Modi 2.0 : ಶಿಕ್ಷಣ ಸಂಸ್ಥೆಗಳಲ್ಲಿನ ಸಾಮಾಜಿಕ ತಾರತಮ್ಯ- ಮತ್ತೊಬ್ಬ ದಲಿತರ ಸಾಂಸ್ಥಿಕ ಹತ್ಯೆ..

ಮುಂಬೈನ ಬಿವೈಎಲ್ ನಾಯರ್ ಆಸ್ಪತ್ರೆಯಲ್ಲಿ  ವೈದ್ಯಳಾಗಿದ್ದ ಡಾ. ಪಾಯಲ್ ತಾದ್ವಿಯವರ ಸಾವು ಮೆಡಿಕಲ್ ಕಾಲೇಜುಗಳಲ್ಲಿ ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ತಾರತಮ್ಯ ಮತ್ತು ಜಾತೀಯತೆಗಳ ಅಮಾನವೀಯ ಸ್ವರೂಪಗಳನ್ನು ಮತ್ತೊಮ್ಮೆ ಬಯಲಿಗೆ ತಂದಿದೆ. ತಾದ್ವಿಯವರು ಪರಿಶಿಷ್ಟ ಪಂಗಡ (ಎಸ್‌ಟಿ) ಎಂದು ಪರಿಗಣಿಸಲ್ಪಟ್ಟ ಮುಸ್ಲಿಂ ಸಮುದಾಯದ ಭಿಲ್ ಪಂಗಡಕ್ಕೆ ಸೇರಿದವರಾಗಿದ್ದರು. ವರದಿಗಳ ಪ್ರಕಾರ ಬಿವೈಎಲ್ ನಾಯರ್ ಆಸ್ಪತ್ರೆಗೆ ಸೇರಿದ ಟೋಪಿವಾಲಾ ನ್ಯಾಷನಲ್ ಮೆಡಿಕಲ್ ಕಾಲೇಜಿನ ಮೂವರು ಹಿರಿಯ ವೈದ್ಯರಿಂದ ಸತತ ಕಿರುಕುಳಕ್ಕೆ ಗುರಿಯಾಗಿದ್ದರಿಂದಲೇ ತಾದ್ವಿಯವರು ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದಾರೆ. ಆಕೆಯನ್ನು ಹಿರಿಯ ವೈದ್ಯರು ಜಾತಿನಿಂದೆಗೆ ಗುರಿ ಮಾಡುತ್ತಿರುವ ಬಗ್ಗೆ ಮತ್ತು ವಿನಾಕಾರಣ ಛೀಮಾರಿ ಹಾಕುತ್ತಾ ಅಪಮಾನಿಸುತ್ತಿರುವ ಬಗ್ಗೆ ತಾದ್ವಿಯ ಕುಟುಂಬದವರು ಆಸ್ಪತೆಯ ಆಡಳಿತವರ್ಗಕ್ಕೆ ಔಪಚಾರಿಕವಾಗಿ ದೂರನ್ನು ನೀಡಿದ್ದರೂ ಸಹ ಏನೂ ಪ್ರಯೋಜನವಾಗಿರಲಿಲ್ಲ.

ತಾದ್ವಿಯ ಮರಣಾನಂತರದಲ್ಲೇ ಆಡಳಿತ ಯಂತ್ರವು ಚುರುಕುಗೊಂಡು ಆ ಮೂವರು ಹಿರಿಯ ವೈದ್ಯರನ್ನೂ ಮತ್ತು ಆ ಘಟಕದ ಮುಖ್ಯಸ್ಥರನ್ನೂ ಅಮಾನತ್ತು ಮಾಡಿತು ಮತ್ತು ಸಂಸ್ಥೆಯ ರ್‍ಯಾಗಿಂಗ್ ವಿರೋಧಿ ಘಟಕವು ತನಿಖೆಯನ್ನೂ ಪ್ರಾರಂಭಿಸಿತು. ಆಕೆಯ ಸಾವಿನ ಒಂದು ವಾರದ ನಂತರ ತನಿಖಾ ಸಮಿತಿಯು ತಾದ್ವಿಯವರು ತೀವ್ರತರವಾದ ಕಿರುಕುಳಗುರಿಯಾಗಿದ್ದರೆಂದೂ,  ಎಸ್‌ಟಿ ಪಂಗಡಕ್ಕೆ ಸೇರಿದ್ದರಿಂದ ಜಾತಿ ನಿಂದನೆಗೆ  ಮತ್ತು ಎಸ್‌ಸಿ-ಎಸ್‌ಟಿ ಕೋಟಾದಲ್ಲಿ ಮೆಡಿಕಲ್ ಸೀಟು ಪಡೆದುಕೊಂಡಿದ್ದಕ್ಕೆ ಅವಹೇಳನಕ್ಕೆ ಗುರಿಯಾಗುತ್ತಿದ್ದನ್ನು ಪತ್ತೆ ಹಚ್ಚಿದೆ. ತಾದ್ವಿಯ ಸಾವಿನ ನಂತರದಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯಗಳಿಗೆ ಸೇರದ ಹಲವಾರು ವೈದ್ಯರು ತಾವು ವೈದ್ಯಕೀಯ ಕಾಲೇಜಿನಲ್ಲಿದ್ದಾಗ ಹೇಗೆ ಇದೇ ಬಗೆಯ ಕಿರುಕುಳಕ್ಕೆ ಗುರಿಯಾಗಿದ್ದೆವೆಂದು ಹೇಳಿಕೊಳ್ಳಲು ಮುಂದೆಬರುತ್ತಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳಿಂದ ವಿಚಲಿತರಾಗಿರುವ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ)ದ ಪ್ರತಿನಿಧಿಗಳು ಇಡೀ ವೈದ್ಯಕೀಯ ಕ್ಷೇತ್ರದಲ್ಲಿ ಜಾತಿ ಆಧಾರಿತ ತಾರತಮ್ಯಗಳು ಇರಲು ಸಾಧ್ಯವಿಲ್ಲವೆಂದೂ ಅಥವಾ ಇರಬಹುದಾದ ಜಾತಿ ಆಧಾರಿತ ತಾರತಮ್ಯಗಳು ತಮ್ಮ ಗಮನವನ್ನು ಕೇಳುವಷ್ಟು ದೊಡ್ಡಮಟ್ಟದಲ್ಲಿ ಇಲ್ಲವೆಂದೂ ವಾದಿಸುತ್ತಿದ್ದಾರೆ. ಆದರೆ ವಾಸ್ತವವಾಗಿ, ವೈದ್ಯಕೀಯ ಕಾಲೇಜುಗಳಲ್ಲಿ ಮತ್ತು ಅಪಾರ ಶೈಕ್ಷಣಿಕ ಒತ್ತಡದ ಪರಿಸರಗಳಿರುವ ದೇಶದ ಇನ್ನಿತರ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯಗಳು ಮತ್ತು ಮೇಲ್ಜಾತಿಗೆ ಸೇರಿದ ವಿದ್ಯಾರ್ಥಿಗಳ ಮತ್ತು ಸಿಬ್ಬಂದಿಗಳ ಅಸಹನೆಗಳು ಸಾರ್ವತ್ರಿಕವಾಗಿ ಅಸ್ಥಿತ್ವದಲ್ಲಿದೆ. ದೇಶದ ಅತ್ಯಂತ ಪ್ರತಿಷ್ಟಿತ ವೈದ್ಯಕೀಯ ಸಂಸ್ಥೆಯಾದ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಪ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್)ನಲ್ಲಿ ಕೂಡ ಎಷ್ಟು ವ್ಯಾಪಕವಾಗಿ ಮತ್ತು ವಿವಿಧ ರೀತಿಗಳಲ್ಲಿ ಜಾತಿ ಆಧಾರಿತ ತಾರತಮ್ಯಗಳನ್ನು ಮಾಡಲಾಗುತ್ತದೆ ಎಂಬುದನ್ನು ೨೦೦೭ರಲ್ಲಿ ಥೋರಟ್ ಸಮಿತಿಯ ವರದಿಯು ತೋರಿಸಿಕೊಟ್ಟಿದೆ. ಆ ವರದಿಯು ಹೊರಬಂದು ಹತ್ತು ವರ್ಷಕ್ಕೂ ಹೆಚ್ಚು ಸಮಯವಾಗಿದ್ದರೂ ಅದರಿಂದ ನಾವೇನು ಕಲಿತಿಲ್ಲವೆಂಬುದನ್ನು ತಾದ್ವಿಯವರ ಸಾವು ಸೂಚಿಸುತ್ತದೆ.

ಈ ಉನ್ನತ ಸಂಸ್ಥೆಗಳೊಳಗಿನ ಅಧಿಕಾರದ ರಚನೆ ಮತ್ತು ಅಧಿಕಾರದ ಕೇಂದ್ರೀಕರಣಗಳು ಹಾಗೂ ಅದರ ಕಾರ್ಯವಿಧಾನಗಳು ಸಹ ಸಾಂಸ್ಥಿಕ ಉದಾಸೀನದ ಮತ್ತೊಂದು ಮುಖವಾಗಿದೆ. ಅದು ಹಿರಿಯ ವಿದ್ಯಾರ್ಥಿಗಳು ನಡೆಸುವ ರ್‍ಯಾಗಿಂಗ್ ಮತ್ತು ಉದ್ದೇಶಪೂರ್ವಕ ಕಿರುಕುಳಗಳಿಗೆ ಅವಕಾಶ ಮಾಡಿಕೊಡುವುದು ಮಾತ್ರವಲ್ಲದೆ ಅವಕ್ಕೆ ಉತ್ತೇಜನವನ್ನೂ ನೀಡುತ್ತದೆ. ವಿದ್ಯಾರ್ಥಿಗಳ ಮತ್ತು ಕಿರಿಯರ ಕಿರುಕುಳವು ಆಯಾ ಶೈಕ್ಷಣಿಕ ವಿಧಿಯ ಭಾಗವೇ ಆಗಿರುವ ಸಾಧ್ಯತೆಯಿದೆ. ಅವು ಆ ಶೈಕ್ಷಣಿಕ ಸಂಸ್ಥೆಗಳ ಆಡಳಿತವರ್ಗದಿಂದ ಯಾವುದೇ ಬಗೆಯ ದಂಡನೆಗೆ ಗುರಿಯಾಗುವುದಿಲ್ಲ. ಇದು ಈ ಅಧಿಕಾರ ರಚನೆಗಳು ಮನುಷ್ಯ ಸಹಜ ವರ್ತನೆಗಳಿಗೇ ತುಕ್ಕುಹಿಡಿಸುವ ಆಲೋಚನೆ ಮತ್ತು ಪರಿಸರಗಳನ್ನು ಹೇಗೆ ಸೃಷ್ಟಿಸಿ ಪೋಷಿಸಿಕೊಂಡು ಬರುತ್ತಿವೆ ಎಂಬುದನ್ನು ಬಯಲು ಮಾಡುತ್ತವೆ. ೨೦೧೩-೨೦೧೭ರ ನಡುವೆ ರ್‍ಯಾಗಿಂಗ್‌ಗೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳಿಂದ ೩೦೨೨ ದೂರುಗಳು ವಿಶ್ವವಿದ್ಯಾಯದ ಧನಸಹಾಯ ಅಯೋಗಕ್ಕೆ  (ಯುಜಿಸಿ) ಸಲ್ಲಿಕೆಯಾಗಿವೆ. ಅಷ್ಟು ಮಾತ್ರವಲ್ಲದೆ ಇನ್ನೂ ಎಷ್ಟೋ ಪಟ್ಟು ಪ್ರಕರಣಗಳು ರದಿಯಾಗಿರುವುದಿಲ್ಲ ಮತ್ತು ಸಾರ್ವಜನಿಕರ ಗಮನಕ್ಕೆ ಬಂದಿರುವುದಿಲ್ಲ. ಯುಜಿಸಿಯ ವರದಿಯೇ ಹೇಳುವಂತೆ ಕಾಲೇಜಿನ ಆಡಳಿತ ಮಂಡಳಿಯು ತಮ್ಮ ದೂರನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆಂಬ ಬಗ್ಗೆ ವಿಶ್ವಾಸವಿಲ್ಲದಿರುವುದರಿಂದ, ದೂರು ನೀಡಿದರೆ ತಮ್ಮ ಮುಂದಿನ ಭವಿಷ್ಯಕ್ಕೆ ಹಾನಿಯಾಗಬಹುದೆಂಬ ಭಯದಿಂದ, ಕಾಲೇಜು ಕ್ಯಾಂಪಸ್ಸಿನಿಂದ ಬಹುಷ್ಕಾರಕ್ಕೆ ಗುರಿಯಾಗಹುದೆಂಬ ಆತಂಕದಿಂದ ಮತ್ತು ಹಿರಿಯ ವಿದ್ಯಾರ್ಥಿಗಳಿಂದ ಥಳಿತಕ್ಕೆ ಗುರಿಯಾಗಬಹುದೆಂಬ ಭೀತಿಯಿಂದ ಶೇ.