ಮತ್ತೆರೆಡು ವಾರ ಲಾಕ್‌ಡೌನ್ ಮುಂದುವರೆಯುವ ಸಾಧ್ಯತೆ?

ಮೇ 31ಕ್ಕೆ ನಾಲ್ಕನೇ ಹಂತದ ಲಾಕ್‌ಡೌನ್‌ ಮುಕ್ತಾಯವಾಗುತ್ತಿದೆ. ಮೇ 31ರ ಬಳಿಕವೂ ಮತ್ತೆರೆಡು ವಾರ ಲಾಕ್‌ಡೌನ್ ಮುಂದುವರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಅಂತರರಾಜ್ಯ ಓಡಾಟಕ್ಕೆ ಅವಕಾಶ ಕೊಟ್ಟ ಮೇಲೆ ಕಳೆದ ವಾರದಿಂದ ಕೊರೊನಾ ಸೋಂಕು ಗಣನೀಯ ಏರಿಕೆಯಾಗುತ್ತಿರುವುದರಿಂದ ಮತ್ತು ದೇಶದಲ್ಲಿ ಪ್ರಕರಣಗಳ ಸಂಖ್ಯೆ ಒಂದೂವರೆ ಲಕ್ಷಕ್ಕೆ ತಲುಪಿರುವುದರಿಂದ ಲಾಕ್‌ಡೌನ್‌ ಅನ್ನು ಮತ್ತೆರೆಡು ವಾರ ವಿಸ್ತರಿಸುವಂತೆ ಅಧಿಕಾರಿಗಳು ಕೋರಿದ್ದಾರೆ ಎನ್ನಲಾಗಿದೆ.

5ನೇ ಹಂತದ ಲಾಕ್‌ಡೌನ್‌ನಲ್ಲಿ ಭಾರತದ ಕೊರೊನಾ ಹಾಟ್‌ಸ್ಪಾಟ್‌ಗಳಾದ 11 ಮಹಾನಗರಗಳ ಮೇಲೆ ಕಣ್ಣಿಡಲು ನಿರ್ಧರಿಸಿದ್ದು, ಈ  11ನಗರಗಳಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಬಿಗಿಗೊಳಿಸುವ ಸಾಧ್ಯತೆಯಿದೆ.

ಮುಂಬೈ, ಚೆನ್ನೈ, ಕೋಲ್ಕತ್ತಾ, ಅಹಮದಾಬಾದ್, ಬೆಂಗಳೂರು, ಇಂದೋರ್, ದೆಹಲಿ, ಪುಣೆ, ಥಾನೆ, ಜೈಪುರ್, ಸೂರತ್ ಈ ಹನ್ನೊಂದು ನಗರಗಳಲ್ಲಿ ಲಾಕ್‌ಡೌನ್‌ ಬಿಗಿಗೊಳಿಸಲು ಕೇಂದ್ರ ಸರ್ಕಾರ ಯೋಚಿಸುತ್ತಿದೆ. ಶೇಕಡಾ 70ರಷ್ಟು ಪ್ರಕರಣಗಳು ಈ 11 ನಗರಗಳಿಂದಲೇ ವರದಿಯಾಗುತ್ತಿವೆ ಎನ್ನಲಾಗಿದೆ.

ಉಳಿದ ನಗರಗಳಲ್ಲಿ ಲಾಕ್‌ಡೌನ್‌ನಿಂದ ವಿನಾಯಿತಿ ನೀಡುವ ಸಾಧ್ಯತೆಯಿದೆ. ಈಗಾಗಲೇ ಕರ್ನಾಟಕದ ಕೆಲವು ನಗರಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಪ್ರದೇಶಗಳಲ್ಲಿ ಇಡೀ ಬಡಾವಣೆಯನ್ನೇ ಲಾಕ್‌ಡೌನ್‌ ಮಾಡದೇ ಕೇವಲ ಸೋಂಕು ಕಾಣಿಸಿಕೊಂಡ ರಸ್ತೆಯನ್ನು ಮಾತ್ರ ಸೀಲ್‌ಡೌನ್‌ ಮಾಡಲು ನಿರ್ಧರಿಸಲಾಗಿದೆ.

ಲಾಕ್‌ಡೌನ್‌ 5.Oನಲ್ಲಿ ಆಟೋ, ಟ್ಯಾಕ್ಸಿ ಓಡಾಟಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ. ಜೊತೆಗೆ ಷರತ್ತುಗಳೊಂದಿಗೆ ದೇವಸ್ಥಾನ, ಚರ್ಚ್‌ ಮತ್ತು ಮಸೀದಿ ತೆರೆಯಲು ಅವಕಾಶ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಬೃಹತ್ ಧಾರ್ಮಿಕ ಕಾರ್ಯಕ್ರಮ ನಡೆಸುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗುತ್ತದೆ ಎನ್ನಲಾಗಿದೆ.

ಶಾಲಾ ಕಾಲೇಜುಗಳು, ಮಾಲ್‌ಗಳು, ಚಿತ್ರಮಂದಿರಗಳನ್ನು ಸದ್ಯಕ್ಕೆ ತೆರೆಯುವಂತಿಲ್ಲ. ಜಿಮ್‌ಗಳನ್ನು ತೆರೆಯುವುದು ಆಯಾ ರಾಜ್ಯಗಳಿಗೆ ಬಿಟ್ಟ ವಿಚಾರ ಎಂದು ಕೇಂದ್ರ ಸರ್ಕಾರ ಘೋಷಿಸಲಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ಅಂತಿಮ ತೀರ್ಮಾನ ಇನ್ನೆರಡು ದಿನಗಳಲ್ಲಿಯೇ ಹೊರಬೀಳಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights