World cup cricket : team Indiaದ ಈ ಐವರು ಆಟಗಾರರ ಮೇಲೆಯೇ ನೆಟ್ಟಿದೆ ಎಲ್ಲರ ಕಣ್ಣು..

ವಿಶ್ವಕಪ್ ಕ್ರಿಕೆಟ್‌ಗೆ ದಿನಗಣನೆ ಆರಂಭವಾಗಿದೆ. ಎರಡು ಬಾರಿಯ ಚಾಂಪಿಯನ್ ತಂಡ ಭಾರತದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಕಪಿಲ್ ಹಾಗೂ ಧೋನಿ ನಾಯಕತ್ವದಲ್ಲಿ ಎರದು ಬಾರಿ ಟ್ರೋಫಿಯ ರುಚಿ ಕಂಡಿರುವ ಭಾರತ ಈ ಬಾರಿ ಕೊಹ್ಲಿ ಮುಂದಾಳತ್ವದಲ್ಲಿ ಹೊಸ ಹೆಜ್ಜೆ ಇಡಲಿದೆಯೇ ಎಂಬುದೇ ಚರ್ಚೆಯ ವಿಷಯವಾಗಿದೆ.

ಹಾಗೆ ನೋಡಿದರೆ ಆತಿಥೇಯ ಇಂಗ್ಲೆಂಡ್ ಹೊರತುಪಡಿಸಿ ಭಾರತವೇ ಕಪ್ ಗೆಲ್ಲುವ ಫೇವರಿಟ್ ಕುದುರೆಯಾಗಿದೆ. ಈ ಎರಡು ತಂಡಗಳ ಜೊತೆಗೆ ವಿಂಡೀಸ್ ಮತ್ತು ಆಸ್ಟ್ರೇಲಿಯಾದ ಹೆಸರೂ ಕೇಳಿಬರುತ್ತಿದೆಯಾದರೂ ಪ್ರಮುಖ ಪೈಪೋಟಿ ಭಾರತ ಮತ್ತು ಇಂಗ್ಲೆಡ್ ನಡುವೆ ಎಂದರೆ ತಪ್ಪಲ್ಲ.

ಈಗಾಗಲೇ ಎರಡು ಬಾರಿ ಟ್ರೋಫಿ ಗೆದ್ದಿರುವ ಭಾರತ ತನ್ನ ಗರಿಷ್ಠ ಬಲದಿಂದಲೇ ಕಣಕ್ಕಿಳಿಯುತ್ತಿದೆ. ಬ್ಯಾಟಿಂಗಿನಲ್ಲಿ ಅದರಲ್ಲಿಯೂ ಮಧ್ಯಮ ಕ್ರಮಾಂಕದ ದಾಂಡಿಗರ ವಿಷಯದಲ್ಲಿ ಕೊಂಚ ಡೊಂಕಿದ್ದರೂ ಒಟ್ಟಾರೆಯಾಗಿ ಕೊಹ್ಲಿ ಪಡೆ ಸಮತೋಲನದಿಂದ ಕೂಡಿದೆ.

ಈ ಬಾರಿ ಭಾರತ ಕಪ್ ಗೆಲ್ಲಬೇಕಾದರೇ ಐದಾರು ಮಂದಿ ಆಟಗಾರರು ಗರಿಷ್ಠ ಮಟ್ಟದ ಪ್ರದರ್ಶನ ನೀಡುವುದು ಅನಿವಾರ್‍ಯವಾಗಿದೆ. ಅವರಲ್ಲಿ ಪ್ರಮುಖವಾಗಿರುವವರೆಂದರೆ ನಾಯಕ ವಿರಾಟ್ ಕೊಹ್ಲಿ.

ಜಾಗತಿಕ ಕ್ರಿಕೆಟ್‌ನ ಅಗ್ರಮಾನ್ಯ ದಾಂಡಿಗ ಎನಿಸಿರುವ ಕೊಹ್ಲಿ ಐಪಿಎಲ್‌ನ ನಿರಾಸೆ  ಮರೆತು ತಮ್ಮ ಬ್ಯಾಟಿನ ಮೂಲಕ ಅಬ್ಬರಿಸಬೇಕಿದೆ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಕೊಹ್ಲಿ ಕೊಡುಗೆ ಟೂರ್ನಿಯಲ್ಲಿ ಭಾರತದ ಹಣೆಬರಹ ಬರೆಯುವುದರಲ್ಲಿ ಯಾವುದೇ ಸಂಶಯ ಇಲ್ಲ.

