ಕಾಂಗ್ರೆಸ್ ವಿರುದ್ಧದ ಮೊಕದ್ದಮೆ ವಾಪಸ್ ಪಡೆದ ಅನಿಲ್ ಅಂಬಾನಿ: ಕುತೂಹಲ ಹುಟ್ಟಿಸಿರುವ ನಡೆ

ಕಳೆದ ಒಂದು ವರ್ಷದಿಂದ ರಾಫೇಲ್ ಹಗರಣದಲ್ಲಿ ಅನಿಲ್ ಅಂಬಾನಿಯ ಮೇಲೆ ಸತತ ವಾಗ್ದಾಳಿ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷದ ವಿರುದ್ಧ ಉದ್ಯಮಿ ಅನಿಲ್ ಅಂಬಾನಿ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ವಾಪಸ್ ಪಡೆದಿದ್ದಾರೆ. ಹೊಸ ಸರ್ಕಾ ರ ಯಾರು ಮಾಡಬಹುದೆಂಬ ಜನರ ನಿರ್ಧಾರ ಅರಿಯಲು 2 ದಿನ ಇರುವಾಗ ಈ ನಡೆಯು ಬಹಳ ಆಶ್ಚರ್ಯ ಹುಟ್ಟಿಸಿದೆ.

ಕಾಂಗ್ರೆಸ್ ಪಕ್ಷವಲ್ಲದೇ, ಆ ಪಕ್ಷದ ಪತ್ರಿಕೆ ನ್ಯಾಷನಲ್ ಹೆರಾಲ್ಡ್ ಮೇಲೆ ಹೂಡಲಾದ ಮೊಕದ್ದಮೆಯನ್ನೂ ಅನಿಲ್ ಅಂಬಾನಿ ವಾಪಸ್ ಪಡೆಯುತ್ತಿದ್ದಾರೆಂದು ಅವರ ವಕೀಲರು ಕೋರ್ಟಿಗೆ ತಿಳಿಸಿದ್ದಾರೆ. ಅಹಮದಾಬಾದ್‍ನ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಪಿ.ಜೆ.ತಮಕುವಾಲಾರ ಮುಂದೆ ಇದ್ದ ಈ ಮೊಕದ್ದಮೆಯ ವಿಚಾರದಲ್ಲಿ ಇಂತಹ ಬೆಳವಣಿಗೆ ನಡೆದಿದೆ.


ಎಚ್‍ಎಎಲ್ ಸಂಸ್ಥೆಯ ಜೊತೆ ಫ್ರಾನ್ಸ್‍ನ ಡಸಾಲ್ಟ್ ಕಂಪೆನಿಗೆ ಆಗಿದ್ದ ಒಪ್ಪಂದವನ್ನು, ಪ್ರಧಾನಿ ನರೇಂದ್ರ ಮೋದಿ ಏಕಪಕ್ಷೀಯವಾಗಿ ಬದಲಿಸಿ, ಅನಿಲ್ ಅಂಬಾನಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸರ್ಕಾರದ ಬೊಕ್ಕಸಕ್ಕೂ ಸಾವಿರಾರು ಕೋಟಿ ರೂ ನಷ್ಟ ಮಾಡಿದ್ದಾರೆ ಎಂಬುದು ಆರೋಪವಾಗಿತ್ತು.

ಸ್ವತಃ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಇದನ್ನು ಪದೇ ಪದೇ ಹೇಳುತ್ತಾ ಬಂದಿದ್ದರು. ಹಲವು ಪತ್ರಿಕಾಗೋಷ್ಠಿಗಳ ಮೂಲಕ, ಸಂಸತ್ತಿನಲ್ಲಿ ಚರ್ಚೆಯ ಮೂಲಕ ಮತ್ತು ಚುನಾವಣಾ ಭಾಷಣಗಳಲ್ಲಿ ರಾಹುಲ್ ಇದನ್ನು ಬಲವಾಗಿ ಒತ್ತಿ ಹೇಳುತ್ತಿದ್ದರು.


ಪ್ರತಿಯೊಂದು ಸಾರಿಯೂ ಮೋದಿ ಮತ್ತು ಅನಿಲ್ ಅಂಬಾನಿ ಹೆಸರುಗಳನ್ನು ರಾಹುಲ್‍ಗಾಂಧಿ ಜೊತೆ ಜೊತೆಗೇ ಪ್ರಸ್ತಾಪಿಸಿ ಆರೋಪ ಮಾಡುತ್ತಿದ್ದರು. ಹಾಗಾಗಿ ಅಂಬಾನಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈಗ ಮತ್ತೆ ನರೇಂದ್ರ ಮೋದಿಯವರೇ ಪ್ರಧಾನಿ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಹೇಳಿದ್ದರೂ, ಯುಪಿಎ ಮತ್ತು ತೃತೀಯ ರಂಗವೇ ಅಧಿಕಾರಕ್ಕೆ ಬರುತ್ತದೆ ಎಂದು ಹಲವರು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಸರ್ಕಾರವು ಮೋದಿಯವರದ್ದಾಗದೇ ಹೋಗಬಹುದು ಎಂಬ ಮುನ್ಸೂಚನೆ ಸಿಕ್ಕಿರುವುದರಿಂದಲೇ ಅಂಬಾನಿ ಹೀಗೆ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com