ಜಾಗತಿಕ ಹುಲಿ ದಿನ: ವಿಶ್ವದಲ್ಲಿವೆ ಬೆರಳೆಣಿಕೆಯಷ್ಟು ಹುಲಿಗಳು; ಆದರೂ ಭಾರತವೇ ನಂ.1

ಇಂದು (ಜುಲೈ 29 ‘ವಿಶ್ವ ಹುಲಿ ದಿನ’. ಜಗತ್ತಿನಾದ್ಯಂತ ಹುಲಿಗಳನ್ನು ರಕ್ಷಿಸುವ ಉದ್ದೇಶದಿಂದ ಕಳೆದ 11 ವರ್ಷಗಳಿಂದ ಹುಲಿ ದಿನವನ್ನು ಆಚರಿಸಲಾಗುತ್ತಿದೆ. ಈ ದಿನವು ಹುಲಿಗಳ ನೈಸರ್ಗಿಕ ಆವಾಸಸ್ಥಾನಗಳನ್ನು ರಕ್ಷಿಸಲು ಜಾಗತಿಕ ವ್ಯವಸ್ಥೆಯನ್ನು ಉತ್ತೇಜಿಸುವುದು ಮತ್ತು ಹುಲಿ ಸಂರಕ್ಷಣಾ ವಿಷಯಗಳಿಗೆ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಬೆಂಬಲವನ್ನು ನೀಡುವ ಗುರಿಯನ್ನು ಹೊಂದಿದೆ.

ಇಡೀ ಜಗತ್ತಿನಲ್ಲಿ ಕೇವಲ 13 ರಾಷ್ಟ್ರಗಳಲ್ಲಿ ಮಾತ್ರ ಹುಲಿಗಳಿವೆ. ಈ 13 ರಾಷ್ಟ್ರಗಳು 2010ರಲ್ಲಿ ಸೇಂಟ್ ಪೀಟರ್‌ ಬರ್ಗ್‌ನಲ್ಲಿ ಶೃಂಗಸಭೆ ನಡೆಸಿ 2022 ರ ಹೊತ್ತಿಗೆ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಐತಿಹಾಸಿಕ ಬದ್ದತೆಯನ್ನು ಘೋಷಿಸಿದ್ದವು. ಅಂದಿನಿಂದ ಪ್ರತಿ ವರ್ಷ ಜುಲೈ 29 ಅನ್ನು ಜಾಗತಿಕ ಹುಲಿ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಹಿಲಿಗಳ ಸಂರಕ್ಷಣೆಗಾಗಿ ಅರಿವನ್ನು ಮೂಡಿಸಲಾಗುತ್ತಿದೆ.

ಈ ಪ್ರಯತ್ನದಿಂದಾಗಿ ಭಾರತ, ರಷ್ಯಾ ಮತ್ತು ನೇಪಾಳ ಕಾಡಿನಲ್ಲಿರುವ ಜಾಗತಿಕ ಹುಲಿಗಳ ಸಂಖ್ಯೆಯು ಕೆಲವು ವರ್ಷಗಳಿಂದ ಗಮನಾರ್ಹವಾಗಿ ಹೆಚ್ಚಳವಾಗಿದೆ. ಕಳೆದ ಒಂದು ಶತಮಾನದಲ್ಲಿ ಜಗತ್ತಿನಲ್ಲಿ 97% ದಷ್ಟು ಹುಲಿಗಳು ನಾಶವಾಗಿವೆ ಎಂದು ಅಧ್ಯಯನಗಳು ಹೇಳುತ್ತದೆ. ಜಾಗತಿಕವಾಗಿ ಹುಲಿಗಳ ಸಂಖ್ಯೆ ಕಳೆದ ನೂರು ವರ್ಷಗಳಲ್ಲೇ ಇದೆ ಮೊದಲ ಬಾರಿಗೆ ಹೆಚ್ಚಳವಾಗಿದೆ. ಪ್ರಸ್ತುತ ವಿಶ್ವದ ಕಾಡಿನಲ್ಲಿ 3890 ಹುಲಿಗಳಿವೆ ಎಂದು WWF (ವರ್ಲ್ಡ್‌ ವೈಡ್‌ಲೈಫ್‌ ಫಂಡ್) ಹೇಳುತ್ತದೆ. ಅದರಲ್ಲೂ 75% ಅಂದರೆ ಹುಲಿಗಳು ಭಾರತದಲ್ಲಿವೆ ಎಂಬುವುದು ವಿಶೇಷವಾಗಿದೆ.

ಅದಲ್ಲದೆ ಡಬ್ಲ್ಯುಡಬ್ಲ್ಯುಎಫ್ ಪ್ರಕಾರ ಅಮೆರಿಕಾ (ಸುಮಾರು 5000 ದಿಂದ 7000) ದಲ್ಲಿ ಸಾಕು ಹುಲಿಗಳು ಇವೆ ಎನ್ನಲಾಗಿದೆ. ಅಲ್ಲಿ ಕಾಡು ಪ್ರಾಣಿಗಳನ್ನು ಸಾಕದಿರುವಂತೆ ಯಾವುದೆ ಕಾನೂನುಗಳಿಲ್ಲ. ಹುಲಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದಾಗಿದೆ. ಐದು ತಿಂಗಳ ಹುಲಿ ಮರಿಗೆ US $ 14,000 ಬೆಲೆಯನ್ನು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌: ಚಿನ್ನದ ಪದಕ ಗೆದ್ದ ಕುಸ್ತಿಪಟು ಪ್ರಿಯಾ ಮಲಿಕ್!

ಈ ಕುರಿತು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕಾರ್ ಟ್ವೀಟ್‌ ಮಾಡಿ “1973 ರಲ್ಲಿ ಹುಲಿ ಸಂರಕ್ಷಣಾ ಯೋಜನೆ ಆರಂಭಿಸಿದಾಗ ಕೇವಲ 09 ರಷ್ಟಿದ್ದ ಹುಲಿ ಅಭಯಾರಣ್ಯಗಳ ಸಂಖ್ಯೆ ಈಗ 50ಕ್ಕೆ ತಲುಪಿದೆ. ಭಾರತದಲ್ಲಿ 2967 ಹುಲಿಗಳಿವೆ. ಹುಲಿಗಳ ಆಹಾರ ಸರಪಳಿಯ ಉತ್ತುಂಗದಲ್ಲಿದೆ. ಹೆಚ್ಚಿದ ಹುಲಿಗಳಿರುವುದು ದೃಢವಾದ ಜೈವಿಕ-ವೈವಿಧ್ಯತೆಗೆ ಸಾಕ್ಷಿಯಾಗಿದೆ” ಎಂದಿದ್ದಾರೆ.

Tiger - Wikipedia

ಹುಲಿ ದಿನಾಚರಣೆಯ ಬಗ್ಗೆ ಮಾತನಾಡಿದ ವನ್ಯಜೀವಿ ತಜ್ಞ ಅನೂಪ್ ಪ್ರಕಾಶ್, “ಹುಲಿಯು ನಮ್ಮ ಜೈವಿಕ ಪರಿಸರದ ಬಹಳ ಮುಖ್ಯವಾದ ಪ್ರಾಣಿಯಾಗಿದೆ. ಒಂದು ಹುಲಿ ಇರಬೇಕೆಂದರೆ 5 ಚದರ ಕಿ.ಮೀ. ನಿಂದ ಹಿಡಿದು 100 ಚ.ಕಿ.ಮೀ. ಜಾಗ ಬೇಕಾಗುತ್ತದೆ. ಅಂದರೆ ಒಂದು ಹುಲಿ ಚೆನ್ನಾಗಿದೆ ಎಂದರೆ ಅಲ್ಲಿ ಪರಿಸರ ಸಮತೋಲನವಿದೆ, ಅದಿರುವ ವಿಸ್ತಾರವಾದ ಪ್ರದೇಶದ ಅರಣ್ಯ ಚೆನ್ನಾಗಿದೆ, ಅದಕ್ಕೆ ಆಹಾರವಾದ ಜಿಂಕೆ ತರದ ಪ್ರಾಣಿಗಳು, ಅದಕ್ಕೆ ವಾಸಿಸಲು ಯೋಗ್ಯವಾದ ಸ್ಥಳ, ನೀರು ಲಭ್ಯವಿದೆ ಹಾಗೂ ಮನುಷ್ಯರ ಚಲನೆ ಇಲ್ಲವೆಂದರ್ಥ. ಹುಲಿಯನ್ನು ಉಳಿಸಿದರೆ ಇತರ ಪ್ರಭೇದದ ಜೀವಿಗಳನ್ನು ಕೂಡಾ ಉಳಿಸಿದಂತೆ” ಎಂದು ಹೇಳುತ್ತಾರೆ.