ಇದೇ ರೀತಿ ಕೊಹ್ಲಿಯ ಡೆಪ್ಯೂಟಿ ರೋಹಿತ್ ಶರ್ಮಾ ಫಾರಂ ಸಹ ಭಾರತಕ್ಕೆ ನಿರ್ಣಾಯಕವಾಗಲಿದೆ. ಏಕದಿನ ಪಂದ್ಯಗಳಲ್ಲಿ ದ್ವಿಶತಕಗಳ ಸರದಾರನಾಗಿರುವ, ಐಪಿಎಲ್ ಚಾಂಪಿಯನ್ ತಂಡದ ಈ ಆರಂಭಿಕ ಆಟಗಾರ ತಂಡದ ಬಹು ದೊಡ್ಡ ಆಸ್ತಿ ಎಂದರೆ ತಪ್ಪಾಗದು.

1983ರಲ್ಲಿ ಜಗತ್ತೇ ಅಚ್ಚರಿಗೊಳ್ಳುವ ರೀತಿಯಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದು ದೇಶದಲ್ಲಿ ಕ್ರಿಕೆಟ್ ಕ್ರಾಂತಿಗೆ ನಾಂದಿ ಹಾಡಿದ ಕಪಿಲ್ ದೇವ್ ನಂತರ 2011ರಲ್ಲಿ ಎರಡನೇ ಬಾರಿ ಟ್ರೋಫಿಗೆ ಮುತ್ತಿಕ್ಕಿದ ಧೋನಿ ಅವರಿಂದ ತಂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ.

ಕೇವಲ ಕೀಪಿಂಗ್, ಬ್ಯಾಟಿಂಗ್ ಅಲ್ಲದೇ ನಿರ್ಣಾಯಕ ಸಮಯದಲ್ಲಿ ಕೊಹ್ಲಿಗೆ ಅಗತ್ಯ ಮಾರ್ಗದರ್ಶನ ನೀಡುವ ಛಾತಿ ಉಳ್ಳ ಧೋನಿ ಭಾರತದ ಅಭಿಯಾನ ಯಶಸ್ವಿಯಾಗಲು ಪ್ರಧಾನ ಪಾತ್ರಧಾರಿಯಾಗಿದ್ದಾರೆ.

ಈ ಬಾರಿ ತಂಡದ ಬಲ ಎಂದರೆ ಅದರ ಮೊನಚಾದ ದಾಳಿ. ಆ ದಾಳಿಯ ಮುಂಚೂಣಿಯಲ್ಲಿರುವುದು ಜಸ್ಪ್ರೀತ ಬುಮ್ರಾ. ಸದ್ಯದ ಮಟ್ಟಿಗೆ ಜಾಗತಿಕ ಮಟ್ಟದಲ್ಲಿ ಅತ್ಯಂತ ಚಾಣಕ್ಷ ಹಾಗೂ ಪರಿಣಾಮಕಾರಿ ದಾಳಿಕಾರ ಎನಿಸಿರುವ ಬುಮ್ರಾ ಮೇಲೆ ಭಾರತದ ದಾಳಿ ಅವಲಂಬಿತವಾಗಿದೆ.

ಅದರಲ್ಲಿಯೂ ಕಡೆಯ ಓವರುಗಳಲ್ಲಿ ಬುಮ್ರಾ ಅವರ ಚಾಕಚಕ್ಯತೆ ಹಾಗೂ ನೈಪುಣ್ಯ ತಂಡಕ್ಕೆ ಅತ್ಯಗತ್ಯ ಶಕ್ತಿ ಒದಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೇ ರೀತಿ ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್‌ ತಂಡದ ಅಚ್ಚರಿಯ ಅಸ್ತ್ರವಾಗಿದ್ದಾರೆ.

ಯಾವುದೇ ತಂಡ, ಅದರಲ್ಲಿಯೂ ಕ್ರಿಕೆಟ್‌ನಂತಹ ಸಾಂಘಿಕ ಆಟದಲ್ಲಿ ಯಶ ಕಾಣಬೇಕಾದರೆ ಎಲ್ಲ ಸದಸ್ಯರ ಕಾಣಿಕೆ ಬಹಮೂಲ್ಯ. ಆದರೂ ಎಲ್ಲರೂ ಏಕಕಾಲಕ್ಕೆ ಗರಿಷ್ಠ ಮಟ್ಟದ ಪ್ರದರ್ಶನ ನಿಡುವುದು ಅಸಾಧ್ಯ. ಹಾಗಾಗಿ ಎಲ್ಲ ಸಂದರ್ಭಗಳಲ್ಲಿಯೂ ತಂಡಕ್ಕೆ ನೆರವಾಗಬಲ್ಲ ಆಟಗಾರರು ಬೇಕೇ ಬೇಕು. ಭಾರತದ ಪಾಲಿಗೆ ಈ ಐವರು ಆ ಕಾಯಕ ನಿಭಾಯಿಸುತ್ತಾರೆ ಎಂಬುದು ಅಭಿಮಾನಿಗಳ ಆಶಯ ಮತ್ತು ನಿರೀಕ್ಷೆಯಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com