ಸಂವಿಧಾನ ಇಲ್ಲದಿದ್ರೆ ಮೋದಿ PM ಆಗ್ತಿರ್ಲಿಲ್ಲ; ನಾನು OPP leader ಆಗ್ತಿರ್ಲಿಲ್ಲ – ಖರ್ಗೆ…

ಕಾಂಗ್ರೆಸ್‍ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸೋಲಾಗಿದೆ. ಮುತ್ಸದ್ದಿ ನಾಯಕರಾಗಿದ್ದ ಖರ್ಗೆಯವರಿಗಾದ ಸೋಲು ಹಲವು ಜನರಿಗೆ ತೀವ್ರ ನಿರಾಸೆಯನ್ನುಂಟುಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಖರ್ಗೆಯವರ ಬದುಕು ಹೋರಾಟದ ಕುರಿತಾಗಿ ಹಲವು ಬರಹಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ 2018ರ ಸೆಪ್ಟಂಬರ್ 04ರಂದು ನ್ಯಾಯಪಥ ನಮ್ಮ ಗೌರಿ ಪತ್ರಿಕೆಯ ಮೊದಲ ಸಂಚಿಕೆಗಾಗಿ ಮಲ್ಲಿಕಾರ್ಜುನ ಖರ್ಗೆಯವರೊಂದಿಗೆ ಡಾ.ವಾಸು ಎಚ್.ವಿರವರು ಸಂದರ್ಶನ ನಡೆಸಿದ್ದರು. ನೆಲದ ಧೂಳಿನಿಂದ ಎದ್ದು ಮೇಲಕ್ಕೆ ಏರಿದ ಈ ನಾಯಕ ಎದೆತೆರೆದು ಆಡಿದ ಮಾತುಕತೆಯಲ್ಲಿ ಭಾರತದ ರಾಜಕಾರಣದಲ್ಲಿ ಅಡಗಿರುವ ಅನೇಕ ಸಾಮಾಜಿಕ ಸೂಕ್ಷ್ಮಗಳು ರಾಜಕೀಯ ಸತ್ಯಗಳು ಹಾದುಹೋಗಿದವು. ಅದರ ಆಯ್ಧ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ.

ಪತ್ರಿಕೆ: ದೇಶದ ಸಂವಿಧಾನವೇ ಅಪಾಯದಲ್ಲಿದೆ ಎಂಬ ಮಾತು ಕೇಳಿಬರುತ್ತಿದೆ. ನಿಮ್ಮ ಅನಿಸಿಕೆ ಏನು ಸಾರ್?
ಮಲ್ಲಿಕಾರ್ಜುನ ಖರ್ಗೆ: ನೀವು ಟಿವಿ ನೋಡೋದಿಲ್ಲವೇನು? ಈ ಮಾತನ್ನ ನಾನು ಪಾರ್ಲಿಮೆಂಟಲ್ಲೇ ಹೇಳಿದ್ದೇನೆ. ‘ಸಂವಿಧಾನ ಇಲ್ಲದಿದ್ರೆ ಮೋದಿ ಸಾಹೇಬ್ರೇ, ನೀವು ಸಹಾ ಪ್ರಧಾನಿ ಆಗ್ತಿದ್ದಿಲ್ಲ; ನನ್ನಂತಹ ಬಡ ಕುಟುಂಬದ ಕಾರ್ಮಿಕನ ಮಗ ಅಪೊಸಿಷನ್ ಲೀಡರ್ ಆಗೋಕಾಗ್ತಿರ್ಲಿಲ್ಲ’ ಅಂತ. ಆದ್ರೆ ಅವ್ರು ಇದನ್ನ ಡಿಸ್ಟ್ರಾಯ್ ಮಾಡೋಕೆ ನಿಂತಿದ್ದಾರೆ. ಆದ್ರೆ ನಾವು ಇಂಥವಕ್ಕೆ ಒಂದೇ ಸಾರಿ ಕ್ವಿಕ್ ಆಗಿ ರಿಯಾಕ್ಟ್ ಮಾಡಲ್ಲ. ಕೇರ್‍ಫುಲಿ ರಿಯಾಕ್ಟ್ ಮಾಡ್ತೀವಿ.

ಸಂವಿಧಾನ ಹೋದ್ರೆ ದೇಶಾನೇ ಉಳಿಯಲ್ಲ. ಬಹಳ ಜನ ಈ ರಿಸರ್ವೇಶನ್‍ಗಾಗಿ ನಮ್ಮಂಥವರು ಸಂವಿಧಾನದ ಪರ ನಿಂತಿದ್ದೀವಿ ಅಂದ್ಕೋತಾರೆ. ಸಂವಿಧಾನದಲ್ಲಿ ರಿಸರ್ವೇಷನ್‍ದು ಎರಡು ಕ್ಲಾಸ್ ಇರಬಹುದು ಅಷ್ಟೇ. ಅದೂ ಸಹಾ ಸಂವಿಧಾನದ ಜೊತೆಗೆ ಬಂದಿದ್ದಲ್ಲ. ಪೂನಾ ಪ್ಯಾಕ್ಟ್ ನಂತರ ಸ್ವಾತಂತ್ರ್ಯ ಪೂರ್ವದಲ್ಲೇ ಬಂತು. ಬಾಂಬೆ ಪ್ರಾವಿನ್ಸ್ ಒಳಗೆ ಚುನಾವಣೇಲೇ ರಿಸರ್ವೇಶನ್ ಇತ್ತು.

ಸಂವಿಧಾನ ದೇಶದ ಎಲ್ಲರಿಗೂ ಬೆಳವಣಿಗೆ ತರುವ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನ, ಮೂಲಭೂತ ಹಕ್ಕುಗಳನ್ನ ಕೊಡ್ತದೆ. ಆಧುನಿಕ ಪ್ರಪಂಚದಲ್ಲಿ ಮನುಷ್ಯರ ಬೆಳವಣಿಗೆಗೆ ಬೇಕಾಗುವ ನೀತಿ ಅದು. ವೀಕರ್ ಇರುವವರಿಗೆ ಸ್ವಲ್ಪ ಅನುಕೂಲಗಳನ್ನ ಮಾಡಿಕೊಡಬೇಕು ಅಂತ ಅದು ಹೇಳ್ತದೆ ಅಷ್ಟೇ. ಇದು ಎಲ್ಲರನ್ನೂ ಉಳಿಸುವ ನೀತಿ ಸಂಹಿತೆ ಅಂತ ಅರ್ಥ ಮಾಡ್ಕೋಬೇಕಿದೆ.

ವಾಜಪೇಯಿ ಇದ್ದಾಗ ಸಹಾ ಇಂಥದ್ದು ನಡೆಯಲಿಲ್ಲ. ನಾನು ಭಾಳ ಟೀಕಿಸಿದ ಪಂಡಿತ್ ನೆಹರೂ ಅವರು, ನಂತರ ಭೋಜನಕೂಟದಲ್ಲಿ ಸಿಕ್ಕಾಗ ನನ್ನನ್ನು ಮೆಚ್ಚಿಕೊಂಡ್ರು ಅಂತ ಭಾಷಣ ಮಾಡಿದ್ದನ್ನ ನೀವೆಲ್ಲಾ ನೋಡಿದ್ದೀರಿ. ಆದ್ರೆ ಇವತ್ತು ಇಲ್ಲಿ ಉಲ್ಟಾ ಆಗ್ತಿದೆ. ಅಟಾನಮಸ್ ಇನ್ಸ್‍ಟಿಟ್ಯೂಷನ್ಸ್‍ಅನ್ನೇ ಉಳಿಸ್ತಿಲ್ಲ. ಹೀಗಾಗಿ ನಾವು ಮೋದಿಯನ್ನ ಸರ್ವಾಧಿಕಾರಿ ಅಂತೀವಿ. ಆದ್ರೆ, ನಾನು ಶಿಸ್ತಿನ ಆಡಳಿತ ಕೊಡುತ್ತಿರೋದಕ್ಕೆ ಸರ್ವಾಧಿಕಾರಿ ಅಂತಿದೀರಿ ಅಂತ ಅವ್ರು ಹೇಳ್ತಿದಾರೆ.

ಪತ್ರಿಕೆ: ಹೈದ್ರಾಬಾದ್ ಕರ್ನಾಟಕಕ್ಕೆ 371 ಜೆ ಸಂವಿಧಾನ ತಿದ್ದುಪಡಿ ಮೂಲಕ ವಿಶೇಷ ಸ್ಥಾನಮಾನ ಸಿಗುವುದ್ರಲ್ಲಿ ನಿಮ್ಮ ಪಾತ್ರವೂ ಮಹತ್ವದ್ದಾಗಿತ್ತು. ಆದ್ರೆ, ಈಗ ಅದರ ಜಾರಿ ವಿಚಾರದಲ್ಲಿ ನೀವು ಅಷ್ಟು ಗಮನ ಕೊಡುತ್ತಿಲ್ಲ ಎಂಬ ಆರೋಪವಿದೆಯಲ್ಲಾ ಸಾರ್?
ಖರ್ಗೆ: ಒಂದ್ವಿಚಾರ ಎಲ್ರೂ ಮರೀತಾರೆ. ಇದು ಸಂವಿಧಾನ ತಿದ್ದುಪಡಿ. ಇದನ್ನು ಮಾಡ್ಬೇಕಂದ್ರೆ ಸಂಸತ್ತಿನಲ್ಲಿ ನಮ್ಗೆ ಮೂರನೇ ಎರಡು ಭಾಗ ಮೆಜಾರಿಟಿ ಬೇಕು. ನಮ್ಮ ಪಾರ್ಟಿಗೆ ಮೆಜಾರಿಟೀನೇ ಇರ್ಲಿಲ್ಲ. ಆದ್ರ ನನಗೆ ಹೆಮ್ಮೆ ಅನ್ನಿಸ್ತದೆ. ನಾನು ಮೊದ್ಲು ಪಾರ್ಟಿ ಒಳ್ಗೆ ಮನವರಿಕೆ ಮಾಡಿಕೊಟ್ಟೆ. ಸೋನಿಯಾಗಾಂಧಿಯವರಿಗೆ ಇದರ ಕ್ರೆಡಿಟ್ ಹೋಗ್ಬೇಕು. ನಂತರ ಅವರು ಇತರ ಪಾರ್ಟಿಗ್ಳನ್ನೂ convince ಮಾಡಿದ್ರು. ಸರ್ವಾನುಮತದಿಂದ ಈ ತಿದ್ದುಪಡಿ ಆಯ್ತು. ಪ್ರೆಸಿಡೆಂಟ್ ಸಹಿ ಆಯ್ತು. ನಂತರ ಇಲ್ಲಿ ಉಪಸಮಿತಿ ಮಾಡಿದ್ರು, ನಿಯಮಗಳನ್ನ ಮಾಡಿದ್ರು. ನಂತರ ಗರ್ವನರ್ ಹತ್ತಿರ ಹೋಯಿತು. ನಂತರ 3 ವರ್ಷದಿಂದ ಸಾಕಷ್ಟು ಕೆಲ್ಸಾ ನಡೆಯುತ್ತಿದೆ.

ಆದ್ರೆ, ಯಸ್, ಇನ್ನೂ ಚೆನ್ನಾಗಿ ಕೆಲ್ಸಾ ಆಗ್ಬೇಕು. ನಮ್ಮ ಅಧಿಕಾರಿಗಳೂ ಹೇಗಂದ್ರೆ ಬೀದರ್, ಗುಲ್ಬರ್ಗಾ ಅನ್ನೋದು ಅಂಡಮಾನ್ ನಿಕೋಬಾರ್ ಇದ್ದಂತೆ. ಅವ್ರು ಹೋಗ್ಲಿ ನಿಮ್ಮ ಪತ್ರಕರ್ತರೇ ಆ ಭಾಗಕ್ಕೆ ವರ್ಗಾವಣೆ ಅಂದ್ರೆ ಇಷ್ಟಪಡಲ್ಲ; ಬೇಕಂದ್ರ ಕೇಳಿ ನೋಡಿ ನಿಮ್ಮ ಕೊಲೀಗ್ಸ್‍ನ. ಈ ಮೆಂಟಾಲಿಟಿಯಲ್ಲಿ ಸಮಸ್ಯೆ ಇದೆ.

ಜೊತೆಗೆ ಕೆಲವು ಬೇರೆ ಸಮಸ್ಯೆಗಳೂ ಇವೆ. ಕಾರ್ಯದರ್ಶಿ ಮಟ್ಟದ ಒಬ್ಬ ಅಧಿಕಾರಿಗೆ ತನ್ನ ಇಲಾಖೆಯಲ್ಲಿ 10 ಕೋಟಿ ತನಕ ಖರ್ಚು ಮಾಡುವ ಅಧಿಕಾರ ಇದೆ. ಅದೇ ಮಟ್ಟದ ಹೈದ್ರಾಬಾದ್ ಕರ್ನಾಟಕ ಬೋರ್ಡ್‍ನ ಮುಖ್ಯಸ್ಥರಿಗೆ ಬರೀ 2 ಕೋಟಿ. ಸರ್ಕಾರದಿಂದ ಮಂಜೂರಾಗ್ತಿರೋ ಹಣ, ಅದ್ರಲ್ಲಿ ನಂತರ ಬಿಡುಗಡೆಯಾಗೋ ಹಣ ಇದ್ರಲ್ಲೂ ಸಮಸ್ಯೆ ಇದೆ. ಮಂತ್ರಿಗಳ ನೇಮಕ ಆದ ತಕ್ಷಣ ಹೈ.ಕ ಬೋರ್ಡಿಗೂ ಅಧ್ಯಕ್ಷರ ನೇಮಕ ಆಗಬೇಕು. ಸ್ಕೀಮುಗಳಿಗೆ ಕಾನೂನಿನ ಚೌಕಟ್ಟಿನೊಳಗೇ ಫ್ಲೆಕ್ಸಿಬಿಲಿಟಿ ತೋರಿಸ್ಬೇಕು. ಇವೆಲ್ಲದರ ಬಗ್ಗೆ ನಾನು 3 ಸಾರಿ ಪತ್ರ ಬರೆದಿದ್ದೀನಿ. ಅವನ್ನೆಲ್ಲಾ ನಾನು ಪತ್ರಿಕೆಗಳಿಗೆ ಬಿಡುಗಡೆ ಮಾಡಲ್ಲ.

ನೇಮಕಾತಿಯಲ್ಲಿ, ಆರ್ಥಿಕ ಅನುದಾನದಲ್ಲಿ, ಶಿಕ್ಷಣದಲ್ಲಿ ಸಾಕಷ್ಟು ಅನುಕೂಲ ಆಗ್ತಿದೆ. ಹಲವು ಅಧಿಕಾರಿಗಳು ಈ ಭಾಗದಿಂದ ಆಯ್ಕೆಯಾಗ್ತಿದ್ದಾರೆ. ನೀರಾವರಿ ಇನ್ನೂ ಚೆನ್ನಾಗಿ ಆಗ್ಬೇಕು. ಕೈಗಾರಿಕೆಗಳು ಬರಬೇಕು. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಉದ್ಯೋಗ ಕೊಡಬೇಕು. ಅದಿನ್ನೂ ಸಾಲದು. ಹಂತ ಹಂತವಾಗಿ ಆಗುವಂತೆ ನಾವೆಲ್ಲರೂ ಪ್ರಯತ್ನ ಪಡಬೇಕು.
ಒಂದ್ ಗಮನಿಸ್ಬೇಕು. ಅಡ್ವಾಣಿಯವರು ಯಾವುದನ್ನು ರಿಜೆಕ್ಟ್ ಮಾಡಿ ಆಗಲ್ಲ ಅಂತ ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ಹೇಳಿದ್ರೋ ಅದನ್ನ ನಮ್ ಸರ್ಕಾರ ಇದ್ದಾಗ ಮಾಡಿದ್ದೇವೆ. ಈ ಮೂರು ವರ್ಷದಲ್ಲೇ ಭಾಳ ಆಗಿದೆ ಅಂತ ಅಂದ್ಕೋಬಾರ್ದು.

ಪತ್ರಿಕೆ: ನೀವು ಗುರುಮಿಠಕಲ್‍ನಿಂದ 8 ಸಾರಿ ಗೆದ್ದಿದ್ರಿ. ಒಳ್ಳೇ ಕೆಲ್ಸಾ ಸಹಾ ಮಾಡಿದ್ದಿರಂತ ಹೆಸ್ರು ಇತ್ತು. ಆದ್ರೆ, ಅದು ಮೀಸಲು ಕ್ಷೇತ್ರವಾಗುಳಿಯದೇ ಚಿತ್ತಾಪುರ ಮೀಸಲು ಕ್ಷೇತ್ರವಾದಾಗ ನೀವು ಕ್ಷೇತ್ರ ಬದಲಾಯಿಸಿದ್ರಿ. ಯಾಕೆ? ಇದು ನಿಮ್ಮ ವ್ಯಕ್ತಿಗತ ಆಯ್ಕೆಯೋ, ಈ ದೇಶದ ಸಾಮಾಜಿಕ ರಾಜಕೀಯ ಪರಿಸ್ಥಿತಿಯೇ ಹಾಗಿದೆಯೋ?

ಖರ್ಗೆ: ನೋಡಿ, ನಾನು ಕ್ಷೇತ್ರ ಬದಲಾವಣೆ ಮಾಡಿದಾಗ ಗುರುಮಿಠಕಲ್ ಜನರೂ ಬಂದು ತಮ್ಮಲ್ಲಿಗೇ ಬರಬೇಕೆಂದು ಒತ್ತಾಯಿಸಿದರು. ನಾಮಿನೇಷನ್ ಹಾಕಕ್ಕೆ ಬಿಡದೇ ಹಠ ಮಾಡಿದ್ರು. ಆದ್ರೆ, ನಾನು ಬೇರೆ ತೀರ್ಮಾನ ತಗೊಂಡೆ. ನನಗೆ ಓಟು ಹಾಕಿದ ಜನಕ್ಕೆ ಅಲ್ಲಿ ಎಂ.ಎಲ್.ಎ ಆಗೋಕೆ ಅವಕಾಶ ಇರಲಿಲ್ಲ. ಈಗಲೂ ನಾನು ಅಲ್ಲೇ ಸ್ಪರ್ಧಿಸಿದ್ರೆ ಕೆಲವರಿಗೆ ಅಸಮಾಧಾನ ಇರುತ್ತದೆ. ಅದು ಹೊರಗೆ ಬರದಿದ್ರೂ ಬೂದಿ ಮುಚ್ಚಿದ ಕೆಂಡದ ರೀತಿ ಇರುತ್ತದೆ. ಏನಪ್ಪಾ ಇಷ್ಟು ವರ್ಷ ಇವ್ರಿಗೇ ಕೊಟ್ಟೀವಿ. ಈಗಲೂ ನಮಗೆ ಅವಕಾಶವಿಲ್ಲ ಅಂತ ಬರುತ್ತೆ. ಮೇಲಾಗಿ ಆ ಸಾರಿ ಕಲಬುರಗಿ ಜಿಲ್ಲೇಲಿ 3 ಕ್ಷೇತ್ರಗಳು ರಿಸರ್ವ್ ಆಗಿಬಿಟ್ಟವು. ಅದರ ಮೇಲೆ ಇನ್ನೂ ಒಂದು ಕ್ಷೇತ್ರದಲ್ಲ ನಾನು ಸ್ಪರ್ಧಿಸ್ತೇನೆ ಎಂದ್ರೆ ಸಮಸ್ಯೆ ಆಗ್ತಿತ್ತು.

ಇಷ್ಟರ ಮೇಲೂ ನಿಮ್ಗೆ ಹೇಳ್ಬೇಕು. ಮೊದಲ ಸಾರಿ ನಾನು ಅಲ್ಲಿಂದ ಗೆದ್ದಾಗ 9,000 ಮಾರ್ಜಿನ್‍ನಲ್ಲಿ ಗೆದ್ದಿದ್ದೆ. 8ನೇ ಸಾರಿ ಗೆದ್ದಾಗ 49,000 ಮಾರ್ಜಿನ್. ಪ್ರತೀ ಸಾರಿ (ಒಂದ್ಸಾರಿ ಬಿಟ್ಟು) ಮಾರ್ಜಿನ್ ಜಾಸ್ತಿಯೇ ಆಗ್ತಿತ್ತು. ಹಾಗಿದ್ರೂ ನಾವು ಪರಿಸ್ಥಿತೀನೂ ನೋಡಬೇಕು. ಕೆ.ಎಚ್.ರಂಗನಾಥ್ ಅವರು ಜನರಲ್ ಕ್ಷೇತ್ರದಲ್ಲೇ ಮುಂದುವರೆದ್ರು; ರಮೇಶ್ ಜಾರಕಿಹೊಳೀ ಹಂಗೇ ಮುಂದುವರೆದ್ರು. ಇದನ್ನೆಲ್ಲಾ ನೋಡ್ಬೇಕು. ಇಲ್ಲಾಂದ್ರೆ ಟಿಕೆಟ್ ಕೊಟ್ಟು ಅವರು ಸೋತು ಹತಾಶರಾಗುವುದಕ್ಕಿಂತ ಬದಲಾವಣೆ ಮಾಡೋದು ಒಳ್ಳೇದು.

ಪತ್ರಿಕೆ: ನೀವು ಸುದೀರ್ಘಕಾಲ ರಾಜ್ಯದಲ್ಲೂ ಸಚಿವರಾಗಿದ್ರಿ. ಲೋಕಸಭಾ ಸದಸ್ಯರಾದ ನಂತರ ಎರಡು ಮುಖ್ಯ ಖಾತೆಗಳನ್ನು ನಿಭಾಯಿಸಿದ್ರಿ. ಈಗ ವಿರೋಧ ಪಕ್ಷದ ನಾಯಕರಾಗಿದ್ದೀರಾ. ಮುಖ್ಯಮಂತ್ರಿ ಸ್ಥಾನಕ್ಕಿಂತ ಹೆಚ್ಚಿನದ್ದನ್ನೇ ಪಡೆದುಕೊಂಡಿದ್ದೀರಿ ಅನ್ನಿಸುತ್ತಾ?
ಖರ್ಗೆ: ನಾನು ಕಾಂಗ್ರೆಸ್‍ಗೆ ಸೇರ್ದಾಗ ನನಗೆ ಏನು ಸಿಗುತ್ತೆ ಅಂತ ಆಲೋಚ್ನೆ ಮಾಡಿ ಸೇರ್ಲಿಲ್ಲ. 8ನೇ ತರಗತಿಯಲ್ಲಿ ಇದ್ದಾಗಿಂದ ನಾನು ಲೀಡರ್ರೇ ಆಗಿದ್ದೆ. ಕಾಲೇಜು ಸ್ಟೂಡೆಂಟ್ ಯೂನಿಯನ್ ಪ್ರೆಸಿಡೆಂಟ್ ಆಗಿ ಗೆದ್ದು ಬಂದಿದ್ದೆ. ನಂತ್ರ ಅಲ್ಲಿ ಕಾರ್ಮಿಕರ ಸಂಘಟನೆ ಮಾಡ್ತಿದ್ದೆ. ಸಾಮಾನ್ಯ ಜನರ ಪರವಾಗಿ ಕೆಲ್ಸ ಮಾಡ್ತಿದ್ದಾಗ ಧಮ್ರಾಜ್ ಅಫ್ಜಲ್‍ಪುರ್‍ಕರ್ ಅನ್ನೋ ಕಾಂಗ್ರೆಸ್ ಲೀಡ್ರು, ‘ನೀನು ಮಾಡ್ಬೇಕೂಂತಿರೋದ್ನೆಲ್ಲಾ ನಮ್ ಪಾರ್ಟೀನೇ ಮಾಡ್ಲಿಕ್ಕತ್ತದಾ. ನೀನು ಕಾಂಗ್ರೆಸ್ ಸೇರು’ ಅಂತ ಹೇಳಿದ್ರು. ಬ್ಯಾಂಕ್ ರಾಷ್ಟ್ರೀಕರಣ, ಜೀತ ವಿಮುಕ್ತಿ, ಭೂಸುಧಾರಣೆ ಇವೆಲ್ಲಾ ನಡೀತಿದ್ದ ಕಾಲ ಅದು. ಶೋಷಿತ ಸಮುದಾಯಗಳಿಗೆ ಹಲವಾರು ಪ್ರೋಗ್ರಾಮ್ಸ್ ಇದ್ವು. ಹಾಗಾಗಿ ನಾನು ಕಾಂಗ್ರೆಸ್ ಸೇರಿದೆ. ಸೇರೋವಾಗ್ಲೇ ನಾನು ಲೀಡ್ರು. ಹಾಗಾಗಿ ಅಲ್ಲಿಂದ ಒಂದ್ ಸಾರೀನೂ ಸೋಲದೆ ಗೆದ್ದು ಬಂದೆ, ಇಲ್ಲೀತನಕ ಬಂದಿದ್ದೇನೆ. ಹೈಕಮ್ಯಾಂಡ್ ಕೊಟ್ಟಿರುವ ಜವಾಬ್ದಾರಿ ಇವು.

ಪತ್ರಿಕೆ: ಶೋಷಿತ ಸಮುದಾಯಗಳಿಗೆ ಸಿದ್ದರಾಮಯ್ಯನವರ ಸರ್ಕಾರದಲ್ಲೂ ಹಲವಾರು ಪ್ರೋಗ್ರಾಮ್ಸ್ ಇದ್ವು. ಪೂರಕವಾದ ವಾತಾವರಣಾನೇ ಇತ್ತು. ಆದ್ರೂ ಕಾಂಗ್ರೆಸ್ ಯಾಕೆ ಸೋಲ್ತು ಸಾರ್?
ಖರ್ಗೆ: ಭಾಳಾ ಜನಕ್ ಗೊತ್ತಿಲ್ಲ. ಕಾಂಗ್ರೆಸ್ ಒಳಗೇ ‘ಕಾಂಗ್ರೆಸ್ ಫೋರಂ ಫಾರ್ ಸೋಷಿಯಲಿಸ್ಟಿಕ್ ಆಕ್ಷನ್’ ಅಂತ ಇತ್ತು. ಅವ್ರು ನೆಹ್ರೂ ಪಾಲಿಸೀನೇ ಜಾರಿ ಮಾಡೋಕೆ ಅವ್ರ ವಿರುದ್ಧವೇ ಹೋರಾಟ ಮಾಡ್ತಿದ್ರು. ಹೊರಗಿದ್ದು ಬದಲಾವಣೆ ಮಾಡೋಕಾಗಲ್ಲ ಅನ್ಸಿದ್ರೆ ಒಳಗೇ ಬಂದು ನಿಧಾನಕ್ಕೆ ನಿಮ್ಮ ಸ್ನೇಹಿತರಿಗೆ ಮನವರಿಕೆ ಮಾಡಿಕೊಟ್ಟು ಬದಲಾಯಿಸ್‍ಬಹುದು. ಆ ಥರಾ ನಡೀತಿತ್ತು.

ಸಮಾಜದಲ್ಲೂ ಹಿಂದೆ ಓಬಿಸಿ, ಎಸ್‍ಸಿ ಎಸ್‍ಟಿ ಮತ್ತೆ ಎಕನಾಮಿಕಲಿ ವೀಕ್ ಇದ್ದ ಎಲ್ಲಾ ಜಾತಿ ಜನ ತಾವೆಲ್ಲಾ ಬಡವ್ರು ಒಂದು ಕ್ಲಾಸ್ ಅಂತ ಭಾವಿಸ್ತಿದ್ರು. ಆದ್ರೆ ಈಗ ಹಾಗಿಲ್ಲ. ಕ್ಲಾಸ್ ಅಂತ ಇಲ್ಲ. ಜಾತಿ ಭಾವ್ನೇನೇ ಹೆಚ್ಚಾಗಿದೆ. ದುರಂತ ಅಂದ್ರೆ ಲೀಡರ್ಸ್ ಸಹಾ ಇದನ್ನೇ ಮಾಡ್ತಿದ್ದಾರೆ. ಅದರ ಲಾಭವನ್ನು ಪಟ್ಟಭದ್ರ ಹಿತಾಸಕ್ತಿಗಳು ಪಡೆದುಕೊಳ್ತಾರೆ. ಸಮಾಜವನ್ನ ಒಡೆಯೋ ಜನರ ಶಕ್ತಿ ಹೆಚ್ಚಾಗ್ತಿದೆ. ಇದರಿಂದ ನಮಗೇ ತೊಂದರೆ ಅಂತ ಅರ್ಥ ಮಾಡಿಕೊಳ್ಳೋವ್ರು ಕಡಿಮೆ. ಹೀಗಾಗಿ ಪರಿಸ್ಥಿತಿ ಸೂಕ್ಷ್ಮಾ ಆಗಿದೆ. ಇದನ್ನ ಬದ್ಲಾಯಿಸ್ಲಿಕ್ಕೆ ಕೆಲ್ಸಾ ಮಾಡ್ಬೇಕು ಅಷ್ಟೇ.

ಪತ್ರಿಕೆ: ರಾಜಕಾರಣ ಬಿಟ್ಟರೆ ನಿಮ್ಮ ಹವ್ಯಾಸಗಳೇನು?
ಖರ್ಗೆ: ನಾನು ಹಿಂದೆ ಹಾಕಿ ಆಡ್ತಿದ್ದೆ. ಸ್ಟೂಡೆಂಟ್ ಆಗಿದ್ದಾಗ ಗುಲ್ಬರ್ಗಾ ಡಿವಿಜನ್ ಟೀಂಗೆ ಆಡಿದ್ದೆ. ಮೈಸೂರಿಗೆ ಹೋಗಿ 1963-64ರಲ್ಲಿ ಮೈಸೂರು ಡಿವಿಜನ್ ಮೇಲೆ ಗೆದ್ದಿದ್ವಿ. ಆಗ ಕೂರ್ಗ್ ತಂಡವೇ ಟಾಪ್. ಆದ್ರೆ, ಡಿವಿಜನಲ್ ಟೀಂ ಆಗಿ ನಾವು ಎರಡು ಸಾರಿ ಅವರ ಮೇಲೆ ಗೆದ್ವಿ. ಆ ಮೇಲೆ ಆಟ ಎಲ್ಲಾ ಆಡ್ಲಿಕ್ಕೆ ಆಗ್ಲಿಲ್ಲ.

ಓದ್ತೀನಿ. ಈಗಂತೂ ಭಾಳಾ ಓದ್‍ಬೇಕು. (ಅಲ್ಲೇ ಇದ್ದ ಅವರ ಪತ್ನಿ ರಾತ್ರಿ 2ರ ತನಕ ಓದ್ತಾರೆ ಅಂತ ಹೇಳಿದ್ರು. ಅವರನ್ನಾ ತೋರಿಸಿ) ನಮ್ ಮನೇವ್ರು ದಪ್ಪ ದಪ್ಪ ಪುಸ್ತಕ ಓದ್ತಾರೆ. ದುರ್ಗಾಸ್ತಮಾನ ಕಾದಂಬರಿ ಓದ್ತಾ ಇದ್ರು. ನನಗನ್ನಿಸೋದು ನಮ್ಮ್ ಜನರನ್ನು ಬದುಕಿಸ್ಬೇಕು ಅಂದ್ರೆ ನಾನು ಅಂಥಾ ಪುಸ್ತಕ ಓದಿ ಪ್ರಯೋಜ್ನ ಏನು? ಅದಕ್ಕೆ ಬೇಕಿರೋ ಪುಸ್ತಕಾ ತುಂಬಾ ಓದ್ತೀನಿ. ಅದ್ರಲ್ಲೂ ಸೈಂಟಿಫಿಕ್ ಥಿಂಕಿಂಗ್ ಇರೋ ಧಾರ್ಮಿಕ ಪುಸ್ತಕಗಳನ್ನ ಓದ್ತೀನಿ.

