ಇನ್ಮುಂದೆ ಪ್ರತಿ ವರ್ಷ ಮೇ.12ಕ್ಕೆ ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಡೇ ಆಚರಣೆ..!

ಬಾಲಿವುಡ್ ಹಾಗೂ ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ನಾರ್ತ್ ಕ್ಯಾರೋಲಿನಾದ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದಾರೆ. ಇನ್ಮುಂದೆ ನಾರ್ತ್ ಕ್ಯಾರೋಲಿನಾದಲ್ಲಿ ಪ್ರತಿ ವರ್ಷ ಮೇ. 12 ವಿಜಯ್ ಪ್ರಕಾಶ್ ಡೇಯನ್ನಾಗಿ ಆಚರಿಸಲಾಗುತ್ತದೆ.

ಇತ್ತೀಚೆಗಷ್ಟೇ ಅಮೆರಿಕಾ ಪ್ರವಾಸದಲ್ಲಿದ್ದ ವಿಜಯ್ ಪ್ರಕಾಶ್ ಇಲ್ಲಿನ ಶಾರ್ಲೆಟ್ ನಲ್ಲಿ ಸಂಗೀತ ಕಾರ್ಯಕ್ರಮವೊಂದನ್ನು ನೀಡಿದ್ದರು. ವಿಜಯ್ ಪ್ರಕಾಶ್ ಹಾಡು ಕೇಳಲು ಜನಸಾಗರವೇ ಹರಿದು ಬಂದಿತ್ತು. ಈ ವೇಳೆ ತಮ್ಮ ಕಂಚಿನ ಕಂಠದಿಂದ ವಿಜಯ್ ಪ್ರಕಾಶ್ ಸಂಗೀತದ ಅಲೆಯನ್ನೇ ಎಬ್ಬಿಸಿದ್ದರು. ಹೀಗಿರುವಾಗ ವಿಜಯ್ ಪ್ರಕಾಶ್ ಹಾಡಿನ ನಾದಕ್ಕೆ ಮಾರುಹೋದವರಲ್ಲಿ ನಾರ್ತ್ ಕ್ಯಾರೋಲಿನಾದ ಮೇಯರ್ ವಿಲಿಯಂ ಡಿ ಡಶ್ ಕೂಡಾ ಒಬ್ಬರು.

ವಿಜಯ್ ಪ್ರಕಾಶ್ ಅದ್ಭುತ ಗಾಯನದಿಂದ ಪ್ರಭಾವಿತರಾದ ಮೇಯರ್ ವಿಲಿಯಂ ಡಿ ಡಶ್, ಕಾರ್ಯಕ್ರಮ ಮುಗಿಯುತ್ತಿದ್ದಂತೆ ಇನ್ಮುಂದೆ ಪ್ರತಿ ವರ್ಷ ಮೇ.12ನ್ನು ವಿಜಯ್ ಪ್ರಕಾಶ್ ಡೇಯನ್ನಾಗಿ ಆಚರಿಸುವುದಾಗಿ ಘೋಷಿಸಿದ್ದಾರೆ. ಕಾರ್ಯಕ್ರಮದಲ್ಲಿ ವಿಜಯ್ ಪ್ರಕಾಶ್ ಹಾಡಿದ ‘ನಟಸಾರ್ವಭೌಮ’ ಚಿತ್ರದ ಒಪನ್ ದಿ ಬಾಟಲ್, ಏತಕೆ ಮೊದಲಾದ ಹಾಡುಗಳಿಗೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದ ದೃಶ್ಯ ಕಂಡು ಮೇಯರ್ ಅತ್ಯಂತ ಖುಷಿಪಟ್ಟಿದ್ದಾರೆ.

5000ಕ್ಕೂ ಅಧಿಕ ಹಾಡುಗಳಿಗೆ ಹಿನ್ನೆಲೆ ಗಾಯನ ಮಾಡಿರುವ ವಿಜಯ್ ಪ್ರಕಾಶ್ ಕಂಠಸಿರಿ ಮೋಡಿಗೊಳಗಾಗದವರಿಲ್ಲ. ಆಸ್ಕರ್ ವಿಜೇತ ಸಿನಿಮಾ ಸ್ಲಂಡಾಗ್ ಮಿಲಿಯನೇರ್ ಸಿನಿಮಾದ, ಗ್ರಾಮಿ ಹಾಗೂ ಅಕಾಡೆಮಿ ಪ್ರಶಸ್ತಿ ಬಾಚಿದ ‘ಜೈ-ಹೋ’ ಹಾಡಿಗೂ ವಿಜಯ್ ಪ್ರಕಾಶ್ ಧ್ವನಿಯಾಗಿದ್ದರು. ಈ ಹಾಡು ವಿಶ್ವದಾದ್ಯಂತ ಕ್ರೇಜ್ ಹುಟ್ಟಿಸಿತ್ತು. ಇತ್ತೀಚೆಗಷ್ಟೇ ತೆರೆ ಕಂಡ ರಾಜಕುಮಾರ ಸಿನಿಮಾದ ಬೊಂಬೆ ಹೇಳುತೈತೆ, ಕಿರಿಕ್ ಪಾರ್ಟಿಯ ಬೆಳಗೆದ್ದು ಯಾರ ಮುಖವಾ, ಖಾಲಿ ಕ್ವಾರ್ಟರ್ ಬಾಟಲ್ ಮೊದಲಾದ ಹಾಡುಗಳ ಮೂಲಕ ವಿಜಯ್ ಪ್ರಕಾಶ್ ಕನ್ನಡಿಗರ ಹೃದಯ ಕದ್ದಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com