವ ಪರಿಪಾಡಲು ಚಿತ್ರಕಥೆಯ ಪ್ರಧಾನ ವಸ್ತು. ಹಂದಿ ಮಾಂಸದೊಂದಿಗೆ, ಒಣಗಿಸಿದ ಸೋಯಾಬೀನ್ ಮತ್ತು ಮತ್ತಿತರ ಹಲವು ಪದಾರ್ಥಗಳ ಜೊತೆಗೆ ಬೇಯಿಸುವ ಈ ಖಾದ್ಯ ಒಂದು ರೀತಿ ಮೂಗಿಗೆ ಬಡಿಯುವ ವಿಭಿನ್ನ ವಾಸನೆ ಹೊರಸೂಸುತ್ತದಂತೆ. ಇದರ ಸುತ್ತ ಹೆಣೆದಿರುವ ಕಥೆ ಜೊತೆಗೆ ಈಶಾನ್ಯ ರಾಜ್ಯಗಳ ವಿಭಿನ್ನ ಐಡೆಂಟಿಟಿ ಹೊಂದಿರುವ ಎಲ್ಲರನ್ನೂ ಒಂದೇ ತೆಕ್ಕೆಗೆ ಹಾಕುವ ದೆಹಲಿ (ಇದು ಉಳಿದ ರಾಜ್ಯಗಳ ಜನಕ್ಕೂ ಅನ್ವಯಿಸದೆ ಇರದು) ನಿವಾಸಿಗಳು, ಆ ರಾಜ್ಯಗಳ  ಮಹಿಳೆಯರ ಮೇಳೆ ಜಾನಾಂಗೀಯ ನಿಂದನೆ ಬೆರೆತ ಲೈಂಗಿಕ ದೌರ್ಜನ್ಯದ ಮಾತುಗಳನ್ನಾಡುವ ಪುರುಷರು, ಬಾಡಿಗೆ ಮನೆಮಾಲೀಕರ ಅಧಿಕಾರದ ದರ್ಪ ಮುಂತಾದ ಸಮಸ್ಯೆಯ ವಿಷಯಗಳ ಜೊತೆಗೆ ಹಾಸ್ಯ, ಪ್ರೀತಿಯನ್ನೂ ತುಂಬಿಕೊಂಡಿದೆ ಈ ಸಿನೆಮ.

ನಮ್ಮ ನಡುವೆಯೇ ನಡೆಯುವ ಮಾಂಸಾಹಾರ ಸಸ್ಯಾಹಾರ ಚರ್ಚೆಗಳು, ಮಾಂಸಾಹಾರದ- ಮೀನು ಆಹಾರದ ವಾಸನೆ ತಡೆಯಲಾರೆ ಎಂದು ಗಟ್ಟಿ ಧ್ವನಿಯಲ್ಲಿ ಸಂತ್ರಸ್ತರಂತೆ ಪ್ರತಿಪಾದಿಸಿಕೊಳ್ಳುವ ಜನರು, ಮಾಂಸಾಹಾರವಾದರೂ ಪರವಾಗಿಲ್ಲ ಆದರೆ ಬೀಫ್ ಎಂದು ರಾಗ ತೆಗೆಯುವ ಅಗಾಧ ರಾಜಕೀಯ ವಾಗ್ವಾದಗಳು ಮುಂತಾದುವುಗಳನ್ನು ಈ ಸಿನೆಮಾ ನೆನಪಿಸುತ್ತದೆ. ಇದು ಬರೀ ಆಹಾರ ಅಭ್ಯಾಸದ ಪ್ರತಿಷ್ಟೆಯ ಘರ್ಷಣೆ ಮಾತ್ರ ಆಗದೆ, ವಿಭಿನ್ನ ಸಾಂಸ್ಕೃತಿಕ ಐಡೆಂಟಿಟಿ ಇರುವ ಜನರ ಬಗೆಗೆ ನಮ್ಮ ಸಂಬಂಧವನ್ನು ಪ್ರಶ್ನೆ ಮಾಡುತ್ತದೆ. ಅಧಿಕಾರದ ನೆಲೆಯಲ್ಲಿ ಆರ್ಥಿಕವಾಗಿಯೂ, ಸಂಖ್ಯೆಯಲ್ಲಿಯೂ ಅಲ್ಪಸಂಖ್ಯಾತರಾಗಿರುವ ವಲಸಿಗರಿಗೆ ತಮ್ಮ ವಿರುದ್ಧದ ತಾರತಮ್ಯಕ್ಕೆ ಎಷ್ಟು ಪ್ರತಿರೋಧ ತೋರಿಸಲು ಸಾಧ್ಯ ಎಂಬುದನ್ನು ಎಕ್ಸ್ಪ್ಲೋರ್ ಮಾಡುತ್ತದೆ.

ಚನ್ಬಿಯನ್ನು ದೆಹಲಿಯ ಇಬ್ಬರು ಪುಂಡ ನಿವಾಸಿಗಳು ಲೈಂಗಿಕವಾಗಿ ಚುಡಾಯಿಸಿದಾಗ, ಸುತ್ತ ಮುತ್ತ ಇದ್ದವರು ಯಾರೂ ಕೂಡ ಆಕೆಯ ಬೆಂಬಲಕ್ಕೆ ನಿಲ್ಲದೆ, ಆಕೆಗೇ ಅನುಸರಿಸಿಕೊಂಡು ಹೋಗಲು ಬೋಧನೆ ಮಾಡುತ್ತಾರೆ. ಚನ್ಬಿಯ ಪ್ರಿಯಕರ ಬೆಂಡಾಂಗ್ ಕೂಡ ಆಕೆಯ ಪರ ನಿಲ್ಲಲು ಹಿಂಜರಿಯುತ್ತಾನೆ. ಅದಕ್ಕೆ ಈ ಹಿಂದೆ ಜನಾಂಗೀಯ ಕಾರಣಕ್ಕಾಗಿ ಆತನ ಮೇಲಾದ ಹಲ್ಲೆ ಕಾರಣವಾಗಿರುತ್ತದೆ. ಈ ಮಧ್ಯೆ ಈ ಎಲ್ಲಾ ಈಶಾನ್ಯ ರಾಜ್ಯದ ಗೆಳೆಯರಿಗೆ ಉಪಾಸನಾ ವಾಸವಿದ್ದ ಮನೆಯ ಮಾಲೀಕನ ಮಗ ಯುವ ಶಿವ್ ಸಹಾಯಕ್ಕೆ ನಿಲ್ಲುತ್ತಾನೆ. ಇಷ್ಟೆಲ್ಲಾ ಪ್ರತಿಗಾಮಿತ್ವ ಸಮಾಜದ ನಡುವೆ ಶಿವ್ ಎಂಬ ಯುವಕನ ಪಾತ್ರ ಭರವಸೆಯ ಬೆಳಕಾಗಿ ತೊರುತ್ತದೆ. ಬಹುಸಂಖ್ಯಾತರು ತಮ್ಮ ಅಧಿಕಾರತ್ವದ ಸಂಕುಚಿತತೆಯ ಸಮಸ್ಯೆಯಿಂದ ಹೊರಬರಲು ಶಿವ್ ಪಾತ್ರ ಕಿಟಕಿಯಂತೆ ಇದೆ.

ಮತ್ತೊಂದು ದೃಶ್ಯ ಕೂಡ ಇಂದಿನ ಈ ಅಪನಂಬಿಕೆಯ ಸಮಾಜದ ಸಮಸ್ಯೆಗಳಿಗೆ ಕನ್ನಡಿ ಹಿಡಿಯುತ್ತದೆ. ಇಷ್ಟೆಲ್ಲಾ ಸಹಾಯ ಮಾಡಿದ ಶಿವ್ ಗೆ, ತನ್ನ ಮೇಲಾಗಿರುವ ಹಲ್ಲೆಯನ್ನು ಮರೆಯಲು ಸಾಧ್ಯವಾಗದೆ ತನ್ನ ಸಂಗೀತದ ಅಭ್ಯಾಸವನ್ನು ಮುಂದುವರೆಸಲು ಆಗದೆ ಅನ್ಯಮನಸ್ಕನಾಗಿರುವ ಬೆಂಡಾಂಗ್ ‘ನೀನು ಭಾರತೀಯ’ ನನ್ನ ಸಹವಾಸಕ್ಕೆ ಬರಬೇಡ ಎನ್ನುವ ರೀತಿಯಲ್ಲಿ ಗದರುತ್ತಾನೆ. ಇನ್ನೂ ಹುಡುಗು ಮನಸ್ಸಿನ ಶಿವ್ ಇದರಿಂದ ಕನಲಿ ಹೋಗುತ್ತಾನೆ. ಆದರೆ ಸಮಸ್ಯೆಯನ್ನು ಅರ್ಥ ಮಾಡಿಸಲು ಅಲ್ಲಿ ಜೋರೆಮ್ ನೆರವಾಗುತ್ತಾನೆ. ಹೀಗೆ ಎಷ್ಟೊ ಗಂಭೀರ ಸಮಸ್ಯೆಗಳ ಸ್ವರೂಪವೇ ಗೊತ್ತಿಲ್ಲದೆ ಇರಬಹುದಾದ ಎಷ್ಟೋ ಜನಕ್ಕೆ ಸಮಾಧಾನವಾಗಿ ತಿಳಿಹೇಳುವ ಅಗತ್ಯದ ರೂಪಕದಂತೆ ಈ ದೃಶ್ಯ ಚಿತ್ರಣಗೊಂಡಿದೆ.

ಹಾಸ್ಯ ಸನ್ನಿವೇಶಗಳು, ಹಲವು ಟ್ರಾಜಿಕ್ ಸನ್ನಿವೇಶಗಳಿಂದ ಮುಂದುವರೆಯುವ ಚಿತ್ರ ನಮ್ಮ ಸುತ್ತಮುತ್ತಲೇ ಇರುವ ವಿಭಿನ್ನ ಸಂಸ್ಕೃತಿಗಳನ್ನ ಕಾಣುವ, ಅವುಗಳ ಜೊತೆಗೆ ಒಡನಾಡುವ ಅಗತ್ಯದ, ನಮಗೆ ಅಭ್ಯಾಸವಿಲ್ಲದ ಸಂಗತಿಗಳ ಬಗೆಗೆ ಸಹನೆ ಬೆಳೆಸಿಕೊಳ್ಳುವ ಬಗೆಗಿನ ಚಿಂತನೆಗೆ ಹಚ್ಚುತ್ತದೆ. ಜನಾಂಗೀಯ ನಿಂದನೆ ಮಾಡುವ ಅಧಿಕಾರವುಳ್ಳ ಪ್ರಾದೇಶಿಕ ಬಹುಸಂಖ್ಯಾತರು ಮತ್ತು ಜನಾಂಗೀಯ ನಿಂದನೆಗೆ ಗುರಿಯಾಗುವ ಅಧಿಕಾರರಹಿತ ಅಲ್ಪಸಂಖ್ಯಾತರು ತಮ್ಮ ಸಮಸ್ಯೆಗಳಿಂದ ಬಿಡಿಸಿಕೊಳ್ಳುವ ಬಗೆಯನ್ನು ಮತ್ತು ಅಗತ್ಯವನ್ನು ಬಹಳ ಸೂಕ್ಷ್ಮವಾಗಿ ಹಾಗು ಕಲಾತ್ಮಕವಾಗಿ ಚಿತ್ರ ಹಿಡಿದಿಡುತ್ತದೆ.

ಇದು ನಿಕೊಲಸ್ ಖರ್ಕೊಂಗರ್ ಅವರ ಎರಡನೇ ಪೂರ್ಣಾವಧಿ ಸಿನೆಮ. ಕೊರೊನ ಸಮಯದಂತಹ ಭೀಕರ ದಿನಗಳಲ್ಲೂ ಹಲವೆಡೆ ಈಶಾನ್ಯ ರಾಜ್ಯದ ವಲಸಿಗರ ಮೇಲೆ ಜನಾಂಗೀಯ ನಿಂದನೆಗಳಾದ ವರದಿಗಳು ಕೇಳಿಬಂದಿದ್ದವು. ಜಾಗತಿಕವಾಗಿ ವಲಸಿಗರ, ವಲಸಿಗರ ಸಂಸ್ಕೃತಿಯ ಮೇಲೆ ಚರ್ಚೆ ವಾಗ್ವಾದಗಳು ನಡೆಯುತ್ತಿರುವಾಗ, ಅಂತಹ ಚರ್ಚೆಗೆ ಮಾನವೀಯ ಮತ್ತು ಕಲಾತ್ಮಕ ಸ್ಪಂದನೆ ನೀಡಿರುವ ನಿರ್ದೇಶಕರು ಅಭಿನಂದನಾರ್ಹರು. ಉಪಾಸನಾ ಪಾತ್ರದಲ್ಲಿ ಸಯನಿ ಗುಪ್ತ, ಚನ್ಬಿ ಪಾತ್ರದಲ್ಲಿ ಲಿನ್ ಲಯಾಶ್ರಮ್, ಜೋರೆಮ್ ಪಾತ್ರದಲಿ ತೇನ್ಜಿಂಗ್ ದಲ್ಹಾ, ಬೆಂಡಾಂಗ್ ಪಾತ್ರದಲ್ಲಿ ಲನೌಕುಮ್ ಅಒ ಮತ್ತು ಶಿವ್ ಪಾತ್ರದಲ್ಲಿ ರೋಶನ್ ಜೋಶಿ ಮನೋಜ್ಞವಾಗಿ ಅಭಿನಯಿಸಿ, ವಿವಿಧ ಈಶಾನ್ಯ ರಾಜ್ಯಗಳ ಸಂಸ್ಕೃತಿಯ – ವೇಷಭೂಷಣ ಮತ್ತು ಭಾಷೆಗಳ ಪರಿಚಯವನ್ನೂ ವೀಕ್ಷಕರಿಗೆ ಒದಗಿಸಿದ್ದಾರೆ.

2019ರಲ್ಲಿ ಚಿತ್ರಣಗೊಂಡಿದ್ದ ಈ ಚಲನಚಿತ್ರ ಹಲವು ಸಿನೆಮೋತ್ಸವಗಳಲ್ಲಿ ಪ್ರದರ್ಶನ ಕಂಡು ಈಗ ಒಟಿಟಿ ವೇದಿಕೆ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿ ಚರ್ಚೆಯಲ್ಲಿದೆ.

  • ಗುರುಪ್ರಸಾದ್

 

ಸಿನೆಮಾದ ಟ್ರೇಲರ್ ಇಲ್ಲಿ ವೀಕ್ಷಿಸಿ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights