Exit poll 19 : ಮತಗಟ್ಟೆ ಸಮೀಕ್ಷೆಗಳ ಅಸಲಿಯತ್ತೇ ಬೇರೆ, ವಾಸ್ತವವೇ ಬೇರೆ ಸುಳ್ಳಾಗಿದ್ದೇ ಹೆಚ್ಚು

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡನೇ ಅವಧಿಗೆ ಅಧಿಕಾರ ಲಭಿಸುತ್ತದೆ ಎಂಬ ಮಾಹಿತಿ ಮತಗಟ್ಟೆ ಸಮೀಕ್ಷೆಗಳಿಂದ ಹೊರಬಿದ್ದ ಹಿನ್ನೆಲೆಯಲ್ಲಿಯೇ ಅದರ ಪರ ಮತ್ತು ವಿರುದ್ಧದ ಮಾತುಗಳು ಜೋರು ಪಡೆದಿವೆ.

ಸಹಜವಾಗಿಯೇ ಮತಗಟ್ಟೆ ಸಮೀಕ್ಷೆಯ ಅಂಕಿ-ಅಂಶಗಳಿಮ ಬಿಜೆಪಿ ಮತ್ತದರ ಅಂಗಪಕ್ಷಗಳು ಪುಳಕಗೊಂಡಿದ್ದರೆ ಅತ್ತ ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳು ಈ ಸಮೀಕ್ಷೆಗಳನ್ನು ಹಣಿಯುವ ಕೆಲಸ ಮಾಡಿದ್ದಾರೆ.

ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರಂತೂ ಎಕ್ಸಿಟ್ ಪೋಲ್ ಎಕ್ಸಾಕ್ಟ್ ಪೊಲ್ ಅಲ್ಲ. ಪ್ರತಿಪಕ್ಷಗಳ ಒಗ್ಗೋಡುವಿಕೆಯನ್ನು ತಡೆಯಲು ಬಿಜೆಪಿ ಆಡಿರುವ ಆಟ ಇದಾಗಿದೆ ಎಂದು ಆಪಾದಿಸಿದ್ದಾರೆ. ಪ್ರತಿಪಕ್ಷಗಳ ಅನೇಕ ನಾಯಕರು ಕೂಡ ಮತಗಟ್ಟೆ ಸಮೀಕ್ಷೆಗಳ ಆಲೋಚನೆ ಮಾಡಿದ್ದಾರೆ.

ಆದರೆ ಈ ಸಮೀಕ್ಷೆಗಳ ಅಸಲಿಯತ್ತೇನು? ಇವು ನಿಜವಾದ ಫಲಿತಾಂಶಕ್ಕೆ ಕನ್ನಡಿಯೇ? ಎಂಬ ಪ್ರಶ್ನೆಗಳಿಗೆ ಉತ್ತರದ ಜಾಡು ಹಿಡಿದು ಸಾಗಿದರೆ ಕುತೂಹಲಕರ ಅಂಶಗಳು ಹೊರಬರುತ್ತವೆ.

1990ರ ದಶಕದಲ್ಲಿ ಈ ಮತಗಟ್ಟೆ ಸಮೀಕ್ಷೆಗಳು ಭಾರತದ ಚುನಾವಣಾ ಚೌಕಟ್ಟಿಗೆ ಪ್ರವೇಶ ಪಡೆದವು. ಇಲ್ಲಿ ಒಂದು ಅಂಶ ಗಮನಿಸಬೇಕಿದೆ. ಆಗೆಲ್ಲ ಚುನಾವಣೆ ನಡೆದ ಕೂಡಲೇ ಮತಗಟ್ಟೆ ಸಮೀಕ್ಷೆಗಳನ್ನು ಪ್ರಸಾದ ಮಾಡಲಾಗುತ್ತಿತ್ತು. ಅಂದರೆ ಈಗಿನಂತೆ ಎಲ್ಲ ಹಂತಗಳ ಮತದಾನ ಮುಗಿಯುವವರೆಗೆ ಕಾಯುತ್ತಿರಲಿಲ್ಲ.

1999ರಿಂದ ಈವರೆಗಿನ ಮತಗಟ್ಟೆ ಸಮೀಕ್ಷೆಗಳನ್ನು ಅವಲೋಕಿಸಿದರೆ ಒಂದು ಅಂಶ ಸ್ಪಷ್ಡವಾಗುತ್ತದೆ. ಅದೆಂದರೆ ಈ ಕಳೆದ 20 ವರ್ಷಗಳಲ್ಲಿ ಬಂದ ಬಹುತೇಕ ಎಲ್ಲ ಮತಗಟ್ಟೆ ಸಮೀಕ್ಷೆಗಳೂ ಬಿಜೆಪಿಗೇ ಗೆಲುವನ್ನು ನೀಡಿವೆ.

ಇವುಗಳ ಪೈಕಿ 1999ರ ಹೊರತಾಗಿ ಪ್ರತಿಬಾರಿಯೂ ಮತಗಟ್ಟೆ ಸಮೀಕ್ಷೆಗಳು ನಿಜವಾದ ಫಲಿತಾಂಶವನ್ನು ಪ್ರತಿಬಿಂಬಿಸುವಲ್ಲಿ ವಿಫಲವಾಗಿವೆ. ಯಾವೊಂದು ಸಮೀಕ್ಷೆಯೂ ನಿಜವಾಗಿಲ್ಲ ಎಂಬುದು ವಾಸ್ತವ. 2004, 2009, 2014ರಲ್ಲಿ ಆದ ಸಮೀಕ್ಷೆಗಳು ಹಾಗೂ ವಾಸ್ತವದಲ್ಲಿ ಬಂದ ಫಲಿತಾಂಶ ಬೇರೆಯೇ ಆಗಿದ್ದವು.

2009ರಲ್ಲಿ ಯುಪಿಎ ಮತ್ತು ಎನ್ಡಿಎ ನಡುವೆ ಹಣಾಹಣಿ ಇರಲಿದೆ ಎಂದು ಸಮೀಕ್ಷೆ ಹೇಳಿದರೆ ಫಲಿತಾಂಶ ಕಾಂಗ್ರೆಸ್ ಹಾಗೂ ಯುಪಿಎಗೆ ದೊಡ್ಡ ಮುನ್ನಡೆ ನೀಡಿತ್ತು.

2014ರಲ್ಲಿ ಸಹ ಸಮೀಕ್ಷೆಗಳು ಮೋದಿ ಅಧಿಕಾರಕ್ಕೆ ಬರುತ್ತಾರೆ ಎಂದು ಹೇಳಿದ್ದವಾದರೂ ಅವು ನೀಡಿದ ಸ್ಥಾನಗಳಿಗೂ ವಾಸ್ತವದಲ್ಲಿ ಬಿಜೆಪಿ/ಎನ್ಡಿಎ ಗೆದ್ದ ಸ್ಥಾನಗಳಿಗೂ ಅಜಗಜಾಂತರವಿತ್ತು.

ಇನ್ನು ವಿಧಾನಸಭಾ ಚುನಾವಣೆಗಳ ವಿಷಯದಲ್ಲಿ ಈ ಸಮೀಕ್ಷೆಗಳು ಕೆಲವೊಮ್ಮೆ ವಾಸ್ತವಕ್ಕೆ ಹತ್ತಿರ ಎನ್ನುವಂತಹ ಅಂಕಿ-ಸಂಖ್ಯೆ ನೀಡಿದ್ದರೂ ಲೋಕಸಭಾ ಚುನಾವಣೆಯ ವಿಚಾರದಲ್ಲಿ ಮಾತ್ರ ಎಡವಿದ್ದೇ ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ ನೋಡಿದರೆ ಮತಗಟ್ಟೆ ಸಮೀಕ್ಷೆಗಳ ವಿರುದ್ಧ ಪ್ರತಿಪಕ್ಷಗಳ ಕೆಂಡ ಕಾರುವುದರಲ್ಲಿ ಅಂತಹ ಪ್ರಮಾದವೇನೂ ಕಾಣುತ್ತಿಲ್ಲ ಎನ್ನಬಹುದು.

Leave a Reply

Your email address will not be published.

Social Media Auto Publish Powered By : XYZScripts.com