ಭಾಷೆ ಮತ್ತು ಸತ್ಯ – ‘ರಾಜಕೀಯ ಭಾಷೆ ಸೃಷ್ಟಿಸಬಹುದಾದ ಗೊಂದಲಗಳ ಬಗ್ಗೆ’ ಕೆ ವಿ ನಾರಾಯಣ ಅವರ ಲೇಖನ ಓದಿ

`ಸತ್ಯದ ಸ್ವರೂಪವನ್ನು ನಾನು ತಿಳಿದುಕೊಂಡಂತೆ ಸತ್ಯಾಗ್ರಹಿಯ ಮುಖದಿಂದ ಹೊರಟ ಶಬ್ದಗಳಿಗೆ ಒಂದೇ ಅರ್ಥ ಇರುವ ಅವಶ್ಯಕತೆ ಇಲ್ಲ. ಅವನು ವ್ಯಕ್ತಪಡಿಸುವ ಭಾಷೆಗೆ ಎರಡೇಕೆ, ಅನೇಕ ಅರ್ಥಗಳೂ ಆಗಬಹುದು. ಇಷ್ಟೇ, ಆ ಅರ್ಥಗಳು ಗೌಪ್ಯವಾಗಿರಬಾರದು. ಯಾರಿಗೂ ಮೋಸ ಮಾಡುವಂತಿರಬಾರದು ಮತ್ತು ಆ ಅರ್ಥಗಳು ಅನಿವಾರ್ಯವಾಗಿರಬೇಕು. ಸತ್ಯವನ್ನು ಮರೆಮಾಚಲು ಆ ಭಾಷೆಯ ಪ್ರಯೋಗವಾಗಿರಬಾರದು. ಎರಡರ್ಥದ ಭಾಷೆಯನ್ನು ಪ್ರಕಟವಾಗಿಯೇ ನಾವು ಆಡುತ್ತಿರುವಾಗ ಸತ್ಯವನ್ನು ಬಿಟ್ಟಂತಾಗುವುದಿಲ್ಲ. ಒಮ್ಮೊಮ್ಮೆ ಹೀಗೆಯೂ ಆಗುತ್ತದೆ. ನಮ್ಮ ಮನಸ್ಸಿನಲ್ಲಿ ಒಂದೇ ಅರ್ಥವಿರುತ್ತದೆ. ಆದರೆ ಜನರು ನಮ್ಮ ಶಬ್ದಗಳ ಅನೇಕ ಅರ್ಥಗಳನ್ನು ಮಾಡಿಕೊಳ್ಳುತ್ತಾರೆ. ಇದರಲ್ಲಿಯೂ ಸತ್ಯದ ತ್ಯಾಗವಿಲ್ಲ…. (ಗಾಂಧೀ ಸೇವಾ ಸಂಘದ ವಾರ್ಷಿಕ ಅಧಿವೇಶನ ಕರ್ನಾಟಕದ ಹುದಲಿಯಲ್ಲಿ 1937ರಲ್ಲಿ ನಡೆದಾಗ ಆ ಅಧಿವೇಶನದ ಸಮಾರೋಪ ಸಮಾರಂಭದ ಭಾಷಣದಲ್ಲಿ ಮಹಾತ್ಮ ಗಾಂಧಿಯವರು ಆಡಿದ ಮಾತುಗಳಿವು.)

