ಮೇ 23, 24 ರಂದು ಹಾಸನ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಲು ಆದೇಶ!

ಮೇ 23 ಮತ್ತು 24 ರಂದು ಹಾಸನ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಲು ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋಡ್ ಹೇಳಿದ್ದಾರೆ.

ಮುಜಾಗೃತ ಕ್ರಮವಾಗಿ ಹಾಸನ ಜಿಲ್ಲೆಯಾದ್ಯಂತ ಮೆ 23 ಹಾಗೂ 24ರಂದು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮತ ಏಣಿಕೆ ಸಮಯದಲ್ಲಿ ಹಾಗೂ ಫಲಿತಾಂಶ ಪ್ರಕಟವಾದ ಬಳಿಕ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಈ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ 129 ಗ್ರಾಮಗಳನ್ನ ಸೂಕ್ಷ್ಮ ಪ್ರದೇಶಗಳನ್ನಾಗಿ ಗುರುತಿಸಲಾಗಿದೆ. ಅಲ್ಲದೆ ಈ 2 ದಿನ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಜೊತೆಗೆ ಭದ್ರತೆಗಾಗಿ 1200 ಮಂದಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದರು.

ಹಾಸನ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಇಂದು ಮತ ಎಣಿಕೆ ಕೇಂದ್ರದ ಸಿದ್ಧತೆಯನ್ನು ವೀಕ್ಷಣೆ ಮಾಡಿದ್ದಾರೆ. ಹಾಸನದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಈ ಬಾರಿ ಮತ ಎಣಿಕೆ ನಡೆಯಲಿದೆ. ಈಗಾಗಲೇ ಸ್ಟ್ರಾಂಗ್ ರೂಮ್‌ನಲ್ಲಿ ಅಭ್ಯರ್ಥಿಗಳ ಹಣೆಬರಹ ಭದ್ರವಾಗಿದೆ.

ಅಷ್ಟೇ ಅಲ್ಲದೇ ಹಿಂದೆಂದೂ ಇರದ ನಿರ್ಬಂಧಗಳನ್ನು ಮಾಧ್ಯಮದವರ ಮೇಲೆ ಹೇರಲಾಗಿದೆ. ಮತ ಎಣಿಕೆ ಕೇಂದ್ರಗಳ ಬಳಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಹಾಗೆಯೇ ಮತ ಎಣಿಕೆ ಕೇಂದ್ರಗಳಿಗೆ ಅಧಿಕಾರಿಗಳ ಜೊತೆ ಮಾತ್ರ ಮಾಧ್ಯಮದವರಿಗೆ ಹೋಗಲು ಅವಕಾಶ ನೀಡಲಾಗುತ್ತದೆ. ಆದರೆ ಪದೇ ಪದೇ ಮತ ಎಣಿಕೆ ಕೇಂದ್ರಕ್ಕೆ ಮಾಧ್ಯಮ ಪ್ರತಿನಿಧಿಗಳು ಪ್ರವೇಶಿಸುವಂತಿಲ್ಲ ಎಂದು ಅಧಿಕಾರಿಗಳಿಗೆ ಡಿಸಿ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com