World cup Cricket ; ಭಾರತದ ಬೌಲಿಂಗ್ ಗುಟ್ಟು; ಎದುರಾಳಿಗಳಿಗೆ ಅದೇ ತಲೆಚಿಟ್ಟು…

ವಿಶ್ವಕಪ್ ಕ್ರಿಕೆಟ್ ಆರಂಭಕ್ಕೆ ದಿನಗಣನೆ ಈಗಾಗಲೇ ಆರಂಭವಾಗಿದೆ ಮುಂದಿನ ವಾರಾಂತ್ಯಕ್ಕೆ ಪಂದ್ಯಾವಳಿ ಇಂಗ್ಲೆಂಡಿನಲ್ಲಿ ಆರಂಭವಾಗಲಿದೆ. ಹಾಲಿ ಚಾಪಿಯನ್ ಆಸ್ಟ್ರೇಲಿಯಾ, ಆತಿಥೇಯ ಇಂಗ್ಲೆಂಡ್ ಸಮಬಲದ ಪೋಟಿದಾರರಾಗಿದ್ದರೇ ಭಾರತದ ಬಾಜಿ ಈ ಎರಡೂ ತಂಡಗಳನ್ನು ಮೀರಿಸುವಂತಿದೆ.

ಸಾಮಾನ್ಯವಾಗಿ ಎಲ್ಲ ತಂಡಗಳೂ ಬ್ಯಾಟಿಂಗ್, ಫೀಲ್ಡಿಂಗ್ ಹಾಗೂ ಕೊನೆಯದಾಗಿ ಬೌಲಿಂಗಿಗೆ ಒತ್ತು ನೀಡಿದ್ದರೇ ಭಾರತ ತಂಡದ ಬಲಾಬಲವನ್ನು ಅವಲೋಕಿಸಿದರೇ ಅದರ ಶಕ್ತಿ ಇರುವುದೇ ದಾಳಿಯಲ್ಲಿ ಎಂಬುದು ಮೇಲ್ನೋಟಕ್ಕೇ ಸಾಬೀತಾಗುತ್ತದೆ.

ವಿಶ್ವದ ಅಗ್ರಮಾನ್ಯ ಬ್ಯಾಟರ್‍ ವಿರಾಟ್ ಕೊಹ್ಲಿ, ದ್ವಿಶತಕಗಳ ವೀರ ರೋಹಿತ್ ಶರ್ಮಾ ಅಲ್ಲದೇ ಕಳೆದ ಮೂರು ಐಸಿಸಿ ಪಂದ್ಯಾವಳಿಗಳಲ್ಲಿ ಗರಿಷ್ಠ ರನ್ ಸಾಧನೆ ಮಾಡಿರುವ ಶಿಖರ್ ಧವನ್ ಮತ್ತು ಅದ್ಭುತ ಪ್ರತಿಭೆಯ ಕೆಎಲ್ ರಾಹುಲ್ ತಂಡದ ಬ್ಯಾಟಿಂಗಿನ ಮೂಲಸ್ತಂಭಗಳಾಗಿದ್ದಾರೆ ಎಂಬುದು ನಿರ್ವಿವಾದ.

ಇವರಿಗೆ ವಿಕೆಟ್ ಮುಂದೆ ಹಾಗೂ ಹಿಂದೆ ಚಾಣಕ್ಯನಂತೆ ಮಹೇಂದ್ರ ಸಿಂಗ್ ಧೋನಿ ಭೀಷ್ಮನಂತೆ ಇದ್ದಾರಾದರೂ ವಿದೇಶದ ನೆಲದಲ್ಲಿ ಮಿಂಚಲು ಬ್ಯಾಟರುಗಳ ಜೊತೆಗೆ ಬೌಲಿಂಗ್ ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಸಹ ನಿಜದ ಮಾತು.

ಈ ವಿಭಾಗದಲ್ಲಿ ಭಾರತ ತಂಡವನ್ನು ವಿಮರ್ಶೆಯ ಮೂಸೆಗೆ ಒಳಪಡಿಸಿದಲ್ಲಿ ಉಳಿದ ತಂಡಗಳಿಗೆ ಹೋಲಿಸಿದರೆ ನಾವಾರಿಗೂ ಕಡಿಮೆ ಇಲ್ಲ ಎಂಬ ಭಾವನೆ ಮೂಡಿದರೆ ಅದರಲ್ಲಿ ಅಚ್ಚರಿ ಪಡುವಂತಹುದ್ದೇನಿಲ್ಲ.

ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡಿನ ವಿರುದ್ಧ ಭಾರತ ಎಡವಿದ್ದರೂ ಏಕದಿನ ಪಂದ್ಯಗಳಿಗೆ ಬೇಕಾದ ಕ್ಷಮತೆ, ಕೌಶಲ್ಯ ಹೊಂದಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.

ಹಾಗೆ ನೋಡಿದರೆ ಬುಮ್ರಾ, ಶಮಿ, ಭುವಿ, ವೇಗದ ಜೊತೆಗೆ ಚೆಂಡನ್ನು ತಮ್ಮ ಆಣತಿಗೆ ತಕ್ಕಂತೆ ವರ್ತಿಸುವಂತೆ ಮಾಡುವ ಚಾಕಚಕ್ಯತೆ ಹೊಂದಿರುವುದು ಎಲ್ಲರೂ ಬಲ್ಲ ಅಂಶ.

ಅದರಲ್ಲಿಯೂ ಜಸ್ಪ್ರೀತ್ ಬುಮ್ರಾ ಅವರಂತೂ ಸದ್ಯದ ಮಟ್ಟಿಗೆ ಜಾಗತಿಕ ಮಟ್ಟದಲ್ಲಿ ಎದುರಾಳಿ ದಾಂಡಿಗರಿಗೆ ನಡುಕ ಹುಟ್ಟಿಸುವ ಮಟ್ಟಿಗೆ ತಮ್ಮ ಪ್ರತಿಭೆಯನ್ನು ಸಾಣೆ ಹಿಡಿದಿದ್ದಾರೆ.

ಇನ್ನು ಮೊಹಮದ್ ಶಮಿ ಹಾಗೂ ಭುವನೇಶ್ವರ ಕುಮಾರ ಪಿಚ್ಚಿನ ವರ್ತನೆ ಹೇಗೇ ಇದ್ದರೂ ಅದಕ್ಕೆ ತಮ್ಮ ದಾಳಿಯನ್ನು ಹೊಂದಿಸಿಕೊಳ್ಳುವ ಕ್ಷಮತೆ ಹೊಂದಿದ್ದಾರೆ.

ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್ ಮತ್ತು ಚಾಹಲ್ ಎದುರಾಳಿಗಳನ್ನು ಗಲಿಬಿಲಿಗೊಳಿಸುವ ತಾಕತ್ತು ಹೊಂದಿರುವುದು ಭಾರತದ ಗರಿಮೆ ಎಂದರೇ ತಪ್ಪಿಲ್ಲ.

ಈ ಹಿನ್ನಲೆಯಲ್ಲಿಯೇ ತಂಡದ ದಾಳಿ ಯಾರನ್ನು ಬೇಕಾದರೂ ಚಿತ್ ಮಾಡಬಲ್ಲ ಶಕ್ತಿ ಹೊಂದಿದೆ ಎಂಬ ಮೊಹಮದ್ ಶಮಿ ಅವರ ಹೇಳಿಕೆಯನ್ನು ತಳ್ಳಿ ಹಾಕಲು ಯಾವುದೇ ಕಾರಣಗಳು ಕಾಣುತ್ತಿಲ್ಲ.

ಒಟ್ಟಿನಲ್ಲಿ ಹೇಳಬೇಕಾದರೆ ಮೂರನೇ ಬಾರಿಗೆ ವಿಶ್ವಕಪ್ ಗೆಲ್ಲುವ ತಾಕತ್ತು, ಅರ್ಹತೆ, ಕ್ಷಮತೆ ಕೊಹ್ಲಿ ಮತ್ತು ಅವರ ಕದನ ಕಲಿಗಳಿಗೆ ಇದೆ ಎಂದು ಹೇಳಲು ಯಾವುದೇ ಅಡ್ಡಿ ಇಲ್ಲ.

Leave a Reply

Your email address will not be published.

Social Media Auto Publish Powered By : XYZScripts.com