ಪತ್ರಿಕೆ: ನೀವು ರಾಹುಲ್‍ಗಾಂಧಿಯವರ ಅಜ್ಜಿ ಇದ್ದಾಗಲೇ ಪ್ರಮುಖ ಸ್ಥಾನಗಳಿಗೆ ಬಂದೋವ್ರು. ಈಗ ಅವರ ಮೊಮ್ಮಗ ಪಕ್ಷದ ಅಧ್ಯಕ್ಷರು. ನಿಮ್ಮಂತಹ ಸೀನಿಯರ್ ಅವರ ನಾಯಕತ್ವದಲ್ಲಿ ಕೆಲ್ಸಾ ಮಾಡ್ಬೇಕಿದೆ. ಅದರ ಬಗ್ಗೆ ಏನನ್ನಿಸ್ತದೆ?
ಖರ್ಗೆ: ಅದ್ರಲ್ಲೇನು ಸಮಸ್ಯೆ? ನಿಮಗೆ ಕಮಿಟ್‍ಮೆಂಟ್ ಇದ್ರೆ iif you want to implement certain programmes for your people, if you want to oppose those who are destroying democracy and constitution ಅದನ್ನ ಸಾಧಿಸೋಕೆ ನಮ್ ಪಕ್ಷ ಲೀಡ್ ಮಾಡ್ತಿದೆ. ಮತ್ತು ರಾಹುಲ್‍ಗಾಂಧಿ ಅದಕ್ಕಾಗಿ ನಮಗೆ ನಾಯಕ ಅಷ್ಟೇ. ಇದ್ರಲ್ಲಿ ಸೀನಿಯರ್ ಜೂನಿಯರ್ ಎಲ್ಲಾ ಇರಲ್ಲ.

ಪತ್ರಿಕೆ: ಸರ್, ಕಂಬಾಲಪಲ್ಲಿ ಘಟನೆ ನಡೆದಾಗ ನೀವೇ ಗೃಹ ಸಚಿವರು. ಆ ಕೇಸಿನಲ್ಲಿ ಯಾರಿಗೂ ಶಿಕ್ಷೆಯಾಗಲಿಲ್ಲ. ಇಂತಹ ಇನ್ನೂ ಹಲವಾರು ಹತ್ಯಾಕಾಂಡಗಳ ಕಥೆ ಹೀಗೇ ಆಗಿದೆ.

ಖರ್ಗೆ: ಹೌದು, ಮಹಿಳೆಯರ ಮೇಲಿನ ಅತ್ಯಾಚಾರದ ವಿಷಯದಲ್ಲಿ, ಬೇರೆ ಬೇರೆ ರೀತಿಯ ಗೂಂಡಾಗಿರಿ ನಡೆದಾಗಲೂ ಹೀಗೆಯೇ. ಕೂಡಲೇ ಕೆಲವು ಪ್ರತಿಭಟನೆಗಳು ಆಗ್ತವೆ. ಆ ನಂತರ ಕಾನೂನು ಪ್ರಕ್ರಿಯೆಯೂ ನಿಧಾನಕ್ಕೆ ದುರ್ಬಲಗೊಳ್ಳುತ್ತದೆ. ಸಮಾಜದ ಪ್ರತಿಕ್ರಿಯೆಯೂ ಇಲ್ಲವಾಗುತ್ತದೆ. ಹಾಗಾಗಿ ಯಾರು ಬಲಿಪಶುಗಳೋ ಅವರೇ ಸಾಕ್ಷಿ ಹೇಳಲ್ಲ. ಯಾಕಂದ್ರೆ ಅಷ್ಟೊತ್ತಿಗೆ ಭಾಳಾ ವರ್ಷ ಆಗಿರುತ್ತೆ. ಆಗಿದ್ದು ಆಗೋಯ್ತು, ಇರೋರು ಚೆನ್ನಾಗಿರಾಣ ಅಂತ ಹಳ್ಳೀಲಿ ಜನಾ ಹೇಳ್ತಿರ್ತಾರೆ. ಇದು ಬಹಳ ಕೆಟ್ಟದು. ಯಾಕಂದ್ರೆ ಇದರಿಂದ ಏನ್ ಮಾಡಿದ್ರೂ ಪರ್ವಾಗಿಲ್ಲ ಅಂತ ಅನ್ನಿಸತ್ತೆ. ನಾವೆಲ್ಲರೂ ಒಂದೇ ಧರ್ಮ ಅಂತ ಹೇಳೋರೂ, ಇಂತಹ ಸಮಯದಲ್ಲಿ ಜಾತಿಗಳಾಗಿಬಿಡ್ತಾರೆ.

ಅಟ್ರಾಸಿಟಿ ಕಾಯ್ದೆಯದ್ದೂ ದುರುಪಯೋಗ ಆಗಿರಬಹುದು; ಯಾರೋ ಎತ್ತಿಕಟ್ಟಿಯೂ ಮಾಡಿಸಿರಬಹುದು. ಆದ್ರೆ 90% ಅಟ್ರಾಸಿಟಿ ನಿಜವಾಗಿ ಆಗಿರುತ್ತಲ್ಲಾ. ಅದಕ್ಕೇನು ಮಾಡೋದು.

ಕೃಪೆ– ನಾನು ಗೌರಿ.ಕಾಂ

Leave a Reply

Your email address will not be published.

Social Media Auto Publish Powered By : XYZScripts.com