ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನಂತರದ ದಂತಕಥೆ ನಿಮಗೆ ಗೊತ್ತೇ?

ಏಪ್ರಿಲ್ 13, 1919. ಅದು ಪಂಜಾಬ್‍ನ ಅಮೃತಸರ ಜಿಲ್ಲೆಯ ಜಲಿಯನ್ ವಾಲಾಬಾಗ್ ವಾಲಾಬಾಗ್ ಉದ್ಯಾನವನ. ಅಲ್ಲಿ ಶಾಂತಿಯುತವಾಗಿ ಮತ್ತು ನಿಶಸ್ತ್ರವಾಗಿ ಸಭೆ ಸೇರಿದ್ದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಬ್ರಿಟೀಷ್ ಸೇನಾಧಿಕಾರಿ ಜನರಲ್ ಡಯರ್‍ನ ಆಜ್ಞಾನುಸಾರ ಗುಂಡಿನ ಮಳೆಗೆರೆಯಲಾಗುತ್ತದೆ. ಮೂರು ಸಾವಿರಕ್ಕೂ ಅಧಿಕ ಮಂದಿ ಹೋರಾಟಗಾರರು ಪ್ರಾಣಾರ್ಪಣೆ ಮಾಡುತ್ತಾರೆ. ಆ ಸುದ್ದಿ ಜಲಿಯನ್ ವಾಲಾಬಾಗ್ ದುರಂತ ಎಂದು ಜಗತ್ತಿನಾದ್ಯಂತ ಪಸರಿಸುತ್ತದೆ.

ಏಪ್ರಿಲ್ 14, 1919. ಅಲ್ಲಿಗೆ ಪುಟ್ಟ ಬಾಲಕನೊಬ್ಬ ಬರುತ್ತಾನೆ. ರಕ್ತಸಿಕ್ತ ಮಣ್ಣ, ಹಳೇ ಬಟ್ಟೆ ಬರೆ ಚಪ್ಪಲಿಗಳನ್ನು ನೋಡಿ ಕ್ರುದ್ಧಗೊಳ್ಳುತ್ತಾನೆ. ಡಬ್ಬಿಯಲ್ಲಿದ್ದ ಊಟವನ್ನು ಚೆಲ್ಲಿ ಅದಕ್ಕೆ ರಕ್ತಸಿಕ್ತವಾದ ಮಣ್ಣನ್ನು ತುಂಬಿ, ನಿಮ್ಮ ಸಾವಿಗೆ ನ್ಯಾಯ ದೊರಕಿಸುತ್ತೇನೆಂದು ಶಪಥ ಮಾಡುತ್ತಾನೆ. ‘ಅಣ್ಣ ಏಕೆ ಸಪ್ಪಗಿದ್ದೀಯಾ, ಊಟ ಮಾಡೋಲ್ಲವೇ?’ ಮನೆಯಲ್ಲಿ ತಂಗಿ ಕೇಳುತ್ತಾಳೆ. ತನ್ನ ತಂಗಿಗೆ ನಿನ್ನೆ ನಡೆದಿದ್ದ ದುರಂತದ ಬಗ್ಗೆ ವಿವರಿಸುತ್ತಾನೆ. ನಮ್ಮ ದೇಶಕ್ಕೆ ನುಗ್ಗಿರುವ ದ್ರೋಹಿ ಬ್ರಿಟೀಷರನ್ನು ಸೆದೆಬಡಿಯಬೇಕೆಂದು ತಿಳಿಸುತ್ತಾನೆ.

ಏಪ್ರಿಲ್ 15, 1919. ಆ ಬಾಲಕನ ಚಿಕ್ಕಪ್ಪ ಮಾವಿನ ಬೀಜ(ವಾಟೆ)ವನ್ನು ಹಿತ್ತಲಿನಲ್ಲಿ ನೆಡುತ್ತಿರುತ್ತಾರೆ. ಅಲ್ಲಿಗೆ ಬಂದ ಬಾಲಕ ಕೇಳುತ್ತಾನೆ.
ಚಿಕ್ಕಪ್ಪ ಏನು ಮಾಡುತ್ತಿದ್ದೀರಿ?
ಮಾವಿನ ಬೀಜ ನೆಡುತ್ತಿದ್ದೇನೆ ಮಗು
ಏಕೆ ನೆಡುತ್ತಿದ್ದೀರಿ?
ಏಕೆಂದರೆ ಇದು ಮಾವಿನ ಸಸಿಯಾಗುತ್ತದೆ, ನಂತರ ಬೆಳೆದು ಮರವಾಗುತ್ತದೆ.
ಅದರಿಂದ ಏನು ಪ್ರಯೋಜನ?
ಇದು ಸಾವಿರಾರು ಮಾವಿನ ಹಣ್ಣುಗಳನ್ನು ನಮಗೆ ನೀಡುತ್ತದೆ.
ಇದನ್ನು ಕೇಳಿದ ಕೂಡಲೇ ಆ ಬಾಲಕ ಮನೆಗ ಓಡುತ್ತಾನೆ. ತನಗೆ ಆಡಲೆಂದು ತಂದಿದ್ದ ಪಿಸ್ತೂಲೊಂದನ್ನು ತಂದು ತಾನು ಸಹ ನೆಡಲು ಆರಂಭಿಸುತ್ತಾನೆ. ಆಗ ಪ್ರಶ್ನೆ ಕೇಳುವ ಸರದಿ ಆತನ ಚಿಕ್ಕಪ್ಪನದಾಗಿರುತ್ತದೆ.
ಏನು ಮಾಡುತ್ತಿದ್ದೀಯ ಮಗು?
ಕಾಣುತ್ತಿಲ್ಲವೇ, ಬಂದೂಕು ನೆಡುತ್ತಿದ್ದೇನೆ
ಏಕೆ ನೆಡುತ್ತಿದ್ದೀಯಾ?
ಏಕೆಂದರೆ ಇದು ಬಂದೂಕಿನ ಗಿಡವಾಗುತ್ತದೆ, ನಂತರ ಬೆಳೆದು ಮರವಾಗುತ್ತದೆ.
ಅದರಿಂದ ಏನು ಪ್ರಯೋಜನ?
ಇದು ಸಾವಿರಾರು ಬಂದೂಕೂಗಳನ್ನು ನಮಗೆ ನೀಡುತ್ತದೆ. ಆ ಬಂದೂಕುಗಳಿಂದ ನಮ್ಮನ್ನು ಹಿಂಸಿಸುತ್ತಿರುವ ಬ್ರೀಟಿಷರನ್ನು ಸುಟ್ಟು ಈ ದೇಶದಿಂದ ಓಡಿಸುತ್ತೇನೆ ಎನ್ನುತ್ತಾನೆ ಆ ಪುಟ್ಟ ಬಾಲಕ.
ಎದುರಿಗಿದ್ದ ಆತನ ಚಿಕ್ಕಪ್ಪನ ಬಾಯಲ್ಲಿ ಮಾತೇ ಬರುವುದಿಲ್ಲ. ಆ ಬಾಲಕನ್ನು ಅಪ್ಪಿ ಕಣ್ಣಿರಿಡುತ್ತಾರೆ.
ಆ ಬಾಲಕನ ಹೆಸರು ಭಗತ್ ಸಿಂಗ್. ಆಗ ಆತನ ವಯಸ್ಸು ಕೇವಲ 12 ವರ್ಷ. ಆತನ ಚಿಕ್ಕಪ್ಪನ ಹೆಸರು ಸರ್ದಾರ್ ಅಜಿತ ಸಿಂಗ್.

ಸ್ನೇಹಿತರೇ ಇದು ಸತ್ಯವೋ, ಸುಳ್ಳೋ ಎಂಬುದು ಮುಖ್ಯವಲ್ಲ. ಇಂದು ಬಹಳಷ್ಟು ಕಡೆ ಈ ದಂತಕಥೆ ಹಬ್ಬಿದೆ. ಭಗತ್ ಸಿಂಗ್ ಜೀವನ ಮತ್ತು ಹೋರಾಟ ಕುರಿತ ಸಿನಿಮಾಗಳಲ್ಲಿ ಇದು ಬರುತ್ತದೆ. ಇದರ ಸಾರಂಶ ಮಾತ್ರ ಎಂತವರನ್ನು ಸ್ಫೂರ್ತಿಗೊಳಿಸುತ್ತದೆ. 12 ವರ್ಷದ ಬಾಲಕ ಭಗತ್ ಸಿಂಗ್ ಗಿದ್ದ ದೇಶಪ್ರೇಮ, ಶತ್ರುಗಳ ವಿರುದ್ಧ ಇದ್ದ ಸಿಟ್ಟು, ಆಕ್ರೋಶ, ತಾನು ಹತಾತ್ಮನಾಗುವವರೆಗೂ ಇದ್ದ ಬದ್ಧತೆ, ಭಾರತದ ಭವಿಷ್ಯದ ಬಗ್ಗೆ ಇದ್ದ ಸ್ಪಷ್ಟತೆ ಭಗತ್ ಸಿಂಗ್‍ರನ್ನು ಪ್ರಪಂಪದ ಮೇರು ಹೋರಾಟಗಾರನ ಸ್ಥಾನಕ್ಕೆ ಏರಿಸಿದೆ.

ನೂರು ವರ್ಷಗಳ ಹಿಂದೆ ನಡೆದಿದ್ದ ಜಲಿಯನ್ ವಾಲಾಬಾಗ್ ದುರಂತದ ಹುತಾತ್ಮರಿಗೆ ನಾವು ಗೌರವ ಮತ್ತು ನ್ಯಾಯ ಸಲ್ಲಿಸಬೇಕಿದೆ. ಇಂದಿಗೂ ಕೂಡ ಜನರ ಹಕ್ಕುಗಳು ಅಪಾಯದ ಅಂಚಿನಲ್ಲಿವೆ. ಬಡವರು, ತಳಸಮುದಾಯದವರು, ಮಹಿಳೆಯರು ಆತಂಕದಲ್ಲಿದ್ದಾರೆ. ಅವರ ಪರವಾಗಿ ದಿಟ್ಟವಾಗಿ ದನಿಯೆತ್ತುವ ತುರ್ತು ಹಿಂದಿಗಿಂತಲೂ ಹೆಚ್ಚು ಅನಿವಾರ್ಯವಾಗಿದೆ. ನೂರು ವರ್ಷದ ಹಿಂದೆ ಮಡಿದ ವೀರರ ತ್ಯಾಗ ಬಲಿದಾನಗಳನ್ನು ಸ್ಫೂರ್ತಿಯಾಗಿ ಪಡೆದು ಹೋರಾಟ ಮುಂದುವರೆಸೋಣ. ಅವರಿಗೆ ನಿಜವಾದ ಗೌರವ ಸಲ್ಲಿಸೋಣ.

Leave a Reply

Your email address will not be published.

Social Media Auto Publish Powered By : XYZScripts.com