ಭಾಷೆಗೂ ಸತ್ಯಕ್ಕೂ ಇರುವ ನಂಟನ್ನು ಕುರಿತಂತೆ ತತ್ವಶಾಸ್ತ್ರಜ್ಞರು ಬಹುವಾಗಿ ಚರ್ಚಿಸಿದ್ದಾರೆ. ಸುಳ್ಳು ಹೇಳುವುದು ಸಾಧ್ಯವಿರುವುದು ಭಾಷೆಯ ಸ್ವರೂಪದಿಂದಾಗಿಯೇ ಎಂಬುದಂತೂ ಈಗಾಗಲೇ ಒಪ್ಪಿತವಾದ ಸಂಗತಿ. ಒಂದು ವಾಕ್ಯವನ್ನು ಅಥವಾ ವಾಕ್ಯ ಸಮುಚ್ಚಯವನ್ನು ಸುಳ್ಳು ಎಂದು ಯಾವಾಗ ತಿಳಿಯುತ್ತೇವೆ? ಆ ವಾಕ್ಯಗಳಿಗೆ ಲೋಕಸಂವಾದಿತವಿಲ್ಲದಿರುವಾಗ ತಾನೇ. ಸುಳ್ಳುಗಳನ್ನು ವ್ಯಾವಹಾರಿಕ ಜಗತ್ತಿನಲ್ಲಿ ಗುರುತಿಸುವುದು ಸುಲಭ. ಆದರೆ ಎಷ್ಟೋ ವೇಳೆ ಸುಳ್ಳುಗಳನ್ನು ಹಾಗೆ ಬೆರಳಿಟ್ಟು ಗುರುತಿಸಲು ಸಾಧ್ಯವಾಗದಿರುವ ಸಂದರ್ಭಗಳು ಆಧುನಿಕ ಜಗತ್ತಿನ ಭಾಷಾ ಬಳಕೆಗಳಲ್ಲಿ ಅಧಿಕಗೊಳ್ಳುತ್ತಿವೆ. ಮೇಲೆ ಉಲ್ಲೇಖಿಸಿದ ಗಾಂಧಿಯವರ ಮಾತಿನಲ್ಲಿ ಅಡಕವಾಗಿರುವ ಅಭಿಪ್ರಾಯದಂತೆ ನಾವು ಬಳಸುವ ಮಾತಿಗೆ ಒಂದಕ್ಕಿಂತ ಹೆಚ್ಚು ಅರ್ಥಗಳು ಇರುವುದು ತಪ್ಪಲ್ಲ. ಆದರೆ ಆ ಆರ್ಥಗಳಲ್ಲಿ ಒಂದು ಇನ್ನೊಂದನ್ನು ಮುಚ್ಚಿಡುವುದಕ್ಕಾಗಿ ಬಳಕೆಯಾಗಬಾರದು. ಅಥವಾ ನಮ್ಮ ಮಾತಿನಿಂದ ಹೊರಡಬಹುದಾದ ಎಲ್ಲ ಅರ್ಥಗಳೂ ನಮಗೆ ಗೊತ್ತಿರಬೇಕು.

ಜಾರ್ಜ್ ಆರ್ವೆಲ್ ತನ್ನ 1984 ಕಾದಂಬರಿಯಲ್ಲಿ ಡಬಲ್ ಸ್ಪೀಕ್ ಎಂಬ ರಚನೆಯೊಂದನ್ನು ಬರೆದಿದ್ದಾನೆ. ಆನಂತರದಲ್ಲಿ ಆ ಮಾತು ಬಹಳ ಚರ್ಚೆಗೆ ಒಳಗಾಗಿದೆ. ಆ ಮಾತಿನ ಅರ್ಥವಿಷ್ಟೇ: ನಾವು ಅರ್ಥವನ್ನು ಸಂವಹನಗೊಳಿಸಲು ಭಾಷೆಯನ್ನು ಬಳಸುತ್ತಿರುವಂತೆ ತೋರಿದರೂ ನಿಜವಾಗಿ ಆರ್ಥವನ್ನು ಮುಚ್ಚಿಡಲು ಯೋಜಿಸಿರುತ್ತೇವೆ. ಕೆಟ್ಟದೂ ಒಳ್ಳೆಯದಾಗಿ ಕಾಣಿಸುವಂತೆ ಮಾಡುವ, ಇಲ್ಲದಿರುವುದನ್ನು ಇರುವಂತೆ ತೋರಿಸುವ, ಅಸಹ್ಯವಾದುದನ್ನೂ ಸಹ್ಯವಾಗಿಸುವಂತೆ ಭ್ರಮೆ ಹುಟ್ಟಿಸುವ ಸಾಮರ್ಥ್ಯ ಈ ಬಗೆಯ ಭಾಷಾ ಬಳಕೆಗೆ ಇರುತ್ತದೆ. ಮಾತಾಡುತ್ತಿರುವ ಅಥವಾ ಬಳಸುತ್ತಿರುವ ವ್ಯಕ್ತಿಯು ಸಾಮಾಜಿಕ ಜವಾಬ್ದಾರಿಯನ್ನು ಮುಚ್ಚಿಡಲು ಈ ಭಾಷಾ ಬಳಕೆ ಸಮರ್ಥವಾಗಿರುತ್ತದ. “ಲಾಂಗ್ವೇಜ್ ವಿಚ್ ಪ್ರಿಟೆಂಡ್ಸ್ ಟು ಕಮ್ಯುನಿಕೇಟ್, ಬಟ್ ರಿಯಲೀ ಡಸ್ನಾಟ್, ಇಟ್ ಈಸ್ ಲಾಂಗ್ವೇಜ್ ವಿಚ್ ಮೇಕ್ಸ್ ದ ಬ್ಯಾಡ್ ಸೀಮ್ ಗುಡ್, ದ ನಗೆಟಿವ್ ಸೀಮ್ ಪಾಸಿಟಿವ್, ದ ಅನ್ ಪ್ಲೆಸೆಂಟ್ ಅಪಿಯರ್‌ ಅಟ್ರಾಕ್ಟಿವ್ ಆರ್ ಅಟ್ ಲೀಸ್ಟ್ ಟಾಲರೆಬಲ್. ಇಟ್ ಈಸ್ ಲಾಂಗ್ವೇಜ್ ವಿಚ್ ಆವಾಯ್ಡ್ಸ್ ಆರ್ ಶಿಫ್ಟ್ ರೆಸ್ಪಾನ್ಸಿಬಲಿಟಿ. ಲಾಂಗ್ವೇಜ್ ವಿಚ್ ಅಟ್ ವೇರಿಯನ್ಸ್ ವಿತ್ ಇಟ್ಸ್ ರಿಯಲ್ ಆರ್ ಇಟ್ಸ್‌ ಪರ್‌ ಪೋರ್ಟೆಡ್ ಮೀನಿಂಗ್. ಇಟ್ ಈಸ್ ಲಾಂಗ್ವೇಜ್ ವಿಚ್ ಕನ್ಸೀಲ್ಸ್ ಅಪ್ರಾಪ್ರಿಯೇಟ್ ಥಾಟ್” ಒಟ್ಟಾರೆ ಏನನ್ನು ಹೇಳಬೇಕಾಗಿದೆಯೋ ಆ ಅರ್ಥವನ್ನು ಮರೆಮಾಚಲು ಸಾಧ್ಯವಾಗುವಂತೆ ಭಾಷೆಯನ್ನು ಬಳಸುವುದು; ಅಂದರ ಹೇಳುವವರು ಏನನ್ನು ಹೇಳುತ್ತಿದ್ದಾರೆ ಅಥವಾ ಅವರ ಉದ್ದೇಶವೇನೆಂಬುದು ನಮ್ಮ ಗಮನಕ್ಕೆ ಬಾರದಂತ ಭಾಷಿಕ ರಚನೆಯನ್ನು ರೂಪಿಸುವುದು ಡಬಲ್‌ ಸ್ಪೀಕ್ ಎನಿಸಿಕೊಳ್ಳುತ್ತದೆ. ನಮ್ಮ ವ್ಯವಹಾರದ ಹತ್ತಾರು ಕ್ಷೇತ್ರಗಳು ಅದರಲ್ಲೂ ರಾಜಕಾರಣದ ಭಾಷೆ ಇಂಥಹ ಭಾಷಿಕ ಬಳಕೆಗೆ ಅಗಾಧ ಪ್ರಮಾಣದ ನಿದರ್ಶನವನ್ನು ಒದಗಿಸುತ್ತವೆ ಎಂದು ಆರ್ವೆಲ್ ಹೇಳುತ್ತಾನೆ.

