cricket world cup : ಬ್ರಾಥ್ ವೈಟ್ ಹೋರಾಟ ವ್ಯರ್ಥ, ನ್ಯೂಜಿಲೆಂಡ್ ಅಜೇಯ ಒಟ..

ಭರವಸೆಯ ಆಟಗಾರ ಕಾರ್ಲೂಸ್ ಬ್ರಾಥ್ ವೈಟ್ ಆಲ್ ರೌಂಡರ್ ಪ್ರದರ್ಶನ ನೀಡಿದರೂ, ತಂಡಕ್ಕೆ ಗೆಲುವಿನ ಮಾಲೆ ತೊಡುವಿಸುವಲ್ಲಿ ವಿಫಲರಾಗಿದ್ದು, ವೆಸ್ಟ್ ಇಂಡೀಸ್ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 5 ರನ್ ಗಳ ವಿರೋಚಿತ ಸೋಲು ಕಂಡಿದೆ.
ಸ್ಪರ್ಧಾತ್ಮಕ ಗುರಿಯನ್ನು ಹಿಂಬಾಲಿಸಿದ ವಿಂಡಿಸ್ ತಂಡದ ಆರಂಭಿಕ ಕ್ರಿಸ್ ಗೈಲ್ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 84 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್ ನೆರವಿನಿಂದ 87 ರನ್ ಬಾರಿಸಿ ತಂಡಕ್ಕೆ ಆದಾರವಾದರು. ಮಧ್ಯಮ ಕ್ರಮಾಂಕದಲ್ಲಿ ಶಿಮ್ರೋನ್ ಹೆಟ್ಮಾಯರ್ 45 ಎಸೆತಗಳಲ್ಲಿ 54 ರನ್ ಬಾರಿಸಿ ಮಿಂಚಿದರು.
ಮಧ್ಯಮ ಕ್ರಮಾಂಕದಲ್ಲಿ ಕಾರ್ಲೂಸ್ ಬ್ರಾಥ್ ವೈಟ್ ಭರ್ಜರಿ ಪ್ರದರ್ಶನ ನೀಡಿದರು. 82 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ 101 ಬಾರಿಸಿ ಆರ್ಭಟಿಸಿದರು.
ಕೊನೆಯ ವರೆಗೂ ಕೆಚ್ಚೆದೆಯ ಬ್ಯಾಟಿಂಗ್ ಮಾಡಿದ ಕಾರ್ಲೂಸ್, ಇಲ್ಲದ ರನ್ ಕದಿಯಲು ಹೋಗಿ ಔಟಾದರು. ಈ ಮೂಲಕ ವಿಂಡೀಸ್ ತಂಡದ ಗೆಲುವಿನ ಆಸೆ ನುಚ್ಚು ನೂರಾಯಿತು. ಕಿವೀಸ್ ಪರ ಟ್ರೆಂಟ್ ಬೌಲ್ಟ್ 4, ಲೂಕಿ ಫಾರ್ಗ್ಯುಸನ್ 3 ವಿಕೆಟ್ ಕಬಳಿಸಿದರು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಮಾರ್ಟಿನ್ ಗುಪ್ಟಿಲ್ ಹಾಗೂ ಕಾಲಿನ್ ಮುನ್ರೊ ಖಾತೆ ತೆರೆಯುವ ಮುನ್ನವೆ ಕೊಟ್ರೆಲ್ ಗೆ ವಿಕೆಟ್ ಒಪ್ಪಿಸಿದರು.
7 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಅನುಭವಿ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಚೇತರಿಕೆ ನೀಡುವ ಸೂಚನೆ ನೀಡಿದರು. ಈ ಜೋಡಿ 203 ಜೋಡಿ ಎದುರಿಸಿ 160 ರನ್ ಕಲೆ ಹಾಕಿತು. ಉತ್ತಮವಾಗಿ ಬ್ಯಾಟ್ ಮಾಡುತ್ತಾ ಇದ್ದ ರಾಸ್ ಟೇಲರ್ 95 ಎಸೆತಗಳಲ್ಲಿ 69 ರನ್ ಬಾರಿಸಿ, ಕ್ರಿಸ್ ಗೇಲ್ ತೋಡಿದ ಖೆಡ್ಡಾಗೆ ಬಲಿಯಾದರು.
ಕೇನ್ ಹಾಗೂ ಟಾಮ್ ಲಾಥಮ್ (12) ಜೋಡಿ 43 ರನ್ ಗಳ ಜೊತೆಯಾಟದ ಕಾಣಿಕೆ ನೀಡಿತು.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದ ಕೇನ್ ವಿಲಿಯಮ್ಸನ್ ತಮ್ಮ ಲಯವನ್ನು ಮುಂದುವರೆಸಿದರು.  ಇವರು 154 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್ ಸೇರಿದಂತೆ 148 ರನ್ ಬಾರಿಸಿ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು.
ಅಂತಿಮವಾಗಿ ನ್ಯೂಜಿಲೆಂಡ್ 50 ಓವರ್ ಗಳಲ್ಲಿ 8 ವಿಕೆಟ್ ಗೆ 291 ರನ್ ಕಲೆ ಹಾಕಿದೆ. ವಿಂಡೀಸ್ ಪರ ಶೆಲ್ಡೋನ್ ಕಾಟ್ರೆಲ್ 56 ರನ್ ನೀಡಿ ನಾಲ್ಕು ವಿಕೆಟ್ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com