ನಾಳೆಯಿಂದ ಆರಂಭವಾಗಲಿದೆ “ಮೇಕ್‌ ಆರ್‌ ಬ್ರೇಕ್‌ ವೀಕ್‌”!

ಮಾರಕ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗದ ಹಿನ್ನೆಲೆಯಲ್ಲಿ ಲಾಕ್​ಡೌನ್ ಕೊನೆ ವಾರದಲ್ಲಿ ಮತ್ತೊಂದು ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ನಾಳೆಯಿಂದ ‘ಮೇಕ್ ಆರ್ ಬ್ರೇಕ್ ವೀಕ್’ ಆರಂಭವಾಗಲಿದ್ದು, ದೇಶಾದ್ಯಂತ ಭರದಿಂದ ಕೊರೋನಾ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆ ಹೆಚ್ಚಿಸುವ ಮೂಲಕ ಸೋಂಕಿತರನ್ನು ಆದಷ್ಟು ಬೇಗ ಪತ್ತೆ ಮಾಡುವುದು ಈ ವಾರದ ಪ್ರಮುಖ ಗುರಿಯಾಗಿದೆ. ಸೋಂಕು ಹರಡುವಿಕೆ ಕಡಿಮೆಯಾದರಷ್ಟೇ ಲಾಕ್​ಡೌನ್​ಗೆ ಬ್ರೇಕ್ ಬೀಳಲಿದೆ. ಇಲ್ಲವಾದಲ್ಲಿ ಏಪ್ರಿಲ್ 14ರ ನಂತರವೂ ಲಾಕ್​ಡೌನ್​ ಮುಂದುವರೆಸಬೇಕಾಗಿ ಬರಬಹುದು.

ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಏ.11ರಂದು ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಈ ವೇಳೆ ಲಾಕ್​ಡೌನ್ ಮುಂದುವರೆಸಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ವಿಚಾರವಾಗಿ  ಮುಖ್ಯಮಂತ್ರಿಗಳ ಅಭಿಪ್ರಾಯ ತಿಳಿದು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಮಾರಕ ಸೋಂಕು ನಿಯಂತ್ರಣಕ್ಕೆ ಬಾರದೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವುದರಿಂದ ಪ್ರಸ್ತುತ ವಿಧಿಸಲಾಗಿರುವ ಲಾಕ್​ಡೌನ್​ಅನ್ನು ಇನ್ನಷ್ಟು ದಿನಗಳ ಕಾಲ ಮುಂದುವರೆಸುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಹಲವು ರಾಜ್ಯಗಳು ಮನವಿ ಮಾಡಿವೆ. ತೆಲಂಗಾಣ, ಪುದುಚೇರಿ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಛತ್ತೀಸ್​ಗಢ, ಜಾರ್ಖಂಡ್​ನಲ್ಲಿ ಲಾಕ್​ಡೌನ್ ಮುಂದುವರೆಸುವಂತೆ ಆಯಾ ರಾಜ್ಯ ಸರ್ಕಾರಗಳು ಮನವಿ ಮಾಡಿವೆ. ಈ ವಿಷಯವಾಗಿ ಉಳಿದ ರಾಜ್ಯಗಳ ಅಭಿಪ್ರಾಯವನ್ನೂ ಪಡೆಯಲು ಪ್ರಧಾನಿ ಮೋದಿ ಅವರು ಏಪ್ರಿಲ್ 11ರಂದು ಮುಖ್ಯಮಂತ್ರಿಗಳೊಂದಿಗೆ ಮತ್ತೊಂದು ಸುತ್ತಿನ‌ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ.

ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಏಪ್ರಿಲ್ ಅಂತ್ಯದವರೆಗೆ ಕರ್ನಾಟಕದಲ್ಲಿ ಲಾಕ್​​ಡೌನ್ ಮುಂದುವರೆಸುವುದು ಅಗತ್ಯ ಎಂದು ಕೋವಿಡ್​-19 ಟಾಸ್ಕ್​ಫೋರ್ಸ್​ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. “ಲಾಕ್​ಡೌನ್​ ಆದೇಶ ಇಡೀ ರಾಜ್ಯಕ್ಕೆ ಅನ್ವಯಿಸಬೇಕಿಲ್ಲ. ಆದರೆ, ಹೆಚ್ಚು ಪಾಸಿಟಿವ್ ಪ್ರಕರಣಗಳು ಕಂಡುಬಂದ ಜಿಲ್ಲೆಗಳಲ್ಲಿ ಲಾಕ್​ಡೌನ್ ಮುಂದುವರೆಸುವುದು ಉತ್ತಮ,” ಎಂದು ರಾಜ್ಯ ಸರ್ಕಾರಕ್ಕೆ ಸಮಿತಿ ಶಿಫಾರಸು ಮಾಡಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights