Election 19 : NDA ಗೆಲುವು ಪ್ರಜಾತಂತ್ರದ ನೈತಿಕ ಬುನಾದಿಯನ್ನು ಗಟ್ಟಿಗೊಳಿಸುವುದೇ?

೨೦೧೯ರ ಲೋಕಸಭಾ ಚುನಾವಣೆಗಳ ಫಲಿತಾಂಶಗಳನ್ನು ವಿಶ್ವದ ಅತಿ ದೊಡ್ಡ ಪ್ರಜಾತಂತ್ರದ ಗೆಲುವೆಂದು ಹಲವರು ಭಾವಿಸುತ್ತಾರೆ.  ಈ ವಿಜಯವನ್ನು ಸಂಭ್ರಮಿಸಲು ನ್ಯಾಷ್‌ನಲ್ ಡೆಮಾಕ್ರಾಟಿಕ ಅಲಿಯನ್ಸ್ (ಎನ್‌ಡಿಎ) ಮತ್ತು ಅದರ ಬೆಂಬಲಿಗರಿಗೆ ಅವರದೇ ಆದ ಕಾರಣಗಳಿರುವುದು ಸ್ಪಷ್ಟ. ಎನ್‌ಡಿಎಯ ಬೆಂಬಲಿಗರು ಈ ವಿಜಯಕ್ಕೆ ಅಗಾಧವಾದ ರಾಜಕೀಯ ಮಹತ್ವವನ್ನು ಆರೋಪಿಸುತ್ತಾ  ಕೆಲಕಾಲ ರಾಜಕೀಯ ವಿರೋಧವನ್ನೇ ಮೂಲೆಗುಂಪು ಮಾಡಬಹುದು. ಈ ಚುನಾವಣೆಯ ಮೂಲಕ ಸತ್ಯವು ನಮ್ಮ ಕಡೆ ಇದೆಯೆಂಬುದು ಸಾತಾಗಿದೆಯೆಂದೂ ಎನ್‌ಡಿಎ ಪ್ರತಿಪಾದಿಸಬಹುದು. ಜಬೆಂಬಲದ ಮೂಲಕ ತಾವು ಪಡೆದುಕೊಂಡಿರುವ ಸೀಟುಗಳ ಪ್ರಮಾಣದ ಮೂಲಕವೇ ಆ ಸತ್ಯವೇನೆಂದು ವ್ಯಾಖ್ಯಾನಿಸಲು ಪ್ರಾರಂಭಿಸಬಹುದು. ವಾಸ್ತವವಾಗಿ , ಎನ್‌ಡಿಎಯ ಉಚ್ಚಸ್ಥರದ ಹಲವಾರು ನಾಯಕರು ಈ ಜಯವು ಭಾರತಕ್ಕೆ ಸಂದ ಜಯವೆಂದು ವ್ಯಾಖ್ಯಾನಿಸುತ್ತಾ  ತಮ್ಮ ಸತ್ಯವನ್ನೇ ಪರಮ ಸತ್ಯವೆಂದು ಸಾರ್ವತ್ರೀಕರಿಸಲು ಪ್ರಾರಂಭಿಸಿದ್ದಾರೆ. ಒಂದು ಔಪಚಾರಿಕ ಚುನಾವಣಾ ಪ್ರಕ್ರಿಯೆಗಳ ಮೂಲಕ ಅಂಥಾ ಪಕ್ಷಗಳು ಗಳಿಸಿರುವ ಆಭೂತಪೂರ್ವ ಸಂಖ್ಯಾತ್ಮಕ ವಿಜಯದ ಮಹತ್ವವನ್ನು ಅದು ಸಾರುತ್ತಿರಬಹುದು. ಆದರೆ ಅದಕ್ಕಿಂತ ಮುಖ್ಯವಾಗಿ ಈ ಕೆಳಗಿನ ಪ್ರಶ್ನೆಯನ್ನು ಕೇಳಬೇಕಾಗುತ್ತದೆ: ಎನ್‌ಡಿಎಯ ಈ ವಿಜಯವು ಅದರ ನಿಜಾಯತಿಗೆ ಸಿಕ್ಕ ಪ್ರತಿಫಲವೇ? ಮತ್ತು ಅದು ತಾನು ೨೦೧೪ರಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದ ಬಗ್ಗೆ ನಿಜಕ್ಕೂ ಪ್ರಾಮಾಣಿಕವಾದ ಪುರಾವೆಗಳನ್ನು ನೀಡಿದೆಯೇ?

ಈ ಪ್ರಶ್ನೆಗಳು ಕೇವಲ ಎನ್‌ಡಿಎ ಒಕ್ಕೂಟದ ಔಪಚಾರಿಕ ವಿಜಯದ ಮೌಲ್ಯಮಾಪನವನ್ನು ಮಾಡಲು ಮಾತ್ರವಲ್ಲದೆ ಒಂದು ಸತ್ವಯುತ ಪ್ರಜಾತಂತ್ರದ ನೈತಿಕ ಬುನಾದಿಯ ಮೌಲ್ಯಮಾಪನವನ್ನು ಮಾಡುವ ದೃಷ್ಟಿಯಿಂದಲೂ ಮುಖ್ಯವಾಗಿವೆ. ಮತ್ತೊಂದು ರೀತಿಯಲ್ಲಿ ಕೇಳುವುದಾದರೆ ಎನ್‌ಡಿಎಯ ಈ ವಿಜಯವು ಪ್ರಜಾತಂತ್ರದ ನೈತಿಕ ಬುನಾದಿಯನ್ನು ಗಟ್ಟಿಗೊಳಿಸುವುದೇ?

ಸಾಮಾನ್ಯವಾಗಿ ಹೇಳುವುದಾದರೆ, ಒಂದು ಚುನಾವಣಾ ಅಥವಾ ಪ್ರಕ್ರಿಯಾತ್ಮಕ ಪ್ರಜಾತಂತ್ರವು ಆಡಳಿತರೂಢ ಪಕ್ಷಗಳಿಗೆ ತನ್ನ ಸಕಾರಾತ್ಮಕ ಸಾಧನೆಗಳನ್ನು ಜನರ ಮುಂದಿಟ್ಟುಅವರ ಬೆಂಬಲ ಕೇಳುವಂಥಾ ವಿಶೇಶ ಅವಕಾಶವನ್ನು ಒದಗಿಸುತ್ತದೆ. ಅದೇ ರೀತಿ ಮತದಾರರಿಗೆ ಈಗಿರುವುದಕ್ಕಿಂತ ಉತ್ತಮವಾದ ಭವಿಷ್ಯದ ಭರವಸೆಯನ್ನು ಕೊಟ್ಟು ಅವರ ಬೆಂಬಲವನ್ನು ಕೇಳುವ ಅವಕಾಶವನ್ನು ವಿರೋಧ ಪಕ್ಷಗಳಿಗೂ ಒದಗಿಸುತ್ತದೆ.  ಆದರೆ ಇಡೀ ಚುನಾವಣಾ ಪ್ರಚಾರದ ಸಮಯದಲ್ಲಿ ಎನ್‌ಡಿಎ ಪಕ್ಷಗಳು ಕಳೆದ ಚುನಾವಣೆಯ ಸಮಯದಲ್ಲಿ ತಾವು ಕೊಟ್ಟ ಭರವಸೆಗಳನ್ನು ಎಷ್ಟರ ಮಟ್ಟಿಗೆ ಈಡೇರಿಸಿದ್ದೇವೆ ಎಂಬ ಪ್ರಶ್ನೆಯು ಮುನ್ನೆಲೆಗೆ ಬರದಂತೆ ನೋಡಿಕೊಂಡವು. ಎನ್‌ಡಿಎ ಯ ಪ್ರಚಾರಗಳಲ್ಲಿ ಅವರು ಕೊಟ್ಟ ಭರವಸೆಗಳು ಮತ್ತು ಅದನ್ನು ಈಡೇರಿಸುವಲ್ಲಿ ಆಗಿರುವ ಸಾಧನೆಗಳ ಅಂಶವೇ ಗಣನೀಯವಾಗಿ ಕಣ್ಮರೆಯಾಗಿತ್ತು. ಉದಾಹರಣೆಗೆ ದಲಿತರು ಮತ್ತು ಅಲ್ಪಸಂಖ್ಯಾತರು ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸುರಕ್ಷಿತವೆಂಬ ವಾತಾವರಣ ನಿರ್ಮಿಸುವ ವಿಷಯದಲ್ಲಿ ತೋರಿಸಬಲ್ಲ ಯಾವ ಸಾಧನೆಯೂ ಎನ್‌ಡಿಎ ಸರ್ಕಾರದ ಬಳಿ ಇರಲಿಲ್ಲ. ತನ್ನ ಆಡಳಿತದ ಐದು ವರ್ಷಗಳಲ್ಲಿ ಸತತ ತಾರತಮ್ಯಗಳಿಗೆ ಗುರಿಯಾಗುತ್ತಿದ್ದ ದಲಿತರಿಗೆ ಸಾಮಾಜಿಕ ಭದ್ರತೆ ಒದಗಿಸಿದ್ದೇನೆಂದಾಗಲೀ ಅಥವಾ ಗುಂಪುದಾಳಿಗೆ ಬಲಿಯಾಗುತ್ತಾ ನಿರಂತರ ಭೀತಿಗೆ ಗುರಿಯಾಗಿದ್ದ ಅಲ್ಪಸಂಖ್ಯಾತರಿಗೆ ಭೌತಿಕವಾಗಿ ರಕ್ಷಣೆ ಒದಗಿಸಲು ಯಶಸ್ವಿಯಾಗಿದ್ದೇನೆಂದಾಗಲೀ ಹೇಳಿಕೊಳ್ಳಲು ಅದಕ್ಕೆ ಸಾಧ್ಯವಿಲ್ಲ. ಗ್ರಾಮೀಣ ಬಿಕ್ಕಟ್ಟಿಗೆ ಗುರಿಯಾಗಿ ತತ್ತರಿಸುತ್ತಿರುವ ರೈತರು ಮತ್ತು ವಲಸೆ ಕಾರ್ಮಿಕರಿಗೆ ಪರಿಣಾಮಕಾರಿ ಪರಿಹಾರಗಳನ್ನು ಒದಗಿಸಲಾಗಿದೆಯೆಂದು ಎನ್‌ಡಿಎ ಹೇಳಿಕೊಳ್ಳಲು ಸಾಧ್ಯವಿಲ್ಲ. ಅದೇ ರೀತಿ ಅಪಾರ ಸಂಖ್ಯೆಯಲ್ಲಿರುವ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸಲಾಗಿದೆಯೆಂದೂ ಹೇಳಲಾಗುವುದಿಲ್ಲ. ಅಷ್ಟು ಮಾತ್ರವಲ್ಲ, ಇಂಥಾ ವಿಷಯಗಳ ಬಗ್ಗೆ ಸಕಾರಣವಾದ ಭಿನ್ನಮತವನ್ನು ಸೂಚಿಸಿದವರ ವಿರುದ್ಧ ಸಾಮಾಜಿಕ ಮಾಧ್ಯಮಗ ಮೂಲಕ ಕಿರುಕುಳ ನೀಡುತ್ತಿದ್ದ ಟ್ರೋಲ್ ಪಡೆಗಳನ್ನು ನಿಯಂತ್ರಿಸಲೂ ಸಹ ಎನ್‌ಡಿಎ ಸರ್ಕಾರ ಯಾವ ಕ್ರಮಗಳನ್ನೂ ಕೈಗೊಳ್ಳಲಿಲ್ಲ.

ಮೇಲಿನ ಯಾವ ವಿಷಯಗಳ ಬಗ್ಗೆಯೂ ಯಾವ ಉತ್ತರವನ್ನೂ ನೀಡದೆಯೂ ತನ್ನ ಪರವಾಗಿ ಮತದಾರರು ನಿರ್ಣಯಾತ್ಮಕವಾದ ಬೆಂಬಲವನ್ನು ನೀಡುವಂತೆ ಮಾಡುವಲ್ಲಿ ಅವರು ಹೇಗೆ ಯಶಸ್ವಿಯಾದರು ಎಂಬ ಪ್ರಶ್ನೆಗಂತೂ ಇನ್ನೂ ಉತ್ತರ ಸಿಗಬೇಕಾಗಿದೆ. ಮಿಕ್ಕೆಲ್ಲಾ ವಿಷಯಗಳ ಜೊತೆಗೆ ಭಾರತವನ್ನು ಮುನ್ನೆಡೆಸಲು ಪ್ರಬಲವಾದ ನಾಯಕನ ಅಗತ್ಯವಿದೆ ಎಂಬ ಭಾವನೆ ಹಾಗೂ ಆಕ್ರಮಣಕಾರಿ ಸೇನಾತ್ಮಕ ರಾಷ್ಟ್ರೀಯವಾದಗಳಂಥ ಭಾವನಾತ್ಮಕ ವಿಷಯಗಳ ಅತಿಬಳಕೆಗಳು ಎನ್‌ಡಿಎ ಗೆ ಸಹಕಾರಿಯಾದವೆಂದು ಕಾಣುತ್ತದೆ. ಈ ಎರಡು ಅಮೂರ್ತವಾದ ವಿಷಯಗಳೇ ಮತದಾರರನ್ನು ತತ್‌ಕ್ಷಣದ ಮತ್ತು ಕೆಣ್ಣೆದುರಿಗಿನ ಸತ್ಯಗಳಾದ ಗುಂಪುದಾಳಿಗಳು, ದಲಿತರ ಮೇಲಿನ ಅತ್ಯಾಚಾರಗಳು ಹಾಗೂ ರೈತರ ಆತ್ಮಹತ್ಯೆಗಳಂಥ ವಿಷಯಗಳ ಮೇಲಿನ ಗಮನವನ್ನು ಪಕ್ಕಕ್ಕೆ ಸರಿಸಿತೆಂದು ಕಂಡುಬರುತ್ತದೆ. ಹೀಗೆ ರಾಷ್ಟ್ರೀಯತೆ ಸನ್ನಿಯನ್ನು ಸೃಷ್ಟಿಸುವ ಮೂಲಕ ಜನರನ್ನು ಅಮೂರ್ತ ದೇಶಭಕ್ರರನ್ನಾಗಿಸುವ ಮೂಲಕ ಬಹುಪಾಲು ಜನರು ಬದುಕಿನ ವಾಸ್ತವಗಳ ಬಗ್ಗೆ ಯೋಚಿಸದಂತೆ ಮಾಡಿತು. ಹಾಗೆಯೇ ಅತ್ಯಾಚಾರ, ರೈತರ ಆತ್ಮಹತ್ಯೆಗಳು, ಪೌರ ಕಾರ್ಮಿಕರ ದುರ್ಗತಿಗಳು, ಗುಂಪುದಾಳಿಗಳು ಮತ್ತು ಸಹನಾಗರಿಕರು ಎದುರಿಸುತ್ತಿರುವ ನಿರುದ್ಯೋಗದ ಆತಂಕಗಳು ಹುಟ್ಟಿಸುವ ಯಾತನೆಗಳನ್ನು ಸಹನಾಗರಿಕರೊಂದಿಗೆ ಹಂಚಿಕೊಳ್ಳುವ ಅಗತ್ಯವನ್ನೂ ಇಲ್ಲದಂತೆ ಮಾಡಿತು.

ಪ್ರಾಯಶಃ, ಓಟಿನ ದಿನದಂದು ಮತಗಟ್ಟೆಗೆ ಹೋಗುತ್ತಿದ್ದ ಭಾರತದ ಮಧ್ಯಮ ವರ್ಗ ಹಾಗೂ ಯುವಮತದಾರರ ಮನಸ್ಸಿನಲ್ಲಿ ಭಾರತಕ್ಕೆ ಪ್ರಬಲ ನಾಯಕನೊಬ್ಬನ ಅಗತ್ಯವಿದೆ ಎಂಬ ಭಾವನೆಯೇ ಇದ್ದಿರಬೇಕು. ತಾವು ಆಯ್ಕೆ ಮಾಡಿದ ಸರ್ಕಾರ ತಮಗೆ ನಿಶ್ಚಿತ ಪರ್ಯಾಯಗಳನ್ನು ಕಲ್ಪಿಸಿವೆಯೇ ಎಂಬ ಪ್ರಶ್ನೆಯೂ ಸಹ ಇಂಥಾ ಮತದಾರರ ಮನಸ್ಸಿನಲ್ಲಿ ಇದ್ದಿರಲಿಕ್ಕಿಲ್ಲ. ಪ್ರಾಯಶಃ, ಎನ್‌ಡಿಎದ ಪರಮೋಚ್ಚ ನಾಯಕನ ಮನಸ್ಸಿನಲ್ಲಿ ಯಾವಬಗೆಯ ದಮನಕಾರಿ-ಆಕ್ರಮಣಶೀಲ ರಾಷ್ಟ್ರದ ಪರಿಕಲ್ಪನೆಯಿದೆಯೋ ಅದೇ ಕಲ್ಪನೆಗಳು ಇಂಥಾ ಮತದಾರರ ಮನಸ್ಸಿನಲ್ಲೂ ಇದ್ದಿರಬೇಕು.  ಈ ಭಾವನೆಗಳನ್ನು ಪದೇಪದೇ ಪುನರುತ್ಪಾದಿಸುತ್ತಿದ್ದ ಸಾಮಾಜಿಕ ಮಾಧ್ಯಮಗಳು ಸಹ  ಹೊಸ ಮತ್ತು ಯುವಮತದಾರರೂ ಇದೇ ಅಭಿಪ್ರಾಯಗಳೊಂದಿಗೆ ಮತಗಟ್ಟೆಗೆ ಹೋಗುವಂತೆ ಮಾಡಿರಬೇಕು.

ಸಾಮಾಜಿಕ ಸಂವೇದನೆ ಮತ್ತು ಮಾನವೀಯ ಕಳಕಳಿಯನ್ನು ಆಧರಿಸಿ ಆಯ್ಕೆಮಾಡುವ ಮತದಾನವು ತಪ್ಪುಮಾಡುವ ಸರ್ಕಾರವನ್ನು ತಿದ್ದುವ ಪ್ರಭಾವನ್ನು ಹೊಂದಿರುತ್ತದೆ. ಇಂಥಾ ಮತದಾನವು ಅಧಿಕಾರದಲ್ಲಿದ್ದರೂ, ಇರದಿದ್ದರೂ, ಸಾರ್ವತ್ರಿಕ ದೃಷ್ಟಿಕೋನವನ್ನು ಮತನಿರ್ಣಯದ ಜೊತೆಗೆ ಬೆಸೆಯುವ ಶಕ್ತಿಯನ್ನು ರಾಜಕೀಯ ಪಕ್ಷಗಳಿಗೆ ಒದಗಿಸುತ್ತದೆ. ಹಲವರಿಗೆ ಅಭೂತಪೂರ್ವವೆಂದು ಕಾಣುತ್ತಿರುವ ಹಾಲೀ ಚುನಾವಣೆಯ ವಿಜಯವನ್ನು ಕೇವಲ ಭಾವನಾತ್ಮಕ ಮತ್ತು ಸಾಂಕೇತಿಕ ವಿಷಯಗಳನ್ನು ಮಾತ್ರ ಪರಿಗಣಿಸಿದ ವಿಷಯಗಳಿಂದ ಪಡೆದುಕೊಳ್ಳಲಾಗಿದೆಯೇ ವಿನಾ ಮಾನವೀಯ ಕಾಳಜಿಯುಳ್ಳ ಮತಗಳಿಂದಲ್ಲ. ಈ ಅರ್ಥದಲ್ಲಿ ಒಂದು ಔಪಚಾರಿಕ ಚುನಾವಣಾ ಪ್ರಜಾತಂತ್ರಕ್ಕೂ ಮತ್ತು ಸಾರಸತ್ವವುಳ್ಳ ಮಾನವೀಯ ಮೌಲ್ಯಗಳನ್ನಾಧರಿಸಿದ ಪ್ರಜಾತಂತ್ರಕ್ಕೂ ಗುಣಾತ್ಮಕ ವ್ಯತ್ಯಾಸಗಳಿವೆ.

ಒಂದು ಸಾರಸತ್ವವುಳ್ಳ ಪ್ರಜಾತಂತ್ರಕ್ಕಾಗಿ ಮತಹಾಕುವ ಮತದಾರರಿಗೆ ನೈತಿಕ ಮೌಲ್ಯವನ್ನು ಒದಗಿಸುವ ಶಕ್ತಿಯೂ ಸಹ ತಮ್ಮ ಮತಗಳಿಗೆ ಇರುತ್ತದೆಂಬ ಸಂಗತಿಯನ್ನು ಇತರ ಮತದಾರರು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಅಂಥವರ ಮತಗಳು ಇತರ ಮತದಾರರನ್ನು ಈ ಔಪಚಾರಿಕ ಪ್ರಜಾತಂತ್ರದ ಆಡಳಿತವನ್ನು ಪಡೆದುಕೊಳ್ಳುವವರ ದಯೆ-ದಾಕ್ಷಿಣ್ಯಕ್ಕೊಳಪಟ್ಟು ಬದುಕುವಂತೆ ಮಾಡುವ ಶಕ್ತಿಗಳಿಗೆ ಇನ್ನೂ ಹೆಚ್ಚಿನ ಅಧಿಕಾರ ದಕ್ಕುವಂತೆ ಮಾಡಿಬಿಡುತ್ತದೆ.ಮತ್ತೊಂದು ರೀತಿ ಹೇಳುವುದಾದರೆ ಮಾಧ್ಯಮದ ಕಣ್ಮಣಿಯ ಪರವಾಗಿ ನಡೆಯುವ ತಿರುಚಲ್ಪಟ್ಟ ಮತದಾನವು ಖಂಡಿತವಾಗಿಯೂ ಒಂದು ಅಸಮಾನ ಸಂಬಂಧಗಳನ್ನು ಸೃಷ್ಟಿಸುತ್ತದೆ. ಅಂಥಾ ಸಂಬಂಧಗಳ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಇತರ ವಲಯಗಳಿಂದ ಅಪಾರವಾದ ಬಹುಮತಗಳನ್ನು ಪಡೆದುಕೊಳ್ಳುವುದರಿಂದ ದಲಿತರು, ಅಲ್ಪಸಂಖ್ಯಾತರು ಮತ್ತು ಆದಿವಾಸಿಗಳಿಗಿರುವ ಮತದಾನದ ಹಕ್ಕಿಗೆ ಯಾವ ಆರ್ಥವೂ ಇಲ್ಲದಂತಾಗುತ್ತದೆ. ಆ ಮತಗಳು ಮತ್ತು ಅದನ್ನು ಚಲಾಯಿಸಿದ ಮತದಾರರು ಚುನಾವಣಾ ಫಲಿತಾಂಶಗಳ ಮೇಲೆ ಯಾವುದೇ ಪ್ರಭಾವವನ್ನೂ ಬೀರದಂತಾಗುತ್ತಾರೆ.