ಆರ್ವೆಲ್‌ನ ಈ ವಿಚಾರಗಳು ಇಂಗ್ಲಿಶ್ ಮಾತಾಡುವ ಜಗತ್ತನ್ನು ಎಷ್ಟು ಪ್ರಭಾವಿಸಿವೆ ಎಂದರೆ ಮಾತಿನಲ್ಲಿ ಈ ಬಗೆಯ ಡಬಲ್ ಸ್ಪೀಕ್ ಅನ್ನು ಕೈ ಬಿಡಬೇಕೆಂದು ತೀವ್ರ ಚಳುವಳಿಗಳು ನಡೆದಿವೆ. ಉತ್ತರ ಅಮೆರಿಕಾದಲ್ಲಿ 1974ರಿಂದ ಭಾಷೆಯ ಬಳಕೆಯಲ್ಲಿ ಈ ಬಗೆಯ ಡಬಲ್ ಸ್ಪೀಕ್ ಗಳನ್ನು ಗುರುತಿಸಿ ಅವುಗಳನ್ನು ಪಟ್ಟಿ ಮಾಡುವ ಪರಂಪರೆಯೊಂದು ಪ್ರಾರಂಭವಾಗಿದೆ. ಹಾಗೆ ಗುರುತಿಸಲಾದ ಕೆಲವು ಮಾದರಿಗಳನ್ನು ಈ ಕೆಳಗೆ ಕೊಡಲಾಗಿದೆ. ಕಾಂಬೋಡಿಯಾದಲ್ಲಿ ಅಮೆರಿಕಾ ಒಂದೇ ಸಮನೆ ಜನರ ಮೇಲೆ ಬಾಂಬು ದಾಳಿಮಾಡುತ್ತಿರುವುದನ್ನು ಪತ್ರಿಕೆಗಳು ವರದಿ ಮಾಡುತ್ತಿದ್ದವು. ಆಗ ವಾಯುಸೇನಾಧಿಕಾರಿಯೊಬ್ಬರ ಪ್ರತಿಕ್ರಿಯೆ ಹೀಗಿತ್ತು. ” ಯೂ ಆಲ್ವೇಸ್‌ ರೈಟ್ ಇಟ್ಸ್ ಬಾಂಬಿಂಗ್, ಬಾಂಬಿಂಗ್, ಬಾಂಬಿಂಗ್. ಇಟ್ ಈಸ್ ನಾಟ್ ಬಾಂಬಿಂಗ್, ಇಟ್ಸ್ ಏರ್ ಸಪೋರ್ಟ್” ಒಂದೇ ಕ್ರಿಯೆಯನ್ನು ಎರಡು ರೀತಿಗಳಲ್ಲಿ ವರ್ಣಿಸುವ ಕ್ರಮವಿದು. ‘ಏರ್ ಸಪೋರ್ಟ್’ ಎಂದಾಗ ‘ಬಾಂಬಿಂಗ್’ ಎಂಬ ಪದದಲ್ಲಿರುವ ಅಪರಾಧದ ಅಂಶ ಇಲ್ಲವಾಗುತ್ತದೆ ಅಲ್ಲವೇ? ಹಾಗೆಯೇ ಅಮೆರಿಕಾದ ಸೈನ್ಯ ವ್ಯವಸ್ಥೆಯ ಕೇಂದ್ರಸ್ಥಾನ ಪೆಂಟಗಾನ್, ನ್ಯೂಟ್ರಾನ್ ಬಾಂಬ್ ಗೆ ನೀಡಿರುವ ವಿವರಣೆ ಹೀಗಿದೆ. ಅನ್ ಎಫಿಶಿಯೆಂಟ್ ನ್ಯೂಕ್ಲಿಯರ್ ವೆಪನ್ ದಟ್ ಎಲಿಮಿನೇಟ್ಸ್ ಅನ್ ಎನಿಮಿ ವಿತ್ ಎ ಮಿನಿಮಮ್ ಡಿಗ್ರಿ ಆಫ್ ಡ್ಯಾಮೇಜ್ ಆಫ್ ಫ್ರೆಂಡ್ಲಿ ಟೆರಿಟರಿ”.

