ಮೋದಿಗೆ ರಜನಿಕಾಂತ್‌ ವಿಶೇಷ ಮನವಿ – ಮುಂದಿನ ವಿಧಾನಸಭೆ ಚುನಾವಣೆಗೆ ರಜನಿ ತಯಾರಿ..

ಸೂಪರ್ ಸ್ಟಾರ್‌ ರಜನಿಕಾಂತ್‌ ಅವರು ಬಿಜೆಪಿಯ ಪ್ರಣಾಳಿಕೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ನದಿಗಳ ಜೋಡಣೆ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಬಿಜೆಪಿ ತನ್ನ 2019ರ ಪ್ರಣಾಳಿಕೆಯಲ್ಲಿ ಹೇಳಿದೆ. ಇದು ಜಾರಿಯಾದರೆ ಅದಕ್ಕಿಂತಲೂ ಜನಕ್ಕೆ ಇನ್ನೇನು ಬೇಕು. ನದಿಗಳ ಜೋಡಣೆ ಭರವಸೆಯು ಜಾರಿಯಾದರೆ ದೇಶದ ಬಡತನ ಅರ್ಧದಷ್ಟು ನೀಗಲಿದೆ ಎಂದು ಅವರು ಹೇಳಿದ್ದಾರೆ.

ಚೆನ್ನೈನಲ್ಲಿರುವ ಪತ್ರಕರ್ತರ ಜೊತೆ ಮಾತನಾಡಿದ ರಜನೀಕಾಂತ್‌ ಅವರು, ‘ಬಿಜೆಪಿ ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಯಲ್ಲಿ ನದಿ ಜೋಡಣೆ ಬಗ್ಗೆ ಉಲ್ಲೇಖಿಸಿದೆ. ಅಲ್ಲದೆ, ಅದಕ್ಕಾಗಿ ಸಮಿತಿಯೊಂದನ್ನು ನೇಮಕ ಮಾಡುವುದಾಗಿಯೂ ಹೇಳಿದೆ. ಒಂದು ವೇಳೆ ಎನ್‌ಡಿಎ ಸರ್ಕಾರ ರಚನೆ ಮಾಡಿದರೆ, ಅವರು ಮೊದಲು ದೇಶದಲ್ಲಿನ ನದಿ ಜೋಡಣೆಗೆ ಮುಂದಾಗಬೇಕು,’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಮನವಿ ಮಾಡಿದರು.

ನದಿ ಜೋಡಣೆ ಮಾಡುವುದರಿಂದ ದೇಶದಲ್ಲಿರುವ ಅರ್ಧಕರ್ಧ ಬಡತನ ನಿರ್ಮೂಲನೆಯಾಗಿದೆ. ಕೋಟ್ಯಂತರ ಜನರು ಉದ್ಯೋಗಿಗಳಾಗಲಿದ್ದಾರೆ. ರೈತರ ಜೀವನ ಸುಧಾರಣೆಯಾಗಲಿದೆ ಎಂದು ರಜನಿ ಹೇಳಿದರು.

ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ನದಿಗಳ ಜೋಡಣೆ ಯೋಜನೆ ಜಾರಿಗೊಳಿಸುವ ಬಗ್ಗೆ ಹೇಳಿದ್ದರು. ಅಂದಿನಿಂದ ನಾನೂ ಸಹ ಈ ಯೋಜನೆಯನ್ನು ಪ್ರತಿಪಾದಿಸುತ್ತಾ ಬಂದಿದ್ದೇನೆ ಎಂದಿದ್ದಾರೆ ರಜನಿಕಾಂತ್.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಫೆ. 17ರಂದು ರಜನಿಕಾಂತ್‌ ಹೇಳಿದ್ದರು. ಯಾವುದೇ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿದ್ದು ಮಾತ್ರವಲ್ಲದೆ, ರಜನಿ ಮಕ್ಕಳ್‌ ಮಂದ್ರಮ್‌ನ ಹೆಸರು ಮತ್ತು ಧ್ವಜವನ್ನು ಯಾರೂ ಬಳಸುವಂತಿಲ್ಲ ಎಂದೂ ಹೇಳಿದ್ದರು.

ನನ್ನ ರಾಜಕೀಯ ಸಂಪೂರ್ಣ ಪಾರದರ್ಶಕ. ಅದು ಧರ್ಮ, ಜಾತಿಯನ್ನು ಆಧರಿಸಿದ್ದಲ್ಲ, ಅಧ್ಯಾತ್ಮದ ನೆಲೆಗಟ್ಟಿನದ್ದು. ಹುದ್ದೆ, ಸ್ಥಾನಮಾನಕ್ಕಾಗಿ ರಾಜಕೀಯ ಪ್ರವೇಶಿಸುತ್ತಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ 234 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ರಜನಿಕಾಂತ್‌ ಪ್ರಕಟಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com