ಹೀಗಾಗಿ ಎರಡು ರೀತಿಯ ಪ್ರಜಾತಂತ್ರಕ್ಕೆ ಕಾರಣವಾಗುವ ಮೂಲಕ ಈ ಚುನಾವಣೆಯು ಬೇರೆಯದೇ ಆದ ಮಹತ್ವವನ್ನು ಪಡೆದುಕೊಂಡಿದೆ: ಒಂದು  ಶತೃವಿನ ಮನೆಯೊಳಗೆ ನುಗ್ಗಿ ಸಾಯಿಸಿಬಂದ ಆಕ್ರಮಣಕಾರಿ ಪೌರುಷತ್ವದ ರಾಷ್ಟ್ರೀಯತೆಯನ್ನು ಸಾಂಕೇತಿಕವಾಗಿ ಆಧರಿಸಿರುವ ಪ್ರಜಾತಂತ್ರ; ಮತ್ತೊಂದು ಗುಂಪುದಾಳಿ, ಅತ್ಯಾಚಾರ, ಆಳವಾದ ಆತಂಕ ಮತ್ತು ಹೆಚ್ಚುತ್ತಿರುವ ಅಭದ್ರತೆಗಳಿಂದ ಮುಕ್ತವಾದ ಸಾಮಾಜಿಕ ಜೀವನವನ್ನು ಖಾತರಿ ಮಾಡುವ ಪ್ರಜಾತಂತ್ರ. ಮೊದಲನೆ ಬಗೆಯ ಪ್ರಜಾತಂತ್ರವು ಔಪಚಾರಿಕವಾದದ್ದು, ಶಬ್ದಾಡಂಬರಗಳಿಂದ ಕೂಡಿದ್ದು, ಅನ್ಯಾಕ್ರಮಣಕಾರಿಯಾಗಿದ್ದು ಎನ್‌ಡಿಎಯ ಇತ್ತೀಚಿನ ಚುನಾವಣಾ ವಿಜಯ ಅದಕ್ಕೆ ಇತ್ತೀಚಿನ ಉದಾಹರಣೆ. ಮತೊಂದು ಪರಸ್ಪರರ ಬಗ್ಗೆ ಕಾಳಜಿ ಹಾಗೂ ಅವಲಂಬನೆಗಳುಳ್ಳ ಮತದಾರರಿಂದ ಹುಟ್ಟುವ ಸಾರಸತ್ವವುಳ್ಳ  ಪ್ರಜಾತಂತ್ರವಾಗಿದ್ದು, ಇನ್ನೂ ರೂಪುಗೊಳ್ಳುವ ಹಂತದಲ್ಲಿದೆ. ಅದೇನೇ ಇದ್ದರೂ ಈ ಎರಡನೆ ಬಗೆಯ ಪ್ರಜಾತಂತ್ರವು ಮಾನವೀಯ ಕಾಳಜಿಗಳ ಉಳಿವಿನಲ್ಲಿ ತಮ್ಮ ಪಾತ್ರವೂ ಇದೆಯೆಂಬುದನ್ನು ಮರೆತುಹೋದ ಮತದಾರರಿಂದಾಗಿ ಹಿನ್ನೆಡೆಯನ್ನು ಕಂಡಿದೆ. ಎರಡನೆ ಬಗೆಯ ಪ್ರಜಾತಂತ್ರವು ಅsದ್ರತೆ ಮತ್ತು ಆತಂಕಗಳಿಂದ ಮುಕ್ತತೆ, ಆತ್ಮಹತ್ಯೆಗಳನ್ನು ಮಾಡಿಕೊಳ್ಳದಂತೆ ಗ್ರಾಮೀಣ ಬಿಕ್ಕಟ್ಟಿನಿಂದ ಬಚಾವು ಮಾಡಬಲ್ಲ ಸಾಮಾಜಿಕ ಭದ್ರತೆಗಳಂಥ ಆಶಯಗಳೊಂದಿಗೆ ಬೆಸೆದುಕೊಂಡಿದೆ. ಕೇವಲ ತಮ್ಮ ಭೌತಿಕ ಹಾಗೂ ಘನತೆಯುಳ್ಳ ಅಸ್ಥಿತ್ವಕ್ಕಾದರೂ ಕನಿಷ್ಟ ರಕ್ಷಣೆ ಬೇಕೆಂದು ನಿರೀಕ್ಷಿಸುತ್ತಿದ್ದವರ ಪ್ರಜಾತಾಂತ್ರಿಕ ಆಶಯಗಳ ಅವಶೇಷಗಳ ಮೇಲಷ್ಟೇ ೨೦೧೯ರ ಮೇ ೨೩ರಂದು ಸಂಭವಿಸಿದ ಔಪಚಾರಿಕ ಪ್ರಜಾತಂತ್ರದ ವಿಜಯವನ್ನು ಆಚರಿಸಬಹುದು.

ಮಹಾಭಾರತದ ಕಥನವನ್ನನುಸರಿಸಿ ಹೇಳುವುದಾದಲ್ಲಿ, ಜಾತಿ ದೌರ್ಜನ್ಯ, ಗುಂಪುಹತ್ಯೆ ಅಥವಾ ಒಳಚರಂಡಿಗಳಲ್ಲಿ ಸತ್ತುಹೋಗುತ್ತಿರುವ ಪೌರಕಾರ್ಮಿಕರ ಬದುಕುಗಳಲ್ಲಿರುವ ಸತ್ಯಗಳು ಈ ದ್ಯಕ್ಕೆ ಸೋತಿರಬಹುದು. ಆದರೆ ಸುಳ್ಳೆಂದಿಗೂ ಅಂತಿಮ ವಿಜಯವನ್ನು ಸಾಧಿಸಲು ಸಾಧ್ಯವಿಲ್ಲ. ಆದರೆ ನ್ಯಾಯವಿವೇಚನೆಯುಳ್ಳ ಮತದಾರರ ಅಧಿಪತ್ಯವು ತನ್ನಂತೆ ತಾನೇ ಸಂಭವಿಸುವುದಿಲ್ಲ. ಈ ಬಗೆಯ ಮಾನವೀಯ ಕಾಳಜಿಯುಳ್ಳ ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಮಾಜದ ಸದಸ್ಯರು ಮತದಾರರ ನಡುವೆ ಸೌಹಾರ್ದತೆಯನ್ನು ಹುಟ್ಟುಹಾಕಲು ತೀವ್ರವಾಗಿ ಶ್ರಮಿಸಬೇಕಿರುತ್ತದೆ. ಇದಕ್ಕೆ ಒಟ್ಟಿನಲ್ಲಿ ಎರಡು ದಾರಿಗಳಿವೆ. ಒಂದೋ ರಾಜಕೀಯ ಪಕ್ಷಗಳು ಜನರ ಸಂವೇದನೆಗಳನ್ನು ರೂಪಿಸುವ ರೀತಿಯಲ್ಲಿ ತಮ್ಮನ್ನು ತಾವು ಪುನರುಜ್ಜೀವಗೊಳಿಸಿಕೊಳ್ಳಬೇಕು. ಅಥವಾ ಜನರೇ ಜವಾಬ್ದಾರಿಯನ್ನು ತೆಗೆದುಕೊಂಡು ರಾಜಕೀಯ ನಾಯಕತ್ವಕ್ಕೆ ಮಾರ್ಗದರ್ಶನ ಮಾಡಬೇಕು.

ಕೃಪೆ: Economic and Political Weekly

ಅನು: ಶಿವಸುಂದರ್

Leave a Reply

Your email address will not be published.

Social Media Auto Publish Powered By : XYZScripts.com