ಗೆಲುವಿಗೆ ಒಬ್ಬನೇ ಅಪ್ಪ (ಮೋದಿ) NDA ಸ್ಥಿತಿ : ಸೋಲಿಗೆ ನೂರಾರು ಅಪ್ಪಂದಿರು (ಕೈ ನಾಯಕರು) UPA ಸ್ಥಿತಿ

ಗೆಲುವಿಗೆ ಒಬ್ಬನೇ ಅಪ್ಪ (ಮೋದಿ) ಇದು ಬಿಜೆಪಿ ಅಥವಾ ಎನ್.ಡಿ.ಎ ಸ್ಥಿತಿ..ಸೋಲಿಗೆ ನೂರಾರು ಅಪ್ಪಂದಿರು(ಮಹಾ ಘಟ ಬಂಧನ್ ನ ಮಹಾ ಮಹಾ ನಾಯಕರು) ಇದು ಕಾಂಗ್ರೆಸ್ ಅಥವಾ ಯು.ಪಿ.ಎ ಸ್ಥಿತಿ..
ಫಲಿತಾಂಶ ಏನೇ ಇರಲಿ ಇದು ನರೇಂದ್ರ ಮೋದಿ ಎನ್ನುವ ಒನ್ ಮ್ಯಾನ್ ಶೋ ಎನ್ನುವುದಕ್ಕಿಂತ ಸಮಸ್ತ ವಿರೋಧಿ ಬಣಗಳ ನೀರಸ ವೈಫಲ್ಯ ಅನ್ನುವುದಷ್ಟೇ ಕಾರಣ.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಕಾಂಗ್ರೆಸ್ ನ ಸ್ವಜನ ಪಕ್ಷಪಾತ, ಜೆಡಿಎಸ್ ನ ಕುಟುಂಬ ರಾಜಕಾರಣ, ದೊಡ್ಡ ಗೌಡರ ದೃತರಾಷ್ಟ್ರ ವ್ಯಾಮೋಹ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಮೈತ್ರಿ ಸರ್ಕಾರ,  ಮಂಡ್ಯದಲ್ಲಿ ಸ್ವಪ್ರತಿಷ್ಟೆ ಸಾಧನೆಗಾಗಿ ಬಳಸಿದ ಒಳದಾರಿಗಳು, ಕೊನೆಗೆ ಮಂಡ್ಯಕ್ಕೆ ಕೊಟ್ಟ ಮಹತ್ವವನ್ನು ಉಳಿದ ಕ್ಷೇತ್ರಕ್ಕೆ ಕೊಡದೇ ಇರುವುದು ಇವೆಲ್ಲವೂ ಕಾರಣವೇ.
ಕಾಂಗ್ರೆಸ್ ಅಥವಾ ಜೆಡಿಎಸ್, ಎರಡೂ ಪಕ್ಷದ ತಳಮಟ್ಟದ ಬೂತ್ ಹಂತದ ಕಾರ್ಯಕರ್ತರಲ್ಲೇ ಟಿಕೆಟ್ ಹಂಚಿಕೆಯಲ್ಲೇ ತೀವ್ರ ಭಿನ್ನಾಭಿಪ್ರಾಯಗಳಿದ್ದವು. ನಮ್ಮಲ್ಲಿನ ಮೈತ್ರಿ ಸರ್ಕಾರ ಅಂದೇ ಅರ್ಧ ಸೋತಿತ್ತು. ಅದಾದ ಬಳಿಕವೂ ಸಮನ್ವಯ ಸಾಧಿಸಲು ನಾಯಕರು ಮನಸ್ಸು ಮಾಡಲೇ ಇಲ್ಲ.
ಡಿ.ಸಿ ತಮ್ಮಣ್ಣ, ಶಿವರಾಮೇ ಗೌಡರಂತಹ ನಾಯಕರಿಂದಲೇ ಮಂಡ್ಯ ಮೈತ್ರಿ ಸರ್ಕಾರದ ಕೈ ತಪ್ಪಿತು. ಇನ್ನು ತುಮಕೂರು, ಅಲ್ಲಿ ಮುದ್ದಹನುಮೇಗೌಡರ ಬಂಡಾಯದ ಬಿಸಿ ಇವರಿಗೆ ತಾಕಲೇ ಇಲ್ಲ ಅಂದು. ಅದರ ಉಷ್ಣ ಈಗ ಅಂಡು ಸುಟ್ಟರೇ ಪ್ರಯೋಜನವೇನು?
ದೇಶದಲ್ಲೂ ಇದೇ ಸ್ಥಿತಿ. ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಬದಲು ಜ್ಯೋತಿರಾಧಿತ್ಯ ಸಿಂಧಿಯಾಗೆ ಮಣೆ ಹಾಕಬಹುದಿತ್ತು. ರಾಜಸ್ತಾನದಲ್ಲಿ ಅಶೋಕ್ ಗೆಹ್ಲೋಟ್ ಬದಲು ಸಚಿನ್ ಪೈಲೆಟ್ ಗೆ ಸಂಪೂರ್ಣ ಚುಕ್ಕಾಣಿ ನೀಡಬಹುದಿತ್ತು. ಪಂಜಾಬ್ ಒಂದನ್ನು ಹೊರತುಪಡಿಸಿದ್ರೆ ಎಲ್ಲಾ ರಾಜ್ಯಗಳಲ್ಲೂ ಸ್ಪಷ್ಟವಾಗಿ ಕಾಣಿಸುತ್ತಿರುವುದು ಕಾಂಗ್ರೆಸ್ ಹಾಗೂ ಮಹಾ ಘಟ ಬಂಧನ್ ನ ಅಪ್ರಬುದ್ಧ ನಿರ್ಧಾರಗಳು, ಬಾಲೀಶ ಹೇಳಿಕೆಗಳು ಹಾಗೂ ಸ್ವಪ್ರತಿಷ್ಟೆಗಳೇ.
ಮಾಯವತಿ, ಮುಲಾಯಂ, ಅಖಿಲೇಶ್, ದೀದಿ, ಶರದ್ ಪವಾರ್, ಶರದ್ ಯಾದವ್, ಕೇಜ್ರಿವಾಲ್, ಚಂದ್ರಬಾಬೂ ನಾಯ್ಡು, ಎಡ ಪಕ್ಷಗಳು, ಲಾಲೂ ಕುಟುಂಬ ಜೊತೆಗೆ ದೊಡ್ಡ ಗೌಡರ ಕುಟುಂಬ.. ಸ್ವಲ್ಪ ಕೂಲಂಕೂಷವಾಗಿ ನೋಡಿ ಇಲ್ಲೆಲ್ಲಾ ಸೋತಿದ್ದು ಸ್ವಜನ ಪಕ್ಷಪಾತ ಹಾಗೂ ಸ್ವಪ್ರತಿಷ್ಟೆ. ಮಹಾ ಘಟ ಬಂಧನ್ ಮಾಡಿಕೊಳ್ಳುವುದು ದೊಡ್ಡದಲ್ಲ; ಅದಕ್ಕೆ ತಕ್ಕಂತೆ ಒಗ್ಗಟ್ಟು ಹಾಗೂ ಸಮನ್ವಯ ಸಾಧಿಸುವುದು ಮುಖ್ಯ. ಮುಖ್ಯವಾಗಿದ್ದೇ ಘಟಿಸಲಿಲ್ಲ, ಹಾಗಾಗಿ ಈ ಫಲಿತಾಂಶ ನಿರೀಕ್ಷಿತವೇ.
ಒಂದಂತೂ ಸತ್ಯ. ಈ ದೇಶದಲ್ಲಿ ಬಹುಪಾಲು ನಾಯಕರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ಎಷ್ಟು ಪ್ರಮುಖ ಅನ್ನುವ ಮೂಲಭೂತ ಸತ್ಯದ ಅರಿವೇ ಇಲ್ಲ. ರಾಹುಲ್ ಸೇರಿದಂತೆ  ಯಾವುದೇ ವಿರೋಧ ಪಕ್ಷದ ನಾಯಕರು ಆಡಳಿತ ಪಕ್ಷದ ವೈಫಲ್ಯವನ್ನು ಜನರ ಮುಂದೆ ಇಡಲೇ ಇಲ್ಲ. ಚೌಕಿದಾರ್ ಚೋರ್ ಹೈ, ರಫೇಲ್ ಹಗರಣ ಅನ್ನುವ ಎರಡು ಸಂಗತಿ ಬಿಟ್ಟು ಮೂರನೆಯ ಅಂಕಿ ಅಂಶಗಳೇ ಇವರಿಗೆ ಗೊತ್ತಿರಲಿಲ್ಲ. ಹಾಗೆ ನೋಡಿದರೆ ಮೋದಿ 2014ರ ಚುನಾವಣಾ ಪೂರ್ವದಲ್ಲಿ ನೀಡಿದ ಹಾಗೂ ಈಡೇರಿಸದೇ ಇದ್ದ ಆಶ್ವಾಸನೆಗಳನ್ನು ಹಿಡಿದು ರಂಗಕ್ಕಿಳಿದರೂ ಸಾಕಿತ್ತು. ಆದರೆ ಇದ್ಯಾವುದೂ ಅವರ ಅರಿವಿಗೆ ನಿಲುಕದ್ದು ಅಥವಾ ಅರಿವಿದ್ದರೂ ನಿರ್ಲಕ್ಷಿಸಿದ್ದು ಈ ಮಹಾಪತನಕ್ಕೆ ಕಾರಣ. ಈಗ ಗೂಬೆಗಳಂತೆ ಒಂಟಿಯಾಗಿ ಕೂತು ಬೊಬ್ಬೆ ಹೊಡೆದರೇ ಏನು ಪ್ರಯೋಜನ.