ಭಾರತ ಹುಲಿ ಸಂರಕ್ಷಣೆಯಲ್ಲಿ ಜಾಗತಿಕವಾಗಿ ಗುರುತಿಸಿಕೊಂಡರೂ ಕೂಡಾ ಇಲ್ಲಿ ಎಲ್ಲವೂ ಚೆನ್ನಾಗಿಲ್ಲ ಎಂದು ಅನೂಪ್ ಆತಂಕ ವ್ಯಕ್ತಪಡಿಸುತ್ತಾರೆ. “ಅಭಿವೃದ್ದಿಯ ಹೆಸರಲ್ಲಿ ಅರಣ್ಯ ನಾಶ ಹೆಚ್ಚಿದೆ. ಹುಲಿಗಳಿರುವ ಪ್ರದೇಶಗಳಲ್ಲೇ ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತಿದೆ. ನದಿ ತಿರುವು ಎಂದು ಹುಲಿಗಳ ಪ್ರದೇಶಗಳನ್ನು ನಾಶ ಮಾಡಲಾಗುತ್ತದೆ. ಇವೆಲ್ಲವು ನಡೆಯುತ್ತಿರುವ ಸಂಧರ್ಭದಲ್ಲಿ ಸರ್ಕಾರ ಹೆಸರಿಗೆ ಮಾತ್ರ ಹುಲಿ ದಿನವನ್ನಾಗಿ ಆಚರಿಸುವುದನ್ನು ಬಿಟ್ಟು ವಾಸ್ತವವಾಗಿ ಹುಲಿ ಸಂರಕ್ಷಣೆಗೆ ಒತ್ತುಕೊಡಬೇಕು” ಎಂದು ಆಗ್ರಹಿಸಿದ್ದಾರೆ.

ಬಂಗಾಲಿ ಹುಲಿ, ಕ್ಯಾಸ್ಪಿಯನ್ ಹುಲಿ, ಸೈಬೀರಿಯನ್ ಹುಲಿ, ದಕ್ಷಿಣ ಚೀನಾ ಹುಲಿ, ಇಂಡೋಚೈನಿಸ್ ಹುಲಿ, ಮಲಯನ್ ಹುಲಿ, ಜಾವಾ ಹುಲಿ, ಬಾಲಿ ಹುಲಿ, ಸುಮಾತ್ರ ಹುಲಿ ಹೀಗೆ ಹುಲಿಯನ್ನು ಹಲವಾರು ಪ್ರಭೇದಗಳನ್ನಾಗಿ ಗುರುತಿಸಲಾಗಿದೆ.

ಇವುಗಳಲ್ಲಿ ಬಾಲಿ, ಜಾವಾ ಹಾಗೂ ಕ್ಯಾಸ್ಪಿಯನ್ ಹುಲಿ ಪ್ರಬೇಧಗಳು 1980ರ ಹೊತ್ತಿಗೆ ನಿರ್ನಾಮವಾಗಿವೆ ಎನ್ನಲಾಗಿದೆ.

ಇದನ್ನೂ ಓದಿ: ಭಾರತ v/s ಲಂಕಾ: ಟಿ-20 ಮ್ಯಾಚ್‌ನಲ್ಲಿ ಭಾರತಕ್ಕೆ ಭರ್ಜರಿ ಜಯ; ಧೋನಿಯನ್ನು ನೆನಪಿಸಿದ ಇಶಾನ್ ಕಿಶನ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights