ಚುನಾವಣಾ ಆಯೋಗದ ಮಹತ್ವದ ಹೇಳಿಕೆ: ಹೊಸ ಸರ್ಕಾರದ ರಚನೆಯ ಕುರಿತಂತೆ ದೊಡ್ಡ ಸುಳಿವು

ಚುನಾವಣಾ ಆಯೋಗದ ಮಹತ್ವದ ಹೇಳಿಕೆ: ಹೊಸ ಸರ್ಕಾರದ ರಚನೆಯ ಕುರಿತಂತೆ ದೊಡ್ಡ ಸುಳಿವು

ಹೌದು, ಈ ಚುನಾವಣೆಯ ಮಟ್ಟಿಗೆ ಇದು ಬಹಳ ಮಹತ್ವದ ಸುದ್ದಿ. ಬಹುಶಃ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಇಂತಹದೊಂದು ಬೆಳವಣಿಗೆ ಈ ಹಿಂದೆ ನಡೆದಿರಲಿಕ್ಕಿಲ್ಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು.

ಆ ಸುದ್ದಿ ಏನಿರಬಹುದು? ಇದರಿಂದ ಮುಂದಿನ ಸರ್ಕಾರದ ಮೇಲೆ ಬೀರಬಹುದಾದ ಪರಿಣಾಮವೇನು? ಈ ಸುದ್ದಿ ಮೊದಲು ಸಿಕ್ಕಿದ್ದು ಯಾರಿಗೆ? ಒಂದೊಂದಾಗಿ ನೋಡೋಣ.

ಆ ಸುದ್ದಿಯನ್ನು ಮೊದಲು ಬ್ರೇಕ್ ಮಾಡಿದ್ದು ಬೇರಾರೂ ಅಲ್ಲ. ಪ್ರಸಾರ ಭಾರತಿಯ ಅಧ್ಯಕ್ಷರಾಗಿದ್ದ ಜವಹರ್ ಸರ್ಕಾರ್ ಅವರು. ಸುಮಾರು 42 ವರ್ಷಗಳ ಕಾಲ ಐಎಎಸ್ ಅಧಿಕಾರಿಯಾಗಿದ್ದು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸರ್ಕಾರ್ ಇದನ್ನು ಮೊದಲ ಬಾರಿಗೆ ಎಲ್ಲಿ ಬ್ರೇಕ್ ಮಾಡಿದರು ಗೊತ್ತೇ?

ಟ್ವಿಟ್ಟರ್ ನಲ್ಲಿ.

ಹೌದು ಸುದ್ದಿ ಇದೇ.

‘ಭಾರತದ ಚುನಾವಣಾ ಆಯೋಗವು ಅಧಿಕೃತವಾಗಿ ಬಿಜೆಪಿಯನ್ನು ಸೇರಿದೆ ಎಂಬುದನ್ನು ನಿರಾಕರಿಸಿ ಹೇಳಿಕೆ ನೀಡಿದೆ. ಬದಲಿಗೆ ಕೇವಲ ಬಾಹ್ಯ ಬೆಂಬಲ ಮಾತ್ರ ನೀಡುವುದಾಗಿ ಹೇಳಿದೆ’

ತಮಾಷೆಯಾಗಿ ಕಾಣುತ್ತದಲ್ಲವೇ?

ಹೌದು ತಮಾಷೆಯೇ. ಆದರೆ, ವಾಸ್ತವದಂತೆ ಕಾಣುತ್ತಿರುವ ತಮಾಷೆ ಅಥವಾ ತಮಾಷೆಯಂತೆ ಕಾಣುತ್ತಿರುವ ವಾಸ್ತವ.

