ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಜಯ : ಪಾಕ್ ಸೆಮಿಫೈನಲ್ ಕನಸು ಭಗ್ನ

ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಜಯಗಳಿಸುತ್ತಿದ್ದಂತೆ ಪಾಕಿಸ್ತಾನದ ಸೆಮಿಫೈನಲ್ ಪ್ರವೇಶದ ಕನಸು ಭಗ್ನಗೊಂಡಿದೆ.

ಬುಧವಾರದ ಪಂದ್ಯದಲ್ಲಿ ಒಂದು ವೇಳೆ ಇಂಗ್ಲೆಂಡ್ ಸೋತು, ಶುಕ್ರವಾರ ನಡೆಯಲಿರುವ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಜಯಗಳಿಸಿದರೆ ಪಾಕ್ ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಬಹುದಿತ್ತು. ಆದರೆ ಈ ಪಂದ್ಯವನ್ನು 119 ರನ್ ಗಳಿಂದ ಇಂಗ್ಲೆಂಡ್ ಜಯಗಳಿಸಿದ ಪರಿಣಾಮ ಪಾಕ್ ಈಗ ಟೂರ್ನಿಯಿಂದಲೇ ನಿರ್ಗಮಿಸಿದೆ. ಆದರೂ ಒಂದು ವೇಳೆ ಪವಾಡ ಏನಾದರೂ ನಡೆದು ಬಾಂಗ್ಲಾ ತಂಡವನ್ನು ಭಾರೀ ಅಂತರದಿಂದ ಸೋಲಿಸಿದರೆ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆಯಿದೆ.

ಆಸ್ಟ್ರೇಲಿಯಾ, ಭಾರತ, ಇಂಗ್ಲೆಂಡ್ ತಂಡಗಳು ಕ್ರಮವಾಗಿ 14, 13, 12 ಅಂಕಗಳನ್ನು ಪಡೆದು ಸೆಮಿಫೈನಲ್ ಪ್ರವೇಶಿಸಿದ್ದರೆ ನ್ಯೂಜಿಲೆಂಡ್ 11 ಅಂಕಗಳಿಸಿದೆ. ಪಾಕಿಸ್ತಾನ 9 ಅಂಕ ಗಳಿಸಿ 5ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ತಾನು ಆಡಿದ ಎಲ್ಲ 9 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು, 3ರಲ್ಲಿ ಸೋತು, ಒಂದು ಪಂದ್ಯ ಮಳೆಯಿಂದ ರದ್ದಾದ ಪರಿಣಾಮ +0.175 ರನ್ ರೇಟ್‍ನೊಂದಿಗೆ 11 ಅಂಕ ಸಂಪಾದಿಸಿದೆ. ಇತ್ತ ಪಾಕಿಸ್ತಾನ 8 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 3ರಲ್ಲಿ ಸೋತು, ಒಂದು ಪಂದ್ಯ ಮಳೆಯಿಂದ ರದ್ದಾದ ಪರಿಣಾಮ -0.792 ರನ್ ರೇಟ್‍ನೊಂದಿಗೆ 9 ಅಂಕ ಗಳಿಸಿದೆ.

ನಾಳಿನ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ  11 ಅಂಕಗಳಿಸುತ್ತದೆ. ಎರಡು ತಂಡಗಳು ಅಂಕಗಳು ಸಮವಾಗಿದ್ದಾಗ ರನ್‍ರೇಟ್ ಲೆಕ್ಕಾಚಾರ ಮಾಡಲಾಗುತ್ತದೆ. ಒಂದೇ ಪಂದ್ಯದಲ್ಲಿ ನ್ಯೂಜಿಲೆಂಡಿನ ರನ್ ರೇಟ್‍ಗಿಂತಲೂ ಉತ್ತಮ ರನ್ ರೇಟ್ ಹೊಂದಬೇಕಾದರೆ ಪಾಕಿಸ್ತಾನ ಪವಾಡವೇ ನಡೆಸಬೇಕು. ಮೇಲೆ ನೀಡಲಾಗಿರುವ ಲೆಕ್ಕಾಚಾರಗಳು ಓದಲು ಚೆನ್ನಾಗಿದೆಯೋ ಹೊರತು ಅಂಗಳದಲ್ಲಿ ಜಾರಿಯಾಗುವುದು ಅಸಾಧ್ಯ. ಈ ಪವಾಡ ನಡೆಯಲು ಸಾಧ್ಯವಿಲ್ಲದ ಕಾರಣ ಪಾಕಿಸ್ತಾನ ಈಗ ಟೂರ್ನಿಯಿಂದಲೇ ಹೊರ ನಡೆದಿದೆ.

Leave a Reply

Your email address will not be published.

Social Media Auto Publish Powered By : XYZScripts.com