‘ಗಾಂಧಿ ಸತ್ತಿರಬಹುದು, ಆದರೆ ಗಾಂಧಿ ತತ್ವಗಳು ಸಾಯುವುದಿಲ್ಲ’ ಸ್ಪೀಕರ್‌ ಮಾರ್ಮಿಕ ಹೇಳಿಕೆ

ಈ ರಾಜ್ಯದ ಜನರ ನೋವಿಗೆ ಗೌರವ ಕೊಡುವುದು ನನ್ನ ಅಂತ್ಯಂತ ಪರಮ ಆದ್ಯ ಕರ್ತವ್ಯ. ಅದರಿಂದ ನಾನು ವಿಮುಖನಾಗುವುದಿಲ್ಲ. ಯಾರನ್ನು ಖುಷಿ ಪಡಿಸಲಿಕ್ಕೆ ಅಥವಾ ಅಸಂತೋಷ ಪಡಿಸಲು, ನೃತ್ಯ ಮಾಡಲು ನಾನು ನೃತ್ಯಗಾತಿ ಅಲ್ಲ. ಸಂವಿಧಾನದಿಂದ ನೇಮಕವಾದ ಪ್ರತಿನಿಧಿ, ಯಾರು ಯಾರ ಮೇಲೆ ಒತ್ತಡ ಹಾಕಿದರು ನನಗೆ ಸಂವಿಧಾನ ಅಷ್ಟೇ… ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ ಶುಕ್ರವಾರ ಬೆಳಗ್ಗೆ ಮಾರ್ಮಿಕ ಹೇಳಿಕೆ ನೀಡಿದ್ದಾರೆ.

ವಿಧಾನಸೌಧದ ಬಳಿ ವಿಧಾನ ಸಭಾ ಅಧಿವೇಶನ ಆರಂಭವಾಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ಇಂದು ಯಾವುದೇ ಹೊಸ ಬೆಳವಣಿಗೆಗಳು ನಡೆದಿಲ್ಲ. ರಾಜೀನಾಮೆ ನೀಡಿದ ಶಾಸಕರ ವಿಚಾರದಲ್ಲಿ  ಸುಪ್ರೀಂ ಕೋರ್ಟ್‌ ಏನು ಹೇಳುತ್ತದೆ ನೋಡೋಣ ಎಂದರು.

ನಿನ್ನೆ ಕ್ರಮ ಬದ್ಧವಾಗಿರದ ರಾಜೀನಾಮೆಗಳನ್ನು ಕೊಡಲು ಬಂದಿದ್ದರು ಸ್ವೀಕರಿಸಿ ವಿಚಾರಣೆಗೆ ಸಮಯ ನಿಗದಿ ಮಾಡಿದ್ದೇನೆ. ದೇಶ ಅಂದ ಮೇಲೆ ಕೋರ್ಟ್‌ ಇರಲೇ ಬೇಕಲ್ಲಾ, ನಮಗೆಲ್ಲರಿಗೂ ಇರುವ ಸುಪ್ರೀಂ ಕೋರ್ಟ್‌ ಅಲ್ವಾ ಎಂದರು.

ಏನು ವ್ಯಾಜ್ಯ, ದೊಡ್ಡ ವಿಚಾರ ಮಾಡಿಕೊಳ್ಳುವುದು ಬೇಡ, ಈ ದೇಶ ಉಳಿಯಬೇಕು, ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಉಳಿಯಬೇಕಲ್ಲಾ ಎಂದರು.

ಪ್ರಶ್ನೆಗೆ ಉತ್ತರಿಸಿದ ಸ್ಪೀಕರ್‌ ರಮೇಶ್‌ ಕುಮಾರ್‌ ನಮ್ಮದು ಗಾಂಧಿ ಕೊಂದ ದೇಶ . ಗಾಂಧೀಜಿಯನ್ನು ಹೇಗೆ ಕೊಂದರು ಎಂದು ಗೊತ್ತಿದೆಯಲ್ಲಾ..ಅವರನ್ನು ಕೊಲ್ಲಲು ಪಿಸ್ತೂಲ್‌ ಬೇಕಿತ್ತಾ? ಒಂದು ದೊಣ್ಣೆ ಸಾಕಿತ್ತು. ನನ್ನ ತೇಜೋವಧೆಗೆ ಪ್ರಯತ್ನಗಳು ನಡೆಯುತ್ತಿವೆ, ಮಾಡಲಿ .ಗಾಂಧಿ ಸತ್ತಿರಬಹುದು , ಆದರೆ ಗಾಂಧಿ ತತ್ವಗಳು ಸಾಯುವುದಿಲ್ಲ. ನಾನು ಗಾಂಧಿ ತತ್ವಗಳಲ್ಲಿ ನಂಬಿಕೆ ಇರಿಸಿಕೊಂಡು ಬಂದವನು ಎಂದರು.

ಹತ್ತು ಅತೃಪ್ತ ಶಾಸಕರು ಹೊಸದಾಗಿ ರಾಜೀನಾಮೆ ಸಲ್ಲಿಸಿದರೂ ಸ್ಪೀಕರ್‌ ಅಂಗೀಕಾರ ಮಾಡಿಲ್ಲ. ಅತೃಪ್ತರ ಅರ್ಜಿ ವಿಚಾರಣೆ ಶುಕ್ರವಾರ ಸುಪ್ರೀಂನಲ್ಲಿ ನಡೆಯಲಿದ್ದು, ಕೋರ್ಟ್‌ ಸೂಚನೆ ಆಧರಿಸಿ ಮುಂದಿನ ಹೆಜ್ಜೆ ಇರಿಸಲು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

 

 

 

Leave a Reply

Your email address will not be published.

Social Media Auto Publish Powered By : XYZScripts.com