IPL hungama : ತವರಿನಲ್ಲೇ CSK ಮಣ್ಣುಮುಕ್ಕಿಸಿದ Mumbai ಫೈನಲ್ಲಿಗೆ ಲಗ್ಗೆ…..

ಪ್ರಸಕ್ತ ಐಪಿಎಲ್‌ನಲ್ಲಿ ಚೆನ್ನೈ ವಿರುದ್ಧ ಅಜೇಯ ದಾಖಲೆ ಮುಂದುವರಿಸಿದ ಮುಂಬೈ ಕ್ವಾಲಿಫಯರ್‌ನಲ್ಲಿ ಆರು ವಿಕೆಟ್ ಜಯದೊಂದಿಗೆ ಐದನೇ ಬಾರಿಗೆ ಫೈನಲ್ ಪ್ರವೇಶಿಸಿದೆ.

ಈ ಸಾಲಿನಲ್ಲಿ ಲೀಗ್ ಹಂದಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಚೆನ್ನೈ ವಿರುದ್ಧ ಗೆಲುವು ಸಾಧಿಸಿದ್ದ ಮುಂಬೈ ಸಂದರ್ಭೋಚಿತ ಆಟದ ನೆರವಿನಿಂದ ಕ್ವಾಲಿಫಯರ್‌ನಲ್ಲಿ ಸಹ ಜಯದ ನಗೆ ಬೀರಿತು. ಫೈನಲ್ ತಲುಪಲು ಚೆನ್ನೈ ತಂಡವು ಈಗ ಎರಡನೇ ಕ್ವಾಲಿಫಯರ್ ಆಡಬೇಕಿದೆ.

ಚೆಂಡು ಬುಗುರಿಯಂತೆ ತಿರುಗುವ ಚೆನ್ನೈನ ಚಿದಂಬರಂ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಚೆನ್ನೈನ ಅನುಭವಿ ಪಡೆ ಮುಂಬೈನ ಸ್ಪಿನ್ನಿಗರ ಮುಂದೆ ಗರ ಬಡಿದಂತಾಡಿತು. ಮೂವರು ಫಿರ್ಕಿಗಳೊಂದಿಗೆ ಕಣಕ್ಕಿಳಿದ ಮುಂಬೈ ಧೋನಿ ಪಡೆಯನ್ನು 20 ಓವರುಗಳಲ್ಲಿ ಕೇವಲ 131 ರನ್ನುಗಳಿಗೆ ನಿಯಂತ್ರಿಸಿತು.

ನಂತರ ತನ್ನ ಸರದಿ ಬಂದಾಗ ಮುಂಬೈ ತಂಡ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿ ಗೆಲುವು ದಾಖಲಿಸಿತು.

ಆರಂಭದಲ್ಲಿ ಮುಂಬಯಿ ಸಹ ಎಡವಿತು. ಕೇವಲ 21 ರನ್ ಆಗುವಲ್ಲಿ ಆರಂಭಿಕರು ಗೂಡು ಸೇರಿದರು. ಆದರೆ ಸೂರ್ಯಕುಮಾರ್ ಯಾದವ್ ಔಟಾಗದೆ 71 ರನ್ ಗಳಿಸಿ ತಂಡವನ್ನು ಜಯದ ಗೆರೆ ದಾಟಿಸಿದರು. ಇಶಾನ್ ಕಿಶನ್ 28 ಹಾಗೂ ಹಾರ್ದಿಕ್ ಪಾಂಡ್ಯ 13 ರನ್ ಮಾಡಿ ಯಾದವ್‌ಗೆ ಸಾಥ್ ನೀಡಿದರು.

ಇದಕ್ಕೆ ಮುನ್ನ ಚೆನ್ನೈ ಪರ ಮುರಳಿ ವಿಜಯ್ 26, ಅಂಬಟಿ ರಾಯುಡು ಔಟಾಗದೆ 42 ಹಾಗೂ ನಾಯಕ ಧೋನಿ ಔಟಾಗದೆ 37 ರನ್ ಗಳಿಸಿ ತಂಡ ಗೌರವಾರ್ಹ ಮೊತ್ತ ತಲುಪಲು ಹೆಗಲು ನೀಡಿದರು. ಧೋನಿ ಹಾಗೂ ಅಂಬಟಿ ಮುರಿಯದ ಐದನೇ ವಿಕೆಟ್‌ಗೆ 66 ರನ್ ಜೊತೆಯಾಟ ನಿಭಾಯಿಸಿದರು.

ಈ ಮೈದಾನದಲ್ಲಿ ಉಳಿದ ತಂಡಗಳನ್ನು ಹೈರಾಣಾಗಿಸುವ ಚೆನ್ನೈ ತಂಡವು ಮುಂಬಯ ವಿರುದ್ಧ ಮಾತ್ರ ಮಕಾಡೆ ಮಲಗಿದೆ. ಇದು ಮುಂಬೈ ವಿರುದ್ಧ ಈ ಮೈದಾನದಲ್ಲಿ ಚೆನ್ನೈಗೆ ಆರನೇ ಸತತ ಸೋಲಾಗಿದೆ.

ಈಗ ಧೋನಿ ತಂಡವು ಬುಧವಾರ ಹೈದರಾಬಾದ್ ಹಾಗೂ ಡೆಲ್ಲಿ ನಡುವೆ ನಡೆಯುವ ಎಲಿಮಿನೇಟರ್‌ ಪಂದ್ಯದಲ್ಲಿ ಗೆದ್ದ ತಂಡವನ್ನು ಎದುರಿಸಿ ಗೆದ್ದರಷ್ಟೇ ಫೈನಲ್ ತಲುಪಲು ಸಾಧ್ಯ.

Leave a Reply

Your email address will not be published.

Social Media Auto Publish Powered By : XYZScripts.com