ನೋಮ್ ಚಾಮ್ ಸ್ಕಿ ತನ್ನ ಉಪನ್ಯಾಸವೊಂದರಲ್ಲಿ ನೀಡುವ ಇನ್ನೊಂದು ಉದಾಹರಣೆ ಹೀಗಿದ. ಎರಡನೆಯ ಮಹಾಯುದ್ಧಕ್ಕೆ ಮೊದಲು ಅಮೆರಿಕಾದ ರಾಜ್ಯವ್ಯವಸ್ಥೆಯಲ್ಲಿ ಯಾವ ಸರಕಾರಿ ಇಲಾಖೆಯನ್ನು ‘ವಾರ್ ಡಿಪಾರ್ಟ್‌ಮೆಂಟ್’ ಎಂದು ಕರೆಯಲಾಗುತ್ತಿತ್ತೋ ಅದನ್ನೇ ಯುದ್ಧಾನಂತರದಲ್ಲಿ ‘ಡಿಫೆನ್ಸ್ ಡಿಪಾರ್ಟ್‌ಮೆಂಟ್’ ಎಂದು ಕರೆಯಲಾಗುತ್ತಿದೆ. ಇಲಾಖೆಯ ಕರ್ತವ್ಯದ ಸ್ವರೂಪದಲ್ಲಿ ಗುಣಾತ್ಮಕ ಬದಲಾವಣೆ ಇಲ್ಲದಿದ್ದರೂ ಹೆಸರಿನಲ್ಲಿ ಆಗಿರುವ ವ್ಯತ್ಯಾಸದಿಂದ ಇಲಾಖೆಗೆ ಒಂದು ಬಗೆಯ ನೈತಿಕತೆಯನ್ನು ತಂದಕೊಡಲು ಯತ್ನಿಸಿರುವುದು ಸ್ಪಷ್ಟವಾಗಿದೆ. ಹಾಗೆ ನೋಡಿದರೆ ಡಿಫೆನ್ಸ್ ಡಿಪಾರ್ಟ್‌ಮೆಂಟ್ ಎಂದು ಹೆಸರು ಪಡೆದ ಅನಂತರದ ಐವತ್ತು ವರ್ಷಗಳಲ್ಲಿಯೇ ಅಮೆರಿಕಾ ಎಂದಿಗಿಂತ ಹೆಚ್ಚು ಯುದ್ಧಗಳಲ್ಲಿ ಪರೋಕ್ಷವಾಗಿ ತೊಡಗಿದೆ ಎಂದು ಚಾಮ್ ಸ್ಕಿ ಕಟಕಿಯಾಡುತ್ತಾರೆ.

ಗಾಂಧೀಯವರು ಮೇಲೆ ಉಲ್ಲೇಖಿಸಿದ ಮಾತಿನಲ್ಲಿ ಎತ್ತಿರುವ ಸಮಸ್ಯೆಗೂ ಡಬಲ್ ಸ್ಪೀಕ್‌ನ ಸಮಸ್ಯೆಗೂ ಸಂಬಂಧವಿದೆ. ಗಾಂಧಿಯವರು ಹಲವು ಅರ್ಥಗಳಿರುವ ಸಾಧ್ಯತೆಗಳನ್ನು ಸಾಧ್ಯತೆಗಳನ್ನು ಅಲ್ಲಗಳೆಯುತ್ತಿಲ್ಲ. ಆ ಹಲವು ಅರ್ಥಗಳು ಅನಿವಾರ್ಯವೆಂಬಂತೆ ಇರಬೇಕು ಮತ್ತು ಹಾಗೆ ಹಲವಾರು ಅರ್ಥಗಳಿವೆ ಎಂಬುದು ಆ ಮಾತನ್ನು ಆಡುತ್ತಿರುವ ವ್ಯಕ್ತಿಗೆ ಗೊತ್ತಿರಬೇಕು ಎಂದು ಎರಡು ಶರತ್ತುಗಳನ್ನು ಹಾಕುತ್ತಾರೆ. ಡಬಲ್ ಸ್ಪೀಕ್‌ನಲ್ಲಿ ಎಚ್ಚರದಿಂದಲೇ ಹಲವು ಅರ್ಥ ಸಾಧ್ಯತೆಗಳನ್ನು ರೂಪಿಸಲಾಗಿರುತ್ತದೆ. ಅಲ್ಲದ ಹಾಗೆ ಭಿನ್ನ ಅರ್ಥಗಳಿರುವುದನ್ನು ಭಾಷೆಯನ್ನು ಬಳಸುತ್ತಿರುವ ವ್ಯಕ್ತಿ ಕೂಡ ಬಲ್ಲವರಾಗಿರುತ್ತಾರೆ. ಆದರೆ ಗಾಂಧಿಯವರು ಹಾಕುವ ಮೂರನೆಯ ಶರತ್ತು ಮಾತ್ರ ಇಲ್ಲಿ ಪಾಲಿತವಾಗುವುದಿಲ್ಲ. ಸತ್ಯವನ್ನು ಮರೆಮಾಚಲು ಈ ತಂತ್ರವನ್ನು ರೂಪಿಸಬಾರದೆಂದು ಅವರು ಹೇಳುತ್ತಾರೆ. ಆದರೆ ಡಬಲ್ ಸ್ಪೀಕ್ ನ ಮುಖ್ಯ ಉದ್ದೇಶವೇ ಸತ್ಯವನ್ನು ಮರೆಮಾಚುವುದು.

ಲೋಕ ಸಂವಾದಿತ್ವವಿಲ್ಲದ ವಾಕ್ಯಗಳನ್ನು ಬಳಸಲು ಭಾಷೆಯ ಆಂತರಿಕ ಸಾಧ್ಯತೆಗಳು ಅವಕಾಶ ಮಾಡಿಕೊಡುತ್ತವೆಂಬುದು ನಿಜ. ಉದಾಹರಣೆಗೆ ‘ಮೊಲಕ್ಕೆ ಮೂರು ಕಿವಿಗಳಿರುತ್ತವೆ’ ಎಂಬ ಸುಳ್ಳು ವಾಕ್ಯವನ್ನು ಹೇಳುವುದು ಸುಲಭ. ಆದರೆ ಸತ್ಯವನ್ನು ಮರೆಮಾಚಲು ಸತ್ಯದ ಸೋಗನ್ನು ಹಾಕಿದ ಭಾಷಾರೂಪಗಳನ್ನು ಕೇಳಿ ಅಥವಾ ಓದಿ ಅವುಗಳಲ್ಲಿರುವ ಆಸತ್ಯವನ್ನು ಗುರುತಿಸುವುದು ಕಷ್ಟ. ಅಥವಾ ಆಸಾಧ್ಯ. ವಾಣಿಜ್ಯ ಜಗತ್ತಿನಲ್ಲಿ ಜಾಹೀರಾತುಗಳ ಭಾಷೆ ಇದಕ್ಕೊಂದು ಒಳ್ಳೆಯ ಮಾದರಿ. ಹಾಗೆಯೇ ರಾಜಕಾರಣದಲ್ಲಿ ಬಳಕೆಯಾಗುವ ಭಾಷೆಯೂ ಕೂಡ. ಹಿತಾಸಕ್ತಿಗಳಿಗೆ ಅನುಗುಣವಾಗಿ ವಿಭಜಿತವಾಗಿರುವ ರಾಜಕಾರಣದ ಸಂದರ್ಭದಲ್ಲಿ ಒಂದು ಗುಂಪು ಬಳಸುವ ಮಾತಿಗೆ ಇರುವ ಅರ್ಥ ಇನ್ನೊಂದು ಗುಂಪಿಗೆ ಬೇರೆಯಾಗಿಯೇ ತೋರಬಹುದು. ರಾಷ್ಟ್ರೀಯ ವಿಮೋಚನಾ ಚಳುವಳಿಯ ಸಂದರ್ಭದಲ್ಲಿ ಹೋರಾಟದಲ್ಲಿ ತೊಡಗಿದವರಿಗೆ ಯಾವುದು ‘ವಿಮೋಚನಾ ಹೋರಾಟ’ವೆನಿಸುತ್ತದೆಯೋ ಅದು ಆಡಳಿತದಲ್ಲಿರುವವರಿಗೆ ‘ಭಯೋತ್ಪಾದನೆ’ ಎನಿಸುತ್ತದೆ. ‘ರಾಷ್ಟ್ರೀಯ ಹಿತಾಸಕ್ತಿ’ ಎಂಬ ಮಾತಿಗೆ ‘ವರ್ಗ ಹಿತಾಸಕ್ತಿ’ ಎಂಬ ಅರ್ಥ ಬರುತ್ತದೆ. ಇಂಥ ನಿದರ್ಶನಗಳು ಒಂದೇ ಮಾತು ಭಿನ್ನ ಸಂದರ್ಭಗಳಲ್ಲಿ ವಿವಿಧ ಅರ್ಥ ಪ್ರತೀತಿಯನ್ನು ಉಂಟುಮಾಡಲು ಸಾಧ್ಯವೆಂಬುದನ್ನು ಸೂಚಿಸುತ್ತವೆ. ಆದ್ದರಿಂದ ‘ಸತ್ಯ’ದ ಸಾಪೇಕ್ಷ ಸ್ಥಿತಿಯ ಅರಿವು ನಮಗಾಗುತ್ತದೆ.

