ಅಮೆರಿಕಕ್ಕೆ ಕೆಲಸಕ್ಕೆ ವಲಸೆ – ತಾತ್ಕಾಲಿಕ ನಿರ್ಬಂಧ ಹೇರಿದ ಟ್ರಂಪ್; ಐಟಿ ವಲಯಕ್ಕೆ ಸಂಕಷ್ಟ?

ಅಮೆರಿಕಾಕ್ಕೆ ಕೆಲಸ ಮತ್ತು ವಾಸಕ್ಕಾಗಿ ವಲಸೆ ಬರುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಕೊರೊನ ಸಾಂಕ್ರಾಮಿಕದಿಂದ ಅಮೆರಿಕ ಆರ್ಥಿಕತೆಯ ಮೇಲೆ ಬೀರಿರುವ ಪರಿಣಾಮದಿಂದ ವಿದೇಶಿಗರ ಸ್ಪರ್ಧೆಯಿಂದ ಅಮೆರಿಕಾದ ಉದ್ಯೋಗಿಗಳ ರಕ್ಷಣೆಗಾಗಿ ಈ ಕ್ರಮ ತೆಗೆದುಕೊಂಡಿರುವುದಾಗಿ ಅವರು ಘೋಷಿಸಿದ್ದಾರೆ.

“ಕಣ್ಣಿಗೆ ಕಾಣದ ಶತ್ರುವಿನ ದಾಳಿಯ ಸಂದರ್ಭದಲ್ಲಿ ನಮ್ಮ ಶ್ರೇಷ್ಠ ಅಮೆರಿಕ ನಾಗರಿಕರ ಉದ್ಯೋಗಗಳನ್ನು ರಕ್ಷಣೆ ಮಾಡಲು ಅಮೆರಿಕಾಕ್ಕೆ ಬರುವ ವಲಸೆಯನ್ನು ನಿರ್ಬಂಧಿಸುವ ಕಾರ್ಯಾದೇಶಕ್ಕೆ ಸಹಿ ಹಾಕುತ್ತಿದ್ದೇನೆ” ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಅಮೆರಿಕಾದಲ್ಲಿ ಬಲಪಂಥೀಯ ರಿಪಬ್ಲಿಕನ್ ಪಕ್ಷ ಅಧಿಕಾರಕ್ಕೆ ಬಂದಾಗಿಲಿಂದಲೂ ಉದ್ಯೋಗಕ್ಕೆ ವಲಸೆ ಬರುವುದನ್ನು ನಿಷೇಧಿಸುವುದರ ಬಗ್ಗೆ ಡೊನಾಲ್ಡ್ ಟ್ರಂಪ್ ಸರ್ಕಾರ ಮಾತನಾಡುತ್ತಲೇ ಇತ್ತು. ನಿರಾಶ್ರಿತರಿಗೆ ವೀಸಾ ಕೊಡುವುದಕ್ಕೆ ಹೆಚ್ಚಿನ ಕಠಿಣ ಕ್ರಮಗಳನ್ನು ತೆಗೆದುಕೊಂಡಿತ್ತಲ್ಲದೆ, ದಾಖಲೆಗಳಿಲ್ಲದೆ ವಲಸೆ ಬಂದಿದ್ದವರ ಮೇಲೆ ಹದ್ದಿನ ಕಣ್ಣು ಇಟ್ಟಿತ್ತು. ಈಗ ಜಾಗತಿಕ ಸಾಂಕ್ರಾಮಿಕದ ಕಾರಣ ನೀಡಿ ವಲಸೆಯನ್ನು ಇನ್ನಷ್ಟು ಬಿಗಿ ಮಾಡಲು ಟ್ರಂಪ್ ಮುಂದಾಗಿದ್ದಾರೆ.

ಈಗಾಗಲೇ ಕಾನೂನುಬಾಹಿರ ವಲಸೆ ತಡೆಯಲು ಕೆಲವು ಗಡಿಗಳಲ್ಲಿ ಗೋಡೆ ಕಟ್ಟಿರುವಂತೆಯೇ, ಇನ್ನು ಮುಂದೆ ಈ ಕಾರ್ಯಾದೇಶ ಜಾರಿಗೆ ಬಂದ ನಂತರ ಕಾನೂನಾತ್ಮಕ ವಲಸೆಯ ಅರ್ಜಿಗಳನ್ನು ಕೂಡ ಮುಂದಿನ ಬದಲಾವಣೆ ಆಗುವರೆಗೆ ಪುರಸ್ಕರಿಸುವುದಿಲ್ಲ. ಈಗ ಈ ನಡೆಯನ್ನು ಅಮೆರಿಕಾದ ಡೆಮಾಕ್ರಾಟ್ ಪಕ್ಷ ಟೀಕಿಸಿದೆ.

ಅಮೆರಿಕಾದಲ್ಲಿ ವಿಶೇಷ ಕೌಶಲ್ಯದ ಉದ್ಯೋಗಕ್ಕಾಗಿ ಹಲವು ವರ್ಷಗಳಿಂದ ವಲಸೆ ಹೋಗುತ್ತಿದ್ದ ಸಾವಿರಾರು ಭಾರತೀಯ ನಾಗರಿಕರಿಗೂ ಇದು ಸಮಸ್ಯೆಯಾಗಿ ತಲೆದೋರಲಿದೆ. ಈಗಾಗಲೇ ಅಲ್ಲಿ ನೆಲೆಸಿರುವ ಉದ್ಯೋಗಿಗಳ ವೀಸಾ ಅವಧಿ ಮುಗಿದರೆ ಮುಂದೇನಾಗಬಹುದು ಎಂಬ ಚಿಂತೆ ಹಲವು ಭಾರತೀಯರಲ್ಲಿ ಮನೆಮಾಡಿದೆ. ಇದರ ಬಗ್ಗೆ ಹಲವು ಭಾರತೀಯ ವಲಸಿಗರು ಆತಂಕ ವ್ಯಕ್ತಪಡಿಸಿದ್ದಾರೆ.

https://twitter.com/mpandeyz/status/1252480155844358145?s=20

ಉದಾಹರಣೆಗೆ ಎಂ ಪಾಂಡೆ ಎಂಬುವವರು ನರೇಂದ್ರ ಮೋದಿ, ಪ್ರಧಾನ ಮಂತ್ರಿ ಕಾರ್ಯಾಲಯ, ವಿದೇಶಾಂಗ ಸಚಿವ ಮುಂತಾದವರನ್ನು ಟ್ಯಾಗ್ ಮಾಡಿ ಈಗ ವಿಸಾ ಅವಧಿ ಮುಗಿಯುವ ಸಮಯದಲ್ಲಿ ತಲೆದೋರಿರುವ ಸಮಸ್ಯೆಗೆ ಪರಿಹಾರ ಹುಡುಕುವಂತೆ ಟ್ವಿಟ್ಟರ್ ನಲ್ಲಿ ಮನವಿ ಮಾಡಿದ್ದಾರೆ.

ಇದೆ ವಿಷಯವಾಗಿ ಟ್ವೀಟ್ ಮಾಡಿರುವ ದೀನ ದಾಸ್ ಎಂಬ ಮಹಿಳೆಯೊಬ್ಬರು, ನಾನು ವೈದ್ಯೆಯಾಗಿ ಕೊರೊನ ಸಾಂಕ್ರಾಮಿಕದ ವಿರುದ್ಧ ನ್ಯೂಯಾರ್ಕ್ ನಲ್ಲಿ ಹೋರಾಟ ಮಾಡುತ್ತಿದ್ದೇನೆ, ನನ್ನಂತಹ ಕುಟುಂಬಗಳಿಗೂ ನೀವು ತೊಂದರೆ ಮಾಡುತ್ತಿದ್ದೀರಿ ಎಂದಿದ್ದಾರೆ.

ಇದು ಭಾರತದ ಐಟಿ ವಲಯದ ಮೇಲೆ ಕೂಡ ಭಾರೀ ಪರಿಣಾಮ ಬೀರಬಹುದೇ?

ಪ್ರತಿ ವರ್ಷ ಸುಮಾರು 2 ಲಕ್ಷಕ್ಕೂ ಹೆಚ್ಚು ಜನರು ಅಮೆರಿಕಾದಲ್ಲಿ ಉದ್ಯೋಗ ಅರಸಿ ವೀಸಾಗಳಿಗೆ ಅರ್ಜಿ ಸಲ್ಲಿಸುತ್ತಾರೆ. ಇದರಲ್ಲಿ ಬಹುತೇಕ ಮಂದಿ ಐಟಿ ವಲಯಕ್ಕೆ ಸೇರಿದವರು. ಟ್ರಂಪ್ ಆಡಳಿತಕ್ಕೆ ಬಂದಾಗಿಲಿಂದಲೂ ಈ ವಲಯಕ್ಕೆ ಸಿಗುವ ವೀಸಾಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. 2019 ರಲ್ಲಿ ವೀಸ ತಿರಸ್ಕಾರದ ದರ ತೀವ್ರವಾಗಿ, ಸುಮಾರು 32% ವೀಸ ಅರ್ಜಿಗಳು ತಿರಸ್ಕೃತವಾಗಿದ್ದವು. ಈಗ ಹೊಸ ನಿರ್ಬಂಧದ ಪ್ರಕಾರ ಈ ಅರ್ಜಿಗಳನ್ನು ಪುರಸ್ಕರಿಸುವುದೇ ಇಲ್ಲ. ಇದರಿಂದ ಐಟಿ ವಲಯಕ್ಕೆ ಭಾರೀ ಹೊಡೆತ ಬೀಳಬಹುದೆಂದು ಅಂದಾಜಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights