‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿ ನಾಗೇಂದ್ರ ಪ್ರಸಾದ್ !

ಖ್ಯಾತ ಗೀತರಚನೆಕಾರ, ನಿರ್ದೇಶಕ ನಾಗೇಂದ್ರ ಪ್ರಸಾದ್ ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿ-ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿರುವ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿ ಓಜಯ್ಯ ಎಂಬ ಪ್ರಮುಖ ಖಳ ಪಾತ್ರದಲ್ಲಿ ನಟಿಸುತ್ತಿದ್ದಾರೆ.

‘ಉಘೇ ಉಘೇ ಮಾದೇಶ್ವರ’ ಧಾರಾವಾಹಿ ಯಶಸ್ವಿ ಆರು ತಿಂಗಳು ಪೂರೈಸಿದ್ದು, ಈ ಹಂತದಲ್ಲಿ ಕಥೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಪಯಣದಲ್ಲಿ ಬರುವುದೇ ‘ಓಜಯ್ಯನ ಸಾಲು’.  ಓಜಯ್ಯ ಎಂಬ ದುಷ್ಟ ಬುದ್ಧಿಯ ಶಿಕ್ಷಕ, ಶಿಷ್ಯಂದಿರಲ್ಲಿ ತಾರತಮ್ಯ ಮಾಡುತ್ತ ಜಾತಿ ಭೇದ ಮೆರೆಯುತ್ತಿರುತ್ತಾನೆ. ಸಿದ್ದಮ್ಮ ಎಂಬ ಬಹಿಷ್ಕೃತ ವಿಧವೆ ತನ್ನ ಮಗನನ್ನು ಗುರುಕುಲಕ್ಕೆ ಸೇರಿಸಲು ಬಂದಾಗ ಅವಳ ಮೇಲೆ ದೃಷ್ಟಿ ಹಾಕುತ್ತಾನೆ. ರೇವಣ ಸಿದ್ದೇಶ‍್ವರರ ಭಕ್ತೆಯಾದ ಆಕೆಯ ನೆರವಿಗೆ ಮರಿದೇವರು ಬರುತ್ತಾರೆ. ಓಜಯ್ಯನ ಅಹಂಕಾರ ಮಣಿಸಿ, ದುಷ್ಟತನ ಅಳಿಸಿ ಅವನನ್ನು ಮನುಷ್ಯನನ್ನಾಗಿ ಮಾಡಿ, ಸಿದ್ದಮ್ಮನ ಮಗನಿಗೆ ಗುರುಕುಲದಲ್ಲಿ ಕಲಿಕೆಯ ಅವಕಾಶ ಸಿಗುವಂತೆ ಮಾಡಿ ಅವಳನ್ನು ಮರಳಿ ಪತಿಗೃಹಕ್ಕೆ ಸೇರಿಸುತ್ತಾರೆ. ಈ ಹಂತದಲ್ಲಿ ಕ್ಲಿಷ್ಟಕರ ಸಂದರ್ಭಗಳು ಎದುರಾಗುತ್ತವೆ. ಅಂಥ ಸಂದರ್ಭಗಳಲ್ಲಿ ಹಲವು ಪವಾಡಗಳನ್ನು ಮೆರೆಯುತ್ತಾರೆ. ಅವುಗಳಲ್ಲಿ ಸತ್ತ ಬಾಲಕನನ್ನು ಬದುಕಿಸುವ ಪವಾಡ ಜನಜನಿತ. ಅದೇ ಓಜಯ್ಯನ ಸಾಲಿನ ಪ್ರಮುಖ ಘಟ್ಟ.

ಓಜಯ್ಯನ ಪಾತ್ರವನ್ನು ಡಾ|ನಾಗೇಂದ್ರ ಪ್ರಸಾದ್ ನಿರ್ವಹಿಸಿದರೆ ಪತ್ನಿಯಾಗಿ ಕಿರುತೆರೆ ನಟಿ ಸಂಜನಾ ನಟಿಸುತ್ತಿದ್ದಾರೆ. ದೊಡ್ಡಯ್ಯನಾಗಿ ಶೃಂಗೇರಿ ರಾಮಣ್ಣ, ಸಿದ್ದಮ್ಮನಾಗಿ ಕೀರ್ತಿ ಭಟ್, ಸಿದ್ದೇಶನಾಗಿ ಮಾ| ಶ್ರೇಯಸ್ತ್, ಓಜಯ್ಯನ ಮಗನಾಗಿ ಮಾ| ವಿಶಾಲ್ ಮುಂತಾದವರು ನಟಿಸುತ್ತಿದ್ದಾರೆ.

‘ನಟಿಸಬೇಕು ಎಂದಮೇಲೆ ಒಳ್ಳೆಯ ಪಾತ್ರ ಕೆಟ್ಟ ಪಾತ್ರ ಭೇದವಿಲ್ಲ. ಖಳನಾಯಕನ ಛಾಯೆ ಇರುವ ಪಾತ್ರದಲ್ಲಿ ನಟಿಸುವುದು ಸವಾಲೇ ಸೈ. ಓಜಯ್ಯನ ಪಾತ್ರಕ್ಕಾಗಿ ಮುಖವರ್ಣಿಕೆ, ಉಡುಗೆ, ಭಾಷೆ, ಆಂಗಿಕ ಅಭಿನಯ ಎಲ್ಲಾ ವಿಷಯಗಳ ಬಗ್ಗೆ ವಿಶೇಷ ಕಾಳಜಿವಹಿಸಿದೆವು. ಪಾತ್ರ ಚೆನ್ನಾಗಿ ಮೂಡಿ ಬರುತ್ತಿದೆ. ಮಾದೇಶ್ವರ ಮಹಾಕಾವ್ಯ ನನ್ನ ಇಷ್ಟದ ಕಾವ್ಯ. ಅದರಲ್ಲಿ ಪಾತ್ರ ಮಾಡುತ್ತಿರುವುದು ಹೆಚ್ಚಿನ ಖುಷಿ ತಂದಿದೆ’ ಎನ್ನುತ್ತಾರೆ ನಾಗೇಂದ್ರ ಪ್ರಸಾದ್.

‘ಓಜಯ್ಯನ ಪಾತ್ರವನ್ನು ನಾಗೇಂದ್ರ ಪ್ರಸಾದ್ ವಿಭಿನ್ನವಾಗಿ ನಿರ್ವಹಿಸುತ್ತಿದ್ದಾರೆ. ವೀಕ್ಷಕರು ಇದನ್ನು ಇಷ್ಟಪಡುವುದರಲ್ಲಿ ಸಂದೇಹವಿಲ್ಲ’ ಎನ್ನುತ್ತಾರೆ ನಿರ್ದೇಶಕ ನವೀನ್ ಕೃಷ್ಣ

‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿ ‘ಓಜಯ್ಯನ ಸಾಲು’ ಏಪ್ರಿಲ್ 6 ರಿಂದ ಸಂಜೆ 6ಕ್ಕೆ ಪ್ರಸಾರವಾಗಲಿದೆ.

Leave a Reply

Your email address will not be published.

Social Media Auto Publish Powered By : XYZScripts.com