ವೇಗವಾಗಿ ಓಡುತ್ತಲೇ ಸ್ಪೀಕರ್‌ ಕೊಠಡಿ ತಲುಪಿದ ಬೈರತಿ ಬಸವರಾಜು…

ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅಸಮಾಧಾನಿತ ಶಾಸಕರ ರಾಜೀನಾಮೆ ಮತ್ತೂಂದು ಹೈಡ್ರಾಮಾಗೆ ಸಾಕ್ಷಿಯಾಯಿತು…!

ಸುಪ್ರೀಂ ಸೂಚನೆಯಂತೆ ಸಂಜೆ 6 ಗಂಟೆಯೊಳಗೆ ರಾಜೀನಾಮೆ ಸಲ್ಲಿಸಲು, ಮುಂಬೈನಿಂದ ಮಧ್ಯಾಹ್ನವೇ ಅತೃಪ್ತ ಶಾಸಕರು ಹೊರಟರಾದರೂ, ಬೆಂಗಳೂರಿಗೆ ಬಂದು ಸೇರುವ ಹೊತ್ತಿಗೆ ತೀರಾ ತಡವಾಗಿತ್ತು.

ಅತೃಪ್ತ ಶಾಸಕರಿದ್ದ ವಾಹನ ವಿಧಾನಸೌಧಕ್ಕೆ ಬರುವ ಹೊತ್ತಿಗೆ ಗಂಟೆ 6.03 ಕಳೆದಿತ್ತು. ವಾಹನ ಇಳಿಯುತ್ತಿದ್ದಂತೆ ಮೊದಲಿಗರಾಗಿ ಬೈರತಿ ಬಸವರಾಜು ಅವರು ಓಡುತ್ತಲೇ ಮೊದಲ ಮಹಡಿ ಏರಿದರು. ಅಲ್ಲೂ ಮತ್ತಷ್ಟು ವೇಗವಾಗಿ ಸ್ಪೀಕರ್‌ ಕೊಠಡಿಯತ್ತ ಓಡಲಾರಂಭಿಸಿದರು. ಅವರ ಹಿಂದೆಯೇ ಪೊಲೀಸರು ಓಡಿದರು. ಕ್ಷಣಮಾತ್ರದಲ್ಲಿ ಬಸವರಾಜು ಸ್ಪೀಕರ್‌ ಕಚೇರಿ ಪ್ರವೇಶಿಸಿದರು.

ಅವರ ಹಿಂದೆ ಅವಸರದಿಂದಲೇ ದೌಡಾಯಿಸದ ರಮೇಶ್‌ ಜಾರಕಿಹೊಳಿ, ಬಿ.ಸಿ.ಪಾಟೀಲ್, ಶಿವರಾಮ ಹೆಬ್ಟಾರ್‌ ಸ್ಪೀಕರ್‌ ಕಚೇರಿ ಒಳಗೆ ಹೋದರು. ಅವರ ಬೆನ್ನ ಹಿಂದೆಯೇ ಎಸ್‌.ಟಿ.ಸೋಮಶೇಖರ್‌, ನಾರಾಯಣಗೌಡ, ಕೆ.ಗೋಪಾಲಯ್ಯ ಏದುಸಿರು ಬಿಡುತ್ತಲೇ ಸ್ಪೀಕರ್‌ ಕಚೇರಿ ಪ್ರವೇಶಿಸಿದರು. ಎಚ್.ವಿಶ್ವನಾಥ್‌, ಪ್ರತಾಪಗೌಡ ಪಾಟೀಲ್, ಮಹೇಶ್‌ ಕುಮಟಳ್ಳಿ ಅವರು ನಿಧಾನವಾಗಿ ಹೆಜ್ಜೆ ಇಡುತ್ತಲೇ ಸ್ಪೀಕರ್‌ ಕೊಠಡಿ ಸೇರಿದರು. ಶಾಸಕ ಮುನಿರತ್ನ ಸುಪ್ರೀಂ ಮೊರೆ ಹೋಗದಿದ್ದರೂ ಶಾಸಕರೊಂದಿಗೆ ಸ್ಪೀಕರ್‌ ಕಚೇರಿಗೆ ತೆರಳಿದರು.

ಸಂಜೆ 6.55ರ ಹೊತ್ತಿಗೆ ಅತೃಪ್ತ ಶಾಸಕರು ಕಚೇರಿ ಯಿಂದ ಹೊರ ಬರಲಾಂಭಿಸಿದರು. ಯಾರೊಂದಿಗೂ ಮಾತನಾಡದೇ ಬಂದ ವೇಗದಲ್ಲೇ ಮಿನಿ ಬಸ್‌ ಏರಿದರು. ಸುಮಾರು 7.04ರ ಹೊತ್ತಿಗೆ ಪೊಲೀಸ್‌ ಭದ್ರತೆಯಲ್ಲೇ ಶಾಸಕರಿದ್ದ ಮಿನಿಬಸ್‌ ವಿಧಾನಸೌಧದಿಂದ ಹೊರಟಿತು. ಬಿಗಿ ಭದ್ರತೆಯಲ್ಲಿ ಕಬ್ಬನ್‌ ರಸ್ತೆ, ಟ್ರಿನಿಟಿ ವೃತ್ತ, ಹಳೇ ವಿಮಾನನಿಲ್ದಾಣ ರಸ್ತೆ ಮಾರ್ಗವಾಗಿ 7.30ರ ವೇಳೆಗೆ ಎಚ್ಎಎಲ್ ವಿಮಾನನಿಲ್ದಾಣ ತಲುಪಿದರು. ನಂತರ ವಿಶೇಷ ವಿಮಾನದಲ್ಲಿ ಶಾಸಕರು ಮುಂಬೈನತ್ತ ಪ್ರಯಾಣ ಬೆಳೆಸಿದರು. ವಿಶೇಷವೆಂದರೆ ಇಡೀ ಪ್ರಕ್ರಿಯೆ ಎರಡೂಕಾಲು ಗಂಟೆಯಲ್ಲಿ ಅಂತ್ಯವಾಯಿತು. 5.15ಕ್ಕೆ ಬೆಂಗಳೂರಿಗೆ ಬಂದವರು, 7.30ಕ್ಕೆ ವಾಪಸ್‌ ಆದರು.

ಶಾಸಕರನ್ನು ಸಿಗ್ನಲ್ ಮುಕ್ತ ಸಂಚಾರ ವ್ಯವಸ್ಥೆಯಲ್ಲಿ ವಿಧಾನಸೌಧದ ಗೋಪಾಲಗೌಡ ಗೇಟ್ ಮೂಲಕ ಕರೆದೊಯ್ಯಲಾಯಿತು. ಶಾಸಕರಿದ್ದ ವಾಹನದ ಹಿಂದೆ, ಮುಂದೆ ನಿಗದಿತ ಅಂತರದಲ್ಲಿ ನಾಲ್ಕು ಕಡೆ ಪೊಲೀಸ್‌ ವಾಹನಗಳು ಭದ್ರತೆ ಒದಗಿಸಿದ್ದವು. ಸಾರ್ವಜನಿಕ ವಾಹನಗಳ ನಡುವೆಯೇ ಶಾಸಕರನ್ನು ಸಿಗ್ನಲ್ ಮುಕ್ತ ವ್ಯವಸ್ಥೆಯಲ್ಲಿ ವಿಧಾನಸೌಧಕ್ಕೆ ಕರೆತರಲಾಯಿತು.

 

 

 

Leave a Reply

Your email address will not be published.

Social Media Auto Publish Powered By : XYZScripts.com