ಧರ್ಮಸ್ಥಳದ ಮಂಜುನಾಥನಿಗೂ ತಟ್ಟಿದ ಬರದ ಬಿಸಿ : ಅಭಿಷೇಕಕ್ಕೂ ನೀರಿಲ್ಲದ ಸ್ಥಿತಿ

15 ದಿನ ಮಳೆ ಬರದಿದ್ದರೆ ಮಂಜುನಾಥನ ಅಭಿಷೇಕಕ್ಕೂ ನೀರಿಲ್ಲ. ಈಗ ಅಭಿಷೇಕಕ್ಕೆ ನೇತ್ರಾವತಿಯಲ್ಲಿ ತಾತ್ಕಲಿಕವಾಗಿ ನೀರಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ತಮ್ಮ ಕಳವಳವನ್ನು ಹೊರಹಾಕಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ನೀರಿನ ಸಮಸ್ಯೆಯಾಗಿದೆ. ಘಟ್ಟದ ಭಾಗದಲ್ಲಿ ಮಳೆಯಾಗದ ಕಾರಣ ನೇತ್ರಾವತಿಯಲ್ಲಿ ನೀರಿಲ್ಲ. ಅಲ್ಲದೆ ಹವಾಮಾನ ಇಲಾಖೆ ಇನ್ನೂ ಹತ್ತು ದಿನ ಮಳೆ ಬರಲ್ಲ ಎಂದು ಸೂಚನೆ ಕೊಟ್ಟಿದೆ. ಹೀಗಾಗಿ ಕ್ಷೇತ್ರ ದರ್ಶನ ಮುಂದೂಡಿ ಎಂದು ವಿನಂತಿ ಮಾಡುತ್ತಿದ್ದೇವೆ.

ನಾವು ಈ ಬಗ್ಗೆ ಎಷ್ಟೇ ಎಚ್ಚರಿಕೆ ವಹಿಸಿದ್ದರು ಕೂಡ ಶೌಚಾಲಯಗಳಿಗೆ ನೀರು ಕೊಡಬೇಕಾಗುತ್ತದೆ. ನಮ್ಮ ವಸತಿಯಲ್ಲಿ ಇರುವವರಿಗೆ ಶೌಚಾಲಯದಲ್ಲಿ ನೀರು ಕೊಡಲೇಬೇಕು. ಶಾಲೆಗಳಿಗೆ ರಜೆ ಇರುವುದರಿಂದ ಎಲ್ಲರೂ ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿ ನೀರಿನ ಸಮಸ್ಯೆ ಇದೆ. ಇಲ್ಲಿ ಬಂದರೂ ಸಾಕಷ್ಟು ನೀರು ಬೇಕಾಗುತ್ತದೆ. ಹಾಗಾಗಿ ಧರ್ಮಸ್ಥಳಕ್ಕೆ ಈಗಲೆ ಯಾರೂ ಬರಬೇಡಿ ಎಂದು ವಿನಂತಿ ಮಾಡುತ್ತಿದ್ದೇನೆ ಎಂದರು.

ನೇತ್ರಾವತಿ ಕಿಂಡಿ ಅಣೆಕಟ್ಟಿನಲ್ಲಿ ತಾತ್ಕಾಲಿಕ ನೀರು ಹಾಗೂ ತೀರ್ಥದ ಗುಂಡಿಯಲ್ಲಿ ಸ್ವಲ್ಪ ನೀರಿದೆ. ಮುಂದೆ ಮಳೆ ಬರದಿದ್ದರೆ ಮಂಜುನಾಥನಿಗೂ ಬರದ ಬಿಸಿ ತಟ್ಟಲಿದೆ. ಅಲ್ಲಿನ ತೀರ್ಥ ಗುಂಡಿಯಲ್ಲೂ ನಾಲ್ಕು ಅಡಿ ನೀರು ಕಡಿಮೆ ಆಗಿದೆ. ಹಿಂದೆಯೂ ಈ ರೀತಿ ಆಗಿದೆ. ಆದರೆ ಇಷ್ಟು ತೀವ್ರವಾಗಿ ಆಗಿರಲಿಲ್ಲ. ಉಪನದಿಗಳಲ್ಲಿ ನೀರು ಬತ್ತಿರುವ ಪರಿಣಾಮ ನೀರಿಗೆ ಸಮಸ್ಯೆ ಆಗಿದೆ. ಕಾಡು ಉಳಿಸದೇ ಇರುವ ಕಾರಣ ಈ ಸಮಸ್ಯೆ ಎದುರಾಗಿದೆ ಎಂದು ಅವರು ತಿಳಿಸಿದರು.

ಇದೇ ವೇಳೆ ಸರ್ಕಾರ ಮತ್ತು ಜಲತಜ್ಞರು ಈ ಬಗ್ಗೆ ಯೋಚನೆ ಮಾಡಬೇಕು. ಮುಂದಿನ 15-20 ವರ್ಷಗಳ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕು. ಪಶ್ಚಿಮ ಘಟ್ಟದಲ್ಲಿ ಅರಣ್ಯನಾಶದಿಂದ ನೀರಿನ ಸಮಸ್ಯೆ ಆಗಿದೆ ಎಂದು ವೀರೇಂದ್ರ ಹೆಗ್ಗಡೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com