ರಾಹುಲ್‌ಗಾಂಧಿಗಿಲ್ಲ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ: ಸೋನಿಯಾಗಾಂಧಿಯವರೇ ಹಂಗಾಮಿ ಅಧ್ಯಕ್ಷೆ!

ಕಾಂಗ್ರೆಸ್ ಪಕ್ಷಕ್ಕೆ ನೂತನ ಅಧ್ಯಕ್ಷರು ಆಯ್ಕೆಯಾಗುವವರೆಗೂ ಸೋನಿಯಾಗಾಂಧಿಯವರೇ ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯುವುದಾಗಿ ಕಾಂಗ್ರೆಸ್‌ ನಿರ್ಧಾರಿಸಿದೆ.

ಕಳೆದ ಜುಲೈನಲ್ಲಿ ಲೋಕಸಭಾ ಚುನಾವಣೆಯ ಸೋಲಿನ ಹೊಣೆ ಹೊತ್ತು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರು. ನಂತರ ಸೋನಿಯಾ ಗಾಂಧಿಯವರು ಹಂಗಾಮಿ ಮುಖ್ಯಸ್ಥರಾಗಿ ಇಂದಿಗೆ ಒಂದು ವರ್ಷ ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ಶಶಿ ತರೂರ್ ಸೇರಿದಂತೆ ಹಲವರು ಹೊಸ ಅಧ್ಯಕ್ಷರು ಬೇಕೆಂದು ಚರ್ಚೆ ಎತ್ತಿದ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಕಾಂಗ್ರೆಸ್ ಸದ್ಯಕ್ಕಂತೂ ಸೋನಿಯಾರವರೆ ಮುಂದುವರೆಯಲಿದ್ದಾರೆ ಎಂದಿದೆ.

1998 ರಿಂದ 2017ರವರೆಗೆ ಹೆಚ್ಚು ಕಡಿಮೆ 20 ವರ್ಷಗಳ ಸುಧೀರ್ಘ ಅವಧಿಗೆ ಸೋನಿಯಾ ಗಾಂಧಿಯವರು ಪಕ್ಷದ ಅಧ್ಯಕ್ಷರಾಗಿದ್ದರು. ಈ ಅವಯಲ್ಲಿ 2004 ಮತ್ತು 2009 ರಲ್ಲಿ ಯುಪಿಎ ನೇತೃತ್ವ ವಹಿಸಿ ಪಕ್ಷದ ಗೆಲುವಿನಲ್ಲಿ ಮತ್ತು ಕೇಂದ್ರದಲ್ಲಿ ಎರಡು ಭಾರಿ ಪಕ್ಷವು ಅಧಿಕಾರ ಹಿಡಿಯುವಲ್ಲಿ ಶ್ರಮಿಸಿದ್ದರು. ಆದರೆ 2014 ರಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋಲುಂಡಿತ್ತು.

2017ರ ಡಿಸೆಂಬರ್‌ನಲ್ಲಿ ಅವರ ಪಕ್ಷದ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದು ಅವರ ಮಗ ರಾಹುಲ್ ಗಾಂಧಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಹೊಸ ಹರುಪಿನೊಂದಿಗೆ ಕೆಲಸ ಮಾಡಿದರೂ ಸಹ ಅವರ ನೇತೃತ್ವದಲ್ಲಿ ಕಳೆದ ವರ್ಷ ಮೇ ತಿಂಗಳ ಸಾರ್ವತ್ರಿಕ ಚುನಾವಣೆಯ 543 ಸಂಸದೀಯ ಸ್ಥಾನಗಳಲ್ಲಿ ಕಾಂಗ್ರೆಸ್ ಕೇವಲ 52 ಸ್ಥಾನಗಳಿಗೆ ಕುಸಿದಿತ್ತು. ಸೋಲಿನ ಹೊಣೆ ಹೊತ್ತ ರಾಹುಲ್ ಜುಲೈನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ಮತ್ತೆ ಸೋನಿಯಾ ಗಾಂಧಿಯವರೇ ಹಂಗಾಮಿ ಅಧ್ಯಕ್ಷರಾಗುವ ಅನಿವಾರ್ಯತೆ ಸೃಷ್ಟಿಯಾಗಿತ್ತು.

ಪೂರ್ಣಾವಧಿ ಅಧ್ಯಕ್ಷರು ಬೇಕು – ಶಶಿ ತರೂರ್

ಕಾಂಗ್ರೆಸ್‌ ಪಕ್ಷವು ಗೊತ್ತು ಗುರಿಯಿಲ್ಲದ ಹಡಗಿನಂತಾಗಿದೆ ಎಂಬ ಅಭಿಪ್ರಾಯ ಜನರ ಮನಸ್ಸಿನಲ್ಲಿದೆ. ಇದನ್ನು ತೊಡೆದುಹಾಕಲು ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರ ಅಗತ್ಯವಿದೆ ಎಂದು ಸಂಸದ ಶಶಿ ತರೂರ್‌ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವರ್ಷ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾಗಾಂಧಿಯವರು ಆಯ್ಕೆಯಾದಾಗ ಅದನ್ನು ನಾನು ಸ್ವಾಗತಿಸಿದ್ದೆ. ಆದರೆ ನಿರಂತರವಾಗಿ ಅವರ ಮೇಲೆಯೇ ಹೊರೆ ಹಾಕುವುದು ಸರಿಯಲ್ಲ. ರಾಹುಲ್ ಗಾಂಧಿಯವರು ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ ಎಂಬ ಭರವಸೆ ನನಗಿದೆ. ಆದರೆ ಅವರು ಒಪ್ಪದಿದ್ದರೆ ಹೊಸ ಅಧ್ಯಕ್ಷರು ಪಕ್ಷಕ್ಕೆ ಅತ್ಯಗತ್ಯ ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ.

ನಿನ್ನೆ ನಡೆದ ಆನ್‌ಲೈನ್ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಸಭಾ ಸಂಸದ ಹಾಗೂ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಗ್ವಿ ಸಂವಿಧಾನದಲ್ಲಿ ತಿಳಿಸಿರುವ ಚುನಾವಣಾ ವಿಧಾನವನ್ನು ಅನುಸರಿಸಲು ಪಕ್ಷ ಬದ್ಧವಾಗಿದೆ ಎಂದು ಹೇಳಿದ್ದಾರೆ.

“ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದಾರೆ, ಸರಿಯಾದ ಕಾರ್ಯವಿಧಾನವನ್ನು ಜಾರಿಗೆ ತರುವವರೆಗೂ ಅವರೆ ಮುಂದುವರಿಯುತ್ತಾರೆ ಮತ್ತು ಭವಿಷ್ಯದಲ್ಲಿ ಚುನಾವಣಾ ವಿಧಾನವನ್ನು ಜಾರಿಗೆ ತರಲಾಗುವುದು” ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ ಕೊರೊನಾ ವೈರಸ್ ಸಾಂಕ್ರಾಮಿಕ ಮತ್ತು ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಇರುವ ಕಾರಣ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಪಕ್ಷ ತಿಳಿಸಿದೆ.


ಇದನ್ನೂ ಓದಿಸಚಿನ್ ಪೈಲಟ್‌ ಕಾಂಗ್ರೆಸ್‌ಗೆ ವಾಪಸ್‌? ಬಿಜೆಪಿಗಿಲ್ಲ ಅಧಿಕಾರದ ಅವಕಾಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights