ಸಿದ್ದರಾಮಯ್ಯಗೆ ನಾನು ಟಾಂಗ್ ಕೊಟ್ಟಿಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ

ಪಕ್ಷದ ಹುದ್ದೆ ವಿಚಾರವಾಗಿ ನಾನು ಕೊಟ್ಟ ಹೇಳಿಕೆಯನ್ನು ತಿರುಚಲಾಗಿದೆ. ಸಿದ್ದರಾಮಯ್ಯನವರ ಕೈಕೆಳಗೆ ಕೆಲಸ ಮಾಡಿದ್ದು ಅವರಿಗೆ ಟಾಂಗ್ ಕೊಡುವ ಅಗತ್ಯ ನನಗೆ ಇಲ್ಲ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರ ಜತೆ ಮಾತನಾಡಿದ ಅವರು ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದು ಹೀಗೆ…

‘ಮೊನ್ನೆ ನಾನು ಪಕ್ಷದ ಹುದ್ದೆ ವಿಚಾರವಾಗಿ ಕೊಟ್ಟ ಹೇಳಿಕೆಯನ್ನು ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿರುವುದಾಗಿ ತಿರುಚಿ ಗೊಂದಲ ಮೂಡಿಸಲಾಗಿದೆ. ನಮ್ಮ ಪಕ್ಷದ ನಾಯಕರಿಗೆ ಟಾಂಗ್ ಕೊಡುವ ಅಗತ್ಯ ನನಗಿಲ್ಲ. ನನಗೆ ಅಷ್ಟೂ ಸಾಮಾನ್ಯ ಪ್ರಜ್ಞೆ ಇಲ್ಲವೇ? ನಾನು ಒಬ್ಬ ನಾಯಕರ ಕೈಕೆಳಗೆ ಕೆಲಸ ಮಾಡಿದರೆ ಅವರನ್ನು ಗೌರವಿಸುತ್ತೇನೆ. ಬಂಗಾರಪ್ಪ, ಎಸ್.ಎಂ ಕೃಷ್ಣ, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಯಾರೇ ಆದರೂ ಅವರ ಬಗ್ಗೆ ನನಗೆ ಉಪಕಾರ ಸ್ಮರಣೆ ಇದೆ. ನನಗೆ ಯಾರು ಸಹಾಯ ಮಾಡಿರುತ್ತಾರೋ ಅವರಿಗೆ ದ್ರೋಹ ಮಾಡುವುದು ಟಾಂಗ್ ಕೊಡುವುದು ಮಾಡುವುದಿಲ್ಲ.

ನನ್ನ ರಾಜಕೀಯ ಏನೇ ಇದ್ದರು ವಿರೋಧ ಪಕ್ಷದವರ ಮೇಲೆ ಮಾಡ್ತೀನಿ. ನಮ್ಮ ಪಕ್ಷದ ನಾಯಕರ ಕೆಳಗೆ ಕೆಲಸ ಮಾಡಿ ಅವರಿಗೆ ಟಾಂಗ್ ಕೊಡುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯನವರಿಗೆ ಕಾರು, ಮನೆ, ರಾಜಕೀಯ ಇಲ್ಲವೇ? 10 ವರ್ಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಗಳಾಗಿ, ಶಾಸಕಾಂಗ ಪಕ್ಷದ ನಾಯಕರಾಗಿ ನಮ್ಮ ಜತೆ ಕೆಲಸ ಮಾಡಿದ್ದಾರೆ. ಅವರಿಗೆ ನಾನೇಕೆ ಟಾಂಗ್ ನೀಡಲಿ? ವಿರೋಧ ಪಕ್ಷದಲ್ಲಿ ನಾನು ಯಾರಿಗೆ ಟಾಂಗ್ ಕೊಡಬೇಕೋ ಅವರಿಗೆ ಕೊಟ್ಟಿದ್ದೇನೆ. ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ನಮಗೆ ಭಿನ್ನಾಭಿಪ್ರಾಯ ಇತ್ತು. ಆಗ ಹೋರಾಟ ಮಾಡಿದ್ದೇವೆ. ಈಗ ಅವರ ಜತೆ ಕೆಲಸ ಮಾಡಿದ ಮೇಲೆ ಅವರ ಬಗ್ಗೆ ಮಾತನಾಡಲು ತಲೆ ಕೆಟ್ಟಿದೆಯಾ? ನಮ್ಮ ನಡುವೆ ಏನೇ ರಾಜಕೀಯ ವ್ಯತ್ಯಾಸ ಬಂದರೂ ನಮ್ಮ ಪಕ್ಷದ ನಾಯಕರ ಬಗ್ಗೆ ನಾನು ಆ ರೀತಿ ಮಾತನಾಡುವುದಿಲ್ಲ.’

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights