EVM ಗಳಿಗಿಂತ ಪರಿಣಾಮಕಾರಿಯಾಗಿ ‘ರಿಗ್’ ಆಗಿರುವುದು ‘ಹಿಂದೂ ಮೈಂಡ್ !

ಈ ಚುನಾವಣೆಯಲ್ಲಿ ಇವಿಎಂ ರಿಗ್ ಆಗಿರಲೀ, ಆಗದೆಯೇ ಇರಲಿ; ಒಂದು ವಿಷಯದ ಬಗ್ಗೆ ಯಾರಿಗೂ ಸಂಶಯ ಇರಬಾರದು: ಅದೆಂದರೆ, ಪರಿಣಾಮಕಾರಿಯಾಗಿ ರಿಗ್ ಆಗಿರುವುದು ಹಿಂದೂ ಮನಸ್ಸು ಎಂಬುದರ ಬಗ್ಗೆ.

ಇಲ್ಲವಾದಲ್ಲಿ, ತನ್ನ ಆಧ್ಯಾತ್ಮಿಕ ಯಾತ್ರೆಯನ್ನು ಸಂಪೂರ್ಣವಾಗಿ ಕ್ಯಾಮರಾಗಳ ಮುಂದೆ ನಡೆಸಿ, ತನ್ನ ‘ಏಕಾಂತ ಸಾಧನೆ’ಯು ಕೋಟ್ಯಂತರ ಮನೆಮನೆಗಳಿಗೆ ನೇರಪ್ರಸಾರವಾಗುವಂತೆ ಮಾಡುವಲ್ಲಿ ನರೇಂದ್ರ ಮೋದಿ ತೋರಿದ ಧಾರ್ಷ್ಟ್ಯಕ್ಕೆ ಬೇರೆ ವಿವರಣೆಯಾದರೂ ಎಲ್ಲಿದೆ? ಇಲ್ಲವಾದಲ್ಲಿ ತಾನೇ ನಟಿಸಿ, ನಿರ್ದೇಶಿಸಿದ ಈ ಕಪಟನಾಟಕವನ್ನು ಹಿಂದೂ ಜನಸಮುದಾಯಗಳು ಒಂದು ಅಪ್ಪಟ ಧಾರ್ಮಿಕ ಅನುಭವವಾಗಿ ಸ್ವೀಕರಿಸುತ್ತವೆ ಎಂಬ ಬಗ್ಗೆ ಆತನಿಗೆ ಅಷ್ಟರ ಮಟ್ಟಿನ ವಿಶ್ವಾಸ ಬಂದುದಾದರೂ ಎಲ್ಲಿಂದ!? ಇಂತಹ ಒಂದು ಕಚ್ಚಾ ಮತ್ತು ಕಳಪೆ ನಾಟಕವನ್ನೂ ಜನರು ಒಂದು ಧಾರ್ಮಿಕ ಯಾತ್ರೆ ಎಂದು ನಂಬುವಷ್ಟರಮಟ್ಟಿಗೆ ಹಿಂದೂ ಮನಸ್ಸು ವಿಕೃತಗೊಂಡಿದೆ ಮತ್ತು ಆಧ್ಯಾತ್ಮಿಕವಾಗಿ ಟೊಳ್ಳಾಗಿದೆ ಎಂಬ ವಿಶ್ವಾಸ ಮೋದಿಯದ್ದು.

‘ಹಿಂದೂ ಮನಸ್ಸು’ ಎಂಬ ಸಾಮಾನ್ಯೀಕರಿಸಿದ ಪದವನ್ನು ಸೃಷ್ಟಿಸಿದ್ದಕ್ಕಾಗಿ ಈ ಲೇಖಕನ ಮೇಲೆ ಮುಗಿಬೀಳಬಹುದು. ‘ಹಿಂದೂ ಮನಸ್ಸು’ ಎಂಬುದೊಂದು ಇಲ್ಲವೇ ಇಲ್ಲ ಎಂದಾತನಿಗೆ ಹೇಳಬಹುದು. ಹಿಂದುತ್ವ ಎಂದರೆ ವಿವಿಧತೆ; ಅದು ಸಾಂಸ್ಥಿಕರಣಗೊಂಡ ಧರ್ಮಗಳಂತೆ ಅಲ್ಲ; ಅದರ ಸಾರ್ವತ್ರಿಕತೆಯು ಅದನ್ನು ಬಹುದೃಷ್ಟಿಯ, ಬಹುಮುಖಿಯ ಧರ್ಮವನ್ನಾಗಿ ಮಾಡಿದ್ದು, ಅದು ಹೊಸ ದೃಷ್ಟಿಕೋನಗಳಿಗೆ ಸಹನಶೀಲವಾಗಿದೆ; ಅದು ಇಡೀ ಪ್ರಪಂಚದಲ್ಲಿಯೇ ಅತ್ಯಂತ ಸೃಜನಶೀಲ ಮತ್ತು ಮಾನವೀಯ ಧರ್ಮವಾಗಿದೆ ಎಂದೆಲ್ಲಾ ಆತನಿಗೆ ಹೇಳಬಹುದು.

ಈ ರೀತಿಯ ವಾಗ್ದಂಡನೆಯು ಅಸಮರ್ಪಕವಾದದ್ದು ಮತ್ತು ಕಳೆದ ಕಾಲು ಶತಮಾನ ಅಥವಾ ಅದಕ್ಕಿಂತಲೂ ಹೆಚ್ಚು ಕಾಲದಿಂದ ಹಿಂದೂ ಧರ್ಮದ ಆಚರಣೆಗಳಲ್ಲಿ ಆಗಿರುವ ಬದಲಾವಣೆಗಳ ಕುರಿತ ಅಜ್ಞಾನದಿಂದ ಹುಟ್ಟುವಂತದ್ದು. ಈ ಅವಧಿಯಲ್ಲಿ ಮೊರಾರಿ ಬಾಪು, ಅಸಾರಾಮ್ ಬಾಪು, ಬಾಬಾ ರಾಮದೇವ್, ಸದ್ಗುರು ಜಗ್ಗಿ ಮುಂತಾದ ‘ಗುರು’ಗಳು ಬೆಳೆದುಬಂದಿರುವುದನ್ನು ನಾವು ಕಂಡಿದ್ದೇವೆ. ಒಟ್ಟಾಗಿ ಇಂತವರೆಲ್ಲಾ ಹಿಂದೂಗಳು ಹುಟ್ಟಿಸಿ, ಒಪ್ಪಿಕೊಂಡಿರುವ ಆಧ್ಯಾತ್ಮಿಕ ನಾಯಕತ್ವವನ್ನು ಪ್ರತಿನಿಧಿಸುತ್ತಾರೆ.
ಆದರೆ, ಇದಕ್ಕಿಂತ ಮೊದಲೇ ವಿಶ್ವ ಹಿಂದೂ ಪರಿಷತ್ ಹುಟ್ಟಿಕೊಂಡಾಗಲೇ ಹಿಂದೂಗಳು ತಮಗಾಗಿ ಸಿದ್ಧಗೊಳ್ಳುತ್ತಿರುವ ಉರುಳಿನ ಕುರಿತು ಎಚ್ಚರಗೊಳ್ಳಬೇಕಿತ್ತು. ವಿಶ್ವ ಹಿಂದೂ ಪರಿಷತ್ತಿನ ಸಂಪರ್ಕದಲ್ಲಿರುವ ಅಥವಾ ಅದರ ತೆಕ್ಕೆಯಲ್ಲಿರುವ ಜನರೆಲ್ಲಾ ಸಂತರೆಂದು ಕರೆಸಿಕೊಂಡಾಗ ಆ ಪದವೇ ಸರ್ವನಾಶವಾಯಿತು. ವಿಶ್ವ ಹಿಂದೂ ಪರಿಷತ್ ಒಂದು ರಾಜಕೀಯ ಸಂಘಟನೆಯಾಗಿದ್ದರೂ, ಅದನ್ನು ಈ ಉದ್ದಕ್ಕೂ ಹಿಂದೂಗಳ ಸಾಮೂಹಿಕ ಧಾರ್ಮಿಕ ಮನಸ್ಸನ್ನು ಪ್ರತಿನಿಧಿಸುವ ಧಾರ್ಮಿಕ ಸಂಸ್ಥೆಯಂತೆ ನಡೆಸಿಕೊಳ್ಳಲಾಯಿತು.

ಸಂತರೆಂದರೆ ಭವದ ಸಾಮಾಜಿಕ, ಆರ್ಥಿಕ, ಸಾಂಸಾರಿಕ ಹಂಗಿಲ್ಲದ ವಿರಾಗಿಗಳೆಂದು ಭಾವಿಸಲಾಗಿತ್ತು. ಆದರೆ, ಈ ಸಂತರು ತಾವು ಮಾಡುತ್ತಿರುವುದು ಧಾರ್ಮಿಕವಲ್ಲದ ರಾಜಕೀಯ ಕೃತ್ಯ ಎಂದು ಸ್ಪಷ್ಟವಾಗಿ ತಿಳಿದಿದ್ದರೂ ಗೋವುಗಳನ್ನು ಉಳಿಸುವ ನೆಪದಲ್ಲಿ ಸಂಸತ್ತಿಗೇ ಮುತ್ತಿಗೆ ಹಾಕಿದರು; ಮುಸ್ಲಿಮರನ್ನು ಗುರಿಮಾಡಿಕೊಂಡ ತಥಾಕಥಿತ ಆಂದೋಲನಗಳನ್ನು ಆಯೋಜಿಸಿ ನೇತೃತ್ವ ವಹಿಸಿದರು ಮತ್ತು ರಾಜಕೀಯ ಪಕ್ಷವಾದ ಬಿಜೆಪಿಗಾಗಿ ಕೆಲಸ ಮಾಡಿದರು.

ಹಿಂದೂಗಳು ತಮ್ಮ ಧಾರ್ಮಿಕತೆಯನ್ನು ವಿಹಿಂಪ, ಬಜರಂಗದಳ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದಂತಹ ಸಂಘಟನೆಗಳು ತಮ್ಮ ವಶಕ್ಕೆ ಪಡೆದುಕೊಳ್ಳಲು ಬಿಟ್ಟಿದ್ದಾರೆ. ಕ್ರಮೇಣ ಅವರು ನಿಜವಾದ ಧಾರ್ಮಿಕ ಅನುಭವಕ್ಕೆ ಅತ್ಯಗತ್ಯವಾಗಿರುವ ವೈಯಕ್ತಿಕ ಮತ್ತು ಏಕಾಂತದ ಅನುಭೂತಿಯನ್ನೇ ಕಳೆದುಕೊಂಡುಬಿಟ್ಟಿದ್ದಾರೆ. ಪ್ರತಿಯೊಂದೂ ಪ್ರಚಾರಕ್ಕಾಗಿ ನಡೆಯುವ ಪ್ರದರ್ಶನವಾಗಿಬಿಟ್ಟಿದೆ.
ಹಿಂದೂಗಳು ಯಾವತ್ತೂ ಹಜ್ ಯಾತ್ರಿಗಳಿಗೆ ನೀಡಲಾಗುತ್ತಿದ್ದ ಸರಕಾರಿ ಸಬ್ಸಿಡಿಯ ಬಗ್ಗೆ ಅಸಮಾಧಾನ ಹೊಂದಿದ್ದರು. ಆದರೆ, ತಮ್ಮದೇ ತೀರ್ಥಯಾತ್ರೆಗಳು ಹೇಗೆ ಬೃಹತ್ ಗ್ರಾಹಕಪ್ರೇರಿತ ಕಾರ್ಯಕ್ರಮಗಳಾಗಿಬಿಟ್ಟಿವೆ ಮತ್ತು ತಾವು ಕೂಡಾ ಹೇಗೆ ಇಂತಹ ಸಂದರ್ಭಗಳಲ್ಲಿ ಸರಕಾರದತ್ತ ಮುಖಮಾಡುತ್ತಿದ್ದೇವೆ ಎಂಬುದರ ಕುರಿತು ಯೋಚಿಸುತ್ತಿಲ್ಲ!

ಅದು ಮಾನಸಸರೋವರ ಯಾತ್ರೆಯಾಗಿರಲಿ, ಕುಂಭಮೇಳಗಳು ಅಥವಾ ಬದರೀನಾಥ/ಕೇದಾರನಾಥ ಯಾತ್ರೆಗಳೇ ಆಗಿರಲಿ-ಇವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಸರಕಾರಿ ನೆರವು ಪಡೆಯುತ್ತಿವೆ. ಇದಕ್ಕೆ ಹೊರತಾಗಿ, ಹಿಂದೂಗಳು ನಿಧಾನವಾಗಿ ತಮ್ಮ ಧಾರ್ಮಿಕ ಆಚರಣೆ ಮತ್ತು ಹಬ್ಬಗಳನ್ನು ನಿರ್ದಿಷ್ಟ ಪಕ್ಷವೊಂದಕ್ಕೆ ಬಿಟ್ಟುಕೊಟ್ಟಿದ್ದಾರೆ. ಇದು ಏಕರೂಪತೆಗೆ ದಾರಿಮಾಡಿಕೊಟ್ಟಿದೆ.
ನಾನು ಕನ್ವಾರಿಯಾಗಳ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಕಂಡಾಗ ನನಗೆ ತಟಕ್ಕನೇ ಹೊಳೆದುದೆಂದರೆ, ರಾಷ್ಟ್ರವು ತ್ರಿಲೋಕಾಧಿಪತಿ ಎನಿಸಿದ ಶಿವನನ್ನು ಆತನ ಪವಿತ್ರ ಪೀಠದಿಂದ ಪದಚ್ಯುತಗೊಳಿಸಿದೆ ಎಂದು! ಪಾಪದ ಶಿವನೀಗ ನಿರ್ದಿಷ್ಟ ಪ್ರಾದೇಶಿಕ ಮಿತಿಯೊಳಗೆ ಬಂಧಿತನಾಗಿದ್ದಾನೆ.

ಅದೇ ರೀತಿಯಲ್ಲಿ ಬಂಗಾಳದಲ್ಲಿ ರಾಮನವಮಿ ಉತ್ಸವವು ಧಾರ್ಮಿಕವಲ್ಲ; ಮತ್ತದು ಹಿಂದೂಗಳಿಗೂ ಗೊತ್ತಿದೆ. ಅದು ನಿರ್ದಿಷ್ಟ ಪಕ್ಷವೊಂದರ ರಾಜಕೀಯ ಆಕ್ರಮಣವಾಗಿದ್ದು, ಹಿಂದೂತ್ವದ ಹೆಸರಿನಲ್ಲಿ ಅದನ್ನು ಸಹಿಸಿಕೊಳ್ಳಲಾಗುತ್ತಿದೆ. ಅದು ಬಿಹಾರದಲ್ಲಾಗಿರಲಿ, ಉತ್ತರಪ್ರದೇಶದಲ್ಲಾಗಿರಲಿ, ಅಥವಾ ಬೇರೆಲ್ಲೇ ಆಗಿರಲಿ, ಹಿಂದೂ ಧಾರ್ಮಿಕ ಸಂದರ್ಭಗಳು ನಿರ್ದಿಷ್ಟ ರಾಜಕೀಯ ಪಕ್ಷವೊಂದರ ಭವಿಷ್ಯವನ್ನು ಉತ್ತಮಪಡಿಸುವ ಉಪಯೋಗಿ ಸಾಧನಗಳಾಗಿವೆ.

