ಮತ್ತೆ ಶುರುವಾಯ್ತು ಜೆಡಿಎಸ್ ನಾಯಕರಿಗೆ ಸಂಕಟ : ನಾಡಿದ್ದು ಚುನಾವಣೆ ಇಂದು ಐಟಿ ದಾಳಿ

ಲೋಕಸಭಾ ಚುನಾವಣೆಗೆ ಇನ್ನೂ ಎರಡು ದಿನ ಇರುವಾಗಲೇ ಮತ್ತೆ ಬೆಳ್ಳಂಬೆಳಗ್ಗೆ ಆದಾಯ ಇಲಾಖೆಯವರು ಜೆಡಿಎಸ್ ನಾಯಕರು ಮತ್ತು ಅವರ ಆಪ್ತರ ಮನೆಯ ಮೇಲೆ ದಾಳಿ ಮಾಡಿದ್ದಾರೆ.

ಹಾಸನದ ಹರದನಹಳ್ಳಿಯಲ್ಲಿ ಇಂದು ಬೆಳಿಗ್ಗೆ 7:15ಕ್ಕೆ ಐಟಿ ಅಧಿಕಾರಿಗಳು ಸಚಿವ ರೇವಣ್ಣ ಆಪ್ತರ ಮನೆ ಮೇಲೆ ಮತ್ತೆ ಐಟಿ ದಾಳಿ ಮಾಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ತಮ್ಮನ ಮಗ ಪಾಪಣ್ಣಿ ಅವರ ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಪಾಪಣ್ಣಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾಗಿದ್ದಾರೆ. ಮೂರು ಇನ್ನೋವಾ ಕಾರಿನಲ್ಲಿ 15 ಜನರ ತಂಡ ಬಂದು ಪರಿಶೀಲನೆ ನಡೆಸುತ್ತಿದೆ.

ಇತ್ತ ಮಂಡ್ಯದಲ್ಲೂ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಸದಸ್ಯ ಮತ್ತು ಸಚಿವ ಪುಟ್ಟರಾಜು ಬೆಂಬಲಿಗನ ಮನೆ ಮೇಲೆ ರೇಡ್ ಮಾಡುತ್ತಿದ್ದಾರೆ. ತಿಮ್ಮೇಗೌಡ ಎಂಬವರ ಪಾಂಡವಪುರ ಪಟ್ಟಣದಲ್ಲಿರುವ ಮನೆ, ಪೆಟ್ರೋಲ್ ಬಂಕ್, ಕಚೇರಿ ಮೂರು ಕಡೆ ದಾಳಿ ಮಾಡಿದ್ದಾರೆ.

ಮಂಡ್ಯದ ಮದ್ದೂರಿನಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಸ್ವಾಮಿ ಅವರ ಪತಿ ಶ್ರೀನಿಧಿ ಪ್ರತಿಷ್ಠಾನದ ಅಧ್ಯಕ್ಷ ಎಸ್‍ಪಿ ಸ್ವಾಮಿ ಅವರು ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಗೆಸ್ಟ್ ಹೌಸ್‍ನಲ್ಲಿ ತಂಗಿದ್ದರು. ಇಂದು ಬೆಳಗಿನ ಜಾವ ಸುಮಾರು 5.30 ಸಮಯದಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com