ಆದರೆ ಇನ್ನೊಂದು ನೆಲೆಯಲ್ಲಿ ಒಂದು ಅರ್ಥವನ್ನು ಸೂಚಿಸಲು ಒಂದು ಭಾಷಿಕ ರೂಪವಿರುವಾಗ ಅದಕ್ಕೆ ಬದಲಾಗಿ ಇನ್ನೊಂದು ಭಾಷಿಕ ರೂಪವನ್ನು ಬಳಸುವ ಸನ್ನಿವೇಶಗಳನ್ನು ಕುರಿತು ಆರ್ವೆಲ್ ಚರ್ಚಿಸಿದಂತಿದೆ. ‘ಬಾಂಬ್ ದಾಳಿ’ ಎಂದು ಹೇಳುವ ಬದಲು ‘ವಾಯುಕ್ಷೇತ್ರ ರಕ್ಷಣೆ’ ಎಂಬ ರಚನೆಯನ್ನು ಬಳಸಿದಾಗ ಕ್ರಿಯೆಗೆ ಇರುವ ಹೊಣೆಗಾರಿಕೆಯ ಸ್ವರೂಪವನ್ನು ಬದಲಾಯಿಸಿದಂತಾಯಿತು. ಇದು ಗಾಂಧಿಯವರು ಹೇಳುವ ಸತ್ಯವನ್ನು ಮರೆಮಾಚುವ ಪ್ರಯತ್ನವಾಗುತ್ತದೆ. ಇಂಥ ಯತ್ನದಲ್ಲಿ ನಮ್ಮ ರಾಜಕಾರಣದ ಭಾಷೆ ಅತ್ಯಂತ ತೀವ್ರವಾಗಿ ತೊಡಗಿರುವುದನ್ನು ಯಾರಾದರೂ ಗಮನಿಸಬಹುದು. ಇಂಥ ಸಂದರ್ಭದಲ್ಲಿ ಸತ್ಯದ ಸ್ವರೂಪವನ್ನು ಗುರುತಿಸುವುದು ಅತ್ಯಂತ ಕಷ್ಟ ಸಾಧ್ಯ. ಭಾಷೆಯ ಅಪಬಳಕೆಗೆ ಇದಕ್ಕಿಂತ ಉತ್ತಮ ಉದಾಹರಣೆ ಬೇರೊಂದು ಇರಲಾರದು.

  • ಡಾ. ಕೆ ವಿ ನಾರಾಯಣ,ಹಂಪಿ ಕನ್ನಡ ವಿಶ್ವವಿದ್ಯಾಲಯದ ಆರಂಭಿಕ ಹಂತದಲ್ಲಿಯೇ ರಿಜಿಸ್ಟಾರ್ ಆಗಿ ವಿಶ್ವವಿದ್ಯಾಲಯ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೆ ವಿ ಎನ್, ಕನ್ನಡದಲ್ಲಿ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಶಿಕ್ಷಣದ ಬಗ್ಗೆ ಹೊಸ ಚಿಂತನೆಯನ್ನು ಕಟ್ಟಲು ಶ್ರಮಿಸಿದವರು ಕೂಡ. ಚಾಮ್ ಸ್ಕಿ ಜೊತೆಗೆ ಎರಡು ಹೆಜ್ಜೆ, ನುಡಿಗಳ ಅಳಿವು ಕೆ ವಿ ಎನ್ ಅವರ ಇತ್ತೀಚಿನ ಪುಸ್ತಕಗಳು.
  • ಪ್ರಸಕ್ತ ಲೇಖನವನ್ನು ಕೆ ವಿ ಎನ್ ಅವರ ಬರಹಗಳ ಸಮಗ್ರ ಸಂಕಲನ ತೊಂಡುಮೇವು (11 ಸಂಪುಟಗಳು) ಭಾಗ-5 ರಿಂದ ಆಯ್ದುಕೊಳ್ಳಲಾಗಿದೆ.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights