State Congress : ದಿಢೀರ್ ದಿಲ್ಲಿಗೆ ಹಾರಿದ ಮಾಜಿ ಸಿಎಂ ಸಿದ್ದರಾಮಯ್ಯ? ಬದಲಾವಣೆ ಸನ್ನಿಹಿತ..

ದೋಸ್ತಿ ವಿಷಯವೂ ಸೇರಿದಂತೆ ರಾಜ್ಯ ಕಾಂಗ್ರೆಸ್‌ನಲ್ಲಿ ಅತೃಪ್ತಿ, ಗೊಂದಲದ ಹೊಗೆ ದಟ್ಟವಾಗಿದ್ದು ಅದನ್ನು ನಿವಾರಿಸಲು ಹೈಕಮಾಂಡ್ ಮುಂದಾಗಿದೆಯೇ? ಆ ನಿಟ್ಟಿನಲ್ಲಿ ಪ್ರಮುಖ ನಾಯಕರ ಜೊತೆ ಸಮಾಲೋಚನೆ ನಡೆಸುತ್ತಿದೆಯೇ ಎಂಬ ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿ ಬಹು ಚರ್ಚಿತವಾಗುತ್ತಿದೆ.

ಕಳೆದ ವಾರ ಮಲ್ಲಿಕಾರ್ಜುನ ಖರ್ಗೆ ದಿಲ್ಲಿ ಭೇಟಿ (ಹಿರಿಯ ಮುಖಂಡರ ಸಭೆಯ ನೆಪ) ನಂತರ ಈಗ ಸಿಎಲ್ಪಿ ಮುಖಂಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ದಿಢೀರೆಂದು ದಿಲ್ಲಿಗೆ ತೆರಳಿದ್ದಾರೆ ಎಂಬ ವರದಿಗಳು ಈ ಊಹಾಪೋಹಕ್ಕೆ ಪುಷ್ಟಿ ನೀಡಿವೆ.

ಸಿದ್ದರಾಮಯ್ಯ ಅವರ ರಹಸ್ಯ ದಿಲ್ಲಿ ಭೇಟಿ (?) ಹಿಂದೆ ರಾಜ್ಯ ಕಾಂಗ್ರೆಸ್‌ಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ವಿಸ್ತೃತ ಮಾತುಕತೆಯ ಉದ್ದೇಶ ಅಡಗಿದೆಯೇ ಎಂಬ ವಿಚಾರವೂ ಇದೆ. ಈ ಭೇಟಿ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಅಹ್ಮದ್ ಪಟೇಲ್ ಹಾಗೂ ಸಾಧ್ಯವಾದರೇ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಬಹುದು ಎನ್ನಲಾಗಿದೆ.

ವಾರದ ಹಿಂದೆ ಮಾಜಿ ಪ್ರಧಾನಿ ದೇವೇಗೌಡರು ದಿಲ್ಲಿಗೆ ತೆರಳಿ ಕಾಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯದ ಆಗುಹೋಗುಗಳ ಬಗ್ಗೆ ಹಾಗೂ ದೋಸ್ತಿ ಸರಕಾರದ ಸುಭದ್ರತೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅರುಹಿದ್ದರು.

ರಾಹುಲ್-ಗೌಡರ ಭೇಟಿ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿ ಬದಲಾವಣೆಯ ಗಾಳಿ ಬೀಸುವ ವರದಿ, ವದಂತಿಗಳು ದಟ್ಟವಾಗಿವೆ. ಕೆಪಿಸಿಸಿ ಅಧ್ಯಕ್ಷತೆ, ಸಿಎಲ್ಪಿ ನಾಯಕತ್ವ ಹಾಗೂ ಸಮನ್ವಯ ಸಮಿತಿ ಮುಖ್ಯಸ್ಥರ ಬದಲಾವಣೆಯ ಮಾತು ಕೇಳಿಬರುತ್ತಿದೆ.

ರಾಜ್ಯ ಕಾಂಗ್ರೆಸ್ ನೊಗವನ್ನು ಸಿದ್ದರಾಮಯ್ಯ ಅವರ ಕೈಗಿತ್ತು ಅವರ ಸ್ಥಾನದಲ್ಲಿ ಸಮನ್ವಯ ಸಮಿತಿಗೆ ಖರ್ಗೆ ಅವರನ್ನು ತಂದು ಸಿಎಲ್ಪಿಗೆ ಶಿವಕುಮಾರ್ ಅವರನ್ನು ನಾಯಕರನ್ನಾಗಿ ಮಾಡುವ ಸಾಧ್ಯತೆ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ.  ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ದಿಲ್ಲಿ ಭೇಟಿ ಈ ಅಂತೆಕಂತೆಗಳಿಗೆ ಸಾಧ್ಯಾಸಾಧ್ಯತೆಗಳ ರೆಕ್ಕೆಪುಕ್ಕ ಜೋಡಿಸಿವೆ ಎಂದೇ ಹೇಳಬಹುದಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com