ಇದರ ವಿರುದ್ಧ ಹಿಂದೂಗಳಿಗೆ ಅಸಮಾಧಾನ ಇಲ್ಲ. ಹಿಂದೂತ್ವದ ರಾಷ್ಟೀಕರಣ ಅಥವಾ ಪ್ರಾದೇಶೀಕರಣದ ಅರ್ಥವೆಂದರೆ ಹಿಂದೂಗಳು ಸಮಷ್ಟಿಯ ಭಾವವನ್ನೇ ಕಳೆದುಕೊಂಡಿದ್ದಾರೆಂದು. ಅವರು ತಮ್ಮ ದೃಷ್ಟಿಕೋನದಲ್ಲಿ ಸಂಕುಚಿತರಾಗಿದ್ದಾರೆ.
ನಾವು ಗಾಂಧೀಜಿಯವರ ಬಳಿಕದ 70 ವರ್ಷಗಳನ್ನು ನೋಡಿದರೆ ಹಿಂದೂತ್ವದೊಳಗೆ ಯಾವುದೇ ಗಮನಾರ್ಹ ಚರ್ಚೆಗಳು ನಡೆದಿಲ್ಲ. ಅದು ಡಾ. ಭೀಮರಾವ್ ಅಂಬೇಡ್ಕರ್ ಅವರಂತಹ ಟೀಕಾಕಾರರು ಎತ್ತಿದ ಪ್ರಶ್ನೆಗಳನ್ನು ಬದಿಗೆ ಸರಿಸಿದೆ. ಗಾಂಧಿ ಮತ್ತು ವಿನೋಬಾ ಭಾವೆಯವರು ಗೀತೆ ಮತ್ತು ಹಿಂದೂತ್ವಗಳನ್ನು ಮರುವ್ಯಾಖ್ಯಾನಿಸಲು ಯತ್ನಿಸಿದರು. ಆದರೆ, ಆ ಬಳಿಕ ಆಂತರಿಕ ಹುಡುಕಾಟದ ಪ್ರಯತ್ನಗಳೇ ಹಿಂದೂ ಧರ್ಮದಲ್ಲಿ ನಡೆದಿಲ್ಲ.

ಸವಾಲೆತ್ತಿದ ಧ್ವನಿಗಳನ್ನು ಅದು ತನ್ನದೇ ಭಾಗವೆಂದು ಹೇಳಿಕೊಂಡಿತೇ ವಿನಹಃ ಅವುಗಳಿಗೆ ಅದರ ವ್ಯವಹಾರಗಳಲ್ಲಿ ಭಾಗವಹಿಸುವ ಯಾವ ಪಾತ್ರವೂ ಸಿಗಲಿಲ್ಲ. ಜೊತೆಗೆ ಹಿಂದೂ ಧರ್ಮವು ತಾನೇ ಬಲಿಪಶುವಾಗಿರುವ ನಾಟಕವಾಡಿತು. ಹಜಾರಿ ಪ್ರಸಾದ್ ದ್ವಿವೇದಿ ಅವರು ಹೇಳಿದಂತೆ ಇಸ್ಲಾಂ ಸಮಾನತೆಯ ಭಾವವನ್ನು ತಂದಿತೆಂದರೆ ಹಿಂದೂ ಕಿವಿಗಳಿಗೆ ವಿಚಿತ್ರವಾಗಿ ಕೇಳಿಸಬಹುದು. ಅದೇ ರೀತಿಯಲ್ಲಿ ಅವರೇ ಹೇಳಿದಂತೆ ಕ್ರಿಶ್ಚಿಯಾನಿಟಿಯು ಸೇವೆ ಮತ್ತು ನೆರೆಹೊರೆಯ ಭಾವವನ್ನು ತಂದಿತು ಎಂದರೆ ಮತ್ತೆ ಹಿಂದೂಗಳಿಗೆ ಹೊಸದಾಗಿ ಕಾಣಬಹುದು. ಇವುಗಳಿಗೆ ಪ್ರತಿಸ್ಪಂದಿಸುವ ಬದಲು ಹಿಂದೂತ್ವವು ಚಿಪ್ಪಿನೊಳಗೆ ಹುದುಗಿಕೊಂಡಿತು.

ಹಿಂದೂತ್ವದ ವಿವಿಧ ಸಂಪ್ರದಾಯಗಳ ಒಳಗೆ ಕೂಡಾ ಯಾವುದೇ ಗಮನಾರ್ಹವಾದ ತಾತ್ವಿಕ ಚರ್ಚೆಗಳಾಗಲೀ ಧರ್ಮಗ್ರಂಥಗಳ ಮರು ವ್ಯಾಖ್ಯಾನವಾಗಲೀ ನಡೆದಿಲ್ಲ. ವಿವಿಧ ಪಂಥಗಳ ನಡುವೆಯೂ ಯಾವುದೇ ಕ್ರಿಯಾತ್ಮಕ ಸಂವಾದ ನಡೆದಿಲ್ಲ. ಹಿಂದೂತ್ವ ಏನಿದ್ದರೂ ಪ್ರಾಚೀನ ವೈಭವದ ಕುರಿತಾಗಿದೆ. ಅದು ಹುಟ್ಟಿಸಿದ ಮಹಾನ್ ತತ್ವಶಾಸ್ತ್ರಜ್ಞರೆಂದರೆ ಓಶೋ, ಸದ್ಗುರು, ಜಗ್ಗಿಯಂತವರು.
ಸಂಕ್ಷಿಪ್ತವಾಗಿ ಹೇಳುವುದಾದರೆ, ಹಿಂದೂತ್ವವು ಆಧ್ಯಾತ್ಮಿಕ ಮಹತ್ವಾಕಾಂಕ್ಷೆ ಮತ್ತು ಧೈರ್ಯವನ್ನು ಕಳೆದುಕೊಃಡಿದೆ. ವೇದಗಳಲ್ಲೇ ಎಲ್ಲವನ್ನೂ ಸಾಧಿಸಿದ್ದರೆ, ನಾವು ಯಾವುದೇ ಮಹತ್ವವಿಲ್ಲದ, ಮತ್ತು ನಮ್ಮ ಹಿರಿಯರ ಪ್ರೇತಗಳನ್ನು ಹೆಗಲಲ್ಲಿ ಹೊತ್ತು ಸಾಗುವುದೇ ಹಣೆಬರಹವಾಗಿರುವ ಗತಕಾಲದ ವೈಭವದ ಕೂಲಿಗಳುಗಳಷ್ಟೇ.

ಮೂರ್ನಾಲ್ಕು ವರ್ಷಗಳ ಹಿಂದೆ ನನಗೆ ವಿಶ್ವ ಬ್ರಾಹ್ಮಣ ಮಂಡಳಿಯ ಪ್ರತಿನಿಧಿಯೊಬ್ಬರಿಂದ ಕರೆಗಳು ಬರಲು ಆರಂಭವಾದವು. ಅವರು ವೇದಗಳ ಬಗ್ಗೆ ತಿಳಿಯಬಯಸುವವರಿಗೆ ಒಡ್ಡಲಾಗುತ್ತಿರುವ ಅಡೆತಡೆಗಳ ಬಗ್ಗೆ ಆತಂಕಿತರಾಗಿದ್ದರು. ಅದನ್ನು ನಿವಾರಿಸಲು ಅವರು ವೇದಗಳಿಗಾಗಿ ಓಟವನ್ನು ಆಯೋಜಿಸಿದ್ದರು.

ಯಾರು ಈ ಅಡಚಣೆಗಳನ್ನು ಉಂಟುಮಾಡುತ್ತಿರುವವರು ಎಂದು ನಾನು ಕೇಳಿದೆ. ರೋಮಿಲಾ ಥಾಪರ್ ಎಂದರವರು. ವೇದಗಳನ್ನು ತಿಳಿಯಬಯಸುವವರಿಗೆ ರೋಮಿಲಾ ಥಾಪರ್ ಅವರಂತಹ ವ್ಯಕ್ತಿಯೊಬ್ಬರು ಪ್ರಬಲ ತಡೆಯಾಗಲು ಹೇಗೆ ಸಾಧ್ಯ ಎಂದು ನನಗೆ ಅಚ್ಚರಿಯಾಯಿತು.

ಎರಡನೆಯದಾಗಿ ಓಟವು ನಮ್ಮನ್ನು ವೇದಗಳ ಕಡೆ ಒಯ್ಯುವುದು ಹೇಗೆ? ಓಟದ ಬದಲಾಗಿ ಐದು-ಹತ್ತು ವಿದ್ವಾಂಸರು ವೇದ ಪ್ರಪಂಚದ ಕುರಿತ ತಮ್ಮ ಅಧ್ಯಯನವನ್ನು ಹಂಚುವಂತೆ ಮಾಡಬಹುದಲ್ಲವೆ ಎಂದು ನಾನು ಸಲಹೆ ನೀಡಿದೆ. ಹಾಗೆಯೇ ಮಾಡುವುದಾಗಿ ನನಗೆ ಭರವಸೆ ನೀಡಿದ ವ್ಯಕ್ತಿ ಮುಂದೆಂದೂ ನನಗೆ ಕರೆ ಮಾಡಲಿಲ್ಲ.

ಹಚಾರಿ ಪ್ರಸಾದ್ ದ್ವಿವೇದಿಯವರು ಮಧ್ಯಯುಗವನ್ನು ಸ್ಥಗಿತಗೊಂಡ ಅಥವಾ ಆಘಾತಗೊಂಡ ಬೌದ್ಧಿಕತೆಯ ಕಾಲ ಎಂದು ಬಣ್ಣಿಸಿದ್ದರು. ರಾಮಪ್ರಸಾದ್ ಶುಕ್ಲಾ ಮತ್ತಿತರರು ಇಸ್ಲಾಮಿನ ಆಕ್ರಮಣವೇ ಹಿಂದೂತ್ವದ ಹಿನ್ನಡೆಗೆ ಕಾರಣ ಎಂದು ಪ್ರತಿಪಾದಿಸಿದ್ದರು. ಆದರೆ ಈ ಅವಧಿಯು ಅಗಾಧವಾದ ಆವಿಷ್ಕಾರ ಮತ್ತು ಸೃಜನಶೀಲತೆಯ ಕಾಲ: ಸಾಹಿತ್ಯ, ಕಲೆ, ವಾಸ್ತುಶಾಸ್ತ್ರ ಇತ್ಯಾದಿಗಳು ಇದಕ್ಕೆ ಸಾಕ್ಷಿ ಹೇಳುತ್ತವೆ.

ಹಿಂದೂತ್ವಕ್ಕೆ ನಮ್ಮ ಕಾಲವು ಸವಾಲೊಡ್ಡಿದೆ. ರಾಜಕೀಯಕ್ಕೆ ಸಂಬಂಧಿಸಿದಂತೆ ಅದು ತನ್ನ ಸ್ವಾಯತ್ತತೆಯನ್ನು ಉಳಿಸಿಕೊಳ್ಳಬಲ್ಲದೆ? ಅಥವಾ ರಾಜಕೀಯವು ಅದನ್ನು ಎಷ್ಟರ ಮಟ್ಟಿಗೆ ಕುಲಗೆಡಿಸಬಹುದು ಎಂದರೆ, ಯೋಗಿ ಆದಿತ್ಯನಾಥ, ಪ್ರಜ್ಞಾ ಠಾಕೂರ್, ನರೇಂದ್ರ ಮೋದಿಯಂತವರು ಅದರ ಪ್ರಾತಿನಿಧಿಕ ಧ್ವನಿಗಳೆಂದು ನೆನಪಿಸಿಕೊಳ್ಳಬೇಕಾಗಿ ಬರಬಹುದೆ?!
ಹಿಂದೂಗಳು ಈ ಮಹಾನ್ ಕುಲಗೆಡಿಸುವಿಕೆಯ ಬಗ್ಗೆ ಮತ್ತು ತಾವು ಹೇಗೆ ತಮ್ಮ ಮನಸ್ಸನ್ನು ಬಿಡುಗಡೆಗೊಳಿಸಿಕೊಳ್ಳಬಹುದು ಎಂದು ಚಿಂತಿಸಬೇಕಾದ ಕಾಲವಿದು.

ಭಾವಾನುವಾದ: ನಿಖಿಲ್ ಕೋಲ್ಪೆ
ಕೃಪೆ: ದಿ ವೈರ್

Leave a Reply

Your email address will not be published.

Social Media Auto Publish Powered By : XYZScripts.com