೮೪.೩ರಷು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸೀನಿಯರ್‌ಗಳಿಂದ ರ್‍ಯಾಗಿಂಗ್‌ಗೆ ಗುರಿಯಾದ ಬಗ್ಗೆ ದೂರುಗಳನ್ನೇ ಸಲ್ಲಿಸುವುದಿಲ್ಲ.

ಮೇಲಾಗಿ ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳ ಬಗ್ಗೆ ಮೇಲ್ಜಾತಿಗಳಿಗೆ ಸೇರಿದ ಹಿರಿಯ ವಿದ್ಯಾರ್ಥಿಗಳು ಮತ್ತು ಅದ್ಯಾಪಕ ವರ್ಗದವರು ಅಪಾರ ಅಸಹನೆಯನ್ನೇ ತುಂಬಿಕೊಂಡಿರುವಾಗ ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ವಿದ್ಯಾರ್ಥಿಗಳಿಗೆ ಅದನ್ನು ಹೇಳಿಕೊಳ್ಳಲು ಹಿಂಜರಿಕೆಯಾಗುತ್ತದೆ. ಮತ್ತು  ಆ ಕೋಟಾಗಳ ಮೂಲಕ ಪ್ರವೆಶವನ್ನು ಪಡೆದುಕೊಂಡ ಸಂಗತಿ ಬಯಲಾಗುವುದರ ಬಗ್ಗೆ ಅಂಜುವಂಥಾ ಸನ್ನಿವೇಶಗಳು ಇರುತ್ತದೆ. ಇದೂ  ಸಹ ವಿದ್ಯಾರ್ಥಿಗಳು ದೂರು ನೀಡದಂತೆ ಮಾಡುತ್ತವೆ. ತಾದ್ವಿ ಮತ್ತವರ ಕುಟುಂಬ ವರ್ಗದವರು ಆಕೆ ಎದುರಿಸುತ್ತಿದ್ದ ಕಿರುಕುಳದ ಬಗ್ಗೆ ಆಡಳಿತ ಮಂಡಳಿಗೆ  ಹಲವಾರು ದೂರುಗಳನ್ನು ಕೊಟ್ಟಿದ್ದರೂ ಅದರ ಬಗ್ಗೆ ಅವರು ಕ್ರಮಗಳನ್ನು ತೆಗೆದುಕೊಳ್ಳುವುದರಿಲಿ, ದೂರು ಸ್ವೀಕಾರ ಪತ್ರವನ್ನೂ ಸಹ ಕೊಟ್ಟಿರಲಿಲ್ಲ. ವಾಸ್ತವವಾಗಿ ಟಿಎನ್‌ಎಂ ಕಾಲೇಜಿನ ರ್‍ಯಾಗಿಂಗ್ ವಿರೋಧಿ ಸಮಿತಿಯು ಕಳೆದ ಒಂದೂವರೆ ವರ್ಷದಿಂದ ಒಮ್ಮೆಯೂ ಸಭೆ ಸೇರಿರಲಿಲ್ಲವೆಂದು ವರದಿಯಾಗಿದೆ. ಅಷ್ಟು ಮಾತ್ರವಲ್ಲ. ಆಕೆಯ ಕುಟುಂಬದವರ ಪ್ರಕಾರ ಆಡಳಿತ ಮಂಡಳಿಗೆ ದೂರು ಸಲ್ಲಿಸಿದ ಮೇಲೆ ತಾದ್ವಿಯವರು ಅನುಭವಿಸುತ್ತಿದ್ದ ಕಿರುಕುಳ ಇನ್ನೂ ಹೆಚ್ಚಾಯಿತು. ಹೀಗಾಗಿ ದೂರುಗಳನ್ನು ಗಂಭೀರವಾಗಿ ಪರಿಗಣಿಸದಿರುವುದು ಮತ್ತು ಅದರ ಬಗ್ಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿರುವುದೂ ಸಹ ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳು ತಾವು ಅನುಭವಿಸುತ್ತಿರುವ ಕಿರುಕುಳದ ಬಗ್ಗೆ ದೂರು ಕೊಡಲು ಮುಂದೆ ಬರದಂತೆ ಮಾಡುತ್ತವೆ. ಅದರ ಬದಲಿಗೆ ಬಹುಪಾಲು ಜನ ಕಿರುಕುಳವನ್ನು ಸುಮ್ಮನೆ ಸಹಿಸುವ, ಅಥವಾ ಓದನ್ನೇ ತೊರೆಯುವ ಅಥವಾ ಇನ್ನೂ ತೀವ್ರವಾದ ಸನ್ನಿವೇಶಗಳಲ್ಲಿ ತಮ್ಮ ಪ್ರಾಣವನ್ನೇ ತೊರೆಯುವ ತೀರ್ಮಾನಗಳನ್ನು ತೆಗೆದುಕೊಳ್ಳುವಂತಾಗುತ್ತಿದೆ. ಇದು ಉನ್ನತ ಶಿಕ್ಷಣದಲ್ಲಿ ಈಗಾಗಲೇ ಕಡಿಮೆ ಸಂಖ್ಯಯಲ್ಲಿರುವ ಎಸ್‌ಸಿ-ಎಸ್‌ಟಿ ಸಮುದಾಯದ ವಿದ್ಯಾರ್ಥಿಗಳ ಸಂಖ್ಯೆಯನ್ನು ಮತ್ತಷ್ಟು ಕಡಿಮೆಯಾಗುವಂತೆ ಮಾಡುತ್ತದೆ. ಆಡಳಿತ ವರ್ಗದಲ್ಲಿ ಮತ್ತು ಅಧ್ಯಾಪಕ ವರ್ಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಎಸ್‌ಸಿ- ಎಸ್‌ಟಿ ಸಮುದಾಯ ಪ್ರಾತಿನಿಧ್ಯ ಇಲ್ಲದಿರುವ ತನಕ ಅಥವಾ ಅವರು ಇಂಥಾ ವಿಷಯಗಳಲ್ಲಿ ಸಂವೇದನಾಶಿಲರಾಗುವ ತನಕ ಜಾತಿ ತಾರತಮ್ಯದ ಅಸ್ಥಿತ್ವವನ್ನೇ ನಿರಾಕರಿಸುಂಥ, ತಾರತಮ್ಯದ ಮತ್ತು ರ್‍ಯಾಗಿಂಗ್ ಕುರಿತು ನೀಡಲಾಗುವ ದೂರುಗಳ ಬಗ್ಗೆ ಉಪೇಕ್ಷೆ ತೋರುವಂಥ ಅಥವಾ ತಾದ್ವಿಯವರ ಪ್ರಕರಣದಲ್ಲಾದಂತೆ ಏನೂ ಕ್ರಮ ತೆಗೆದುಕೊಳ್ಳದಂಥ ವಿದ್ಯಮಾನಗಳು ಪ್ರತಿ ಉನ್ನತ ಶಿಕ್ಷಣದ ಸಂಸ್ಥೆಗಳಲ್ಲೂ ಪದೇಪದೇ ಸಂಭವಿಸುತ್ತಲೇ ಇರುತ್ತದೆ.

ಈ ಸಂದರ್ಭದಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಅವರು ಇದೇ ಬಗೆಯ ಕಾರಣಗಳಿಗಾಗಿ ಮಾಡಿಕೊಂಡ ಆತ್ಮಹತ್ಯೆಯನ್ನು ಸಾಂಸ್ಥಿಕ ಹತ್ಯೆಯೆಂದು ಬಣ್ಣಿಸಿದ್ದು ನೆನೆಪಾಗಬೇಕು. ರೋಹಿತರ ಮರಣ ಮತ್ತು ಆ ನಂತರ ನಡೆದ ವಿದ್ಯಮಾನಗಳು ಅಲಕ್ಷಿತ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳ ರಕ್ಷಣೆಗಾಗಿ ರೋಹಿತ್ ಕಾಯಿದೆಯನ್ನು ಜಾರಿ ಮಾಡಬೇಕೆಂಬ ಆಗ್ರಹಕ್ಕೆ ದಾರಿ ಮಾಡಿಕೊಟ್ಟಿತು. ಆದರೂ, ಸಾಮಾಜಿಕ ತಾರತಮ್ಯಗಳು ಹುಟ್ಟುಹಾಕುವ ಆತಂಕಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಅದನ್ನು ನಡೆಸುವವರು ಅರ್ಥಮಾಡಿಕೊಳ್ಳುವ ಮನಸ್ಥಿತಿಯಲ್ಲಿದ್ದಾಗ ಮಾತ್ರ ಅಂಥಾ ಕಾಯಿದೆಗಳೂ ಸಹ ಪರಿಣಾಮಕಾರಿಯಾಗಲು ಸಾಧ್ಯ. ಅತ್ಯಂತ ನಿರುಪದ್ರವಿ ಎಂದು ಬಣ್ಣಿಸಲಾಗುವ ರ್‍ಯಾಗಿಂಗ್‌ಗಳಿಂದ ಹಿಡಿದು ಅತ್ಯಂತ ತೀವ್ರವತರವಾದ ಕಿರುಕುಳ ಎಂದು ಪರಿಗಣ್ಸಲ್ಪಡುವ ರ್‍ಯಾಗಿಂಗ್‌ಗಳವರೆಗೆ ಪ್ರತಿಯೊಂದೂ ಸಹ ಹಿಂಸಾತ್ಮಕ ಕ್ರಮಗಳೇ ಆಗಿವೆ. ಮತ್ತವು ರ್‍ಯಾಗಿಂಗ್‌ಗೆ ಒಳಗಾಗುವ ವ್ಯಕ್ತಿಯ ಮಾನವ ಹಕ್ಕುಗಳ ಮತ್ತು ಘನತೆಯಿಂದ ಜೀವಿಸಬಯಸುವ ಮತ್ತು ಶಿಕ್ಷಣವನ್ನು ಪಡೆದುಕೊಳ್ಳುವ ಹಕ್ಕುಗಳ ಉಲ್ಲಂಘನೆಯಾಗಿದೆ. ಇದನ್ನು ಗ್ರಹಿಸಿದಾಗ ಮಾತ್ರ ತಾದ್ವಿ, ವೇಮುಲಾರವರಿಗೆ ಮತ್ತು ಮೌನದಿಂದ ಎಲ್ಲಾ ಬಗೆಯ ನೋವು ಮತ್ತು ಕಿರುಕುಳಗಳನ್ನು ತಡೆದುಕೊಳ್ಳುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ನ್ಯಾಯ ಒದಗುವಂತೆ ಮಾಡುವ ಕಡೆ ಮುಂದಡಿಯಿಡಲು ಸಾಧ್ಯವಾಗುತ್ತದೆ.

ಕೃಪೆ: Economic and Political Weekly

ಅನು: ಶಿವಸುಂದರ್

Leave a Reply

Your email address will not be published.

Social Media Auto Publish Powered By : XYZScripts.com