ಫಟಾಫಟ್ ಬೇವು ಬೆಲ್ಲದ ಸ್ಪೆಷಲ್ ಪಾನಕ ತಯಾರಿಸಿ, ಬಾಯಿಚಪ್ಪರಿಸಿ ಕುಡಿಯಿರಿ..

ಹಬ್ಬಗಳು ಭಾರತೀಯ ಸಂಪ್ರದಾಯದ ತಿಲಕ ಎಂಬ ಮಾತಿದೆ. ಭಾರತದ ಪ್ರತಿ ಹಬ್ಬ ತನ್ನದೇ ಆದ ವಿಶೇಷತೆ, ಆಚರಣೆಯನ್ನು ಹೊಂದಿರುತ್ತದೆ. ಪೂಜೆ-ಪುನಸ್ಕಾರಗಳ ಜೊತೆಯಲ್ಲಿ ಆ ಹಬ್ಬದ ವಿಶೇಷ ಸಿಹಿ ಅಡುಗೆ ಸಿದ್ಧವಾಗಿರುತ್ತದೆ. ಯುಗಾದಿ ಹಬ್ಬ ಸ್ವಲ್ಪ ಭಿನ್ನವಾಗಿರುತ್ತದೆ. ಕಾರಣ ಈ ಹಬ್ಬದಂದು ಸಿಹಿ ಜೊತೆಯಲ್ಲಿ ಬೇವು ನೀಡಲಾಗುತ್ತದೆ. ಅಂತೆಯೇ ಯುಗಾದಿ ಹಬ್ಬದಂದು ಬೇವು-ಬೆಲ್ಲವನ್ನು ತಿನ್ನುವುದು ಆಚರಣೆ. ಇದೇ ಬೇವು-ಬೆಲ್ಲದಿಂದ ಬಿಸಿಲ ನಾಡು ಉತ್ತರ ಕರ್ನಾಟಕದ ಜನತೆ ಸ್ಪೆಷಲ್ ಪಾನಕ ತಯಾರಿಸಿ, ಮನೆಗೆ ಗೆಳೆಯರು- ನೆರೆಹೊರೆಯವರನ್ನು ಕರೆಸಿ ಎಲ್ಲರೊಂದಿಗೆ ಸೇವಿಸಿ ಹಬ್ಬವನ್ನು ಐಕ್ಯತೆಯೊಂದಿಗೆ ಆಚರಿಸುತ್ತಾರೆ.

ಸಾಮಾಗ್ರಿಗಳು:
1. ಬೇವಿನ ಹೂವು – ಸ್ವಲ್ಪ
2. ದ್ರಾಕ್ಷಿ – 4-5
3. ಮಾವಿನ ಕಾಯಿ – 3 ಚಮಚ
4. ಬೆಲ್ಲ – ಅರ್ಧ ಕಪ್
5. ಬಾಳೆಹಣ್ಣು – ಒಂದು
6. ಹುರಿಗಡಲೆ ಹಿಟ್ಟು – ಅರ್ಧ ಪಕ್
7. ಹುಣಸೆ ಹಣ್ಣಿನ ರಸ – 1 ಕಪ್
8. ಕತ್ತರಿಸಿದ ಕಲ್ಲಂಗಡಿ- 4, 5 ಪೀಸ್
9. ಶುಂಠಿ ಪೌಡರ್ – ಚಿಟಿಕೆ
10. ಉಪ್ಪು – ರುಚಿಗೆ ತಕ್ಕಷ್ಟು
11. ಬಾದಾಮಿ, ಗೋಡಂಬಿ ಮತ್ತು ಕಲ್ಲು ಸಕ್ಕರೆ -ಸ್ವಲ್ಪ

 

ಬೇವು ಬೆಲ್ಲದ ಪಾನಕ ಮಾಡುವ ವಿಧಾನ:
* ಒಂದು ಕಪ್ ಹುಣಸೆ ಹಣ್ಣಿನ ರಸವನ್ನು ದೊಡ್ಡ ಪಾತ್ರೆಗೆ ಹಾಕಿ, ಅದಕ್ಕೆ ಬೆಲ್ಲ ಮತ್ತು ಕಲ್ಲು ಸಕ್ಕರೆ ಹಾಕಿ ನೆನೆಯಲು ಬಿಡಿ.
* ಹುಣಸೆ ಹಣ್ಣು, ಬೆಲ್ಲ ಮತ್ತು ಕಲ್ಲು ಸಕ್ಕರೆಯ ಮಿಶ್ರಣಕ್ಕೆ 2 ಚಮಚ ಹುರಿಗಡಲೆ ಹಿಟ್ಟು ಹಾಕಿ ಗಂಟು ಬರದಂತೆ ಬೆರೆಸಿ.
* ಇತ್ತ ಮಾವಿನ ಕಾಯಿ, ದ್ರಾಕ್ಷಿ, ಕಲ್ಲಂಗಡಿ, ಬಾಳೆಹಣ್ಣು, ಬಾದಾಮಿ, ಗೋಡಂಬಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. (ಮಾವಿನ ಕಾಯಿ ಕಾಯಿಯನ್ನು ಕೊಬ್ಬರಿ ತುರಿಯಂತೆ ಮಾಡಿಕೊಳ್ಳುವುದು ಉತ್ತಮ)
* ಹುಣಸೆ ಹಣ್ಣಿನ ಮಿಶ್ರಣಕ್ಕೆ ಚಿಕ್ಕದಾಗಿ ಕತ್ತರಿಸಿಕೊಂಡಿರುವ ಎಲ್ಲ ಹಣ್ಣುಗಳನ್ನು ಒಂದೊಂದಾಗಿ ಹಾಕುತ್ತಾ ಹೋಗಬೇಕು.
* ಈ ಮಿಶ್ರಣಕ್ಕೆ ಒಂದರಿಂದ ಎರಡು ಗ್ಲಾಸ್ ನೀರನ್ನು ಬೆರೆಸಿಕೊಳ್ಳಿ.
* ನೀರು ಸೇರಿಸಿದ ಬಳಿಕ ಸ್ವಲ್ಪ ಶುಂಠಿ ಪೌಡರ್, ಸ್ವಲ್ಪ ಉಪ್ಪು ಹಾಕಿ, ಕೊನೆಯದಾಗಿ ಬೇವಿನ ಹೂಗಳನ್ನು ಹಾಕಿದರೆ ಬೇವು-ಬೆಲ್ಲದ ಪಾನಕ ರೆಡಿ.

ಉತ್ತರ ಕರ್ನಾಟಕದಲ್ಲಿ ಬೇವು-ಬೆಲ್ಲದ ಪಾನಕ ತಯಾರಿಸಲು ಹೊಸದಾಗಿ ಮಡಿಕೆ ಖರೀದಿ ಮಾಡುತ್ತಾರೆ. ಮಡಿಕೆಯಲ್ಲಿ ಪಾನಕ ಹಾಕಿದ ಕೆಲವೇ ಗಂಟೆಗಳಲ್ಲಿ ತಣ್ಣಗಾಗುತ್ತದೆ. ಪಾನಕ ಸಿದ್ಧಗೊಂಡ ಬಳಿಕ ಮಡಿಕೆಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಪೂಜೆಯ ಬಳಿಕ ನೆರೆಹೊರೆಯವರಿಗೆ, ಗೆಳೆಯರನ್ನು ಮನೆಗೆ ಕರೆಸಿ ಪಾನಕ ನೀಡಿ ಎಲ್ಲರೊಂದಿಗೆ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.

Leave a Reply

Your email address will not be published.

Social Media Auto Publish Powered By : XYZScripts.com