ಪ್ರತಿಭಾವಂತ ಬಡ ವಿದ್ಯಾರ್ಥಿನಿಗೆ ಆರ್ಥಿಕ ಸಹಾಯ ಮಾಡಿದ ಬಿಗ್ ಬಾಸ್ ಪ್ರಥಮ್..!

ಕಳೆದ ಸೀಸನ್ನಿನ ಬಿಗ್ ಬಾಸ್ ಶೋ ವಿನ್ನರ್ ಆಗಿದ್ದವರು ಪ್ರಥಮ್. ಹಾಗೆ ಗೆದ್ದುಕೊಂಡ ಐವತ್ತು ಲಕ್ಷ ರೂಪಾಯಿಗಳನ್ನು ಸಮಾಜಮುಖಿಯಾದ ಕೆಲಸ ಕಾರ್ಯಗಳಿಗೆ ಬಳಸೋದಾಗಿ ಪ್ರಥಮ್ ಹೇಳಿಕೊಂಡಿದ್ದರು. ಆ ನಂತರದಲ್ಲಿ ಹಂತ ಹಂತವಾಗಿ ತಮ್ಮ ಮಾತಿಗೆ ಬದ್ಧವಾಗಿ ಮನ್ನಡೆಯುತ್ತಾ ಬಂದಿದ್ದ ಪ್ರಥಮ್ ಅವರೀಗ ನಿಜಕ್ಕೂ ಸಾರ್ಥಕವೆಂಬಂಥಾ ಕೆಲಸವೊಂದನ್ನು ಮಾಡಿದ್ದಾರೆ.

ಬಡತನದ ಬೇಗೆಯಿಂದಾಗಿ ವಿದ್ಯಾಭ್ಯಾಸವನ್ನು ದ್ವಿತೀಯ ಪಿಯುಸಿಗೇ ಮೊಟಕುಗೊಳಿಸಿಕೊಳ್ಳುವ ಸ್ಥಿತಿಯಲ್ಲಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳಿಗೆ ಪ್ರಥಮ್ ಆರ್ಥಿಕ ಸಹಾಯ ಮಾಡಿದ್ದಾರೆ. ಆಕೆಯ ಓದಿನ ಬಾಬತ್ತನ್ನು ತಾವೇ ಭರಿಸುವ ವಾಗ್ದಾನ ನೀಡುವ ಮೂಲಕ ಎಲ್ಲರೂ ಮೆಚ್ಚುವಂಥಾ ಕೆಲಸ ಮಾಡಿದ್ದಾರೆ.

ಹೀಗೆ ಪ್ರಥಮ್ ಅವರ ಮಾನವೀಯ ಸಹಾಯದಿಂದಲೇ ಮುರುಟಿ ಹೋಗುವಂತಿದ್ದ ಕನಸು ಮತ್ತೆ ಚಿಗುರಿದ ಸಂಭ್ರಮದಲ್ಲಿರುವಾಕೆ ಪ್ರತಿಭಾವಂತ ವಿದ್ಯಾರ್ಥಿನಿ ಮೇಘ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಹಲಗಾಪುರ ಗ್ರಾಮದ ಚಾಮರಾಜು ಮತ್ತು ರತ್ನಮ್ಮ ದಂಪತಿಯ ಪುತ್ರಿ ಮೇಘಾ, ದ್ವಿತೀಯ ಪಿಯುಸಿಯಲ್ಲಿ 91.5 ಪರ್ಸೆಂಟೇಜು ಅಂಕ ಗಳಿಸಿಕೊಂಡಿದ್ದಳು.

ಇಲ್ಲಿನ ಬಂಡಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿ 549 ಅಂಕಗಳೊಂದಿಗೆ ಗಮನಾರ್ಹ ಸಾಧನೆ ಮಾಡಿದ್ದರೂ ಹೆತ್ತವರ ಆರ್ಥಿಕ ಸಂಕಷ್ಟವೇ ಮೇಘಾಳ ಓದಿಗೆ ಕಂಟಕವಾಗಿತ್ತು. ಇನ್ನೇನು ಪಿಯುಸಿಗೇ ತನ್ನ ವ್ಯಾಸಂಗ ಮೊಟಕುಗೊಳ್ಳುವ ಭಯ ಈ ವಿದ್ಯಾರ್ಥಿನಿಯನ್ನು ಆವರಿಸಿಕೊಂಡಿತ್ತು.

ಈ ವಿಚಾರವನ್ನು ಅದು ಹೇಗೋ ತಿಳಿದುಕೊಂಡ ಪ್ರಥಮ್ ಕಳೆದ ಭಾನುವಾರ ಮೇಘಾಳ ಮನೆಗೆ ತೆರಳಿದ್ದಾರೆ. ಹೆತ್ತವರಿಗೆ ಧೈರ್ಯ ತುಂಬಿ, ಮಗಳನ್ನು ಓದಿಸುವಂತೆ ಪ್ರೇರೇಪಿಸಿ ಆರಂಭಿಕವಾಗಿ ಹತ್ತು ಸಾವಿರದಷ್ಟು ಹಣ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಮೇಘಾಳನ್ನು ಪೋಷಕರು ಯಾವ ಕಾಲೇಜಿಗೆ ಸೇರಿಸಿದರೂ ವಿದ್ಯಾಭ್ಯಾಸಕ್ಕೆ ನೆರವಾಗೋದಾಗಿಯೂ ಪ್ರಥಮ್ ವಾಗ್ದಾನ ನೀಡಿದ್ದಾರೆ. `ಮೇಘಾ ಕುಗ್ರಾಮದ ಹುಡುಗಿ. ಮನೆಯಲ್ಲಿ ಅಂಥಾ ಬಡತನವಿದ್ದರೂ ಇಷ್ಟೊಂದು ಅಂಕ ಗಳಿಸಿದ್ದೊಂದು ಸಾಧನೆ.

ಈ ಹುಡುಗಿ ಬಡತನದ ಕಾರಣದಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿಕೊಳ್ಳೋ ಸ್ಥಿತಿ ತಲುಪಿರೋದನ್ನು ಕೇಳಿ ಬೇಸರವಾಯ್ತು. ಆದ್ದರಿಂದಲೇ ಸಹಾಯ ಮಾಡಿದ್ದೇನೆ. ಮುಂದೆಯೂ ಮೇಘಾ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತೇನೆ. ನಾನು ಬಿಗ್ ಬಾಸ್ ಶೋನಲ್ಲಿ ಗೆದ್ದ ಹಣ ಇಂಥಾ ಒಳ್ಳೆ ಕೆಲಸ ಕಾರ್ಯಗಳಿಗೇ ವಿನಿಯೋಗವಾಗಬೇಕೆಂಬುದು ತಮ್ಮ ಮಹದಾಸೆ ಅಂತ ಪ್ರಥಮ್ ಹೇಳಿಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com