VVPAT : ಮತ ಎಣಿಕೆ ವಿಧಾನದಲ್ಲಿ ಬದಲಾವಣೆ ಇಲ್ಲ, ಪ್ರತಿಪಕ್ಷ ಬೇಡಿಕೆಗೆ ಕ್ಯಾರೆ ಎನ್ನದ ಆಯೋಗ

ಮತ ಎಣಿಕೆಯ ಇವಿಎಂ ವಿಧಾನದಲ್ಲಿ ಬದಲಾವಣೆ ಮಾಡಿ ಮೊದಲ ವಿವಿಪ್ಯಾಟ್‌ ಚೀಟಿಗಳ ಎಣಿಕೆ ನಡೆಸಬೇಕು ಎಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.

ಮತಗಟ್ಟೆ ಸಮೀಕ್ಷೆಗಳ ನಂತರ ಇವಿಎಂಗಳ ಮೇಲೆ ಕೆಂಡ ಕಾರಿದ್ದ ದೇಶದ 21 ವಿವಿಧ ರಾಜಕೀಯ ಪಕ್ಷಗಳು ಮಂಗಳವಾರ ಚುನಾವಣಾ ಆಯೋಗಕ್ಕೆ ನಿಯೋಗ ತೆರಳಿ ಇವಿಎಂಗಳಿಗೂ ಮುಂಚೆ ವಿವಿಪ್ಯಾಟ್‌ ಚೀಟಿಗಳ ಎಣಿಕೆ ಕೈಗೊಳ್ಳಬೇಕು ಎಂಬ ಮನವಿ ಮಾಡಿದ್ದವು.

ಈ ಬೇಡಿಕೆಯನ್ನು ತಿರಸ್ಕರಿಸಿರುವ ಚುನಾವಣಾ ಆಯೋಗವು ಮತ ಎಣಿಕೆ ವಿಧಾನದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಹಾಗಾಗಿ ಮೊದಲು ಇವಿಎಂ ಮತಗಳ ಡಣಿಕೆ ನಡೆದು ನಂತರ ಅದನ್ನು ವಿವಿಪ್ಯಾಟ್‌ಗಳ ಜೊತೆ ತುಲನೆ ಮಾಡಲಾಗುತ್ತದೆ ಎಂದು ಆಯೋಗ ತಿಳಿಸಿದೆ.

ಮೊದಲು ವಿವಿಪ್ಯಾಟ್‍ಗಳನ್ನು ತಾಳೆ ಹಾಕಿದರೆ ಮತ ಎಣಿಕೆ ವಿಳಂಬವಾಗಲಿದೆ. ಸಿಬ್ಬಂದಿಗೆ ಇದೇ ರೀತಿ ಮತ ಎಣಿಕೆ ನಡೆಸಬೇಕೆಂದು ತರಬೇತಿ ನೀಡಿದ್ದೇವೆ. ಈಗ ವ್ಯತ್ಯಾಸವಾದರೆ ಇಡೀ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ ಎಂದು ಮುಖ್ಯ ಆಯುಕ್ತ ಸುನೀಲ್ ಆರೋರಾ ತಿಳಿಸಿದ್ದಾರೆ.

ಮತಗಳನ್ನು ತಿರುಚುವ ಸಾದ್ಯತೆ ಇರುವ ಹಿನ್ನೆಲೆಯಲ್ಲಿ ಮೊದಲು ವಿವಿಪ್ಯಾಟ್‍ಗಳಲ್ಲಿರುವ ಮತಗಳನ್ನು ತಾಳೆ ಹಾಕಬೇಕೆಂಬುದು ಪ್ರತಿಪಕ್ಷಗಳ ಬೇಡಿಕೆಯಾಗಿತ್ತು.ಉತ್ತರಪ್ರದೇಶ, ಮಧ್ಯಪ್ರದೇಶ ಸೇರಿದಂತೆ ನಾನಾ ಕಡೆ ಇವಿಎಂಗಳನ್ನು ದುರುಪಯೋಗಪಡಿಸಿಕೊಂಡಿರುವುದರ ಬಗ್ಗೆ ವ್ಯಾಪಕ ದೂರು ಬಂದಿದ್ದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಈ ಬೇಡಿಕೆಯನ್ನು ಮುಂದಿಟ್ಟಿತ್ತು. ಆದರೆ ಆಯೋಗ ಹಾಲಿ ಇರುವ ನಿಯಮಾವಳಿಯನ್ನೇ ಮುಂದುವರೆಸುವುದಾಗಿ ತಿಳಿಸಿದೆ.

ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರಗಳ ಐದು ಮತಗಟ್ಟೆಗಳಲ್ಲಿ ವಿವಿಪ್ಯಾಟ್‍ಗಳನ್ನು ತಾಳೆ ಹಾಕಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

Leave a Reply

Your email address will not be published.

Social Media Auto Publish Powered By : XYZScripts.com