“ಸುಖದುಃಖೇ ಸಮೇಕೃತ್ವಾ” : ಯುಗಯಗಾದಿ ಕಳೆದರು ಯುಗಾದಿ ಮರಳಿ ಬಂದಿದೆ..

ನಮ್ಮ ಸಂಸ್ಕೃತಿಯೇ ಹಾಗೆ, ಪ್ರತಿಯೊಂದು ಆಚರಣೆಯನ್ನು ನಾನಾವಿಧವಾದ ಪ್ರಯೋಜನಗಳ ದೃಷ್ಟಿಯಲ್ಲಿ ವಿಮರ್ಶಿಸಿ ವಿಧಿಸಿರುತ್ತದೆ. ಈ ಆಚರಣೆಗಳು ಏನೇನು, ಯಾಕೆ ಆಚರಿಸುತ್ತೇವೆ ಎನ್ನುವುದು ನಮಗೆ ಗೊತ್ತಿಲ್ಲದಿರಬಹುದು , ಆದರೆ ಅದರ ಉಪಯೋಗವಿಲ್ಲ ಎಂದೇನಿಲ್ಲ. ಉದಾಹರಣೆಗೆ ಯುಗಾದಿಯ ಎಳ್ಳು-ಬೆಲ್ಲ , ಏಕಾದಶಿಯ ಉಪವಾಸ, ಧನುರ್ಮಾಸದ ಹುಗ್ಗಿ  ಹೀಗೆ ಎಲ್ಲವೂ ಆರೋಗ್ಯದ ದೃಷ್ಟಿಯಿಂದ ಆಯಾ ಕಾಲಕ್ಕೆ ಅತ್ಯುತ್ತಮ. ದೀಪಾವಳಿಯ ಗೋಪೂಜೆ, ನವರಾತ್ರಿಯ ಗಜಾಶ್ವಾದಿಗಳ ಪೂಜೆಗಳು ಮನುಷ್ಯ ಮತ್ತು ಪ್ರಾಣಿಗಳ ನಡುವೆ ಬಾಂಧವ್ಯವನ್ನು ಧೃಡಗೊಳಿಸಲು ಸಹಾಯಕ. ಹೀಗೆ ಎಲ್ಲ ಆಚರಣೆಗಳೂ ಒಂದು ವೈಶಿಷ್ಟ್ಯಪೂರ್ಣವಾದ ಗಂಭೀರವಾದ ಅರ್ಥವನ್ನು ಹೊಂದಿವೆ.

ಇದರಂತೆ ನಮ್ಮ ನವವರ್ಷವಾದ ಯುಗಾದಿಯೂ ಒಂದು ವಿಶಿಷ್ಟವಾದ ಆಚರಣೆ. ಜನವರಿ ಒಂದರಂದು ಹೊಸವರ್ಷವೆನ್ನಲು ಬದಲಾಗುವುದು ಕ್ಯಾಲೆಂಡರ್ ಒಂದೇ. ಆದರೆ ಯುಗಾದಿಯಂದು ಹಾಗಲ್ಲ. ಪೂರ್ಣಪ್ರಕೃತಿಯು ಮಾಗಿಯ ಚಳಿಗೆ ನಿರಾಭರಣೆಯಾಗಿ ನಂತರದ ವಸಂತಕ್ಕೆ ಹಸಿರ ಸಿರಿಯ ಹೊದ್ದು ಅಲಂಕೃತಳಾಗುವ ಸಮಯ. ಮಾವಿನ ಚಿಗುರಿನ ತೋರಣ, ಕೋಗಿಲೆಯ ಪಂಚಮದ ದನಿಯ ಸುಪ್ರಭಾತ ಒಂದು ಹೊಸಪ್ರಪಂಚವನ್ನೇ ಸ್ವಾಗತಿಸುತ್ತದೆ. ಅಂತಹ ಯುಗಾದಿಯ ಸಮಯವಲ್ಲವೇ ಹೊಸವರ್ಷ.

ನಿಜವಾಗಿಯೂ ಒಬ್ಬ ನೈಸರ್ಗಿಕ ವಾತಾವರಣವನ್ನು ಅನುಭವಿಸುವವನು ಆರಾಧಿಸುವವನು ಹೊಸ ಚೈತನ್ಯದೊಂದಿಗೆ ಈ ಯುಗಾದಿಯನ್ನೇ ಹೊಸವರ್ಷವೆಂದು ಸ್ವಾಗತಿಸಲು ಉತ್ಸುಕನಾಗಿರುತ್ತಾನೆ. ಒಂದು ಸಂವತ್ಸರ ಚಕ್ರವು ಮುಗಿದು ಹೊಸ ವರ್ಷಪ್ರಾರಂಭವಾಗುವ ಸಮಯವೇ ಯುಗಾದಿ. ಹಾಗಾಗಿ ಯುಗಾದಿ ಹಬ್ಬವು ಸಂವತ್ಸರಾರಂಭ, ನವವರ್ಷಪ್ರತಿಪದಾ ಎಂಬ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುತ್ತದೆ.

ಇಂತಹ ಅತ್ಯುತ್ತಮ ಬೇವು-ಬೆಲ್ಲದ ಭಕ್ಷಣವು ಆರೋಗ್ಯದ ದೃಷ್ಟಿಯಿಂದಷ್ಟೇ ಅಲ್ಲದೆ ಮಾನಸಿಕವಾಗಿ ಸುಖದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂದು ತಿಳಿಸುತ್ತದೆ. ಏರಿಳಿತದ ಜೀವನದಲ್ಲಿ “ಸುಖದುಃಖೇ ಸಮೇಕೃತ್ವಾ” ಎಂಬ ಗೀತಾವಾಕ್ಯದಂತೆ ಬದುಕಬೇಕು ಎನ್ನುವುದರ ದ್ಯೋತಕವೇ ಈ ಬೇವುಬೆಲ್ಲ. ಇಂತಹ ಬೇವುಬೆಲ್ಲದ ಹಬ್ಬವು ಎಲ್ಲರಿಗೂ ಶುಭಫಲಗಳನ್ನು ನೀಡಲಿ. ನೂತನ ವರ್ಷದಲ್ಲಿ ನೂತನ ಸತ್ಸಂಕಲ್ಪಗಳಿಂದ ಮುನ್ನೆಡೆಯುವಂತಾಗಲಿ. ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

Leave a Reply

Your email address will not be published.

Social Media Auto Publish Powered By : XYZScripts.com