ಚುನಾವಣಾ ಆಯೋಗವು ಹಿಂದೆಂದೂ ಈ ಮಟ್ಟದ ಏಕಪಕ್ಷೀಯ ನಡವಳಿಕೆಯ ಆರೋಪಕ್ಕೆ ಗುರಿಯಾಗಿರಲಿಲ್ಲವೆಂಬುದನ್ನು ಇಲ್ಲಿ ಗಮನಿಸಬೇಕು. ಹಾಗಾಗಿ ಅದನ್ನು ಲೇವಡಿ ಮಾಡುವ ಉದ್ದೇಶದಿಂದ ಈ ಹಿರಿಯ ಅಧಿಕಾರಿ ಮಾಡಿರುವ ಟ್ವೀಟ್ ವೈರಲ್ ಆಗಿದೆ. ಇದನ್ನು ಬರೆಯುವ ಹೊತ್ತಿಗೆ ಮೇಲಿನ ಪೋಸ್ಟ್ 5300 ರೀಟ್ವೀಟ್ ಆಗಿದ್ದು 19,500 ಜನ ಲೈಕ್ ಮಾಡಿದ್ದಾರೆ.

ಬಿಜೆಪಿ ತನ್ನ ಬಗ್ಗೆ ನಾಚಿಕೆಪಟ್ಟುಕೊಳ್ಳಬೇಕಾದ ಸಂಗತಿ ಇದಾಗಿದೆ.

ಆದರೆ ಇದೇ ಸಂದರ್ಭದಲ್ಲಿ ಇನ್ನೊಂದು ಸಂಗತಿಯನ್ನೂ ಗಮನದಲ್ಲಿರಿಸಿಕೊಳ್ಳಬೇಕಿದೆ. ಟಿ.ಎನ್.ಶೇಷನ್ ಅವರ ನಂತರ ಚುನಾವಣಾ ಆಯೋಗದ ಆಯುಕ್ತರಾಗಿದ್ದ ಎಂ.ಎಸ್.ಗಿಲ್ ಅವರನ್ನು ಕಾಂಗ್ರೆಸ್ ಪಕ್ಷವು ರಾಜ್ಯಸಭಾ ಸದಸ್ಯರನ್ನಾಗಿಸಿದ್ದಲ್ಲದೇ ಮನಮೋಹನ ಸಿಂಗ್ ಅವರ ಸರ್ಕಾರದಲ್ಲಿ ಮಂತ್ರಿಯೂ ಆಗಿಸಿತ್ತು.

ಎಂ.ಎಸ್.ಗಿಲ್

ಹಾಗೆ ನೋಡಿದರೆ ಅದೂ ಸಹಾ ಅಂತಹ ಒಳ್ಳೆಯ ಸಂಪ್ರದಾಯವೇನೂ ಆಗಿರಲಿಲ್ಲ.

ಒಟ್ಟಿನಲ್ಲಿ ಭಾರತದ ಚುನಾವಣಾ ಆಯೋಗವು ತಮಾಷೆಯ ವಸ್ತುವಾಗಿರುವುದಕ್ಕಿಂತ ದುರಂತ ಇನ್ನೇನಿದೆ?

ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ಇಂಥವನ್ನು ಮಾಡುತ್ತವಾದರೂ, ಈಗ ಅಧಿಕಾರದಲ್ಲಿರುವ ಪಕ್ಷವು ಅತ್ಯಂತ ಹೆಚ್ಚು ಸಾಂವಿಧಾನಿಕ ಸಂಸ್ಥೆಗಳನ್ನು ಹಾಳುಮಾಡಿದ  ಆರೋಪ ಹೊತ್ತಿದೆ.

ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಕಾರ್ಟೂನುಗಳು, ಕಮೆಂಟುಗಳು ಚುನಾವಣಾ ಆಯೋಗದ ಕುರಿತೂ ಬರುತ್ತಿದೆ. ಚುನಾವಣಾ ಆಯೋಗವೇ ಬಿಜೆಪಿಯ ಕಚೇರಿ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈಗ ಸರ್ಕಾರ್ ಅವರು ಮಾಡಿರುವ ಲೇವಡಿ ಅತ್ಯಂತ ಹೆಚ್ಚು ಅಪಹಾಸ್ಯ ಮಾಡಿದ ವ್ಯಂಗ್ಯವಾಗಿದೆ. ಈಗಲಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳುತ್ತಾರೆಂದು ಆಶಿಸೋಣವೇ?

Leave a Reply

Your email address will not be published.

Social Media Auto Publish Powered By : XYZScripts.com