ಆ್ಯಕ್ಚುಲಿ ಇದು ಡೆಮಾಕ್ರಸಿಯ ಬ್ಯೂಟಿ ಅಲ್ಲವೇ ಅಲ್ಲ. ಯಾವ ವ್ಯವಸ್ಥೆಯೂ ವ್ಯಕ್ತಿ ಪ್ರಧಾನವಾಗಬಾರದು. ಹಾಗಾದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವೇ. ಅದರಲ್ಲೂ ಬಿಜೆಪಿಯ ಧ್ಯೇಯವೇ ಬೇರೆ. ಅಲ್ಲಿ ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ಸಂಘ, ಸಂಘಕ್ಕಿಂತ ದೇಶ ದೊಡ್ಡದು. ಆದರೆ ಪಕ್ಷ, ಸಂಘ, ದೇಶಕ್ಕಿಂತ ವ್ಯಕ್ತಿ ದೊಡ್ಡವನಾಗಿದ್ದಾನೆ. ಅದಕ್ಕೆ ಕಾರಣ ನರೇಂದ್ರ ಮೋದಿಯ ಚಾರ್ಮ್ ಅಲ್ಲ ಕಾರಣ, ವಿರೋಧ ಪಕ್ಷಗಳ ನಿಷ್ಕ್ರಿಯತೆ ಕಾರಣ.
ನಾನೊಬ್ಬ ಪತ್ರಕರ್ತನಾಗಿ ಇಷ್ಟು ವಿಮರ್ಷಿಸುವುದು ನನ್ನ ವೃತ್ತಿ ಧರ್ಮ. ಸತ್ಯ ಅರ್ಥಮಾಡಿಕೊಂಡು ಒಪ್ಪಿಕೊಳ್ಳಿ ಇಲ್ಲವೇ ಸಾಲಾಗಿ ಗುಂಡಿಗೆ ಬಿದ್ದು ಮೇಲೆ ಮಣ್ಣೆಳೆದುಕೊಳ್ಳಿ. ಇಂತಹ ಸಂದರ್ಭದಲ್ಲಾದರೂ ನಿಮಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಅನ್ನುವ ಅರಿವಾದರೇ ಈ ವ್ಯವಸ್ಥೆ ಉಳಿದೀತು.
ಕೊನೆಯದಾಗಿ ಕಂಗ್ರಾಟ್ಸ್ ಟು ಮೋದಿ ಎಂಡ್ ಹೋಲ್ ಬಿಜೆಪಿ ಎಂಡ್ ಪರಿವಾರ್ ಫ್ಯಾಮಿಲಿ. ಇನ್ನಾದರೂ ದೇಶದ ಜ್ವಲಂತ ಸಮಸ್ಯೆಗಳಾದ ಬಡತನ, ರೈತರ ಆತಹತ್ಯೆ, ನಿರುದ್ಯೋಗ ನಿವಾರಣೆ ಮಾಡಿ ಎನ್ನುವ ಕಳಕಳಿಯ ಮನವಿ. ಭವಿಷ್ಯದಲ್ಲಿ ಕಾರ್ಪೊರೇಟ್ ಕಂಪೆನಿಗಳ ಅಡಿಯಾಳಾಗದೇ ನಿಜವಾದ ಜನನಾಯಕರಾಗಿ ದೇಶವನ್ನು ಮುನ್ನೆಡೆಸಿ. ಇದಿಷ್ಟೇ ನನ್ನ ಪ್ರಾರ್ಥನೆ. ಜಗನ್ಮಾತೆ ನಿಮಗೆಲ್ಲಾ ಶುಭವುಂಟುಮಾಡಲಿ; ವಿರೋಧ ಪಕ್ಷಗಳನ್ನು ನಿದ್ರೆಯಿಂದ ಎಚ್ಚರಿಸಲಿ.
ವಿಶ್ವಾಸ್ ಭಾರಧ್ವಾಜ್

Leave a Reply

Your email address will not be published.

Social Media Auto Publish Powered By : XYZScripts.com